ADVERTISEMENT

ಕಲಶೋತ್ಸವ ಸಡಗರದಲ್ಲಿಕುಂಜಾರು ಗಿರಿ

ಸವಿತಾ ಎಸ್.
Published 18 ಫೆಬ್ರುವರಿ 2013, 19:59 IST
Last Updated 18 ಫೆಬ್ರುವರಿ 2013, 19:59 IST
ಕುಂಜಾರುಗಿರಿಯ ಮೇಲಿರುವ ದುರ್ಗಾದೇವಾಲಯ
ಕುಂಜಾರುಗಿರಿಯ ಮೇಲಿರುವ ದುರ್ಗಾದೇವಾಲಯ   

ಉಡುಪಿಯಿಂದ ಸುಮಾರು 11 ಕಿ.ಮೀ ದೂರದಲ್ಲಿದೆ ಆನೆಯ ರೂಪು ಹೊಂದಿರುವ ಬೆಟ್ಟ `ಕುಂಜಾರುಗಿರಿ'. ಈ ಬೆಟ್ಟದ ನಡುವೆ ವಾಸವಾಗಿದ್ದಾಳೆ ದುರ್ಗಾದೇವಿ. ಈ ದೇವಿ ನೆಲೆಸಿರುವ ದೇವಾಲಯದಲ್ಲೆಗ ಬ್ರಹ್ಮಕಲಶೋತ್ಸವದ ಸಂಭ್ರಮ. 14ರಿಂದ ಆರಂಭಗೊಂಡಿರುವ ಈ ಉತ್ಸವ 23ರವರೆಗೂ ನಡೆಯಲಿದೆ.

ದುರ್ಗೆ ಹಾಗೂ ಪರಶುರಾಮ ನೆಲೆಸಿರುವ ಈ ಎರಡು ಬೆಟ್ಟಗಳು ದೂರದ ನೋಟಕ್ಕೆ ಆನೆಯ (ಕುಂಜ) ರೂಪ ಹೊಂದಿದ್ದು ಅಪೂರ್ವ ಸೌಂದರ್ಯದಿಂದ ಕೂಡಿದೆ. ಅದಕ್ಕೇ ಇದು ಕುಂಜಾರುಗಿರಿ. ಕುಂಜಾರುಗಿರಿಗೆ ಉಡುಪಿ ಕೃಷ್ಣಮಠದಿಂದ 11ಕಿ.ಮೀ ದೂರದಲ್ಲಿದೆ ಈ ದೇವಾಲಯ.

ಕಂಸನ ಕೈಯಿಂದ ತಪ್ಪಿಸಿಕೊಂಡ ಯಶೋಧೆಯ ಹೆಣ್ಣು ಮಗು ದೇವಿಯ ರೂಪತಾಳಿ ಈ ಕ್ಷೇತ್ರದಲ್ಲಿ ನೆಲೆಸಿದಳು ಎಂಬ ಕತೆಯೂ ಇದರ ಹಿಂದಿದೆ. ಆ ಸಂದರ್ಭ ದೇವತೆಗಳು ವಿಮಾನದಲ್ಲಿ ಪುಷ್ಪವೃಷ್ಠಿ ಮಾಡಿದ್ದರಿಂದ ಕ್ಷೇತ್ರಕ್ಕೆ `ವಿಮಾನಗಿರಿ' ಎಂಬ ಹೆಸರು ಬಂದಿದೆ. ಈ ಗಿರಿಯಲ್ಲಿ ನೆಲೆಸಿರುವ ದುರ್ಗೆ ಕೃಷ್ಣನ ತಂಗಿಯೂ ಹೌದು.

ದೇವಾಲಯದ ಹಿನ್ನೆಲೆ ಹಾಗೂ ದುರ್ಗಾದೇವಿಯ ಉಲ್ಲೇಖ ನಾರಾಯಣ ಪಂಡಿತಾಚಾರ್ಯರು ರಚಿಸಿರುವ `ಸುಮಧ್ವವಿಜಯ' ಹಾಗೂ ವಾದಿರಾಜ ತೀರ್ಥರು ಬರೆದ `ತೀರ್ಥಪ್ರಬಂಧ'ದಲ್ಲೂ ಇರುವುದು ವಿಶೇಷ. ಕುಂಜಾರು ದುರ್ಗೆ ಪರಶುರಾಮನಿಂದ ಪ್ರತಿಷ್ಠಾಪಿಸಲ್ಪಟ್ಟಿರುವವಳು ಎಂದೂ ಹೇಳಲಾಗುತ್ತದೆ.

ದೇವಾಲಯ ದಕ್ಷಿಣ ಮಗ್ಗುಲಲ್ಲಿ ಪರಶುರಾಮ ಬೆಟ್ಟ ವಿರಾಜಿಸುತ್ತಿದ್ದರೆ, ಪೂರ್ವ ದಿಕ್ಕಿನಲ್ಲಿ ಮಧ್ವಾಚಾರ್ಯರು ಅವತರಿಸಿದ ಹಾಗೂ ತಮ್ಮ ಬಾಲ್ಯವನ್ನು ಕಳೆದ `ಪಾಜಕ' ಮೆರೆಯುತ್ತಿದೆ. ಇದರೊಂದಿಗೆ ಬಾಣತೀರ್ಥ, ಗದಾತೀರ್ಥ, ಪರಶುತೀರ್ಥ, ಧನುಸ್ಸು ತೀರ್ಥಗಳೆಂಬ ಕೆರೆಗಳಿವೆ. ಅವೆಲ್ಲಾ ದುರ್ಗೆಯ ಅಭಿಷೇಕಕ್ಕೆ ಮೀಸಲಾದವು. ಅಲ್ಲಿನ ಗುಹೆಯಲ್ಲಿ ಇಂದಿಗೂ ಪರಶುರಾಮ ಸನ್ನಿಹಿತನಾಗಿದ್ದಾನೆ ಎಂಬುದು ಭಕ್ತರ ನಂಬಿಕೆ.

ಮೆಟ್ಟಿಲುಗಳ ಸಾಲು
ದುರ್ಗಾದೇವಿಯನ್ನು ನೋಡಬೇಕಾದರೆ 257 ಮೆಟ್ಟಿಲುಗಳನ್ನು ಹತ್ತಬೇಕು. ಬೆಟ್ಟದ ನಾಲ್ಕು ಬದಿಗಳಲ್ಲೂ ಮೇಲೇರಲು ಅನುಕೂಲತೆಗಳಿದ್ದರೂ ಮೆಟ್ಟಿಲು ಇರುವುದು ಒಂದು ಬದಿಯಲ್ಲಿ ಮಾತ್ರ. ಇನ್ನೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುಕೂಲವಾದ ದಾರಿ ನಿರ್ಮಿಸಲಾಗಿದೆ. ದುರ್ಗಾಬೆಟ್ಟದ ಸುತ್ತ ಹಬ್ಬಿರುವ ಹಸಿರು ಕಾನನ ಇಲ್ಲಿನ ಮತ್ತೊಂದು ವಿಶೇಷ.
ಹಿಂದೆ ಹುಲಿಗಳೂ ನೆಲೆಸಿದ್ದವು ಎನ್ನಲಾಗಿದ್ದ ಈ ದಟ್ಟ ಕಾಡು ಈಗ ನವಿಲು, ಕೋತಿ, ನರಿಗಳಿಗಷ್ಟೇ ಆಶ್ರಯತಾಣವಾಗಿದೆ.

ಸಂಜೆ ವೇಳೆ ಸೂರ್ಯ ಮುಳುಗುವ ಆಹ್ಲಾದಕರ ದೃಶ್ಯವನ್ನೂ ಇಲ್ಲಿಂದಲೇ ನಿಂತು ನೋಡಿ ಸವಿಯಬಹುದು. ಸಮುದ್ರದ ಅಲೆಗಳು ಕಿನಾರೆಗೆ ಅಪ್ಪಳಿಸುವ ಸುಂದರ ಕ್ಷಣಗಳನ್ನೂ ಇಲ್ಲಿಂದಲೇ ಕಣ್ತುಂಬಿಕೊಳ್ಳಬಹುದು. 

ದೇವಾಲಯದ ನಿರ್ಮಾಲ್ಯದೇವತೆ `ಮುಂಡಿನಿ' ದೇವಿಯ ಎಡಮಗ್ಗುಲಲ್ಲಿ ಒಂದು ಕಾಲನ್ನು ಮಡಚಿ ಕುಳಿತಿರುವ ವಿಗ್ರಹವಿದೆ. ಕುಂಜಾರು ದೇವಿಯ ವಠಾರದಲ್ಲಿ ಬಾವಿಯಿಲ್ಲ. ಇದೀಗ ನಲ್ಲಿ ವ್ಯವಸ್ಥೆ ಮಾಡಲಾಗಿದ್ದರೂ ದೇವಿಯ ಪೂಜೆಗೆ ಕೆಳಗಿನ ಬಾಣತೀರ್ಥದಿಂದಲೇ ನೀರು ಹೊತ್ತು ತರಬೇಕು. ದೊಡ್ಡ ಕೊಡದಲ್ಲಿ ನಿರ್ಮಾಲ್ಯವಿಸರ್ಜನೆಗೆ, ಅಭಿಷೇಕಕ್ಕೆ, ನೈವೇದ್ಯಕ್ಕೆ...ಹೀಗೆ ಒಟ್ಟು 6 ಕೊಡ ನೀರು ಹೊತ್ತು ತರಬೇಕು. ಖಾಲಿ ಹೊಟ್ಟೆಯಲ್ಲಿ, ಮಧ್ಯೆ ಎಲ್ಲೂ ಕೆಳಗಿಡದೆ ನೀರು ಹೊರಬೇಕು. ರೂಢಿಯಾದ ವ್ಯಕ್ತಿಗೂ ಒಂದು ಕೊಡ ನೀರು ತರಲು ಹತ್ತು ನಿಮಿಷ ಬೇಕು!

ದೇವಾಲಯದ ಆಡಳಿತ ನಡೆಸುವುದು ಉಡುಪಿಯ ಅದಮಾರು ಮಠ. ದೇವಿಗೆ ಕೆಂಪು ಹಾಗೂ ಕಪ್ಪು ಬಣ್ಣದ ಬಳೆ ಹರಕೆ ರೂಪದಲ್ಲಿ ಒಪ್ಪಿಸಿದರೆ ಮುತ್ತೈದೆ ಭಾಗ್ಯ ನೀಡುತ್ತಾಳೆ ಎಂಬುದು ಭಕ್ತರ ನಂಬಿಕೆ. ನವರಾತ್ರಿಯಲ್ಲಿ ಕನ್ನಿಕಾ ಪೂಜೆ, ಶ್ರಾವಣ ಮಾಸದ ಶುಕ್ರವಾರ ದೇವಿಯನ್ನು ಪೂಜಿಸುವುದು, ಬೆಳ್ಳಿಯ ತೊಟ್ಟಿಲು ನೀಡುವುದು ಇಲ್ಲಿನ ವಿಶೇಷ. ಕ್ಷೇತ್ರ ಇದೀಗ ಜೀರ್ಣೋದ್ಧಾರಗೊಂಡಿದೆ. ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ, ಸುತ್ತುಪೌಳಿ, ಸುವರ್ಣ ಮಂಟಪದ ಬ್ರಹ್ಮಕಲಶೋತ್ಸವ ಈಗ ನಡೆಯುತ್ತಿದೆ. ಸಂಪರ್ಕಕ್ಕೆ 0820-2559444, 2009099.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.