ಚಳಿಗಾಲದಲ್ಲಿ ಚರ್ಮ ಒಣಗಿದಂತಾಗಿ, ಬಿರುಕು ಬಿಡುವುದು, ಉರಿ , ತುರಿಕೆ ಕಾಣಿಸಿಕೊಳ್ಳುವುದರಿಂದ ಆದಷ್ಟು ಚರ್ಮದ ಆರೈಕೆ ಮಾಡುವುದು ಅತ್ಯವಶ್ಯ.
ಒಣ ಚರ್ಮವನ್ನು ಗಮನದಲ್ಲಿಟ್ಟುಕೊಂಡು ಅದಕ್ಕೆ ಪೂರಕವಾದ ಆಹಾರ ಸೇವನೆ ಮಾಡುವುದು ತುಂಬಾ ಮುಖ್ಯ. ಅತಿಯಾದ ಚಳಿ ಇರುವುದರಿಂದ ನೀರು ಕುಡಿಯುವ ಅಭ್ಯಾಸವನ್ನು ಗೊತ್ತಿಲ್ಲದ ಹಾಗೆ ಕಡಿಮೆ ಮಾಡಿಕೊಂಡಿರುತ್ತೇವೆ. ಇದರಿಂದ ನಿರ್ಜಲೀಕರಣ ಸಮಸ್ಯೆ ಉಂಟಾಗಿ ಚರ್ಮ ಇನ್ನಷ್ಟು ಒಣಗಿದಂತಾಗುತ್ತದೆ. ಚರ್ಮವನ್ನು ಆರೋಗ್ಯವಾಗಿಡಲು ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯಲೇಬೇಕು. ಕನಿಷ್ಠ ಎರಡು ಲೀಟರ್ ನೀರಿನ ಸೇವನೆ ಅಗತ್ಯ. ಚಳಿಗಾಲದಲ್ಲಿ ಋತುಮಾನಕ್ಕೆ ಸಿಗುವ ವಿವಿಧ ಹಣ್ಣುಗಳ ರಸ ಸೇವನೆ, ಮಜ್ಜಿಗೆ ಹುಲ್ಲು, ಶುಂಠಿ ಹಾಗೂ ಒಂದೆರಡು ಗಾಂಧಾರಿ ಮೆಣಸನ್ನು ಅರೆದು, ಅದರ ರಸವನ್ನು ಹದವಾಗಿ ಬೆರೆಸಿ ಮಾಡಿದ ನೀರು ಮಜ್ಜಿಗೆಯ ಸೇವನೆಯೂ ಒಳ್ಳೆಯದು. ಪಾಲಕ್, ಒಂದೆಲಗದ ತಂಬುಳಿಗಳು ಕೂಡ ಚಳಿಗಾಲಕ್ಕೆ ಒಳ್ಳೆಯದು. ತೆಂಗಿನ ಕಾಯಿ ತುರಿಯನ್ನು ಚೆನ್ನಾಗಿ ಅರೆದು, ಅದರಿಂದ ಬರುವ ಹಾಲಿಗೆ ಸ್ವಲ್ಪ ಬೆಲ್ಲ ಮಿಶ್ರಣ ಮಾಡಿ ನಿಯಮಿತವಾಗಿ ಸೇವನೆ ಮಾಡಿದರೆ ಒಣ ಚರ್ಮದ ಸಮಸ್ಯೆಯನ್ನು ನೀಗಿಸಬಹುದು. ಚಳಿಗೆ ವಾತಾವರಣದಲ್ಲಿ ತೇವಾಂಶ ಹೆಚ್ಚಿದ್ದರೆ, ಬ್ಯಾಕ್ಟೀರಿಯಾ ಹಾಗೂ ಶಿಲೀಂಧ್ರಗಳು ಕ್ರಿಯಾಶೀಲವಾಗಿರುತ್ತವೆ. ಅವುಗಳಿಂದ ಚರ್ಮದ ಸೋಂಕು ಉಂಟಾಗಬಹುದು. ದೇಹದೊಳಗೆ ನಂಜಿನ ಅಂಶ ಹೆಚ್ಚಾಗಿ ಚರ್ಮದ ಮೇಲೆ ಸಣ್ಣ ಸಣ್ಣ ಗುಳ್ಳೆಗಳು, ಅಲರ್ಜಿ ಉಂಟಾಗಬಹುದು. ಇದಕ್ಕಾಗಿ ವಾರಕ್ಕೊಮ್ಮೆ ಹಾಗಲಕಾಯಿ ರಸವನ್ನು ಒಂದು ಕಾಳು ಉಪ್ಪಿನೊಂದಿಗೆ ಸೇವಿಸಬಹುದು.
ಸ್ನಾನಕ್ಕೆ ಆದಷ್ಟು ಬೆಚ್ಚಗಿನ ನೀರು ಬಳಸಿ. ತೆಂಗಿನ ಎಣ್ಣೆ ಅಥವಾ ಬೇವಿನ ಎಣ್ಣೆಯ ಕೆಲವು ಹನಿಗಳನ್ನು ಬೆರೆಸಿದ ನೀರಿನಲ್ಲಿ ಸ್ನಾನ ಮಾಡುವುದು ಇನ್ನೂ ಒಳ್ಳೆಯದು. ಸಾಧ್ಯವಾದಷ್ಟು ಮೃದುವಾದ ಸೋಪು ಹಾಗೂ ಶ್ಯಾಂಪುಗಳನ್ನು ಬಳಸಿ. ರಾಸಾಯನಿಕಮುಕ್ತ, ಸುವಾಸನೆ ಮುಕ್ತ ಸೋಪುಗಳನ್ನು ಬಳಸಿ. ಆದಷ್ಟು ಗ್ಲಿಸರಿನ್‌ಯುಕ್ತ, ಆಡಿನ ಹಾಲು, ಶಿಯಾ ಬಟರ್ ಅಥವಾ ಆಲಿವ್ ಎಣ್ಣೆಗಳಿಂದ ಮಾಡಿದ ಸೋಪುಗಳನ್ನು ಬಳಸಿ.
ಸ್ನಾನ ದೀರ್ಘವಾಗಿದ್ದರೆ, ನೀರು ಬಿಸಿಯಾಗಿದ್ದರೆ ಚರ್ಮಕ್ಕೆ ಹಾನಿ ಹೆಚ್ಚು. ಮೃದುತ್ವ ಕಳೆದುಕೊಂಡು ಚರ್ಮ ಒರಟು ಎನಿಸುತ್ತದೆ. ಸಾಧ್ಯವಾದಷ್ಟು ಹಗುರವಾದ, ಸಡಿಲವಾದ ಬಟ್ಟೆಯನ್ನು ಧರಿಸಿ. ವೈದ್ಯರ ಶಿಫಾರಸ್ಸಿಲ್ಲದೇ ಕಂಡ ಕಂಡ ಕ್ರೀಮು, ಸೋಪುಗಳನ್ನೆಲ್ಲ ಹಚ್ಚಬೇಡಿ. ಮನೆ ಮದ್ದಿನಲ್ಲಿ ಅಡ್ಡಪರಿಣಾಮಗಳಿಲ್ಲವೆಂದು ಚರ್ಮದ ಮೇಲೆ ಪ್ರಯೋಗ ಮಾಡಿದರೆ, ಚರ್ಮದ ನೈಸರ್ಗಿಕ ಗುಣವೇ ಅಳಿದು ಹೋಗುವ ಸಾಧ್ಯತೆ ಇರುತ್ತದೆ. ಸಾಧ್ಯವಾದಷ್ಟು ಹೊರಗೆ ಹೋಗುವಾಗ ಬೆಚ್ಚಗಿನ ಬಟ್ಟೆಗಳನ್ನು ತೊಡಿ. ಎಸ್‌ಪಿಎಫ್ 30 ಅಥವಾ ಅದಕ್ಕಿಂತ ಹೆಚ್ಚಿರುವ ಸನ್‌ಸ್ಕ್ರೀನ್ ಬಳಸಲು ಮರೆಯದಿರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.