ADVERTISEMENT

ಚಂದ್ಗುಳಿ ಘಂಟೆ ಗಣಪ

​ಪ್ರಜಾವಾಣಿ ವಾರ್ತೆ
Published 2 ಜುಲೈ 2012, 19:30 IST
Last Updated 2 ಜುಲೈ 2012, 19:30 IST

ಜಲಪಾತಗಳ ಊರು ಉತ್ತರ ಕನ್ನಡ ದೇವಾಲಯಗಳಿಗೂ ಪ್ರಸಿದ್ಧವೇ. ಯಲ್ಲಾಪುರ ತಾಲ್ಲೂಕಿನ ಚಿರಪರಿಚಿತ ಮಾಗೋಡು ಜಲಪಾತಕ್ಕೆ ಸಾಗುವ ಮಾರ್ಗದಲ್ಲಿ ಚಂದ್ಗುಳಿ ಎಂಬ ಊರಿನ ಹಸಿರು ವನಸಿರಿಯ ಪ್ರಶಾಂತ ವಾತಾವರಣದಲ್ಲಿ ಕಾಣಸಿಗುವ ದೇವಸ್ಥಾನವೊಂದು ತನ್ನ ವಿಶೇಷತೆಗಳ ಮೂಲಕ ಗಮನ ಸೆಳೆಯುತ್ತಿದೆ.
 
ಈ ದೇವಸ್ಥಾನ ಪ್ರವೇಶ ಮಾಡುವುದಕ್ಕೂ ಮುನ್ನ ನೀವು ಎಲ್ಲಿಯೂ ಕಾಣದಷ್ಟು ಘಂಟೆಗಳ ಸರಮಾಲೆ ಕಾಣಬಹುದು.  ಇದೇ ಚಂದ್ಗುಳಿ ಸಿದ್ಧಿ ವಿನಾಯಕ ಅಥವಾ ಘಂಟೆ ಗಣಪತಿ ದೇವಸ್ಥಾನ.

ಭಕ್ತರು ತಮ್ಮ ಇಷ್ಟಾರ್ಥಗಳ ಸಿದ್ಧಿಗಾಗಿ ಘಂಟೆಯ ಹರಕೆ ಹೊತ್ತು ಅದನ್ನು ತಂದು ಈ ದೇವಸ್ಥಾನಕ್ಕೆ ಅರ್ಪಿಸುತ್ತಾರೆ. ಹೀಗಾಗಿ ಇಲ್ಲಿ ಹತ್ತಾರು ಸಾವಿರ ದೊಡ್ಡ ಹಾಗೂ ಸಣ್ಣ ಘಂಟೆಗಳ ಸಂಗ್ರಹವಿದೆ. ದೇವಸ್ಥಾನದ ಒಳಾವರಣ ಹಾಗೂ ಹೊರಾವರಣ ಹೀಗೆ ಕಣ್ಣು ಹಾಯಿಸಿದಲ್ಲೆಲ್ಲ ಅವನ್ನೆಲ್ಲ ಪೋಣಿಸಿದ್ದು, ಎಲ್ಲೆಲ್ಲೂ ಘಂಟೆಗಳದ್ದೇ ನಿನಾದ.

ಈ ದೇವಸ್ಥಾನದ ಮುಖ್ಯ ದೇವರು ಬಾಲ ಗಣಪ. ಮೊದಲು ಚಿಕ್ಕ ಗುಡಿಯಲ್ಲಿದ್ದ. ಸೋಂದಾ ಸ್ವರ್ಣವಲ್ಲಿಯ ಆಗಿನ ಯತಿಗಳು 1972ರಲ್ಲಿ ಜೀರ್ಣೋದ್ಧಾರ ಮಾಡಿ ಈಗಿನ ದೇವಸ್ಥಾನದಲ್ಲಿ ಪ್ರತಿಷ್ಠಾಪಿಸಿದರು. ತದ ನಂತರ ಮತ್ತೆ 1995ರಲ್ಲಿ ಈಗಿನ ಯತಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬ್ರಹ್ಮಕಲಶ ನೆರವೇರಿಸಿ ಇನ್ನಷ್ಟು ಕೈಂಕರ್ಯಗಳನ್ನು ಹಮ್ಮಿಕೊಂಡರು.

ಹೊಸದಾಗಿ ನಿರ್ಮಾಣಗೊಂಡ ಪುಟ್ಟ ದೇವಸ್ಥಾನ ಕೂಡ ಮತ್ತಷ್ಟು ಸುಣ್ಣಬಣ್ಣದಿಂದ ಕಂಗೊಳಿಸುವಂತಾಯಿತು. ಭಕ್ತರು ಗಣಪನಿಗೆ ಬೆಳ್ಳಿಯ ಕವಚವನ್ನು ಅರ್ಪಿಸಿದರು. ಇದನ್ನು ಪೂಜಾ ಸಮಯದಲ್ಲಿ ಅಲಂಕರಿಸಲಾಗುತ್ತದೆ.

ಸಂಕಷ್ಟಿ ದಿನ ಭಕ್ತರ ಪ್ರವಾಹ
ವಿಶೇಷವಾಗಿ ಸಂಕಷ್ಟಿ (ಸಂಕಷ್ಟಹರ ಚತುರ್ಥಿ) ದಿನ ಭಕ್ತರ ಸಂಖ್ಯೆ ಅಪಾರ. ಗಣಹವನ ಕೂಡ ಹೆಚ್ಚು. ಇನ್ನುಳಿದಂತೆ ಹರಕೆ ಹೊತ್ತು ದೂರದ ಊರುಗಳಿಂದ ನೂರಾರು ಭಕ್ತರು ಬರುತ್ತಾರೆ.

ಪೂಜಾ ಕೈಂಕರ್ಯ ಪೂರೈಸಿ ಸಮಯವಿದ್ದರೆ ಇಲ್ಲಿಂದ ಕೇವಲ ಮೂರು ಕಿಮೀ ದೂರದ ಮಾಗೋಡು ಜಲಪಾತ ವೀಕ್ಷಣೆಗೆ ತೆರಳುತ್ತಾರೆ. ಅಲ್ಲದೇ ಮಾರ್ಗ ಮಧ್ಯೆ ಸಿಗುವ, ಜೇನುಕಲ್ಲು ಗುಡ್ಡ, ಕವಡಿಕೆರೆ ಹಾಗೂ ಕವಡಿಕೆರೆ ಅಮ್ಮನವರ ದೇವಸ್ಥಾನವನ್ನೂ ವೀಕ್ಷಿಸುತ್ತಾರೆ.

 ಉದ್ಯೋಗ, ಮಕ್ಕಳ ವಿದ್ಯಾಭ್ಯಾಸದ ಉನ್ನತಿ, ವಿವಿಧ ಕೆಲಸ ಕಾರ್ಯಗಳ ಪ್ರಗತಿಗಾಗಿ, ಆರೋಗ್ಯ, ಬಾಲಗ್ರಹ ಪೀಡೆ ನಿವಾರಣೆ, ತೊದಲು ಮಾತು ನಿವಾರಣೆ, ವಿವಾಹ, ಸಂತಾನ... ಹೀಗೆ ಜನರು ವಿವಿಧ ಅಪೇಕ್ಷೆಗಳಿಗಾಗಿ  `ಘಂಟೆ~ ಅರ್ಪಣೆಯ ಹರಕೆ ಹೊತ್ತುಕೊಳ್ಳುತ್ತಾರೆ. ಶೀಘ್ರ ಪರಿಣಾಮಕ್ಕಾಗಿ ಇಲ್ಲಿಗೆ ಬಂದು ಹರಕೆ ಅರ್ಪಿಸುತ್ತಾರೆ.
 

ಪೂಜೆ
ನಿತ್ಯ ಬೆಳಿಗ್ಗೆ 7ರಿಂದ 8.30ರ ವರೆಗೆ ಪೂಜೆ. ಮಧ್ಯಾಹ್ನ 12ರಿಂದ 1.30 ಮಹಾಪೂಜೆ. ಸಾಯಂಕಾಲದ ಮಹಾಪೂಜೆ 7ರಿಂದ 8.30ರವರೆಗೆ. ಇನ್ನುಳಿದಂತೆ ಗಣಹವನ, ಸತ್ಯಗಣಪತಿ ಪೂಜೆ, ತುಲಾಭಾರ, 1008 ಮೋದಕ ಅರ್ಚನೆ, ಸಹಸ್ರನಾಮ ಪೂಜೆ, ಅಷ್ಟೋತ್ತರ ನಾಮ ಪೂಜೆ, ಪಂಚಾಮೃತ ಪೂಜೆ, ಆಭರಣ ಸಮರ್ಪಣೆ, ದೂರ್ವಾರ್ಚನೆ ಹಾಗೂ ಕುಂಕುಮಾರ್ಚನೆ ಸೇವೆ ಲಭ್ಯ. ಭಕ್ತರು ರೂ. 501 ಸಲ್ಲಿಸಿ ಶಾಶ್ವತ ನಿತ್ಯ ಪೂಜೆ ಸೇವೆಯನ್ನು ಪಡೆಯಬಹುದು.

ಮಾರ್ಗ
 ಮಾಗೋಡು ಮಾರ್ಗದಲ್ಲಿ ಯಲ್ಲಾಪುರದಿಂದ ಸುಮಾರು 15 ಕಿಮೀ ದೂರ. ಮಾಗೋಡು ಜಲಪಾತಕ್ಕಿಂತ ಮೂರು ಕಿಮೀ ಮೊದಲು ಎಡಬದಿಯಲ್ಲಿ ಅರ್ಧ ಕಿ.ಮೀ ಸಾಗಬೇಕು. ಬಸ್ ಅಥವಾ ಆಟೋ ಮೂಲಕವೂ ಹೋಗಬಹುದು. ಸ್ವಂತ ವಾಹನವಿದ್ದವರು ಪ್ರಕೃತಿಯ ರಮಣೀಯತೆ ಸವಿಯುತ್ತ ಈ ಮಾರ್ಗದಲ್ಲಿ ಸಾಗಬಹುದು. ದೇವಸ್ಥಾನದಲ್ಲಿ ಪೂಜೆಗಳ ಕುರಿತ ಮಾಹಿತಿಗೆ 08419- 238395 /238380 ಸಂಪರ್ಕಿಸಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT