ADVERTISEMENT

ಕುಮಟಾ ಕಾಮಾಕ್ಷಿಯ ವೈಭವ

ಎನ್.ಡಿ.ಹೆಗಡೆ
Published 23 ಜುಲೈ 2012, 19:30 IST
Last Updated 23 ಜುಲೈ 2012, 19:30 IST

ಅದ್ಭುತ ಶೈಲಿಯ ಕಾಷ್ಟ ಕೆತ್ತನೆ, ಬಂಗಾರ ಮತ್ತು ಬೆಳ್ಳಿಯ ಉತ್ಸವ ರಥ, ರಜತ ಹೊದಿಕೆಯಿಂದ ನಿರ್ಮಾಣಗೊಂಡ ಮುಂಭಾಗದ ಗೋಡೆ ಮತ್ತು ದ್ವಾರಗಳು, ಮೇಲ್ಛಾವಣಿಯ ಉಪ್ಪರಿಗೆಯ ಒಳ ಮೈಯಲ್ಲಿ ಸಾಗವಾನಿ, ಶಿವನಿ ಮತ್ತು ಬೀಟೆ ಮರದ ವಿಶಿಷ್ಟ ಕುಸುರಿ ಕೆಲಸ,  ಒಳ ಆವರಣದಲ್ಲಿ ಶ್ರೀಶಾಂತೇರಿ, ಶ್ರೀಕಾಮಾಕ್ಷಿ , ಶ್ರೀಲಕ್ಷ್ಮೀನಾರಾಯಣ, ಶ್ರೀರವಳನಾಥ, ನವಗ್ರಹ, ಶ್ರೀಬೇತಾಳ, ಶ್ರೀಕಾಲಭೈರವರ ಸನ್ನಿಧಿ ಮತ್ತು ಯಜ್ಞ ಶಾಲೆಗಳ ಸಂಗಮ.

ಇದು ಉತ್ತರ ಕನ್ನಡ ಜಿಲ್ಲೆ ಕುಮಟಾದ ಶಾಂತೇರಿ ಕಾಮಾಕ್ಷಿ ರವಳನಾಥ ದೇಗುಲದ ವೈಭವದ ಒಂದು ಕಿರು ಚಿತ್ರಣ ಮಾತ್ರ. ಈ ದೇಗುಲದ ಎದುರೇ 1930ರಲ್ಲಿ ಗಾಂಧೀಜಿ ಅನುಯಾಯಿಗಳು ಉಪ್ಪಿನ ಸತ್ಯಾಗ್ರಹ ನಡೆಸಿದ ಗಾಂಧಿ ಚೌಕ ಇದೆ.

ಪ್ರಾಚೀನ ಇತಿಹಾಸ
ಗೌಡ ಸಾರಸ್ವತ ಬ್ರಾಹ್ಮಣರ (ಜಿಎಸ್‌ಬಿ) ಕುಳಾವಿ ಕುಲದವರ ಪರಿಶ್ರಮದಿಂದ ಮೇಲೆ ಬಂದ ಈ ದೇಗುಲದ ಮಹಿಮೆ ಗೌಡ ಸಾರಸ್ವತ ಬ್ರಾಹ್ಮಣರ ಮೂಲ ಮತ್ತು ವಲಸೆಯ ಇತಿಹಾಸದೊಂದಿಗೆ ಬೆಸೆದಿದೆ. ಉತ್ತರ ಭಾರತದ ಸರಸ್ವತಿ ನದಿ ತೀರದಲ್ಲಿ ನೆಲೆಸಿದ್ದ ಗೌಡ ಸಾರಸ್ವತರು ನದಿ ಬತ್ತಿ ಹೋದಾಗ ಉತ್ತರದ ಕಾಶ್ಮೀರ, ಪೂರ್ವದ ಬಂಗಾಳ, ಪಶ್ಚಿಮದ ಗೋವಾ, ಗುಜರಾತ್ ಮತ್ತು ಶ್ರಾವಸ್ಥಿಪುರಗಳಿಗೆ ವಲಸೆ ಹೋದರು.

16 ನೇ ಶತಮಾನದ ಆರಂಭದಲ್ಲಿ ಪೋರ್ಚುಗೀಸರು ಗೋವಾ ಪ್ರದೇಶವನ್ನು ವಶಪಡಿಸಿಕೊಂಡ ನಂತರ ಜನರನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಿಸತೊಡಗಿದರು.

ಆಗ ಸ್ವಧರ್ಮ ಸಂರಕ್ಷಣೆಗಾಗಿ ಗೌಡ ಸಾರಸ್ವತರು ತಮ್ಮ ಆಸ್ತಿ ಹಾಗೂ ದೇವರನ್ನು 7 ನೌಕೆಗಳಲ್ಲಿ ತುಂಬಿಸಿಕೊಂಡು ಅರಬ್ಬಿ ಸಮುದ್ರದ ದಕ್ಷಿಣ ಕರಾವಳಿಯಲ್ಲಿ ಚಲಿಸಿ ಅಂಕೋಲಾ, ಭಟ್ಳಳ, ಬಸ್ರೂರು, ಮಂಗಳೂರು, ಕೊಚ್ಚಿನ್, ತಿರುವನಂತಪುರ ಮತ್ತು ಕುಂಭಾಪುರದಲ್ಲಿ (ಈಗಿನ ಕುಮಟಾ) ನೆಲೆನಿಂತರು. ಹೀಗೆ ಅವರೊಂದಿಗೆ ಬಂದ ದೇವತೆಯೇ ಕಾಮಾಕ್ಷಿ.

ಪ್ರತಿ ತಿಂಗಳು ಅಮಾವಾಸ್ಯೆಯ ನಂತರ ಬರುವ ಮೊದಲ ಭಾನುವಾರ ಇಲ್ಲಿ ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಬೇತಾಳ ದೇವರು ದರ್ಶನ ಪಾತ್ರಿ ಮೈಮೇಲೆ ಬಂದು ಭಕ್ತರ ಸಮಸ್ಯೆಗಳಿಗೆ ಪರಿಹಾರ ಹೇಳುವ ಕಾರಣಿಕ ನಡೆಯುತ್ತದೆ. ಇದಕ್ಕಾಗಿ ಬೆಳಗಿನ ಜಾವವೇ ಸ್ನಾನಾದಿಗಳನ್ನು ಮುಗಿಸಿ ನೂರಾರು ಭಕ್ತರು ಸರತಿಯ ಸಾಲಿನಲ್ಲಿ ಜಮಾಯಿಸುತ್ತಾರೆ.

ಮಾರ್ಗಶಿರ ಶುದ್ಧ ಪಂಚಮಿಯಂದು ಬೇತಾಳ ದೇವರ ಸನ್ನಿಧಿಯಲ್ಲಿ ಕೆಂಡದಾರ್ಚನೆ (ಉರಿಯುವ ಕೆಂಡದ ಮೇಲೆ ಬರಿಗಾಲಲ್ಲಿ ನಡೆಯುವುದು) ಮೈ ನವಿರೇಳಿಸುತ್ತದೆ. ಮಾಹಿತಿಗೆ: 08386 222155.

ಸೇವಾ ವಿವರ  (ರೂ)
ಸಹಸ್ರನಾಮ   4.50
ದೇವಿಸೂಕ್ತ  3
ರುದ್ರಾಭಿಷೇಕ  3.50
ಪಂಚಾಮೃತ ಅಭಿಷೇಕ   5.50
ಅಪೂಪ (ಪಾಯಸ) ನೈವೇದ್ಯ   31

ಸೇವಾ ವಿವರ (ರೂ)
ಕಿಚಡಿ (ಹೆಸರು ಕಾಳಿನ ಮಿಶ್ರಣ)   32
ತೈಲಾಭಿಷೇಕ  9
ಸಪ್ತಶತೀ ಪಾರಾಯಣ  18
ಬಾಳೆ ಗೊನೆ ನೈವೇದ್ಯ  2.50
ಸರ್ವ ಸೇವೆ  80

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT