ರುಮಾ ಅವರು ಜಲ ಯೋಗ ಪ್ರದರ್ಶಿಸಿದರು
ಬೆಂಗಳೂರಿನ ಯಲಹಂಕದಲ್ಲಿ ಇರುವ ‘ಎಂವಿಎಂ ಕಾಲೇಜ್ ಆಫ್ ನ್ಯಾಚುರೋಪಥಿ ಮತ್ತು ಯೋಗಿಕ್ ಸೈನ್ಸ್’ ಕಾಲೇಜಿನಲ್ಲಿ ರುಮಾ ಹೇಮ್ವಾನಿ ಅವರು ಈಚೆಗೆ ಜಲಯೋಗ ಕಾರ್ಯಾಗಾರವೊಂದನ್ನು ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಅವರೊಂದಿಗೆ ನಡೆಸಿದ ಪುಟ್ಟ ಮಾತುಕತೆಯ ಭಾಗ ಇಲ್ಲಿದೆ:
‘ಯೋಗ ಎನ್ನುವುದು ಕಾಯಿಲೆಗಳನ್ನು ಗುಣಪಡಿಸುವ ಸಾಧನ ಮಾತ್ರವಲ್ಲ. ಅದು, ಜೀವನ ನಡೆಸುವ ವಿಧಾನ. ಯೋಗ ಅಲ್ಲದಿದ್ದರೆ ಇನ್ನೊಂದು ಎನ್ನುವವಳು ನಾನಲ್ಲ. ಯೋಗವು ನನ್ನ ಆಯ್ಕೆ’ ಎನ್ನುತ್ತಾರೆ ಉತ್ತರಪ್ರದೇಶದ ಲಖನೌನ ರುಮಾ ಹೇಮ್ವಾನಿ.
58 ವರ್ಷದ ರುಮಾ ಅವರು ಜಲಯೋಗದಲ್ಲಿ ವಿಶ್ವ ದಾಖಲೆ ಬರೆದವರು. ನೀರಿನಲ್ಲಿ 1 ತಾಸು 24 ನಿಮಿಷಗಳವರೆಗೆ ಒಂದೇ ಮುದ್ರೆಯಲ್ಲಿ ಇದ್ದು ಈ ದಾಖಲೆ ಬರೆದಿದ್ದಾರೆ. ಯೋಗಾಸನಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಕೌನ್ಸಿಲ್‌ನಲ್ಲಿ 2024ರಲ್ಲಿ ಈ ದಾಖಲೆ ಬರೆದ ಅವರು, ಹತ್ತು ಹಲವು ಸಮ್ಮಾನಗಳನ್ನು ಗಳಿಸಿದ್ದಾರೆ.
‘ನನ್ನೊಳಗಿನ ಜಲಯೋಗವನ್ನು ನಾನು ನನಗೆ 30 ವರ್ಷ ಇರುವಾಗ ಕಂಡುಕೊಂಡೆ. ತರಬೇತಿ ಮೂಲಕ ನನಗೆ ಈ ವಿದ್ಯೆ ಒಲಿಯಲಿಲ್ಲ. ಇದು ನನಗೆ ದೇವರು ಕೊಟ್ಟ ವರ ಎಂದೇ ಭಾವಿಸಿದ್ದೇನೆ. ದೇವರು ನನಗೆ ನೀಡಿದ ಈ ಕೊಡುಗೆಯನ್ನು ದೇಶದ ಪ್ರತಿಯೊಬ್ಬರಿಗೂ ಹಂಚುವುದು ನನ್ನ ಗುರಿ’ ಎನ್ನುತ್ತಾರೆ ರುಮಾ.
ನೀರಿನಲ್ಲಿ ಧ್ಯಾನ ಮಾಡುವುದು, ಪ್ಲಾವಿನಿ ಪ್ರಾಣಾಯಾಮದಲ್ಲಿಯೂ ರುಮಾ ಪರಿಣತಿ ಗಳಿಸಿದ್ದಾರೆ. ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಸಹಯೋಗದಲ್ಲಿ ದೇಶದ ವಿವಿಧೆಡೆ ಜಲಯೋಗದ ಕುರಿತು ಕಾರ್ಯಕ್ರಮಗಳನ್ನೂ ನೀಡುತ್ತಾರೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ವಿವಿಧೆಡೆ ಕಾರ್ಯಾಗಾರಗಳನ್ನು ನಡೆಸುವ ಇವರು, ಮುಂದಿನ ಪೀಳಿಗೆಗೆ ಜಲಯೋಗ ಹಾಗೂ ಪ್ಲಾವಿನಿ ಪ್ರಾಣಾಯಾಮವನ್ನು ದಾಟಿಸುವ ಗುರಿ ಹೊಂದಿದ್ದಾರೆ.
‘ಮಹಿಳೆ ಅದರಲ್ಲೂ ಮನೆವಾರ್ತೆ ನಡೆಸುವಾಕೆಯು ಸಮಾಜದ ಮೂಲಾಧಾರ. ದೇಶದ ವಿವಿಧ ಭಾಗಗಳಿಗೆ ತೆರಳಿ, ಸಮಾಜದ ಸೇವೆ ಮಾಡುವುದು ನಮಗೆ ದೊರೆತ ಕೊಡುಗೆ ಎಂದೇ ಭಾವಿಸಬೇಕು. ಕುಟುಂಬವನ್ನೂ ಕೆಲಸವನ್ನೂ ನಿಭಾಯಿಸುವ ದೈವಿಕ ಶಕ್ತಿ ಮಹಿಳೆಗೆ ಇದೆ. ವೈಯಕ್ತಿಕವಾಗಿ ನನಗೆ ಈ ಕೆಲಸ ಕಷ್ಟ ಎನ್ನಿಸಲೇ ಇಲ್ಲ. ನನ್ನ ಕುಟುಂಬ, ಸಹೋದರಿ ಎಲ್ಲರೂ ನನಗೆ ಬೆನ್ನೆಲುಬಾಗಿ ನಿಂತಿದ್ದಾರೆ’ ಎಂದು ಹೆಮ್ಮೆಯಿಂದ ಹೇಳಿಕೊಂಡರು.
v
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.