ADVERTISEMENT

ಎಣೆಯಿಲ್ಲದ ಸೊಬಗಿನ ಒತ್ತಿನೆಣೆ

ಎನ್.ಸ್ವಾತಿ
Published 28 ಏಪ್ರಿಲ್ 2014, 19:30 IST
Last Updated 28 ಏಪ್ರಿಲ್ 2014, 19:30 IST
ನೀರಿನಲ್ಲಿ ಹಗ್ಗ ಜಗ್ಗಾಟ
ನೀರಿನಲ್ಲಿ ಹಗ್ಗ ಜಗ್ಗಾಟ   

ವಿಶಾಲವಾದ ಸಮುದ್ರದ ಜಲರಾಶಿ, ಮನಸ್ಸಿಗೆ ಮುದ ನೀಡುವ ವಾತಾವರಣ. ಸುಂದರ ಸೂರ್ಯಾಸ್ತದ ಸೊಬಗನ್ನು ಮನದ ತುಂಬ ತುಂಬಿಕೊಂಡು ಮುದಗೊಳ್ಳಲು ಒಮ್ಮೆ ಬನ್ನಿ ಒತ್ತಿನೆಣೆಗೆ.

ಕರಾವಳಿ ಕರ್ನಾಟಕದಲ್ಲಿ ದಕ್ಷಿಣದ ಮಂಗಳೂರಿನಿಂದ ಉತ್ತರದ ಕಾರವಾರದ ತನಕ ಉದ್ದಕ್ಕೂ ಸಮುದ್ರ. ಇಲ್ಲಿ ಗೋಕರ್ಣ, ಮುರ್ಡೇಶ್ವರ, ಮರವಂತೆ, ಮಲ್ಪೆ, ಕಾಪು, ಸುರತ್ಕಲ್, ಪಣಂಬೂರು, ಉಳ್ಳಾಲ ಸೋಮೇಶ್ವರ ಹೀಗೆ ಹಲವಾರು ಸುಂದರ ಬೀಚುಗಳು.  ಒಂದೊಂದು ಬೀಚುಗಳೂ ಒಂದಕ್ಕಿಂತ ಒಂದು ಭಿನ್ನ.

ಬೈಂದೂರಿನಿಂದ ಎರಡು ಕಿಲೊ ಮೀಟರ್ ದೂರದಲ್ಲಿದೆ ಒತ್ತಿನೆಣೆ. ಇದು ನೆಣೆಯಂತೆ ಕಾಣುವುದರಿಂದ ಒತ್ತಿನೆಣೆ ಎಂಬ ಹೆಸರು ಬಂತೆಂಬುದು ಪ್ರತೀತಿ. ಕಡಲ ಕಿನಾರೆಯ ಬಳಿಯಲ್ಲಿಯೇ ಸೋಮೇಶ್ವರ ದೇವಸ್ಥಾನವಿದೆ.  ಮೇಲೆ ಗುಡ್ಡ, ಪ್ರವಾಸೋದ್ಯಮ ಇಲಾಖೆಯಿಂದ ರೆಸಾರ್ಟ್ ವ್ಯವಸ್ಥೆ ಮಾಡಲಾಗಿದೆ. ಗುಡ್ಡದ ಮೇಲಿಂದ ಸೂರ್ಯಾಸ್ತದ ಸೌಂದರ್ಯ ಮನಮೋಹಕ ದೃಶ್ಯ. ಪ್ರವಾಸಿಗರ ಸ್ವರ್ಗ ಎನ್ನಬಹುದಾದ ಇಲ್ಲಿಯ ಎಣೆಯಿಲ್ಲದ ಸೊಬಗು ಚಿತ್ತಾಕರ್ಷಕ.

ಮೆಟ್ಟಲಿಳಿದು ಕೆಳಗೆ ಬಂದಲ್ಲಿ ಬೀಚ್‌ನೊಂದಿಗೆ ಚಾಚಿ ಮಲಗಿರುವ ಬಂಡೆಗಳು, ಬಂಡೆಗಳಿಗೆ ಅಪ್ಪಳಿಸುವ ತೆರೆಗಳು ನಮ್ಮನ್ನು ಆನಂದಮಯ ಲೋಕಕ್ಕೆ ಕೊಂಡೊಯ್ಯುತ್ತದೆ. ಬೀಚ್‌ನಲ್ಲಿ ಸಂಜೆಯಾಗುತ್ತಿದ್ದಂತೆಯೇ ಪ್ರವಾಸಿಗರು ಬಂದು ಹೋಗುತ್ತಾರೆ. ಕೆಲವರು ಅಲ್ಲಿಯೇ ಆಟವಾಡಿದರೆ, ಇನ್ನು ಕೆಲವರು ನೀರಲ್ಲಿ ಕಾಲು ಚಾಚಿ ಸಂಭ್ರಮಿಸುತ್ತಾರೆ. ಫೋಟೊಗ್ರಫಿ ಪ್ರಿಯರು ಫೋಟೊ ಕ್ಲಿಕ್ಕಿಸಿಕೊಂಡು ಖುಷಿ ಪಡುತ್ತಾರೆ.

ನಮ್ಮ ತಂಡದ ಮಹಿಳಾ ಸದಸ್ಯರು ಸಮುದ್ರ ಕಿನಾರೆಯಲ್ಲಿಯೇ ಹಗ್ಗ ಜಗ್ಗಾಟ ಆಟವನ್ನು ಹಮ್ಮಿಕೊಂಡಿದ್ದರು. ಎರಡು ತಂಡ ಮಾಡಿಕೊಂಡು ಇಕ್ಕೆಲಗಳಿಂದ ಮಹಿಳೆಯರು ಹಗ್ಗವನ್ನು ಎಳೆದಾಡಿದರು.  ಒಂದು ತಂಡ ಗೆದ್ದ ಖುಷಿಯಲ್ಲಿದ್ದರೆ, ಇನ್ನೊಂದು ತಂಡ ಆಟದ ಮೋಜನ್ನು ಸವಿದರು. ಪರಸ್ಪರ ನೀರನ್ನೆರಚಿಕೊಂಡು ಸಂಭ್ರಮಿಸಿದರು.  ಕುರು ಕುರು ತಿಂಡಿ ತಂದವರು ಅಲ್ಲೇ ತಿಂದು ಮಜಾ ಮಾಡಿದರು. ಸನಿಹದಲ್ಲೇ ಪುಟ್ಟ ಅಂಗಡಿಯಲ್ಲಿ ಲಭ್ಯವಾದ ಐಸ್‌ಕ್ರೀಂ ತಿಂದು ಆನಂದಿಸಿದರು.

ಸನಿಹದಲ್ಲಿರುವ ಅನ್ಯ ಸೊಬಗು-
ಬೈಂದೂರಿನಲ್ಲಿ ಸೋಮೇಶ್ವರ ಅನಾದಿ ಕಾಲದ ದೇವಾಲಯವೊಂದಿದೆ. ಇಲ್ಲಿ ಲಿಂಗರೂಪಿ ಶಿವನನ್ನು ಕಾಣಬಹುದು. ಬೈಂದೂರಿನಿಂದ ದಕ್ಷಿಣಕ್ಕೆ ಬಂದರೆ ನದಿ ಸಮುದ್ರಗಳನ್ನು ಸೀಳಿ ಸಾಗುವ ಹೆದ್ದಾರಿಯಲ್ಲಿನ ಮರವಂತೆ ಬೀಚ್‌ನ ಸೊಬಗನ್ನೂ ಸವಿಯಬಹುದು. ಉತ್ತರಕ್ಕೆ ಸಾಗಿದರೆ ಮುರ್ಡೇಶ್ವರ ಶಿವಾಲಯವಿದೆ. ಬೈಂದೂರಿನ ಇನ್ನೊಂದು ಮಗ್ಗುಲಿನ ಶೀರೂರು ಹೊರಭಾಗ ದಲ್ಲಿ ಕೂಸಳ್ಳಿ ಜಲಪಾತ; ಸನಿಹದ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ 2 ಕಿ.ಮೀ. ಸಾಗಿದರೆ ಅರಶಿನಗುಂಡಿ ಜಲಪಾತ ವಿದೆ. ಕರಾವಳಿ ಪ್ರವಾಸದ ಸಂದರ್ಭದಲ್ಲಿ ಇಲ್ಲಿಗೂ ಭೇಟಿ ನೀಡಿದಲ್ಲಿ ಪ್ರವಾಸದ ಮೋಜು ಇನ್ನೂ ಹೆಚ್ಚು.

ಹೀಗೆ ಬನ್ನಿ: ಕರಾವಳಿಯ ಉಡುಪಿ ಜಿಲ್ಲೆಯ ಕುಂದಾಪುರ-ಭಟ್ಕಳ ರಾಷ್ಟ್ರೀಯ ಹೆದ್ದರಿಯಲ್ಲಿ ಸಾಗಿ ಬೈಂದೂರಿನಿಂದ 2 ಕಿ.ಮೀ.ದೂರದಲ್ಲಿದೆ ಒತ್ತಿನೆಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.