ADVERTISEMENT

ಈ ಬಾರಿ ಹುದಲಿ ಉಪ್ಪಿನಕಾಯಿ!

ಎಂ.ಮಹೇಶ
Published 12 ಜೂನ್ 2017, 19:30 IST
Last Updated 12 ಜೂನ್ 2017, 19:30 IST
ಚಿತ್ರಗಳು: ಚೇತನ ಕುಲಕರ್ಣಿ
ಚಿತ್ರಗಳು: ಚೇತನ ಕುಲಕರ್ಣಿ   

‘ನಾನೊಂದು ಹಳ್ಳಿ. ನನ್ನ ಹೆಸರು ಹುದಲಿ. ನಾನೀಗ ಸಂಕಷ್ಟದಲ್ಲಿದ್ದೇನೆ. ಇಲ್ಲಿರುವ ಬಡಜನ ಕೆಲಸಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಬೇಕಾಗಿದೆ. ಇದಕ್ಕಾಗಿ ನಾನೊಂದು ಪ್ಲಾನ್‌ ಮಾಡಿದ್ದೇನೆ. ನೀವು ಇಲ್ಲಿನ ಉಪ್ಪಿನಕಾಯಿ ಖರೀದಿಸಿದರೆ, ಕೆಲವರಿಗೆ ಕೆಲಸ ಕೊಡಲು ಸಾಧ್ಯವಾಗಲಿದೆ. ನೀವೇನೂ ಧರ್ಮಕ್ಕೆ ಈ ಕಾರ್ಯ ಮಾಡಬೇಡಿ. ಪ್ರತಿಯಾಗಿ ರುಚಿಯಾದ ಉಪ್ಪಿನಕಾಯಿಯನ್ನು ಕೊಡುತ್ತೇನಲ್ಲ’!

ಜಾಲತಾಣದಲ್ಲಿ ಹಾಕಲಾದ ಹೃದ್ಯವಾದ ಈ ಮನವಿ ಎಂತಹ ಮೋಡಿ ಮಾಡಿದೆಯೆಂದರೆ ಇದನ್ನು ವೀಕ್ಷಿಸಿದ ಹಲವರು ನೇರವಾಗಿ ಉಪ್ಪಿನಕಾಯಿಗೆ ಆರ್ಡರ್‌ ಕೊಡುತ್ತಿದ್ದಾರೆ. ಅಂದಹಾಗೆ, ಈ ರೀತಿ ಹುದಲಿ ಉಪ್ಪಿನಕಾಯಿಗೆ ಪ್ರಚಾರ ಕೊಟ್ಟವರು ಮೂವರು ಸ್ನೇಹಿತರು. ಎಂಜಿನಿಯರುಗಳಾದ ಅವರು ಬೆಂಗಳೂರಿನಿಂದ ಅಮೆರಿಕ ಕಂಪೆನಿಯೊಂದಕ್ಕೆ ಕೆಲಸ ಮಾಡುತ್ತಿದ್ದರು.

‘ನಮ್ಮ ಪ್ರತಿಭೆಯಿಂದ ವಿದೇಶಿ ಕಂಪೆನಿಗೇಕೆ ಲಾಭ ಮಾಡಿಕೊಡಬೇಕು? ನಮ್ಮ ನೆಲದವರಿಗೆ ಅನುಕೂಲವಾಗಲಿ’ ಎಂದು ಗುಡಿ ಕೈಗಾರಿಕೆ ಬೆಳೆಸಲು ಮುಂದಾಗಿದ್ದಾರೆ. ಇದಕ್ಕಾಗಿ ಕೈತುಂಬಾ ಸಂಬಳ ಸಿಗುತ್ತಿದ್ದ ಕೆಲಸ ತ್ಯಜಿಸಿ, ಮಹಿಳೆಯರಿಗೆ ಒಂದಷ್ಟು ಉದ್ಯೋಗ ಕಲ್ಪಿಸಲು ಯೋಜನೆಯೊಂದನ್ನು ರೂಪಿಸಿದ್ದಾರೆ. ಅದರ ಹೆಸರು ‘ಹುದಲಿ ಪ್ರಾಜೆಕ್ಟ್‌’.

ADVERTISEMENT

ಮೂರು ತಿಂಗಳಿಂದ ‘ಹುದಲಿ ಪ್ರಾಜೆಕ್ಟ್‌’ ಕೈಗೆತ್ತಿಕೊಂಡಿರುವ ಅವರು ಇದಕ್ಕಾಗಿಯೇ ಜಾಲತಾಣ (www.thehudliproject.com) ರೂಪಿಸಿದ್ದಾರೆ. ಫೇಸ್‌ಬುಕ್‌, ಟ್ವಿಟರ್‌ನಂಥ ಸಾಮಾಜಿಕ ಜಾಲತಾಣದಲ್ಲಿಯೂ ಇಲ್ಲಿನ ಉಪ್ಪಿನಕಾಯಿ ‘ರುಚಿ’ಯ ಪ್ರಚಾರ ಮಾಡುತ್ತಿದ್ದಾರೆ. ‘ಅಬ್‌ ಕಿ ಬಾರ್‌ ಹುದಲಿ ಆಚಾರ್‌’ (ಈ ಬಾರಿ ಹುದಲಿ ಉಪ್ಪಿನಕಾಯಿ) ಎಂಬ ಟ್ಯಾಗ್‌ಲೈನ್‌ನೊಂದಿಗೆ ಪಸರಿಸುತ್ತಿದ್ದಾರೆ.

(ಉಪ್ಪಿನ ಕಾಯಿ ಪ್ಯಾಕಿಂಗ್‌ನಲ್ಲಿ...)

ಬೆಳಗಾವಿ ಜಿಲ್ಲಾ ಕೇಂದ್ರದಿಂದ 30 ಕಿ.ಮೀ. ದೂರದಲ್ಲಿರುವ ಹಳ್ಳಿ ಹುದಲಿ. ಇಲ್ಲಿನ ಖಾದಿ ಗ್ರಾಮೋದ್ಯೋಗ ಸಂಘದಿಂದ ತಯಾರಿಸುವ ಉಪ್ಪಿನಕಾಯಿಗೆ ಮಾರುಕಟ್ಟೆ ವಿಸ್ತರಿಸುವುದು ಈ ಮೂವರ ಸದ್ಯದ ಯೋಜನೆ. ಸದ್ಯ ಬೆಂಗಳೂರಿನಲ್ಲಿರುವ ಯುವ ಎಂಜಿನಿಯರ್‌ಗಳಾದ (ಡೇಟಾ ಪ್ರೊಫೆಷನಲ್ಸ್‌) ಅಮಿತ್‌ ವಡವಿ, ಆದರ್ಶ ಮುತ್ತಣ್ಣ ಹಾಗೂ ಪ್ರಣಯ್‌ ರಾಯ್‌ ಮಹಿಳಾ ಸಬಲೀಕರಣಕ್ಕಾಗಿ ತಮ್ಮದೇ ಆದ ವಿಧಾನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮಿತ್‌ ಅವರ ತಾತ ರಾಮಚಂದ್ರ ವಡವಿ ಬೆಳಗಾವಿಯವರು; ಹುದಲಿ ಸಂಪರ್ಕದಲ್ಲೂ ಇದ್ದರು. ಹೀಗಾಗಿ, ಅಮಿತ್‌ಗೆ ಹುದಲಿಯತ್ತ ಸೆಳೆತವಿತ್ತು. ಊರಿಗೆ ಬಂದಿದ್ದ ಅವರಿಗೆ ಇಲ್ಲಿ ತಯಾರಾಗುವ ‘ಜವಾನ್‌’ ಉಪ್ಪಿನಕಾಯಿಗೆ ವಿದ್ಯುನ್ಮಾನ ಮಾರ್ಕೆಟ್‌ (ಇ–ಮಾರ್ಕೆಟ್‌) ಕಲ್ಪಿಸುವ ಯೋಚನೆ ಹೊಳೆಯಿತು. ಅದಕ್ಕೆ ಸ್ನೇಹಿತರ ಸಾಥ್‌ ಸಿಕ್ಕಿತು.

ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಚಿತ್ರನಟ ಫರ್ಹಾನ್‌ ಅಖ್ತರ್‌ ಸಹ ಯೋಜನೆ ಕುರಿತು ಮೆಚ್ಚುಗೆಯಿಂದ ಟ್ಟೀಟ್‌ ಮಾಡಿರುವುದು ವಿಶೇಷ. ಫೇಸ್‌ಬುಕ್‌ನಲ್ಲೂ ಸಾವಿರಾರು ಮೆಚ್ಚುಗೆ ಹಾಗೂ ಕಮೆಂಟ್‌ಗಳು ಬಂದಿವೆ. ಆರ್ಡರ್‌ಗಳು ಕೂಡ ಸಿಕ್ಕಿವೆ. ಗಡಿಯ ಹಳ್ಳಿಯೊಂದರಲ್ಲಿ ತಯಾರಾಗುವ ಉಪ್ಪಿನಕಾಯಿ ಕುರಿತ ಮಾಹಿತಿಯನ್ನು ‘ಸಾಮಾಜಿಕ ಜಾಲತಾಣದ ಬಾಯಿಗೆ’ ಹಾಕುವ ಕಾರ್ಯವನ್ನು ಇವರು ಸಕ್ರಿಯವಾಗಿ ಮಾಡುತ್ತಿದ್ದಾರೆ. ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾರೆ.

‘ಸಾಮಾಜಿಕ ಜಾಲತಾಣವನ್ನು ಬಳಸಿದ ಮೇಲೆ ಒಂದಷ್ಟು ಆರ್ಡರ್‌ಗಳು ಬರುತ್ತಿವೆ. ದೊಡ್ಡ ಕಂಪೆನಿಗಳನ್ನು ಸಂಪರ್ಕಿಸುತ್ತಿದ್ದೇವೆ. ಇನ್ನೆರಡು ಮೂರು ತಿಂಗಳಲ್ಲಿ ಮತ್ತಷ್ಟು ಬೇಡಿಕೆ ದೊರೆಯುವ ವಿಶ್ವಾಸವಿದೆ. ಕಾರ್ಖಾನೆಗಳಿಗೆ ಊಟ ಪೂರೈಸುವವರಲ್ಲಿ ನಮ್ಮ ಉಪ್ಪಿನಕಾಯಿ ಖರೀದಿಸುವಂತೆ ಮನವರಿಕೆ ಮಾಡುತ್ತಿದ್ದೇವೆ’ ಎಂದು ಅಮಿತ್ ಹೇಳುತ್ತಾರೆ.

‘ಕೆಲಸವನ್ನೂ ಮಾಡಿಕೊಂಡು ಉಪ್ಪಿನಕಾಯಿ ಪ್ರಚಾರ, ಮಾರುಕಟ್ಟೆ ವಿಸ್ತರಣೆಯಲ್ಲಿ ತೊಡಗಬೇಕು ಎಂದುಕೊಂಡಿದ್ದೆವು. ಆದರೆ, ಇದು ಆಗುತ್ತಿಲ್ಲ. ಹೀಗಾಗಿ, ಕೆಲಸವನ್ನೇ ಬಿಟ್ಟಿದ್ದೇವೆ. ಒಂದೂವರೆ ವರ್ಷದಲ್ಲಿ ಹುದಲಿ ಉಪ್ಪಿನಕಾಯಿಗೆ ದೊಡ್ಡ ಮಾರುಕಟ್ಟೆ ಮಾಡಿಕೊಟ್ಟು ಸುಸ್ಥಿರ ವಹಿವಾಟು ಕಂಡುಕೊಂಡ ನಂತರ ಮತ್ತೆ ಕೆಲಸಕ್ಕೆ ಸೇರಬೇಕು ಎಂದುಕೊಂಡಿದ್ದೇವೆ. ಕೆಲವರು ಹಳ್ಳಿಗಳ ಪ್ರಗತಿಗೆ ಹಣ ದೇಣಿಗೆ ನೀಡುತ್ತಾರೆ. ನಾವು ಹುದಲಿಗಾಗಿ ಸಮಯ ದಾನ ಮಾಡುತ್ತಿದ್ದೇವೆ. ಮಾರುಕಟ್ಟೆ ದೊಡ್ಡದಾದರೆ ಮತ್ತಷ್ಟು ಬೇಡಿಕೆ ಬರುತ್ತದೆ. ಆ ಊರಿನ ಇನ್ನಷ್ಟು ಮಹಿಳೆಯರಿಗೆ ಕೆಲಸ ಸಿಗುವಂತಾಗಬೇಕು ಎನ್ನುವುದು ನಮ್ಮ ಆಶಯ. ನಗರದ ಜನರು ಹಳ್ಳಿಗೆ ಬರುವಂತಾಗಬೇಕು’ ಎನ್ನುತ್ತಾರೆ ಅವರು.

ಹಿಂದಿನಿಂದಲೂ ನಡೆಯುತ್ತಿದೆ
1937ರಲ್ಲಿ ಇಲ್ಲಿಗೆ ಬಂದಿದ್ದ ಮಹಾತ್ಮ ಗಾಂಧೀಜಿ, ಒಂದು ವಾರ ತಂಗಿದ್ದರು. ಸ್ವದೇಶಿ ಪರಿಕಲ್ಪನೆಯ ಕುರಿತ ಚಿಂತನೆಯನ್ನು ಗ್ರಾಮದವರಲ್ಲಿ ಬಿತ್ತಿದ್ದರು. ಬಳಿಕ ಖಾದಿ ಗ್ರಾಮೋದ್ಯೋಗ ಅರಳಿತ್ತು. ಒಂದಷ್ಟು ದುಡಿಯುವ ಕೈಗಳಿಗೆ ಕೆಲಸ ಕೊಡುವ ಕಾರ್ಯ ನಡೆಯಿತು. ಹಂತಹಂತವಾಗಿ ‘ಜಟ್‌ ಪಟ್‌... ಜಟ್‌ ಪಟ್‌’ ಎನ್ನುವ ಮಗ್ಗಗಳ ಸಂಖ್ಯೆಯೂ ಹೆಚ್ಚಾಯಿತು. ಹೀಗಾಗಿ ಈ ಊರು ‘ಖಾದಿ ಗ್ರಾಮ’ ಎಂದೇ ಜನಜನಿತವಾಯಿತು.

(ಉಪ್ಪಿನ ಕಾಯಿ ಪ್ಯಾಕಿಂಗ್‌ನಲ್ಲಿ...)

ಖಾದಿ ಮಾತ್ರವಲ್ಲದೇ ಬೇರೇನಾದರೂ ಗುಡಿ ಕೈಗಾರಿಕೆ ಆರಂಭಿಸಬೇಕು ಎನ್ನುವ ಉದ್ದೇಶದಿಂದ ಖಾದಿ ಹಾಗೂ ಗ್ರಾಮೋದ್ಯೋಗ ಸಹಕಾರಿ ಉತ್ಪಾದಕರ ಸಂಘ ನಿಯಮಿತ ಚಿಂತಿಸಿತು. ಸ್ಥಳೀಯವಾಗಿ ರೈತರಿಂದಲೇ ಸಿಗುವ ಕಚ್ಚಾ ಪದಾರ್ಥಗಳನ್ನು ಬಳಸಿ ಏನಾದರೂ ಉತ್ಪನ್ನಗಳನ್ನು ತಯಾರಿಸಬೇಕು ಎಂದುಕೊಂಡಾಗ ಹೊಳೆದದ್ದು ಉಪ್ಪಿನಕಾಯಿ, ಸಾಬೂನು, ಅಗರಬತ್ತಿ ತಯಾರಿಕೆ ಉಪಾಯ. 1971ರಿಂದ ಇಲ್ಲಿ ಉಪ್ಪಿನಕಾಯಿ ತಯಾರಿಸಲಾಗುತ್ತಿದೆ. ‘ಜವಾನ್‌’ ಹೆಸರಿನಲ್ಲಿ ಬ್ರಾಂಡ್‌ ಮಾಡಲಾಗುತ್ತಿದೆ. ಖಾದಿ ಬಟ್ಟೆ, ಉಪ್ಪಿನಕಾಯಿ, ಅಗರಬತ್ತಿ, ಸಾಬೂನು ಉತ್ಪನ್ನಗಳಿಂದ ಸಾವಿರ ಮಂದಿಗೆ ಉದ್ಯೋಗ ದೊರೆತಿದೆ. ಈ ಕೈಗಾರಿಕೆಯ ನಿರ್ವಹಣೆಗೆಂದು 33 ಮಂದಿ ದುಡಿಯುತ್ತಿದ್ದಾರೆ. ವಾರ್ಷಿಕ ₹ 2.5 ಕೋಟಿ ವರಮಾನ ಕಾಣುತ್ತಿದೆ ಈ ಸಹಕಾರಿ ಸಂಘ.

150 ಟನ್‌ವರೆಗೆ ಮಾರಾಟ
ಉಪ್ಪಿನಕಾಯಿ ತಯಾರಿಕೆ ಒಂದರಿಂದಲೇ ಈ ಸಂಘಕ್ಕೆ ಈಚಿನ ವರ್ಷಗಳಲ್ಲಿ ₹ 70 ಲಕ್ಷದವರೆಗೆ ಆದಾಯ ಸಿಗುತ್ತಿದೆ. ಅಂದರೆ 150 ಟನ್‌ವರೆಗೂ ಉಪ್ಪಿನಕಾಯಿ ಮಾರುಕಟ್ಟೆ ಕಾಣುತ್ತಿದ್ದು, ಊಟದ ತಟ್ಟೆಯ ಅಂಚನ್ನು ಅಲಂಕರಿಸುತ್ತಿದೆ; ಸವಿದವರ ಜಿಹ್ವಾಚಪಲ ಈಡೇರಿಸುತ್ತಿದೆ! ಬೆಳಗಾವಿ ಮಾತ್ರವಲ್ಲದೇ, ರಾಯಚೂರು, ಧಾರವಾಡ, ಹಾವೇರಿ, ಕೊಪ್ಪಳ, ಚಿತ್ರದುರ್ಗ, ಬಳ್ಳಾರಿ, ಮೈಸೂರು, ದಾವಣಗೆರೆ ಜಿಲ್ಲೆಗಳಲ್ಲಿಗೂ ಇಲ್ಲಿಂದ ಉಪ್ಪಿನಕಾಯಿ ರವಾನೆಯಾಗುತ್ತಿದೆ.

ಮಾವಿನ ಉಪ್ಪಿನಕಾಯಿಗೆ ಕಾಲು ಕೆ.ಜಿ ಜಾರ್‌ಗೆ ₹25, ಐದು ಕೆ.ಜಿ. ಜಾರ್‌ಗೆ ₹220 ನಿಗದಿಪಡಿಸಲಾಗಿದೆ. ಮಾಂಗಳಿ ಬೇರಿನ ಉಪ್ಪಿನಕಾಯಿಯನ್ನು ಕಾಲು ಕೆ.ಜಿ ಜಾರ್‌ಗೆ ₹45ಕ್ಕೆ ಹಾಗೂ ಅರ್ಧ ಕಿಲೋಗೆ ₹80ಕ್ಕೆ ಮಾರಲಾಗುತ್ತದೆ. ಆರ್ಡರ್‌ ಕೊಟ್ಟರೆ 5 ಕೆ.ಜಿ.ಯ ಜಾರ್‌ನಲ್ಲೂ ತಯಾರಿಸಿಕೊಡುತ್ತಾರೆ. ದೇಸಿ ಸ್ವಾದದಿಂದ ಕೂಡಿದ ಈ ಉಪ್ಪಿನಕಾಯಿ ಬಲು ರುಚಿ.

ಸಂಪರ್ಕಕ್ಕೆ: 96203 70600 (ಅಮಿತ್‌ ವಡವಿ)
 

**

ಗುಣಮಟ್ಟದಲ್ಲಿ ರಾಜಿ ಇಲ್ಲ
‘ಧಾರವಾಡದ ಕುಂದಗೋಳ, ಹಾವೇರಿಯ ಬ್ಯಾಡಗಿ ಮೊದಲಾದ ಕಡೆಯಿಂದ ಬ್ಯಾಡಗಿ ಮೆಣಸಿನಕಾಯಿಯನ್ನು, ಮಹಾರಾಷ್ಟ್ರದ ಇಚಲಕರಂಜಿ, ಸಾಂಗ್ಲಿಯಿಂದ ಅರಿಶಿಣವನ್ನು ತರುತ್ತೇವೆ. ಉಳಿದ ಕಚ್ಚಾ ಪದಾರ್ಥಗಳನ್ನು ಬೆಳಗಾವಿಯಲ್ಲೇ ಖರೀದಿಸುತ್ತೇವೆ. ಶುದ್ಧ ಹಾಗೂ ಶ್ರೇಷ್ಠ ಗುಣಮಟ್ಟದ ಪದಾರ್ಥಗಳನ್ನು ಬಳಸುತ್ತೇವೆ. ಮಹಾತ್ಮ ಗಾಂಧೀಜಿ ಅವರ ಸ್ಮರಣಾರ್ಥ ಕೈಗೊಳ್ಳುತ್ತಿರುವ ಈ ಗುಡಿ ಕೈಗಾರಿಕೆಯಲ್ಲಿ ಗುಣಮಟ್ಟದಲ್ಲಿ ರಾಜಿ ಇಲ್ಲ’ ಎನ್ನುತ್ತಾರೆ ಸಂಘದ ಅಕೌಂಟೆಂಟ್‌ ಶಿವಾನಂದ ಭದ್ರಕಾಳಿ.

ಮಾವಿನಕಾಯಿ, ನಿಂಬೆಕಾಯಿ ಹಾಗೂ ಮಾಂಗಣಿ ಬೇರಿನಿಂದ ಉಪ್ಪಿನಕಾಯಿ ಸಿದ್ಧಪಡಿಸಲಾಗುತ್ತದೆ. ಕಾಯಿಗಳನ್ನು ಕೊಯ್ದು ಸಿದ್ಧಪಡಿಸಿಕೊಳ್ಳುವಾಗ 60ರಿಂದ 70 ಮಂದಿ ಕೆಲಸ ಮಾಡುತ್ತಾರೆ. ನಿಂಬೆಕಾಯಿಯ ಸೀಸನ್‌ನಲ್ಲಿ 30 ಮಂದಿ ಇರುತ್ತಾರೆ. ಉಪ್ಪಿನಕಾಯಿಯನ್ನು ಜಾರ್‌ಗೆ ತುಂಬುವ ಅವಧಿಯಲ್ಲಿ 15 ಮಂದಿಗೆ ಕೆಲಸ. ಇವರಲ್ಲಿ ಬಹುತೇಕರು ಮಹಿಳೆಯರು. ಬೆಳಿಗ್ಗೆ 7.45ಕ್ಕೆ ತಯಾರಿಕಾ ಚಟುವಟಿಕೆ ಶುರುವಾದರೆ 5.30ರವರೆಗೆ (ಮಧ್ಯಾಹ್ನ ಒಂದೂವರೆ ಗಂಟೆ ಬಿಡುವು ಹೊರತುಪಡಿಸಿ) ಮಾವು, ನಿಂಬೆ ಅಥವಾ ಮಾಂಗಣಿ ಬೇರನ್ನು ಉಪ್ಪಿನಕಾಯಿಯಾಗಿಸುವ ಹಾಗೂ ಆಕರ್ಷಕವಾಗಿ ಪ್ಯಾಕ್‌ ಮಾಡುವ ಕಾರ್ಯ ನಡೆಯುತ್ತದೆ.

ನೆರವಾದ ಉಪ್ಪಿನಕಾಯಿ: ‘ನನ್ನಂತಹ ಹಲವು ಮಂದಿಗೆ ಇಲ್ಲಿ ಕೆಲಸ ದೊರೆತಿದೆ. ಹನ್ನೆರಡು ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ನಮ್ಮೂರಿನಲ್ಲಿಯೇ ಕೆಲಸ ಸಿಕ್ಕಿದ್ದರಿಂದ ಬೇರೆ ಊರಿಗೆ ಹೋಗುವುದು ತಪ್ಪಿದೆ. ಮನೆಯ ಕೆಲಸವನ್ನೂ ಮಾಡಬಹುದು; ದುಡಿದು ಹಣ ಸಂಪಾದಿಸಬಹುದು. ಆರಂಭದಲ್ಲಿ ಐದು ಕೆ.ಜಿ. ಬಾಕ್ಸ್‌ ಹಾಗೂ ಸಣ್ಣ ಪಾಕೆಟ್‌ಗಳಲ್ಲಿ ಉಪ್ಪಿನಕಾಯಿ ತುಂಬುತ್ತಿದ್ದೆವು. ಈಗ, ವ್ಯವಸ್ಥಿತವಾಗಿ ಜಾರ್‌ಗಳಲ್ಲಿ ಸಿದ್ಧಪಡಿಸುತ್ತಿದ್ದೇವೆ. ಈಗ ಬೇಡಿಕೆ ಹೆಚ್ಚಾಗಿದೆ. ನೆಂಟರಿಷ್ಟರೂ ಇಲ್ಲಿಂದ ಉಪ್ಪಿನಕಾಯಿ ತರಿಸಿಕೊಳ್ಳುತ್ತಾರೆ. ನಮ್ಮ ಕುಟುಂಬದ ಸಮಾರಂಭಗಳಲ್ಲಿ ಇದೇ ಉಪ್ಪಿನಕಾಯಿ ಬಡಿಸುತ್ತೇವೆ. ನಾವು ಸಿದ್ಧಪಡಿಸುವ ಉಪ್ಪಿನಕಾಯಿ ಸವಿದವರು ರುಚಿಯಾಗಿದೆ ಎಂದಾಗ ಸಂತೋಷವಾಗುತ್ತದೆ’ ಎಂದವರು ಇಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜಯಲಕ್ಷ್ಮಿ ಮೋಹನ ನಲವಡೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.