ADVERTISEMENT

ಕಾಳಜಿ: ಗರ್ಭಾವಸ್ಥೆಯಲ್ಲಿ ಲಸಿಕೆಗಳು ಏಕೆ ಮುಖ್ಯ?

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2025, 0:45 IST
Last Updated 8 ಫೆಬ್ರುವರಿ 2025, 0:45 IST
   

ಗರ್ಭದಲ್ಲಿ ಭ್ರೂಣ ಬೆಳೆಯುತ್ತಿರುವಾಗ ಸಾಮಾನ್ಯವಾಗಿ ರೋಗನಿರೋಧಕ ಶಕ್ತಿ ತುಸು ದುರ್ಬಲವಾದಂತೆ ಕಂಡುಬರುತ್ತದೆ. ಇಂಥ ಸಂದರ್ಭದಲ್ಲಿ ಸೋಂಕು ಉಂಟಾದರೆ ತಾಯಿ ಮತ್ತು ಮಗುವಿಗೆ ಅಪಾಯವಿರುತ್ತದೆ. ಹಾಗಾಗಿ ಗರ್ಭಾವಸ್ಥೆಯಲ್ಲಿದ್ದಾಗ ಕೆಲವು ಲಸಿಕೆಗಳನ್ನು ಹಾಕಿಸಿಕೊಳ್ಳುವುದು ಅಗತ್ಯ. 

ವಿಶ್ವ ಆರೋಗ್ಯ ಸಂಸ್ಥೆ ಮತ್ತು ಸೆಂಟರ್‌ ಫಾರ್‌ ಡಿಸೀಸ್‌ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್ಸನ್‌(ಸಿಡಿಎಸ್) ಸೇರಿದಂತೆ ಆರೋಗ್ಯ ಮತ್ತು ಆರೈಕೆ ತಜ್ಞರು ಪ್ರಸವಪೂರ್ವ ಆರೈಕೆಗೆ ಕೆಲವೊಂದು ಲಸಿಕೆಗಳನ್ನು ಶಿಫಾರಸು ಮಾಡುತ್ತಾರೆ.

ಇನ್‌ಫ್ಲುಯೆನ್ಸಾ (ಫ್ಲೂ) ವ್ಯಾಕ್ಸಿನ್: ಗರ್ಭಿಣಿಯರಿಗೂ ಕೆಲವು ಜ್ವರಗಳು ಬರಬಹುದು. ಆಗ ಆಸ್ಪತ್ರೆಗೂ ದಾಖಲಾಗಬೇಕಾದ ಸ್ಥಿತಿ ಬರುತ್ತದೆ. ಇದಕ್ಕಾಗಿ ಮೂರು ತಿಂಗಳಿಗೊಮ್ಮೆ ಫ್ಲೂ ವ್ಯಾಕ್ಸಿನ್ ಹಾಕಿಸಿಕೊಳ್ಳಬೇಕು. ಇದು ಸುರಕ್ಷಿತವಾಗಿದ್ದು, ಮಗುವಿನ ಜನನದ ನಂತರವೂ ಹಲವು ತಿಂಗಳವರೆಗೆ ತಾಯಿ ಮತ್ತು ಮಗುವನ್ನು ರಕ್ಷಿಸಲು ಸಹಾಯ ಮಾಡುತ್ತದೆ.

ADVERTISEMENT

ಟೆಟನಸ್, ಡಿಫ್ತಿರಿಯಾ ಮತ್ತು ಪರ್ಟುಸಿಸ್ (Tdap) ವ್ಯಾಕ್ಸಿನ್: ಗರ್ಭಾವಸ್ಥೆಯ 27 ಮತ್ತು 36ನೇ ವಾರಗಳ ಅವಧಿಯಲ್ಲಿ ಈ Tdap ವ್ಯಾಕ್ಸಿನ್ ನೀಡಲಾಗುತ್ತದೆ. ಇದು ಶಿಶುಗಳ ಸಂಭಾವ್ಯ ಮಾರಣಾಂತಿಕ ಕಾಯಿಲೆಯಾದ ಪೆರ್ಟುಸಿಸ್ (whooping cough- ನಾಯಿ ಕೆಮ್ಮು) ಅನ್ನು ತಡೆಗಟ್ಟುತ್ತದೆ.

ಕೋವಿಡ್-19 ವ್ಯಾಕ್ಸಿನ್: ಗರ್ಭಿಣಿಯರಲ್ಲಿ ಗಂಭೀರ ಸ್ವರೂಪದ ಕಾಯಿಲೆಯ ಅಪಾಯವನ್ನು ಈ ಕೋವಿಡ್-19 ಲಸಿಕೆ ಕಡಿಮೆ ಮಾಡುತ್ತದೆ. ಅಲ್ಲದೇ ನವಜಾತ ಶಿಶುಗಳಿಗೆ ಸ್ವಲ್ಪಮಟ್ಟಿನ ರೋಗನಿರೋಧಕ ಶಕ್ತಿಯನ್ನು ಒದಗಿಸುತ್ತದೆ. ಕೆಲವೊಮ್ಮೆ ಹೆಚ್ಚುವರಿ ಲಸಿಕೆಗೆ ಶಿಫಾರಸು ಮಾಡಲಾಗುತ್ತದೆ. ಸೋಂಕಿನ ಅಪಾಯ ಅಧಿಕವಾಗಿದ್ದರೆ ಗರ್ಭಿಣಿಗೆ ಹೆಪಟೈಟಿಸ್ ಬಿ ಲಸಿಕೆಯನ್ನು ನೀಡಲಾಗುತ್ತದೆ.

ಈ ಲಸಿಕೆಗಳು ಸುರಕ್ಷಿತವೇ?

ಈ ಲಸಿಕೆಗಳನ್ನು ತುಂಬಾ ಎಚ್ಚರಿಕೆಯಿಂದ ಪರೀಕ್ಷೆಗೆ ಒಳಪಡಿಸಲಾಗಿದೆ. ಹಾಗಾಗಿ ಗರ್ಭಾವಸ್ಥೆಯಲ್ಲಿ ನೀಡುವ ಲಸಿಕೆಗಳು ಸುರಕ್ಷಿತ ಎಂಬುದನ್ನು ಹಲವು  ಸಂಶೋಧನೆಗಳು ದೃಢಪಡಿಸಿವೆ. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿಗೆ ಯಾವುದೇ ರೀತಿಯಲ್ಲಿಯೂ ತೊಂದರೆಯಾಗುವುದಿಲ್ಲ. ಆದರೆ, ಲೈವ್ ವ್ಯಾಕ್ಸಿನ್‌ಗಳು ಅಂದರೆ, MMR (measles, mumps, rubella) ಗಳನ್ನು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ನಿರ್ಬಂಧಿಸಲಾಗುತ್ತದೆ. ಹೆರಿಗೆಯ ನಂತರ ನೀಡಲಾಗುತ್ತದೆ. 

ಮಿಥ್ಯೆಗಳಿಂದ ದೂರವಿರಿ

ಲಸಿಕೆಯ ಬಗ್ಗೆ ಕೆಲವು ಮಿಥ್ಯೆಗಳಿವೆ. ಲಸಿಕೆಗಳನ್ನು ಪಡೆಯುವುದರಿಂದ ಗರ್ಭಪಾತ ಆಗುತ್ತದೆ. ಬೆಳೆಯುತ್ತಿರುವ ಭ್ರೂಣದ ಮಿದುಳಿನ ಮೇಲೆ ಪರಿಣಾಮ ಬೀರುತ್ತದೆ ಎಂಬ ಹಲವು ಮಿಥ್ಯೆಗಳಿವೆ. ಇದು ವೈಜ್ಞಾನಿಕವಾಗಿ ಸರಿಯಲ್ಲ. ಇಂಥ ಸಂದೇಹಗಳಿಂದ ತಜ್ಞವೈದ್ಯರಿಂದ ಮಾಹಿತಿ ಪಡೆಯುವುದು ಉತ್ತಮ.

ಲಸಿಕೆಯ ಪ್ರಯೋಜನಗಳೇನು?

  • ರೋಗಹರಡುವಿಕೆಯ ಪ್ರಮಾಣವನ್ನು ಕಡಿಮೆ ಮಾಡುವುದಲ್ಲದೇ  ಆರೋಗ್ಯ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

  • Tdap ಲಸಿಕೆಯನ್ನು ಹಾಕಿಸಿಕೊಳ್ಳುವುದರಿಂದ ನವಜಾತ ಶಿಶುಗಳಲ್ಲಿ ಕಾಣಿಸಿಕೊಳ್ಳುವ ನಾಯಿ ಕೆಮ್ಮಿನಂತಹ ರೋಗಗಳು ಕ್ರಮೇಣ ಕಡಿಮೆಯಾಗುತ್ತದೆ.

  • ಭವಿಷ್ಯದಲ್ಲಿಯೂ ತಾಯಿ ಮಗುವಿನ ಆರೋಗ್ಯಕ್ಕೆ ಲಸಿಕೆಗಳು ಪೂರಕವಾಗಿವೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.