ADVERTISEMENT

ವಿಶ್ವ ಏಡ್ಸ್ ದಿನ: ಹುಟ್ಟಿನಿಂದಲೇ ಎಚ್ಐವಿ ಹೊಂದಿರುವವರ ನೋವಿನ ದನಿ ಕೇಳಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 5:57 IST
Last Updated 1 ಡಿಸೆಂಬರ್ 2025, 5:57 IST
<div class="paragraphs"><p>ಚಿತ್ರ: ಗೆಟ್ಟಿ</p></div>
   

ಚಿತ್ರ: ಗೆಟ್ಟಿ

ಸಾಮಾನ್ಯವಾಗಿ ಏಡ್ಸ್ ಬಗ್ಗೆ ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಏಡ್ಸ್ ಇರುವ ವ್ಯಕ್ತಿಯನ್ನು ಹೇಗೆ ನೋಡಬೇಕು ಎಂಬುದು ಬಹುತೇಕರಿಗೆ ತಿಳಿದಿಲ್ಲ. ಹಾಗಾಗಿ ನಮ್ಮಲ್ಲಿ ಬಹಳಷ್ಟು ಮಂದಿ ತಮ್ಮದಲ್ಲದ ತಪ್ಪಿಗೆ ಕಷ್ಟ ಪಡುವಂತಾಗಿದೆ. ಏಡ್ಸ್ ತಡೆಗಟ್ಟುವುದಕ್ಕೆ ಹಾಗೂ ಚಿಕಿತ್ಸೆ ಮಾಡುವುದಕ್ಕೆ ಸಾಕಷ್ಟು ವಿಧಾನಗಳು ಲಭ್ಯವಿದ್ದರೂ ಇನ್ನೂ ಸಹ ಬಹಳಷ್ಟು ಜನ ಎಚ್‌ಐವಿ ಜೊತೆ ಬದುಕುತ್ತಿದ್ದಾರೆ. ಅವರಲ್ಲಿ ಹೆಚ್ಚಿನವರು ತಾರುಣ್ಯದಲ್ಲಿರುವವರಾಗಿದ್ದಾರೆ.

ತಮ್ಮ ತಪ್ಪೇನೂ ಇಲ್ಲದೆ, ತಾಯಿಯ ಗರ್ಭದಲ್ಲೇ ಈ ರೋಗದ ಹೊರೆಯೊಂದಿಗೆ ಜನಿಸಿದವರು ಹುಟ್ಟಿನಿಂದಲೇ ಎಚ್‌ಐವಿ (ಇಮ್ಯುನೋ ಡಿಫಿಶಿಯೆನ್ಸಿ ವೈರಸ್) ಹೊಂದುವವರಿದ್ದಾರೆ. ಜೀವನ ಪೂರ್ತಿ ತಮ್ಮೊಂದಿಗೆ ಇರುವ ಈ ಸಮಸ್ಯೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ಸಮಾಜ ಅವರನ್ನು ನೋಡುವ ದೃಷ್ಟಿಕೋನವೆ ಬೇರೆ. ಎಚ್‌ಐವಿ ‘ತಡೆಗಟ್ಟಬಹುದಾದ ರೋಗ’ ಎಂದು ತಿಳಿದಿದ್ದರೂ ವೈದ್ಯಕೀಯ ಸವಾಲು ಎಂದು ಭಾವಿಸಲಾಗುತ್ತದೆ. ಈ ಮಧ್ಯೆ ಎಚ್ಐವಿ ಹೊಂದಿರುವ ಜೀವಗಳು ತಾವು ರೋಗಿಗಳಲ್ಲ, ಸಾಮಾನ್ಯ ವ್ಯಕ್ತಿಗಳು ಎಂದು ಸಾಬೀತುಪಡಿಸಿಕೊಳ್ಳುವ ಹೋರಾಟದಲ್ಲಿ ನಿರತರಾಗಿದ್ದಾರೆ.

ADVERTISEMENT

ದುರದೃಷ್ಟವೆಂದರೆ, ಆಧುನಿಕ ವೈದ್ಯಕೀಯ ಶಾಸ್ತ್ರಕ್ಕೂ ಎಚ್‌ಐವಿ ಹೊಂದಿರುವ ಸಾಮಾಜಿಕ ಕಳಂಕವನ್ನು ತೊಡೆದು ಹಾಕಲು ಸಾಧ್ಯವಾಗಲಿಲ್ಲ. ಭಾರತದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿ–ಅಂಶಗಳ ಪ್ರಕಾರ 2010ರಿಂದ ಹೊಸ ಎಚ್‌ಐವಿ ಸೋಂಕುಗಳು ಶೇ46.25 ರಿಂದ ಶೇ 44ಕ್ಕೆ ಗಣನೀಯವಾಗಿ ಇಳಿದಿವೆ. ಜಾಗತಿಕ ಮಟ್ಟದಲ್ಲಿ ಸರಾಸರಿ ಶೇ 39ಕ್ಕಿಂತಲೂ ಜಾಸ್ತಿ ಇಳಿಕೆಯಾಗಿದೆ. ಇದಲ್ಲದೆ, ಚಿಕಿತ್ಸೆಯ ವ್ಯಾಪ್ತಿ ಹೆಚ್ಚಿದ್ದರಿಂದ 2010 ರಿಂದ ಏಡ್ಸ್‌ನಿಂದ ಉಂಟಾಗುವ ಮರಣ ಪ್ರಮಾಣ ಶೇ 76.54ರಷ್ಟು ತೀವ್ರವಾಗಿ ಕಡಿಮೆಯಾಗಿವೆ.

ತಪ್ಪು ಮಾಹಿತಿಯೇ ಕಳಂಕಕ್ಕೆ ಮೂಲ: 

ಯುವಕರು ಎದುರಿಸುತ್ತಿರುವ ಸವಾಲುಗಳನ್ನು ಅರ್ಥಮಾಡಿಕೊಳ್ಳುವ ಮೊದಲು, ಸಾಮಾಜಿಕ ಕಳಂಕಕ್ಕೆ ಕಾರಣವಾಗುತ್ತಿರುವ ಗೊಂದಲವನ್ನು ತಿಳಿದುಕೊಳ್ಳಬೇಕು. ಎಚ್ಐವಿ ಮತ್ತು ಏಡ್ಸ್ ಎಂಬ ಪದಗಳು ಗೊತ್ತಾಗಿ ದಶಕಗಳು ಕಳೆದರೂ ಬಹಳಷ್ಟು ಮಂದಿ ಎಚ್‌ಐವಿ ಮತ್ತು ಏಡ್ಸ್ ಎಂಬ ಎರಡು ಪದಗಳು ಒಂದೇ ಎಂದು ತಿಳಿದಿದ್ದಾರೆ. ಇವೆರಡರ ಅರ್ಥ ತಿಳಿಸುವುದಾದರೆ ಎಚ್ಐವಿ ಎಂದರೆ ವೈರಸ್, ಏಡ್ಸ್ ಎಂದರೆ ಅದರಿಂದ ಉಂಟಾಗುವ ಪರಿಣಾಮ.

ಎಚ್‌ಐವಿ (ಹ್ಯೂಮನ್ ಇಮ್ಯುನಡಿಫಿಶಿಯೆನ್ಸಿ ವೈರಸ್) ಎಂದರೆ ದೇಹದ ಪ್ರತಿ ರಕ್ಷಣಾ ವ್ಯವಸ್ಥೆಗೆ ದಾಳಿ ಮಾಡುವ ವೈರಸ್. ನಿಯಮಿತವಾಗಿ, ಪ್ರತಿದಿನ ಔಷಧ (Antiretroviral Therapy ಅಥವಾ ART) ಸೇವಿಸಿದರೆ ವೈರಸ್ ‘ಪತ್ತೆಯಾಗದಷ್ಟು’ ಕಡಿಮೆಯಾಗುತ್ತದೆ. ಇದು ನಿಯಂತ್ರಿಸಬಹುದಾದ ದೀರ್ಘಕಾಲದ ಕಾಯಿಲೆಯಾಗಿದೆ.

ಏಡ್ಸ್ (ಅಕ್ವೈರ್ಡ್ ಇಮ್ಯುನೋಡಿಫಿಷಿಯನ್ಸಿ ಸಿಂಡ್ರೋಮ್) ಎಂದರೆ ಚಿಕಿತ್ಸೆ ತೆಗೆದುಕೊಳ್ಳದ ಕಾರಣದಿಂದ ಎಚ್‌ಐವಿ ಸೋಂಕು ಉಲ್ಬಣಗೊಂಡ ಅತ್ಯಂತ ತೀವ್ರ ಮತ್ತು ಅಪಾಯಕಾರಿ ಹಂತ. ಈ ಹಂತವನ್ನು ಪ್ರತಿ ರಕ್ಷಣ ವ್ಯವಸ್ಥೆ ಪೂರ್ತಿ ಹಾಳಾದಾಗ ಗುರುತಿಸಲಾಗುತ್ತದೆ.

ಮುಖ್ಯ ವ್ಯತ್ಯಾಸ ಹೀಗಿದೆ:

ಏಡ್ಸ್ ಇರುವ ಎಲ್ಲರಿಗೂ ಎಚ್‌ಐವಿ ಇದ್ದೇ ಇರುತ್ತದೆ. ಆದರೆ ಎಚ್‌ಐವಿ ಇರುವ ಹೆಚ್ಚಿನ ಜನರಿಗೆ ಏಡ್ಸ್ ಬರುವುದಿಲ್ಲ. ‘ಪತ್ತೆಯಾಗದ’ ಎಚ್‌ಐವಿ ಇರುವ ವ್ಯಕ್ತಿ ಸಂಪೂರ್ಣ ಆರೋಗ್ಯವಂತರಾಗಿರುತ್ತಾರೆ ಮತ್ತು ಲೈಂಗಿಕ ಸಂಪರ್ಕದಿಂದ ವೈರಸ್ ಹರಡುವ ಸಾಧ್ಯತೆ ಇಲ್ಲ. ಆದರೆ ಏಡ್ಸ್ ಬಂದವರು ತೀವ್ರ ಅನಾರೋಗ್ಯದಲ್ಲಿರುತ್ತಾರೆ ಮತ್ತು ತಕ್ಷಣ ಜೀವ ಉಳಿಸುವ ಚಿಕಿತ್ಸೆ ಅಗತ್ಯವಾಗಿದೆ. ಈ ವ್ಯತ್ಯಾಸವನ್ನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದೇ ಇದರ ಕುರಿತ ಕಳಂಕ ಮುಂದುವರಿಯಲು ಕಾರಣ. ಈ ಕಳಂಕ ಆಗಾಗ ವೈರಸ್‌ಗಿಂತಲೂ ಹೆಚ್ಚು ನೋವುಂಟು ಮಾಡಿ, ಎಚ್‌ಐವಿ ಇರುವ ಜೀವಗಳನ್ನು ಇನ್ನಷ್ಟು ಒಂಟಿಯಾಗಿಸುತ್ತಿದೆ.

ಎಚ್‌ಐವಿಯನ್ನು ನಿಯಂತ್ರಿಸಬಹುದಾಗಿಸಿದ ವೈದ್ಯಕೀಯ ಚಿಕಿತ್ಸೆಗಳು ಈಗ ಲಭ್ಯವಿವೆ. ವಿಶ್ವ ಏಡ್ಸ್ ದಿನದಂದು ನಾವು ಈ ಚಿಕಿತ್ಸಾ ಕ್ರಮಗಳನ್ನು ಸಂಭ್ರಮಿಸುತ್ತೇವೆ. ಇದರ ಜೊತೆಗೆ ಗರ್ಭದಲ್ಲಿಯೇ ಈ ರೋಗ ಬಂದ ಯುವಜನತೆಯ ಮೇಲಿನ ಕಳಂಕ ತೊಡೆಯುವ ಕೆಲಸವನ್ನೂ ಮಾಡಬೇಕಿದೆ. ‘ಯು=ಯು’ (ಅನ್ ಡಿಟೆಕ್ಟೆಬಲ್ (ಪತ್ತೆಯಾಗದ) = ಅನ್ ಟ್ರಾಸ್ಮಿಟೆಬಲ್ (ವರ್ಗಾವಣೆಯಾಗದ) ಎಂಬ ಸಂದೇಶ ಬಹಳಷ್ಟು ಜನರಿಗೆ ಮುಕ್ತಿ ಒದಗಿಸುತ್ತದೆಯಾದರೂ ಬಹಳಷ್ಟು ಮಂದಿ 'ಇದನ್ನು ತಡೆಗಟ್ಟಬಹುದಾದರೂ, ಈ ರೋಗ ನಿನಗೆ ಹೇಗೆ ಬಂತು?' ಎಂಬ ಪ್ರಶ್ನೆ ಕೇಳುತ್ತಾರೆ. ತಮ್ಮ ತಪ್ಪಿಲ್ಲದೆ ಎಚ್ಐವಿ ಹೊಂದಿರುವವರನ್ನು ಈ ಪ್ರಶ್ನೆ ನಿರಂತರ ಕಾಡುತ್ತದೆ. ಅದು ಬದಲಾಗಬೇಕಿದೆ. ಈ ಪ್ರಶ್ನೆಗಳು ಅವರ ಹಕ್ಕುಗಳನ್ನು ಕಸಿಯದಂತೆ ನೋಡಬೇಕಿದೆ. ಅದಕ್ಕೆ ಅರಿವು ಹೆಚ್ಚಾಗಬೇಕು. ಜಾಗೃತಿ ಮೂಡಬೇಕು. ಹಾಗಾದಾಗ ಮಾತ್ರ ಎಚ್‌ಐವಿ ಅಥವಾ ಏಡ್ಸ್ ಇರುವವರು ಕಳಂಕವಿಲ್ಲದೆ ಬದುಕಬಹುದು.

ಎಲ್ಲವನ್ನೂ ತೆರೆದಿಡುವುದು, ಡೇಟಿಂಗ್ ಮತ್ತು ತಿರಸ್ಕಾರದ ಭಯ: 

ಎಚ್‌ಐವಿ ಇರುವ ತಾರುಣ್ಯದ ಮಂದಿಯ ಮುಂದಿರುವ ಅತಿ ದೊಡ್ಡ ಸವಾಲು ಸಂಬಂಧಗಳು ಮತ್ತು ಡೇಟಿಂಗ್. ಒಂಟಿತನವೇ ಅವರನ್ನು ರೋಗಕ್ಕಿಂತ ಹೆಚ್ಚು ಕಾಡುತ್ತದೆ. ತಮ್ಮ ಎಚ್‌ಐವಿ ಸ್ಥಿತಿಯನ್ನು ಯಾವಾಗ, ಹೇಗೆ ಬಿಚ್ಚಿಟ್ಟು ಹೇಳಬೇಕು ಎಂಬ ಯೋಚನೆಯೇ ತೀವ್ರ ಆತಂಕ ಉಂಟು ಮಾಡುತ್ತದೆ. ಅಲ್ಲದೇ ತಿರಸ್ಕಾರದ ಭಯ ಕಾಡುತ್ತದೆ ಮತ್ತು ಕೆಲವೊಮ್ಮೆ ಕಾನೂನು ತೊಂದರೆಗಳೂ ಇವೆ. ಜಗತ್ತು ‘ಎಚ್‌ಐವಿ ತಡೆಗಟ್ಟಬಹುದು, ಚಿಕಿತ್ಸೆ ಮಾಡಬಹುದು’ ಎಂದು ಹೇಳುತ್ತದೆ. ಆದರೆ ಜನ್ಮದಿಂದಲೇ ಎಚ್ಐವಿ ಹೊಂದಿದವರು ಹೇಗೆ ಭವಿಷ್ಯದ ಆಸೆ, ಕನಸುಗಳು ಹಾಗೂ ಅರ್ಥಪೂರ್ಣ ಸಂಬಂಧಗಳನ್ನು ಹೊಂದುವುದು?

ಭಾರತದಲ್ಲಿ ಏಡ್ಸ್ ಸ್ಥಿತಿಗತಿ

ಭಾರತದ ರಾಷ್ಟ್ರೀಯ ಎಚ್‌ಐವಿ ಕಾರ್ಯತಂತ್ರ ಯೋಜನೆ (2021-2026) ಮತ್ತು ಯುಎನ್‌ಎಐಡಿಎಸ್ ನೀಡಿದ ಜಾಗತಿಕ ಗುರಿಗಳು ನಮ್ಮ ದೇಶದ ಏಡ್ಸ್ ಕುರಿತು ಕಾರ್ಯನಿರ್ವಹಣೆಯ ಚೌಕಟ್ಟನ್ನು ರೂಪಿಸಿದೆ. ಈ ಯೋಜನೆ ಮಾನವ ಹಕ್ಕುಗಳು ಮತ್ತು ಆರೋಗ್ಯ ಸಮಾನತೆಯನ್ನು ಆಧರಿಸಿ, ರೋಗ ತಡೆಗಟ್ಟುವಿಕೆಯನ್ನು ವೇಗಗೊಳಿಸುವುದು, ಔಷಧ ಒದಗಿಸುವುದು ಮತ್ತು ದೀರ್ಘಕಾಲೀನ ಸಮಗ್ರ ಆರೈಕೆಯನ್ನು ಒದಗಿಸುವುದರ ಕಡೆಗೆ ಗಮನ ಹರಿಸುತ್ತಿದೆ.

ಭಾರತದಲ್ಲಿ ಎಚ್‌ಐವಿ ಇರುವವರಲ್ಲಿ ಶೇ 90.4 ಜನರಿಗೆ ತಮ್ಮ ಸ್ಥಿತಿ ಬಗ್ಗೆ ತಿಳಿದಿದೆ. ಆದರೆ ಚಿಕಿತ್ಸೆ (ಎಆರ್‌ಟಿ) ಪಡೆಯುತ್ತಿರುವವರು ಕೇವಲ ಶೇ 73.8 ಮಾತ್ರ. ಈ ಅಂತರವನ್ನು ತುಂಬುವುದು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ಎನ್ಎಸಿಓ)ಯ ಮುಂದೆ ಇರುವ ಬಹುಮುಖ್ಯ ಗುರಿಯಾಗಿದೆ. ಪ್ರಸ್ತುತ 16.6 ಲಕ್ಷಕ್ಕೂ ಹೆಚ್ಚು ಜನರಿಗೆ ಉಚಿತ ಜೀವಮಾನ ಔಷಧ ನೀಡಲಾಗುತ್ತಿದೆ. 2023ರ ಮಾಹಿತಿ ಪ್ರಕಾರ 15 ರಿಂದ 49 ವಯೋಮಾನದವರಲ್ಲಿ ಇರುವ ಎಚ್‌ಐವಿ ದರ ರಾಷ್ಟ್ರೀಯ ಸರಾಸರಿಯ ಕೇವಲ ಶೇ 0.2ರಷ್ಟುಕ್ಕೆ ಸ್ಥಿರವಾಗಿದೆ. ಇದು ದಶಕಗಳ ಕಾಲ ಎಚ್ಐವಿ ತಡೆಗಟ್ಟಲು ನಡೆಸಿದ ಶ್ರಮದ ಫಲವಾಗಿದೆ.

ಎಚ್ಐವಿ ಹೊಂದಿರುವವರು ಮತ್ತು ಅವರ ಅಸ್ಮಿತೆ: 

ಎಚ್ಐವಿ ಹೊಂದಿರುವ ಯುವ ಜನತೆಗೆ ವಿಶ್ವ ಏಡ್ಸ್ ದಿನ ಅನ್ನುವುದು ಕೇವಲ ಸ್ಮರಣೆ ಮಾಡುವ ದಿನವಲ್ಲ, ಅಥವಾ ಪಾಲಿಸಿ, ಹೊಸ ವಿಚಾರಗಳನ್ನು ತಿಳಿದುಕೊಳ್ಳುವುದೂ ಅಲ್ಲ. ತಮ್ಮನ್ನು ಸಾಮಾನ್ಯರಂತೆ ಗುರುತಿಸಬೇಕು ಎಂದು ಸಾರುವ ಮತ್ತು ಮನ್ನಣೆ ಕೋರುವ ದಿನ. ವೈದ್ಯಕೀಯ ಕ್ಷೇತ್ರದ ನಿರಂತರ ಪ್ರಯತ್ನದ ಫಲವಾಗಿ ಅವರನ್ನು ಅವರ ಸ್ಥಿತಿಯನ್ನು ಮನಃಪೂರ್ವಕವಾಗಿ ಒಪ್ಪಿಕೊಳ್ಳುವ ದಿನವಾಗಿದೆ. ಅವರು ಧೈರ್ಯ, ಸಹನೆಯಿಂದ ಹೋರಾಡುವುದನ್ನು ಗಮನಿಸುವ ದಿನವಾಗಿದೆ. ವೈದ್ಯಕೀಯ ದಾಖಲೆಗಳಿಗಿಂತ ಮೀರಿ ಅವರನ್ನು ಅವರಾಗಿಯೇ ಗುರುತಿಸಲು ನೆನಪಿಸುವ ಒಂದು ದಿನ ಈ ದಿನ.

ಅವರ ಭವಿಷ್ಯ ಕೇವಲ ಔಷಧ ಸೇವಿಸುವುದು ಮಾತ್ರವಲ್ಲ. ವೃತ್ತಿ ಜೀವನ ನಿರ್ಮಿಸುವುದು, ಪ್ರೀತಿ ಕಂಡುಕೊಳ್ಳುವುದು, ಕನಸುಗಳನ್ನು ನನಸಾಗಿಸುವುದು ಹಾಗೂ ಕುಟುಂಬ ಕಟ್ಟುವುದು ಎಲ್ಲವೂ ಅವರ ಭವಿಷ್ಯವಾಗಿದೆ. ಬದಲಾಗುತ್ತಿರುವ ಸಂದರ್ಭದಲ್ಲಿ ಅವರ ಧ್ವನಿಯನ್ನು ಕೇಳಿಸಿಕೊಳ್ಳಬೇಕಿದೆ. ಎಚ್‌ಐವಿ ಇರುವ ಮೂಲಕವೇ ಅವರು ಬದುಕು ಕಟ್ಟಿಕೊಳ್ಳಲು ಗೌರವಯುತವಾದ ದಾರಿಯನ್ನು ನಿರ್ಮಿಸಿ ಕೊಡಬೇಕಿದೆ.

ಕಾಂಡೋಮ್ ಬಳಸಿ ಸುರಕ್ಷಿತ ಲೈಂಗಿಕತೆ ಹೊಂದುವುದು ಮೂಲ ಪರಿಹಾರವಾಗಿದೆ. ಇಂಜೆಕ್ಷನ್‌ಗಳನ್ನು ಹಂಚಿಕೊಳ್ಳದಿರುವುದು ಬಹಳ ಮುಖ್ಯ. ಅದರ ಕಡೆಗೆ ಎಲ್ಲರೂ ಗಮನಹರಿಸಬೇಕು. ತನ್ನ ಸ್ಥಿತಿ ತಿಳಿದುಕೊಂಡರೆ ಮಾತ್ರ ತಡೆಗಟ್ಟುವಿಕೆ ಮತ್ತು ಚಿಕಿತ್ಸೆ ಎರಡೂ ಸಾಧ್ಯವಿದೆ. ಹಾಗಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಪರೀಕ್ಷೆ ಮಾಡಿಸಿಕೊಂಡರೆ ಋಣಾತ್ಮಕ ಫಲಿತಾಂಶ ಬಂದವರಿಗೆ ತೊಂದರೆಯಿಲ್ಲ. ಧನಾತ್ಮಕ ಫಲಿತಾಂಶ ಬಂದವರು ತಕ್ಷಣ ಚಿಕಿತ್ಸೆ ಪ್ರಾರಂಭಿಸಿ ಮುಂದೆ ರೋಗ ಹರಡದಂತೆ ಎಚ್ಚರ ವಹಿಸಬೇಕು.

ಈ ಹೊಸ ಕಾಲದಲ್ಲಿ ವಿಶ್ವ ಏಡ್ಸ್ ದಿನದ ನಿಜವಾದ ಉದ್ದೇಶ ಏನೆಂದರೆ ಸಮಾನತೆಯನ್ನು ಉತ್ತೇಜಿಸುವುದು. ಯಾವ ಯುವಕನೂ ತಾನು ಒಂಟಿ ಎಂದು ಭಾವಿಸದಿರುವಂತೆ, ಹಾಗೂ ಅವರ ಖಾಸಗಿತನವನ್ನು ಗೌರವಿಸುವಂತೆ ಆಗಬೇಕು. ವೃತ್ತಿ ಜೀವನ ಕಟ್ಟುವುದು, ಪ್ರೀತಿಸುವುದು, ಕನಸು ಕಾಣುವುದು ಇವೆಲ್ಲವನ್ನೂ ಇತರರಂತೆಯೇ ಅವರು ಕೂಡ ಮಾಡಲು ಅವಕಾಶವ ದೊರೆಯಬೇಕು. ಎಚ್‌ಐವಿ ಜೊತೆ ಬದುಕುವುದು ಎಂದರೆ ಕರುಣೆ ತೋರುವ ವಿಚಾರವಲ್ಲ, ಅದೊಂದು ನಿರ್ವಹಿಸಬೇಕಾದ ಸ್ಥಿತಿ ಎಂಬುದರ ಅರಿವು ಮೂಡಬೇಕು. ಅವರ ಭವಿಷ್ಯ ಉತ್ತಮವಾಗಿರಲು ಸಮಾಜ ಅವರನ್ನು ಪೂರ್ತಿಯಾಗಿ ಒಪ್ಪಿಕೊಳ್ಳುವುದು ಬಹಳ ಅವಶ್ಯಕವಾಗಿದೆ.

(ಡಾ. ರಂಜಿತ್ ಜೆ, ಹಿರಿಯ ಸಲಹೆಗಾರರು, ಆಂತರಿಕ ಔಷಧ, ನಾರಾಯಣ ಹೆಲ್ತ್ ಸಿಟಿ, ಬೆಂಗಳೂರು.)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.