ADVERTISEMENT

World Blood Donor Day: ಲಸಿಕೆ ಪಡೆದ 15 ದಿನದ ಬಳಿಕ ರಕ್ತದಾನ ಮಾಡಿ, ಜೀವ ಉಳಿಸಿ

ಡಾ.ವಿವೇಕ ಜವಳಿ
Published 14 ಜೂನ್ 2021, 6:21 IST
Last Updated 14 ಜೂನ್ 2021, 6:21 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
ಡಾ. ವಿವೇಕ ಜಾವಲಿ

ಇಂದು ಜೂನ್ 14. ವಿಶ್ವ ರಕ್ತದಾನಿಗಳ ದಿನಾಚರಣೆ. ದಾನಗಳಲ್ಲಿ ಶ್ರೇಷ್ಠ ದಾನವೆಂದರೆ ರಕ್ತದಾನ ಎಂಬ ಮಾತಿದೆ. ಇದು ಅಕ್ಷರಶಃ ಸತ್ಯ. ರಕ್ತದಾನದಿಂದ ಮತ್ತೊಬ್ಬರ ಜೀವ ಉಳಿಸುವ ಸದ್ಭಾಗ್ಯ ದೊರೆಯುತ್ತದೆ. ಈ ಕೋವಿಡ್ ಸಾಂಕ್ರಮಿಕದಿಂದ ರಕ್ತದಾನ ಮಾಡಲು ಸಹ ಅಡ್ಡಿ ಉಂಟಾಗಿದೆ. ಬಹಳಷ್ಟು ಜನರಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಬಳಿಕ ರಕ್ತದಾನ ಮಾಡಬಹುದೇ ಎಂಬುದರ ಬಗ್ಗೆ ಗೊಂದಲವಿದೆ. ಕೆಲವರು ಕನಿಷ್ಠ 3 ತಿಂಗಳು ರಕ್ತದಾನ ಮಾಡಬಾರದು ಎಂಬಿತ್ಯಾದಿ ಊಹಾಪೋಹಗಳು ಹರಿದಾಡುತ್ತಿದೆ. ಆದರೆ ಇದು ಸುಳ್ಳು. ಕೋವಿಡ್ ಲಸಿಕೆ ಪಡೆದ 15 ದಿನಗಳ ಬಳಿಕ ಸಹಜವಾಗಿಯೇ ರಕ್ತದಾನ ಮಾಡಬಹುದು. ಹೌದು, ನ್ಯಾಷನಲ್ ಬ್ಲಡ್ ಬ್ಯಾಂಕ್ ಸೊಸೈಟಿ ಇತ್ತೀಚೆಗೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಇದರಲ್ಲಿ ಯಾವುದೇ ವ್ಯಕ್ತಿ ಕೋವಿಡ್ ಲಸಿಕೆ ಪಡೆದ 15 ದಿನಗಳ ಬಳಿಕ ರಕ್ತದಾನ ಮಾಡಬಹುದು ಎನ್ನಲಾಗಿದೆ. ಇದಕ್ಕೂ ಮೊದಲು ಕನಿಷ್ಠ 28 ದಿನಗಳವರೆಗೂ ರಕ್ತದಾನ ಮಾಡುವಂತಿಲ್ಲ ಎನ್ನಲಾಗಿತ್ತು. ಇದೀಗ ಈ ಮಾರ್ಗಸೂಚಿಯನ್ನು ಬದಲಿಸಿ, ಈ ಅವಧಿಯನ್ನು 15 ದಿನಕ್ಕೆ ಇಳಿಸಲಾಗಿದೆ, ಹೀಗಾಗಿ ಈ ಬಗ್ಗೆ ಇರುವ ಊಹಾಪೋಹಗಳಿಗೆ ಯಾರೂ ಕಿವಿಗೊಡದೇ, ರಕ್ತದಾನ ಮಾಡುವ ಮಹತ್ಕಾರ್ಯವನ್ನು ಮುಂದುವರೆಸಿ.

ಶೇ.30ರಷ್ಟು ರಕ್ತದಾನಿಗಳ ಕೊರತೆ:ರಕ್ತದಾನಿಗಳ ಮೇಲೂ ಈ ಕೋವಿಡ್ ಪರಿಣಾಮ ಬೀರಿದೆ. ಕೋವಿಡ್‌ನಿಂದ ಗುಣಮುಖರಾದ ವ್ಯಕ್ತಿಗಳ ದೇಹದಲ್ಲಿ ಆಂಟಿ ಬಾಡಿ ಜನರೇಟ್ ಆಗಲಿದೆ. ಜೊತೆಗೆ ಕೋವಿಡ್‌ನಿಂದ ಜನರು ನಿಶ್ಯಕ್ತಿ ಹೊಂದಿರುತ್ತಾರೆ. ಈ ಎಲ್ಲಾ ಕಾರಣದಿಂದ ರಕ್ತದಾನ ಮಾಡಲು ಯಾರೂ ಆಸಕ್ತಿ ತೋರುತ್ತಿಲ್ಲ. ಇನ್ನೂ ಕೆಲವರು ರಕ್ತದಾನ ಮಾಡುವುದನ್ನು ಮುಂದೂಡುತ್ತಿದ್ದಾರೆ. ಮತ್ತೊಂದೆಡೆ ಲಸಿಕೆ ಹಾಕಿಸಿಕೊಂಡವರು ಸಹ ಗೊಂದಲದಿಂದ ರಕ್ತದಾನ ಮಾಡುವುದನ್ನು ನಿಲ್ಲಿಸಿದ್ದಾರೆ. ಈ ಎಲ್ಲಾ ಕಾರಣದಿಂದ ಕಳೆದ ಒಂದು ವರ್ಷಗಳಲ್ಲಿ ರಕ್ತದಾನಿಗಳ ಸಂಖ್ಯೆ ಶೇ.30 ರಷ್ಟು ಕುಸಿದಿದೆ ಎನ್ನಲಾಗುತ್ತಿದೆ. ಈ ಪ್ರಮಾಣ ಹೀಗೇ ಮುಂದುವರೆದರೆ ಮುಂದೆ ರಕ್ತದ ಕೊರತೆ ಉಂಟಾಗುವುದರಲ್ಲಿ ಅಚ್ಚರಿ ಇಲ್ಲ.

ರಕ್ತದ ಅವಶ್ಯಕತೆ ಇರುವವರು: ವಿಶ್ವದಲ್ಲಿ ಪ್ರತಿನಿತ್ಯ 15 ಲಕ್ಷ ಕ್ಯಾನ್ಸರ್ ಪೀಡಿತರಿಗೆ ರಕ್ತದ ಅವಶ್ಯಕತೆ ಇದೆ. ದೇಶದಲ್ಲಿ 18 ಲಕ್ಷ ಜನರು ಅಪಘಾತಕ್ಕೆ ತುತ್ತಾಗಿ, ರಕ್ತದ ಅವಶ್ಯಕತೆ ಹೊಂದಿದ್ದಾರೆ. ಇದಲ್ಲದೇ ವಿವಿಧ ರೀತಿಯ ರಕ್ತ ಸಂಬಂಧಿ ಕಾಯಿಲೆಯಿಂದ ಸುಮಾರು 1.4 ಬಿಲಿಯನ್ ಜನರಿಗೆ ರಕ್ತದ ಅನಿವಾರ್ಯತೆ ಇದೆ. ಹೀಗಾಗಿ ರಕ್ತದಾನಿಗಳ ಸಂಖ್ಯೆ ಕುಸಿದರೆ ರಕ್ತದ ಕೊರತೆ ಉಂಟಾಗಲಿದೆ.

ADVERTISEMENT

ಭಯ ಬೇಡ ರಕ್ತದಾನ ಮಾಡಿ

ರಕ್ತದಾನದ ಬಗ್ಗೆ ಸಾಕಷ್ಟು ಗೊಂದಲ ಊಹಾಪೋಹಗಳಿಂದ ಜನರು ರಕ್ತದಾನದಿಂದ ಹಿಂಜರಿಯುತ್ತಿದ್ದಾರೆ. ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಪಡೆದವರು ಕನಿಷ್ಠ 15 ದಿನ ಮಾತ್ರ ರಕ್ತದಾನ ಮಾಡದೇ ಇದ್ದರೆ ಸಾಕು. ಆ ನಂತರ ರಕ್ತದಾನ ಮಾಡಬಹುದು. ಈ ಬಗ್ಗೆ ಯಾವುದೇ ಭಯ, ಆತಂಕ ಹಾಗೂ ಇತರರ ಮಾತಿಗೆ ಕಿವಿಗೊಡುವ ಅವಶ್ಯಕತೆ ಇಲ್ಲ. ಇಲ್ಲವಾದರೆ, ಲಸಿಕೆ ಪಡೆಯುವ ಮುಂಚೆಯೇ ರಕ್ತದಾನ ಮಾಡಿದರೂ ಸರಿಯೇ, ನಿಮ್ಮ ಒಂದು ನಿರ್ಧಾರದಿಂದ ರಕ್ತದ ಅವಶ್ಯಕತೆ ಇರುವವರ ಜೀವದ ಪ್ರಶ್ನೆಯಾಗಲಿದೆ. ಹೀಗಾಗಿ, ರಕ್ತದಾನದ ಬಗ್ಗೆ ಹಿಂಜರಿಕೆ ಬೇಡ. ರಕ್ತದಾನ ಮಾಡುವ ಸಂದರ್ಭದಲ್ಲಿ ಕೊರೊನಾ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ, ಕೈ ತೊಳೆಯುವುದನ್ನು ಮರೆಯದೇ ಪಾಲಿಸಿ. ಕೊರೊನಾದಿಂದ ಪಾರಾಗುವ ಜೊತೆಗೆ ರಕ್ತದಾನದಿಂದ ಮತ್ತೊಬ್ಬರ ಜೀವವನ್ನೂ ಉಳಿಸುವ ನಿರ್ಧಾರ ನಿಮ್ಮ ಕೈಲಿದೆ.

(ಲೇಖಕ: ಹೃದಯ ವಿಜ್ಞಾನ ತಜ್ಞ, ಫೋರ್ಟಿಸ್ ಆಸ್ಪತ್ರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.