ADVERTISEMENT

ಕಪ್ಪಡಿಯ ಗದ್ದುಗೆ

ತೇ.ಸಿ.ವಿಶ್ವೇಶ್ವರಯ್ಯ
Published 8 ಏಪ್ರಿಲ್ 2013, 19:59 IST
Last Updated 8 ಏಪ್ರಿಲ್ 2013, 19:59 IST

ಕಪ್ಪಡಿ ಎಂದಾಕ್ಷಣ ನೆನಪಿಗೆ ಬರುವುದು ಹನ್ನೆರಡನೆ ಶತಮಾನದ ಶರಣರ ನೇತಾರ ಮಹಾಮಾನವತಾವಾದಿ ಬಸವಣ್ಣನವರ ಕಪ್ಪಡಿ ಸಂಗಮ. ಮೈಸೂರು ಜಿಲ್ಲೆಯ ಎಡತೊರೆಯಿಂದ (ಈಗಿನ ಕೆ.ಆರ್.ನಗರದಿಂದ) ಚುಂಚನಕಟ್ಟೆಗೆ ಹೋಗುವ ರಸ್ತೆಯಲ್ಲಿ ಸುಮಾರು ಎಂಟು ಕಿ.ಮೀ. ದೂರ ಕ್ರಮಿಸಿದರೆ ಹೆಬ್ಬಾಳು ಎಂಬ ಊರು ಸಿಗುತ್ತದೆ. ಆ ಊರಿನ ಎದುರು ಭಾಗದ ರಸ್ತೆಯಲ್ಲಿ ಮೂರು ಕಿ.ಮೀ.ದೂರ ಕ್ರಮಿಸಿದರೆ ಮಂಟೇಸ್ವಾಮಿಯವರ ಶಿಷ್ಯರಾದ ರಾಚಪ್ಪಾಜಿ ಹಾಗೂ ತಂಗಿ ಚನ್ನಮ್ಮಾಜಿಯವರು ನೆಲೆಯಾದ ಗದ್ದುಗೆ ಇದೆ.

ಕಾವೇರಿ ನದಿ ದಂಡೆಯಲ್ಲಿರುವ ಈ ಕ್ಷೇತ್ರದಲ್ಲೆಗ ಜಾತ್ರೆಯ ಸಂಭ್ರಮ. ಪ್ರತಿ ಶಿವರಾತ್ರಿಯಿಂದ ಯುಗಾದಿಯವರೆಗೆ ವಿಶೇಷ ಪೂಜೆಗಳು ನೆರವೇರುತ್ತದೆ. ಈ ಕ್ಷೇತ್ರದ ಸುತ್ತಲೂ ಗದ್ದೆ ಬಯಲು ಹೊಂದಿಕೊಂಡಂತೆ ಹಚ್ಚ ಹಸಿರಿನ ತೋಪುಗಳಿಂದ ಆವರಿಸಿದೆ. ನಿತ್ಯ ನಿರ್ಮಲ ಸೊಬಗಿನ ಆಗರವಾದ ಪ್ರಶಾಂತ ವಾತಾವರಣದಲ್ಲಿನ ಪರಮ ಪವಿತ್ರ ತಪೋಭೂಮಿ.

ಆ ದಿವ್ಯ ನೆಲೆ ಶರಣ ರಾಚಪ್ಪಾಜಿಯವರು ಕೊನೆಯ ದಿನಗಳನ್ನು ಕಳೆದ ಕ್ಷೇತ್ರ. ರಾಚಪ್ಪಾಜಿ ಚನ್ನಮ್ಮನವರ ಗದ್ದುಗೆಯ ಹಿಂದೆ ಉರಿ ಗದ್ದುಗೆಯಿದೆ, ಇದರಿಂದ ಕೆಳಗೆ ಹರಳಯ್ಯನ ಪಾದಗಳಿವೆ. ಒಂದು ತಿಂಗಳು ದೀರ್ಘವಾಗಿ ನಡೆಯುವ ಈ ಜಾತ್ರೆಯನ್ನು ಮಂಟೇಸ್ವಾಮಿ ಸಂಪ್ರದಾಯದ ಅರಸು ಸಂತತಿಯಲ್ಲಿ ಬಂದ ಪ್ರಭುದೇವರಾಜ ಅರಸಿನವರು ಒಂದು ವರ್ಷ ನಡೆಸಿದರೆ, ಅದರ ಮುಂದಿನ ವರ್ಷ ಸರದಿಯಂತೆ ಜ್ಞಾನಪ್ರಕಾಶ ರಾಜೇಅರಸಿನವರು ನಡೆಸಿಕೊಂಡು ಬರುತ್ತಿದ್ದಾರೆ.

ಲಕ್ಷಾಂತರ ಭಕ್ತರನ್ನು ತನ್ನೆಡೆಗೆ ಸೆಳೆದುಕೊಂಡ ರಾಚಪ್ಪಾಜಿಯವರು ನೀಲಗಾರರ ನೆಚ್ಚಿನ ಗುರು ಭಕ್ತಜನ ಕಲ್ಪತರು. ಮಳವಳ್ಳಿ ಮತ್ತು ಬೊಪ್ಪಗೌಡನಪುರದ ಅರಸು ಮನೆತನದವರೇ ಜಾತ್ರೆ ನಡೆಸಿಕೊಂಡು ಬರುತ್ತಾರೆ. ಮಂಟೇಸ್ವಾಮಿ ಸಂಪ್ರದಾಯದ ಮಠಗಳೆಲ್ಲವೂ ಅರಸು ಮನೆತನದವರ ಅಧೀನದಲ್ಲಿದೆ. ಜಾತ್ರೆಯ ಸಂದರ್ಭದಲ್ಲಿ ಮೈಸೂರು ಪ್ರಾಂತ್ಯದ ಸಾವಿರಾರು ಭಕ್ತರು ನಿತ್ಯ ಕ್ಷೇತ್ರದ ಕಾವೇರಿ ನದಿಯಲ್ಲಿ ಮಿಂದು ಭಕ್ತಿ ಗೌರವದಿಂದ ನಡೆದುಕೊಳ್ಳುತ್ತಾರೆ. ಗುರುಗಳು ಉರಿ ಗದ್ದುಗೆಯಲ್ಲಿ ಕುಳಿತಾಗ ಭಕ್ತರು ಉಂಡೆಕಾಯನ್ನು ಕಾಣಿಕೆಯಾಗಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT