ಬೆಂಗಳೂರು ಮಹಾನಗರದಿಂದ ಕೇವಲ 30 ಕಿ ಮೀ ದೂರ ಸುಂದರವಾದ ಹಚ್ಚ ಹಸಿರ ತಂಪಾದ ಪರಿಸರದ ನಡುವೆ ಮಾವು, ತೆಂಗು, ಬಾಳೆ, ಅಡಿಕೆ, ಪಪ್ಪಾಯಿ ಗಿಡಗಳ ವನರಾಶಿ, ದೂರದ ಸಾವನದುರ್ಗ ಬೆಟ್ಟದ ವಿಹಂಗಮ ನೋಟದ ಹಿನ್ನೆಲೆಯಲ್ಲಿ ನೆಲೆನಿಂತಿದೆ ಮಂತ್ರಾಲಯದ ಮೃತ್ತಿಕೆಯ ಶ್ರೀ ಕಾಮಧೇನು ಕ್ಷೇತ್ರ.
ಮೂರು ವರ್ಷಗಳ ಹಿಂದೆ ಭಕ್ತರೊಬ್ಬರು ಮಾಗಡಿ ರಸ್ತೆಯಿಂದ ಕೇವಲ ಏಳು ಕಿ.ಮೀ. ದೂರದ ವಡ್ಡರಹಳ್ಳಿಯಲ್ಲಿ ರಾಯರ ಬೃಂದಾವನ ನಿರ್ಮಾಣಕ್ಕೆ ಜಾಗವನ್ನು ದೇಣಿಗೆ ಕೊಟ್ಟರು. ಇಲ್ಲಿ ಜೆ ಪಿ ನಗರದ ಗುರುಶೇಷ ಗುರೂಜಿಯವರು ಪರಿಶ್ರಮ ಪಟ್ಟು ಬೃಂದಾವನ ನಿರ್ಮಾಣ ಮಾಡಿದರು. ಅದೀಗ ಭಕ್ತಾದಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಪ್ರಮುಖ ಧಾರ್ಮಿಕ ಸ್ಥಳ.
108 ಕೋಟಿ ಲೇಖನ ಮಹಾಯಜ್ಞ ಬೃಂದಾವನ ಇಲ್ಲಿಯ ಪ್ರಮುಖ ಆಕರ್ಷಣೆ. ಶ್ರೀ ಗುರುರಾಯರ ನಾಮಸ್ಮರಣೆಯ `ಶ್ರೀ ರಾಘವೇಂದ್ರಾಯ ನಮಃ~ ಮಂತ್ರವನ್ನು 108 ಕೋಟಿ ಸಲ ಬರೆದು ಇಲ್ಲಿಯ ಉದ್ದೇಶಿತ ಸಾಲಿಗ್ರಾಮ ಶಿಲಾ ಬೃಂದಾವನದ ಒಡಲಲ್ಲಿ ಇರಿಸುವ ದೊಡ್ಡ ಕಾರ್ಯ ನಡೆದಿದೆ.
ಈಗಾಗಲೇ ಹಲವು ಕೋಟಿ ಲಿಖಿತ ಮಂತ್ರ ಜಪ ಪುಸ್ತಕಗಳು ಬೃಂದಾವನ ಸೇರಿಕೊಂಡಿವೆ. ಬೃಂದಾವನಕ್ಕೆ ನೇಪಾಳದ ಗಂಡಕಿ ನದಿಯಿಂದ ತಂದ ಸಾಲಿಗ್ರಾಮ ಶಿಲೆ ಬಳಸಲಾಗುತ್ತಿದೆ. ಇದಲ್ಲದೇ 108 ಸಾಲಿಗ್ರಾಮ ಮೂರ್ತಿಗಳನ್ನೂ ಪ್ರತಿಷ್ಠಾಪಿಸುವ ಯೋಜನೆಯಿದೆ.
ಪ್ರತಿ ಗುರುವಾರ, ಭಾನುವಾರ ವಿಶೇಷ ಪೂಜೆ. ಪ್ರತಿ ವರ್ಷ ಗುರುರಾಯರ ಆರಾಧನಾ ಮಹೋತ್ಸವವು ಸಡಗರದಿಂದ ನಡೆಯುತ್ತದೆ. ನಿತ್ಯ ಬೆಳಿಗ್ಗೆ 6 ರಿಂದ ಮಧ್ಯಾಹ್ನ 1.30 ಹಾಗೂ ಸಂಜೆ 4ರಿಂದ ರಾತ್ರಿ 8 ರ ವರೆಗೂ ತೆರೆದಿರುವ ಕಾಮಧೇನು ಕ್ಷೇತ್ರದಲ್ಲಿ ನಿರಂತರ ಪ್ರಸಾದ ವಿನಿಯೋಗವಿರುತ್ತದೆ.
ಶ್ರೀ ಮಂದಿರದ ಎಡಕ್ಕೆ ಬೃಹತ್ ಏಕ ಶಿಲೆಯಲ್ಲಿ ಶ್ರೀ ವಲ್ಲಿ ಕಲ್ಪವಲ್ಲಿ ಹಾಗೂ ಶ್ರೀ ಸುಬ್ರಮಣ್ಯ ಸ್ವಾಮಿಗಳ ಮೂರ್ತಿಗಳಿವೆ. ಮೆಜೆಸ್ಟಿಕ್ ಹಾಗೂ ಸಿಟಿ ಮಾರ್ಕೆಟ್‌ನಿಂದ 245 ಎ ಯಿಂದ ಎನ್ ವರೆಗಿನ ಸಂಖ್ಯೆಯ ಬಸ್‌ಗಳು ಈ ಕ್ಷೇತ್ರಕ್ಕೆ ಸಂಪರ್ಕ ಕಲ್ಪಿಸುತ್ತವೆ. ಪೂಜೆ, ಸೇವೆಗಳ ಬಗ್ಗೆ 94806 06727 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.