ADVERTISEMENT

ಏನಾದ್ರು ಕೇಳ್ಬೊದು: ಶೀಘ್ರಸ್ಖಲನಕ್ಕೆ ಪರಿಹಾರವೇನು?

ನಡಹಳ್ಳಿ ವಂಸತ್‌
Published 27 ನವೆಂಬರ್ 2020, 21:09 IST
Last Updated 27 ನವೆಂಬರ್ 2020, 21:09 IST
ನಡಹಳ್ಳಿ ವಸಂತ್‌
ನಡಹಳ್ಳಿ ವಸಂತ್‌   

ಲೈಂಗಿಕಕ್ರಿಯೆಯಲ್ಲಿ ತೊಡಗಿದಾಗ ಪ್ರತಿಸಾರಿಯೂ ಬೇಗ ಸ್ಖಲನವಾಗುತ್ತದೆ. ಮಾನಸಿಕ ಪರಿಹಾರ ತಿಳಿಸಿಕೊಡಿ.
–ಹೆಸರು, ಊರು ಇಲ್ಲ

ಸಂಭೋಗ ಮಾಡುವಾಗ 1 ನಿಮಿಷದೊಳಗೆ ಸ್ಖಲನವಾಗುವುದರಿಂದ ಸಂಗಾತಿಯೊಂದಿಗೆ ಹೆಚ್ಚು ಸುಖಪಡೆಯಲು ಆಗುತ್ತಿಲ್ಲ. ಇದಕ್ಕೆ ಪರಿಹಾರವೇನು?
–ಹೆಸರು, ಊರು ನೀಡಿಲ್ಲ

40 ವರ್ಷದ ವಿವಾಹಿತ. ದಾಂಪತ್ಯ ಸುಖಕರವಾಗಿದೆ. ಲೈಂಗಿಕಕ್ರಿಯೆಯಲ್ಲಿ ಪತ್ನಿಗೆ ಇನ್ನೂ ಬೇಕು ಎನ್ನಿಸುವಾಗಲೇ ಸ್ಖಲನವಾಗುತ್ತದೆ. ಇದನ್ನು ನಿಭಾಯಿಸಿ ಹೆಚ್ಚಿನ ಸುಖ ಪಡೆಯುವುದು ಹೇಗೆ?
–ಗಂಗಾಧರ್‌, ಊರಿನ ಹೆಸರಿಲ್ಲ

ADVERTISEMENT

30 ವರ್ಷದ ಪುರುಷ. ಮದುವೆಯಾಗಿ ಒಂದು ತಿಂಗಳಾಗಿದೆ. ಶೀಘ್ರಸ್ಖಲನದಿಂದಾಗಿ ಲೈಂಗಿಕತೃಪ್ತಿ ಸಿಗುತ್ತಿಲ್ಲ. ಪರಿಹಾರ ತಿಳಿಸಿ.
–ಹೆಸರು, ಊರು ನೀಡಿಲ್ಲ

ಶೀಘ್ರಸ್ಖಲನದ ಕುರಿತು ಬರುತ್ತಿರುವ ಹೆಚ್ಚಿನ ಪತ್ರಗಳಲ್ಲಿ ಗಂಡಸರು ತಮ್ಮ ಬಗೆಗೆ ಮಾತ್ರ ಬರೆದುಕೊಂಡಿರುತ್ತಾರೆ. ಕೇವಲ ಗಂಡಸರಲ್ಲಷ್ಟೇ ಅಲ್ಲ, ಸ್ತ್ರೀಯರನ್ನು ಸೇರಿಸಿ ಒಟ್ಟಾರೆ ಸಮಾಜದಲ್ಲಿ ಲೈಂಗಿಕತೆಯ ಕುರಿತಾದ ಅಜ್ಞಾನವನ್ನು ಇದು ಸೂಚಿಸುತ್ತದೆ. ಸಂಗಾತಿಗಳು ಹಂಚಿಕೊಂಡು ಸುಖಿಸುವ ಕ್ರಿಯೆ ಇದು ಎಂದಾದರೆ ಸಮಸ್ಯೆಗಳು ಗಂಡಸರಲ್ಲಿ ಮಾತ್ರ ಇರುವುದು ಹೇಗೆ ಸಾಧ್ಯ? ಹಾಗೊಮ್ಮೆ ಗಂಡಸರಲ್ಲಿ ಮಾತ್ರ ಸಮಸ್ಯೆಯಿದ್ದರೂ ಪತ್ನಿಯ ಸಹಕಾರವಿಲ್ಲದೆ ಅದನ್ನು ಪರಿಹರಿಸುವುದು ಹೇಗೆ ಸಾಧ್ಯ? ಹಾಗಾಗಿ ಸಂಗಾತಿಯ ಜೊತೆಗೆ ನಿಮ್ಮ ಅಂತರಂಗವನ್ನು ಪ್ರಾಮಾಣಿಕವಾಗಿ ಹಂಚಿಕೊಳ್ಳುವುದರೊಂದಿಗೆ ಸಮಸ್ಯೆಯ ಪರಿಹಾರದ ಮೊದಲ ಪ್ರಯತ್ನಗಳನ್ನು ಶುರುಮಾಡಿ.

ಲೈಂಗಿಕತೆಯ ಕುರಿತಾದ ಅಜ್ಞಾನ, ತಪ್ಪುತಿಳಿವಳಿಕೆಗಳು, ಸಂಬಂಧಗಳಲ್ಲಿ ಅನ್ಯೋನ್ಯತೆಯ ಕೊರತೆ, ಆತಂಕ, ಖಿನ್ನತೆ, ಕೀಳರಿಮೆ, ಹಿಂಜರಿಕೆ ಮುಂತಾದ ಮಾನಸಿಕ ಸಮಸ್ಯೆಗಳು ಹೆಚ್ಚಿನ ಸಂದರ್ಭಗಳಲ್ಲಿ ಶೀಘ್ರಸ್ಖಲನಕ್ಕೆ ಕಾರಣವಾಗುತ್ತವೆ. ಹಾಗಾಗಿ ತಕ್ಷಣದ ಪರಿಹಾರಗಳನ್ನು ನಿರೀಕ್ಷಿಸದೆ ನಿಧಾನವಾಗಿ ಮುಂದುವರೆಯಬೇಕಾಗುತ್ತದೆ. ಲೈಂಗಿಕ ಕ್ರಿಯೆಯಲ್ಲಿ ಪುರುಷರು ಕೊಡುವವರು ಮತ್ತು ಸ್ತ್ರೀಯರು ತೆಗೆದುಕೊಳ್ಳುವವರು ಎನ್ನುವುದು ಸಾಮಾನ್ಯ ತಪ್ಪುತಿಳಿವಳಿಕೆ. ಕೊಡಲೇಬೇಕಾದ ಜವಾಬ್ದಾರಿಯನ್ನು ಗಂಡಸು ಹೊತ್ತುಕೊಂಡಾಗ ಅವನ ಮೇಲೆ ಒತ್ತಡವುಂಟಾಗುತ್ತದೆ. ಸುಖ ಕೊಡಲಾಗದಿರುವುದು ಅವನ ಗಂಡಸುತನಕ್ಕೆ ಆಗುವ ಅವಮಾನ ಎಂದುಕೊಳ್ಳುತ್ತಾನೆ. ಒಮ್ಮೆ ಆಗುವ ವೈಫಲ್ಯ ಮತ್ತು ಅದರಿಂದ ಅನುಭವಿಸುವ ಅವಮಾನ, ಹಿಂಜರಿಕೆಗಳ ಬಲೆಯಲ್ಲಿ ಸಿಕ್ಕಾಗ ಸಂಗಾತಿಯನ್ನು ಸೇರುವ ಯೋಚನೆ ಬಂದಕೂಡಲೇ ಆತಂಕ ಆವರಿಸಿಕೊಳ್ಳುತ್ತದೆ. ಆತಂಕದಿಂದಲೇ ಪ್ರಾರಂಭವಾಗುವ ಲೈಂಗಿಕಕ್ರಿಯೆಯ ಅಂತ್ಯ ನಿಮಿರು ದೌರ್ಬಲ್ಯ ಅಥವಾ ಶೀಘ್ರಸ್ಖಲನಕ್ಕಿಂತ ಬೇರೆಯಾಗಲು ಹೇಗೆ ಸಾಧ್ಯ?

ಕೆಲವು ಸಾಮಾನ್ಯ ಪರಿಹಾರಗಳನ್ನು ಇಲ್ಲಿ ಸೂಚಿಸಲಾಗಿದೆ
*
ಮದುವೆಯಾದ ಹೊಸತರಲ್ಲಿ ಕೆಲವರಿಗೆ ಶೀಘ್ರಸ್ಖಲನವಾಗುವುದು ಸಹಜ. ಇಬ್ಬರೂ ತಮ್ಮತಮ್ಮ ಲೈಂಗಿಕತೆಯ ಬಗೆಗಿನ ಕಲ್ಪನೆ, ಆಸಕ್ತಿ, ನಿರೀಕ್ಷೆ, ತಿಳಿವಳಿಕೆಗಳನ್ನು ಹಂಚಿಕೊಳ್ಳುತ್ತಾ ಹೋದಂತೆ ಸಂಬಂಧದಲ್ಲಿ ಭದ್ರತೆ ಮತ್ತು ಸಲಿಗೆ ಹೆಚ್ಚುತ್ತದೆ. ಆಗ ಲೈಂಗಿಕಕ್ರಿಯೆ ಒತ್ತಡರಹಿತ ಸುಖದ ಅನುಭವ ಕೊಡುತ್ತದೆ.
* ಜೊತೆಗೂಡಲು ಸಾಕಷ್ಟು ಸಮಯ ಮತ್ತು ಏಕಾಂತಕ್ಕೆ ಸೂಕ್ತವಾದ ಸ್ಥಳವನ್ನು ಹೊಂದಿಸಿಕೊಳ್ಳಿ.
* ಲೈಂಗಿಕತೆಯೆಂದರೆ ಸಂಭೋಗ ಎಂದು ಹೆಚ್ಚಿನ ಪುರುಷರು ನಂಬಿಕೊಂಡಿರುತ್ತಾರೆ. ಹಾಗಾಗಿ ಹೆಚ್ಚು ಸಮಯ ಸಂಭೋಗ ಮಾಡಿದರೆ ಸಂಗಾತಿಯನ್ನು ತೃಪ್ತಿಪಡಿಸಬಹುದು ಎನ್ನುವುದು ಅವರ ಎಣಿಕೆ. ಆದರೆ ಸ್ತ್ರೀಯರಿಗೆ ಒಡನಾಟ, ಪ್ರೀತಿಯ ಮಾತುಗಳು, ಸ್ಪರ್ಷ, ಚುಂಬನ, ಅಪ್ಪುಗೆಗಳು ಅಷ್ಟೇ ಪ್ರಿಯವಾಗಿರುತ್ತವೆ. ಹಾಗಾಗಿ ಮುನ್ನಲಿವಿನಲ್ಲಿ ಹೆಚ್ಚಿನ ಸಮಯ ಕಳೆದಷ್ಟೂ ತೃಪ್ತಿಯ ಮಟ್ಟ ಹೆಚ್ಚುತ್ತದೆ.
* ಮಿಲನ ಇಬ್ಬರಿಗೂ ಬೇಕೆನಿಸುತ್ತಿದೆಯೇ ಎನ್ನುವುದರ ಕುರಿತು ಪ್ರಾಮಾಣಿಕ ಅಭಿಪ್ರಾಯಗಳನ್ನು ಹಂಚಿಕೊಳ್ಳಿ. ಒಬ್ಬರು ಅನಾಸಕ್ತರಾಗಿದ್ದರೆ ಪರಿಣಾಮ ಇಬ್ಬರ ಮೇಲೆಯೂ ಇರುತ್ತದೆ.
* ತೀರಾ ಅಗತ್ಯವಿದ್ದರೆ ಸಂಭೋಗದ ಮಧ್ಯೆ ಒಂದೆರೆಡು ಸೆಕೆಂಡ್‌ಗಳು ದೀರ್ಘವಾಗಿ ಉಸಿರಾಡುತ್ತಾ ನಿಮ್ಮ ದೇಹ, ಮನಸ್ಸುಗಳ ಕಡೆ ಗಮನಹರಿಸಿ. ಗಮನವನ್ನು ಪದೇಪದೇ ಸಂಗಾತಿಯಿಂದ ದೂರ ಹರಿಸಿದರೆ ಸುಖಾನುಭವದ ಕೊಂಡಿ ಕಳಚುತ್ತದೆ.
* ಶೀಘ್ರಸ್ಖಲನವಾದಾಗ ಹೆಚ್ಚಿನ ಪುರುಷರು ಅವಮಾನ, ಹಿಂಜರಿಕೆಯನ್ನು ಅನುಭವಿಸುತ್ತಾ ಪತ್ನಿಯಿಂದ ದೈಹಿಕವಾಗಿ, ಮಾನಸಿಕವಾಗಿ ದೂರವಾಗುತ್ತಾರೆ. ಇದರಿಂದ ಇಬ್ಬರ ನಡುವಿನ ದೂರ ಹೆಚ್ಚಿ ಸಮಸ್ಯೆ ಮುಂದುವರಿಯುತ್ತದೆ. ಬದಲಾಗಿ ಸ್ವಲ್ಪ ಹೊತ್ತು ಪತ್ನಿಯ ಜೊತೆಗಿದ್ದು ಒಟ್ಟಾಗಿ ರಸಾಸ್ವಾದ ಮಾಡುತ್ತಾ ಮುಖಮೈಥುನ ಮುಂತಾದವುಗಳಿಂದ ತೃಪ್ತಿಪಡಿಸುವುದರ ಸಾಧ್ಯತೆಗಳ ಬಗ್ಗೆ ಮಾತನಾಡಿ.
* ಪತಿ– ಪತ್ನಿ ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ನಿಭಾಯಿಸಲು ಕಲಿಯದಿದ್ದರೆ ಅದು ಮಲಗುವ ಕೋಣೆಯಲ್ಲಿ ಹೊರಬರುವುದು ಅನಿವಾರ್ಯ.
* ಮಧ್ಯವಯಸ್ಸಿನ ನಂತರ ದೈಹಿಕ ಆರೋಗ್ಯ ಕೂಡ ತೃಪ್ತಿಕರ ಲೈಂಗಿಕ ಜೀವನಕ್ಕೆ ಸಹಕಾರಿಯಾಗುತ್ತದೆ.
* ಸಮಸ್ಯೆ ಮುಂದುವರಿದರೆ ಲೈಂಗಿಕ ಮನೋಚಿಕಿತ್ಸಕರ ಸಹಾಯವನ್ನು ಪಡೆಯಬಹುದು.

***

19 ವರ್ಷದ ವಿದ್ಯಾರ್ಥಿನಿ. ಕೆಲವು ವರ್ಷಗಳ ಹಿಂದೆ ವೈಯುಕ್ತಿಕ ಸಮಸ್ಯೆಗಳಿಂದಾಗಿ ಎದೆನೋವು ಕಾಣಿಸಿಕೊಳ್ಳುತ್ತಿತ್ತು. ಹೃದಯ ತಜ್ಞರು ಆತಂಕದಿಂದ ರಕ್ತದ ಒತ್ತಡ ಹೆಚ್ಚಾಗಿದೆ ಎಂದು ಮಾತ್ರೆ ಕೊಟ್ಟರು.
-ಶಿಲ್ಪಾ, ಊರಿನ ಹೆಸರಿಲ್ಲ.

ಪ್ರಶ್ನೆ ಅಪೂರ್ಣವಾಗಿದೆ. ವೈಯುಕ್ತಿಕ ಸಮಸ್ಯೆಗಳಿಂದ ಮೂಡಿದ ಆತಂಕ, ಎದೆನೋವು ರಕ್ತದ ಏರೊತ್ತಡಗಳಿಗೆ ಕಾರಣವಾಗಿದೆ. ಇದಕ್ಕೆ ಮಾತ್ರೆಗಳು ಕಾಯಂ ಪರಿಹಾರವಲ್ಲ. ಸೂಕ್ತ ಮನೋಚಿಕಿತ್ಸೆ ಪಡೆದು ಆತಂಕವನ್ನು ನಿಭಾಯಿಸುವ ದಾರಿಗಳನ್ನು ಹುಡುಕಿಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.