ವಿಶ್ವಸಂಸ್ಥೆಯು ಡಿಸೆಂಬರ್ 21ನ್ನು ‘ವಿಶ್ವ ಧ್ಯಾನದಿನ’ವನ್ನಾಗಿ ಘೋಷಿಸಿದೆ. ಈಗಾಗಲೇ ಪ್ರತಿವರ್ಷದ ಜೂನ್ 21ರಂದು ‘ವಿಶ್ವ ಯೋಗದಿನ’ವನ್ನು ಆಚರಿಸುತ್ತಿದ್ದೇವೆ. ಯೋಗಕ್ಕೆ ಈಗ ಧ್ಯಾನವೂ ಸೇರಿಕೊಂಡು ಒಟ್ಟು ಯೋಗದರ್ಶನಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಕ್ಕಂತಾಗಿದೆ.
ಜೀವನ ಸಾರ್ಥಕಗೊಳಿಸಿಕೊಳ್ಳಲು ಮನುಷ್ಯನಿಗೆ ಬೇಕಾದ ಮೊದಲ ಸಲಕರಣೆ ಎಂದರೆ ಅವನ ಶರೀರವೇ. ಹೀಗಾಗಿ ಶರೀರವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕೆಂಬ ತುಡಿತವೂ ಎಚ್ಚರಿಕೆಯೂ ಭಾರತೀಯ ಸಂಸ್ಕೃತಿಯಲ್ಲಿ ಸ್ಪಷ್ಟವಾಗಿದೆ. ‘ಧರ್ಮದ ದಾರಿಯಲ್ಲಿ ಶರೀರವೇ ಮೊದಲ ಸಾಧನ’ ಎಂಬುದು ಈ ನೆಲದ ಮಂತ್ರ. ಮೋಕ್ಷವೇ ಧರ್ಮಸಾಧನೆಯ ಅಂತಿಮ ಗುರಿ. ಹೀಗಾಗಿ ಧರ್ಮಕ್ಕೂ ಶರೀರಕ್ಕೂ ಮೋಕ್ಷಕ್ಕೂ ನೇರ ನಂಟು ಇದೆ. ಈ ತಾತ್ವಿಕ ಭಿತ್ತಿಯಲ್ಲಿ ಸಿದ್ಧವಾದ ಕಾಣ್ಕೆಯೇ ಯೋಗದರ್ಶನ. ಇದು ಭಾರತೀಯ ದರ್ಶನ ಪರಂಪರೆಯಲ್ಲಿ ಮುಖ್ಯ ಸ್ಥಾನವನ್ನು ಪಡೆದಿದೆ.
‘ಯೋಗ’ ಎಂದರೆ ಈಗ ಸಾಮಾನ್ಯರ ಗ್ರಹಿಕೆಯಲ್ಲಿ ಆಸನಗಳು ಮಾತ್ರ. ಆದರೆ ಯೋಗದರ್ಶನದ ವ್ಯಾಪ್ತಿ ಇನ್ನೂ ವಿಸ್ತಾರವೂ ಆಳವೂ ಆಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣ, ಧ್ಯಾನ ಮತ್ತು ಸಮಾಧಿ – ಈ ಎಂಟು ಸಾಧನೆಗಳನ್ನು ಒಳಗೊಂಡಿರುವುದೇ ದಿಟವಾದ ‘ಯೋಗ’. ಇವು ಬೌದ್ಧಿಕ, ಶಾರೀರಿಕ ಮತ್ತು ಮಾನಸಿಕ ಸಾಧನೆಗೆ ಒದಗಿರುವ ಮೆಟ್ಟಿಲುಗಳು. ಕೊನೆಯಲ್ಲಿ ಎಲ್ಲದಕ್ಕೂ ಶಿಖರಪ್ರಾಯವಾಗಿ ಪ್ರಜ್ಞೆಯ ಬೆಳಕು ದಿಕ್ಸೂಚಿಯಾಗಿರುತ್ತದೆ.
‘ಧ್ಯಾನ’ ಎಂದರೆ ಏನು? ಮನಸ್ಸಿನ ಏಕಾಗ್ರತೆ. ಇದು ಯೋಗದ ಅಂಗಗಳಲ್ಲಿ ಒಂದು. ಮೊದಲಿಗೆ ನಮ್ಮ ನಿತ್ಯದ ಚಟುವಟಿಕೆಗಳನ್ನು ನಮ್ಮ ಒಳಿತಿಗೆ ಪೂರಕವಾಗಿರುವಂತೆ ಹದ ಮಾಡಿಕೊಳ್ಳಬೇಕು. ಆ ಬಳಿಕ ನಮ್ಮ ಶರೀರವನ್ನೂ ಹೀಗೆ ಸಿದ್ಧಮಾಡಿಕೊಳ್ಳಬೇಕು. ಅನಂತರ ನಮ್ಮ ಮನಸ್ಸನ್ನು ನಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ತೊಡಗಬೇಕು. ನಮ್ಮ ಎಲ್ಲ ಆಗುಹೋಗುಗಳಿಗೂ ಮೂಲಕಾರಣವೇ ಮನಸ್ಸು. ಇದನ್ನು ನಮ್ಮ ವಶದಲ್ಲಿಟ್ಟುಕೊಳ್ಳುವುದು ಸುಲಭವಲ್ಲ. ಹೀಗೆ ಮನಸ್ಸನ್ನು ಹದಗೊಳಿಸುವ ಉಪಾಯವೇ ಧ್ಯಾನ ಎನಿಸಿಕೊಳ್ಳುತ್ತದೆ. ಇಷ್ಟೂ ಸೇರಿದಾಗಲೇ ಅದು ಯೋಗ ಎನಿಸಿಕೊಳ್ಳುವುದು.
ಮನಸ್ಸಿನ ಏಕಾಗ್ರತೆಯನ್ನು ಸಾಧಿಸುವುದು ಎಷ್ಟು ಕಷ್ಟ ಎಂದು ನಮಗೆಲ್ಲರಿಗೂ ತಿಳಿದಿದೆ. ನಮ್ಮ ಸುತ್ತಮುತ್ತಲಿನ ವಸ್ತು–ವ್ಯಕ್ತಿ–ವಿವರಗಳು ಸದಾ ನಮ್ಮನ್ನು ಮುತ್ತಿ, ನಮ್ಮ ಇಂದ್ರಿಯಗಳನ್ನು ಸೆಳೆದು, ಬುದ್ಧಿಯನ್ನು ಕೆಣಕಿ, ಮನಸ್ಸನ್ನು ಕೆಡಿಸಿ ನಮ್ಮ ಜೀವನದ ಗತಿಯನ್ನೇ ಏರುಪೇರು ಮಾಡುತ್ತಿರುತ್ತವೆ. ಹೀಗೆ ಕೆಡುತ್ತಿರುವ ನಮ್ಮ ಜೀವನಕ್ಕೆ ಒಳಿತನ್ನು ಒದಗಿಸುವ ಯೋಗಮಾರ್ಗವೇ ಧ್ಯಾನ.
ಮನಸ್ಸಿನ ಏಕಾಗ್ರತೆ ಎನ್ನುವುದು ನಮ್ಮ ಲೌಕಿಕ ಸುಖ–ಸಂತೋಷಕ್ಕೂ, ಅಲೌಕಿಕ ಆನಂದಕ್ಕೂ ಅನಿವಾರ್ಯವಾಗಿರುವಂಥದ್ದು. ಧ್ಯಾನವು ಇಹಕ್ಕೂ ಪರಕ್ಕೂ – ಎರಡಕ್ಕೂ ಒದಗುವುದರಿಂದ ಅದರ ವ್ಯಾಪ್ತಿಯೂ ವಿಸ್ತಾರವಾಗಿದೆ. ಹೀಗಾಗಿಯೇ ನಮ್ಮ ವೈದಿಕ, ಅವೈದಿಕ, ತಾಂತ್ರಿಕ – ಎಲ್ಲ ದಾರ್ಶನಿಕ ಪಂಥಗಳೂ ಅದನ್ನು ಆದರಿಸಿವೆ. ಬೌದ್ಧದರ್ಶನದಲ್ಲಿಯಂತೂ ಧ್ಯಾನಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಇಂದು ಜಗತ್ತಿನ ದೊಡ್ಡ ಪ್ರಭಾವ ಎನಿಸಿರುವ ‘ಝೆನ್’ದರ್ಶನದ ಮೂಲರೂಪವೇ ಧ್ಯಾನ. ಜಗತ್ತಿನ ಹಲವು ದಾರ್ಶನಿಕ ಪಂಥಗಳಲ್ಲೂ ಧ್ಯಾನದ ವಿವರಗಳನ್ನು ಕಾಣಬಹುದು.
ಧ್ಯಾನವೇ ಮೋಕ್ಷಕ್ಕೆ ಮೂಲಸಾಧನ ಎನ್ನುವುದು ಪರಂಪರೆಯೆ ಒಕ್ಕಣೆ. ನಮ್ಮ ಕಣ್ಣಿಗೆ ಕಾಣದ ಮೋಕ್ಷ ಬೇಡ, ಇಲ್ಲಿಯ ಸುಖವೇ ಸಾಕು – ಎನ್ನುವವರಿಗೂ ಧ್ಯಾನದ ಬೆಂಬಲ ಬೇಕೇ ಬೇಕು. ದಿಕ್ಕು ತಪ್ಪಿದ ನಮ್ಮ ನಿತ್ಯಜೀವನವನ್ನು ಧ್ಯಾನದ ಅನುಸಂಧಾನದಿಂದ ಸುಖಮಯಗೊಳಿಸಿಕೊಳ್ಳಬಹುದು.
ನಿರಂತರವಾಗಿ ಎಡೆಬಿಡದೆ ಒಂದಾನೊಂದು ವಸ್ತುವನ್ನು ಕುರಿತು ನಡೆಸುವ ಚಿಂತನೆಯೇ ಧ್ಯಾನ. ಈ ಏಕಾಗ್ರತೆಗೆ ಯಾವುದೂ ವಸ್ತು ಆಗಬಹುದು. ಆದರೆ ಈ ವಸ್ತುವಿನ ಆಯ್ಕೆಯಲ್ಲಿ ನಮ್ಮ ಜೀವನದ ಗೊತ್ತು–ಗುರಿಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆಯೆನ್ನಿ. ಚಿತ್ತ, ಎಂದರೆ ಬುದ್ಧಿಯ ಚಂಚಲತೆಯಿಂದ ಬಿಡಿಸಿಕೊಂಡು ಧ್ಯಾನವನ್ನು ಸಿದ್ಧಿಸಿಕೊಂಡರೆ ಅಂಥವನಿಗೆ ಹಗಲೂ ಇಲ್ಲ, ರಾತ್ರಿಯೂ ಇಲ್ಲ – ಎನ್ನುತ್ತದೆ, ಯೋಗವಾಸಿಷ್ಠ. ಧ್ಯಾನ ನಮಗೆ ನೀಡುವ ಅದ್ಭುತ ಶಕ್ತಿ ಇದು: ಕಾಲವನ್ನೇ ಗೆಲ್ಲುವುದು. ಕಾಲವನ್ನೇ ಗೆದ್ದವನಿಗೆ ನೋವು–ದುಃಖಗಳೂ ಇಲ್ಲ, ಸುಖ–ಸಂತೋಷಗಳೂ ಇಲ್ಲ. ಇದೇ ಮೋಕ್ಷ, ಮುಕ್ತಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.