ADVERTISEMENT

ವರ್ಕ್ ಫ್ರಂ ಹೋಮ್‌: ಸ್ನಾಯು ಸೆಳೆತಕ್ಕೆ ಪರಿಹಾರವೇನು?

​ಪ್ರಜಾವಾಣಿ ವಾರ್ತೆ
Published 24 ಜುಲೈ 2020, 19:31 IST
Last Updated 24 ಜುಲೈ 2020, 19:31 IST
ಡಾ. ಚಿರಾಗ್‌ ಥೋನ್ಸೆ
ಡಾ. ಚಿರಾಗ್‌ ಥೋನ್ಸೆ   

ಬಹುರಾಷ್ಟ್ರೀಯ ಕಂಪನಿಯ ಉದ್ಯೋಗಿ ರಜತ್‌, ಲಾಕ್‌ಡೌನ್‌ನಿಂದಾಗಿ ಮೂರ್ನಾಲ್ಕು ತಿಂಗಳುಗಳಿಂದ ಮನೆಯಿಂದಲೇ (ವರ್ಕ್‌ ಫ್ರಂ ಹೋಮ್‌) ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರಾತ್ರಿ ಮಲಗಿದ್ದಾಗ ಕಾಲಿನ ಮೀನಖಂಡದಲ್ಲಿ ಸ್ನಾಯು ಸೆಳೆತ. ಕಾಲುಗಳನ್ನು ಮಡಚಲು ಅಥವಾ ಬಾಗಿಸಲು ಸಾಧ್ಯವೇ ಆಗಲಿಲ್ಲ. ಬಿಟ್ಟೂಬಿಡದೇ ಈ ಸಮಸ್ಯೆ ಕಾಡುತ್ತಿರುವುದರಿಂದ ವೈದ್ಯರಲ್ಲಿಗೇ ಹೋದರು. 'ಯಥೇಚ್ಛ ನೀರು ಕುಡಿಯದೇ ಇರುವುದು ಹಾಗೂ ಸೂರ್ಯನ ಬೆಳಕಿಗೆ ಮೈಯೊಡ್ಡದೇ ಇರುವುದೇ ಈ ನೋವಿಗೆ ಕಾರಣ’ ಎಂದರು ವೈದ್ಯರು.

ಇದು ರಜತ್‌ ಮಾತ್ರವಲ್ಲ, ವರ್ಕ್‌ ಫ್ರಂ ಹೋಮ್‌ಮಾಡುತ್ತಿರುವ ಅನೇಕರಲ್ಲಿ ಈ ಸಮಸ್ಯೆ ಇದೆ. ‘ಜೀವನಶೈಲಿ ಬದಲಾಗಿರುವುದು, ದೇಹವನ್ನು ಸೂರ್ಯನ ಬೆಳಕಿಗೆ (ಬಿಸಿಲಿಗೆ) ಒಡ್ಡದಿರುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್‌ ಡಿ ಸರಿಯಾದ ಪ್ರಮಾಣದಲ್ಲಿ ಸಿಗುತ್ತಿಲ್ಲ. ಜೊತೆಗೆ ದೈಹಿಕ ಚಟುವಟಿಕೆಗಳು ಕಡಿಮೆಯಾಗಿರುವುದರಿಂದ ಈಗ ಲಾಕ್‌ಡೌನ್‌ ಅವಧಿಯಲ್ಲಿ ಸ್ನಾಯುಸೆಳೆತ ಪ್ರಕರಣ ಹೆಚ್ಚಾಗಿವೆ’ ಎನ್ನುತ್ತಾರೆ ಬೆಂಗಳೂರಿನ ವಿಕ್ರಮ್‌ ಆಸ್ಪತ್ರೆಯ ಹಿರಿಯ ಕನ್ಸಲ್ಟೆಂಲ್‌, ಕೀಲು ಮತ್ತು ಮೂಳೆ ರೋಗ ತಜ್ಞ ಡಾ. ಚಿರಾಗ್‌ ಥೋನ್ಸೆ.

ಹಾಗಾದರೆ, ಈ ಸ್ನಾಯು ಸೆಳೆತದಂತಹ ಸಮಸ್ಯೆಗೆ ಪರಿಹಾರವೇನು ? ಈ ಕುರಿತು ಮಾಹಿತಿ ನೀಡಿದ್ದಾರೆ ಡಾ. ಚಿರಾಗ್‌.

ADVERTISEMENT

ನೀರು ಕುಡಿಯಿರಿ, ಪೌಷ್ಟಿಕ ಆಹಾರ ಸೇವಿಸಿ

*ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾದಾಗಯೂರಿಕ್‌ ಆ್ಯಸಿಡ್‌ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದಸ್ನಾಯು ಸೆಳೆತ ಉಂಟಾಗುತ್ತದೆ. ದಿನಕ್ಕೆ ಕನಿಷ್ಠ ಮೂರು ಲೀಟರ್‌ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು.

*ಸ್ನಾಯುಸೆಳೆತಕ್ಕೆ ಸೇವಿಸುವ ಆಹಾರದಲ್ಲಿ ಮೆಗ್ನಿಷಿಯಂ, ಸತು, ಕ್ಯಾಲ್ಸಿಯಂ ಕೊರತೆಯೂ ಕಾರಣವಾಗುತ್ತದೆ. ಈಗ ಲಾಕ್‌ಡೌನ್ ಅವಧಿಯಲ್ಲಿ ದೈಹಿಕ ಶ್ರಮ ಕಡಿಮೆಯಾಗುವುದು, ಜಿಮ್‌ಗೂ ಹೋಗದಿರುವುದರಿಂದ, ದೇಹದ ತೂಕ ನಿಯಂತ್ರಿಸಲು ಕೆಲವರು ಕಡಿಮೆ ಆಹಾರ ಸೇವಿಸುತ್ತಾರೆ. ಇದರಿಂದದೇಹಕ್ಕೆ ಅಗತ್ಯವಾದ ಪೌಷ್ಟಿಕಾಂಶ ಸಿಗುವುದಿಲ್ಲ. ಹೀಗಾಗಿ ಆಹಾರ ಸೇವಿಸುವಾಗ ದೇಹಕ್ಕೆ ಅಗತ್ಯವಾದ ಎಲ್ಲಾ ಪೌಷ್ಟಿಕಾಂಶಗಳು, ವಿಟಮಿನ್‌ಗಳು, ಸತು, ಕಬ್ಬಿಣಾಂಶಗಳು ಸಿಗುವಂತೆ ನೋಡಿಕೊಳ್ಳಬೇಕು. ಹಾಲು, ತರಕಾರಿ, ತಾಜಾ ಮೀನು, ಮೊಟ್ಟೆ, ಬಾಳೆಹಣ್ಣು, ಕಿತ್ತಳೆ, ನಿಂಬೆರಸ ಸೇವಿಸಬೇಕು. ಇದರಲ್ಲಿನ ಖನಿಜಗಳು ದೇಹಕ್ಕೆ ಅಗತ್ಯವಾದ ಪೋಷಣೆ ಒದಗಿಸುತ್ತವೆ.

ಮನೆಯಲ್ಲೇ ವ್ಯಾಯಾಮ ಮಾಡಿ

ಒಂದೇ ಕಡೆ ಕುಳಿತು, ದೀರ್ಘಕಾಲ ಕೆಲಸ ಮಾಡಬೇಡಿ.ಪ್ರತಿ ಅರ್ಧ ಗಂಟೆಗೊಮ್ಮೆ ಸ್ವಲ್ಪ ಆಚೀಚೆ ಓಡಾಡಬೇಕು. ನಡೆದಾಡುವಾಗ ಹೃದಯವು ಎಷ್ಟು ರಕ್ತವನ್ನು ಪಂಪ್‌ ಮಾಡುತ್ತದೆಯೋ ಅಷ್ಟು ರಕ್ತವನ್ನು ಸ್ನಾಯುಗಳು ಪಡೆಯುತ್ತವೆ. ಹೇಗೆಂದರೆ ಹಾಗೆ ಮಲಗಿಕೊಂಡು, ಕುಳಿತುಕೊಂಡು ಕೆಲಸ ಮಾಡಬೇಡಿ. ಇದರಿಂದ ದೇಹಕ್ಕೆ ಅಧಿಕ ಒತ್ತಡ ಬೀಳುತ್ತದೆ. ಕೆಲಸದಿಂದ ಆಗಾಗ ಸ್ವಲ್ಪ ಬಿಡುವು ಪಡೆದು ಸರಳ ವ್ಯಾಯಾಮಗಳನ್ನು ಮಾಡಿ. ಸ್ಥಳಾವಕಾಶವಿದ್ದರೆ ಒಳಾಂಗಣ ಆಟಗಳನ್ನು ಆಡಿ. ಬೆಳಿಗ್ಗೆ ಹಾಗೂ ಸಂಜೆ ಸೂರ್ಯನ ಬೆಳಕಿನಲ್ಲಿ ಮನೆಯ ಸುತ್ತ ಅಥವಾ ತಾರಸಿ ಮೇಲೆ ವಾಕಿಂಗ್‌ ಮಾಡಿ. ಬಿಸಿಲಿಗೆ ಮೈಯೊಡ್ಡಿ.

ಆರೋಗ್ಯದ ಕಾಳಜಿ

ದೇಹದಲ್ಲಿ ಕುತ್ತಿಗೆ, ಭುಜ ಅಥವಾ ಕಾಲಿನಲ್ಲಿ ಪೆಡಸು ಉಂಟಾಯಿತೆಂದರೆಆ ಭಾಗಕ್ಕೆ ರಕ್ತದ ಪರಿಚಲನೆ ಕಡಿಮೆಯಾಗಿದೆ ಎಂದೇ ಅರ್ಥ. ಇದು ಸರಿಯಾದ ಭಂಗಿಯಲ್ಲಿ ಕುಳಿತುಕೊಂಡು ಕೆಲಸ ಮಾಡುತ್ತಿಲ್ಲ ಎಂಬ ಸೂಚನೆಯೂ ಹೌದು. ಹಾಗಾಗಿಕುಳಿತುಕೊಳ್ಳುವ ಕುರ್ಚಿಯನ್ನು ನಮ್ಮ ಎತ್ತರಕ್ಕೆ ಸರಿ ಮಾಡಿಕೊಂಡು ಕಾಲು ನೆಲದ ಮೇಲೆ ಊರುವಂತೆ ಇಟ್ಟುಕೊಳ್ಳಬೇಕು. ಇಲ್ಲದಿದ್ದರೆ ‘ಫೂಟ್‌ ರೆಸ್ಟ್‌’ ಇಟ್ಟುಕೊಳ್ಳಬಹುದು. ಇದರಿಂದ ಬೆನ್ನಿನ ಭಾಗಕ್ಕೆ ಕಡಿಮೆ ಒತ್ತಡ ಬೀಳುತ್ತದೆ ಹಾಗೂ ದೇಹದ ಎಲ್ಲ ಭಾಗಗಳಿಗೂ ಸರಿಯಾಗಿ ರಕ್ತ ಪರಿಚಲನೆಯಾಗುತ್ತದೆ. ಸ್ನಾಯು ಸೆಳೆತ ಇದ್ದವರು ಆರಾಮದಾಯಕ ಕುರ್ಚಿ ಬಳಸಿ. ಕಣ್ಣಿಂದ ಕನಿಷ್ಠ ಒಂದಡಿ ದೂರದಲ್ಲಿ ಕಂಪ್ಯೂಟರ್‌ ಇದ್ದರೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.