ತುಮಕೂರು ಸಮೀಪದ ಬಸದಿ ಬೆಟ್ಟದಲ್ಲಿ ನೆಲ ಆರ್ಕಿಡ್‌ಗಳಿವೆ ಎಂಬುದನ್ನು ಕೇಳಿದ್ದೆ. ಅವುಗಳ ಹುಡುಕಾಟಕ್ಕಾಗಿ ಒಂದು ದಿನ ಬೆಳ್ಳಂಬೆಳಿಗ್ಗೆ ಬೆಟ್ಟದ ಬುಡದಲ್ಲಿ ಬಂದು ನಿಂತಾಗ ಉಪಗ್ರಹದಿಂದ ತೆಗೆದ ಭೂಗ್ರಹದ ಚಿತ್ರದಂತೆ ಕಾಣುವ ಬೆಟ್ಟದ ಒಂದು ಕಡೆ ಹಸಿರು ಹೊದಿಕೆ, ಇನ್ನೊಂದೆಡೆ ಬೆತ್ತಲೆ ಬಂಡೆಯ ಮೇಲೆ ಜುಳು ಜುಳು ಹರಿದು ಬರುವ ನೀರಿನ ರೇಖೆಗಳು. ಈ ಕರಿ ಬೆಟ್ಟದಲ್ಲಿ ಯಾವ ಸಸ್ಯ ತಾನೆ ಬೇರೂರಿ ಬೆಳೆಯಲು ಸಾಧ್ಯವೆಂಬ ಅನುಮಾನದಿಂದಲೇ ಬೆಟ್ಟವೇರಿದೆ. ಮೇಲ್ಭಾಗದಲ್ಲಿ ಸುಮಾರು 4ರಿಂದ 5ಎಕರೆ ವಿಸ್ತೀರ್ಣದ ವಿಶಾಲ ಪ್ರದೇಶದಲ್ಲಿ ಕಲ್ಲಿನ ಬಂಡೆಗಳು, ಪೊದೆಗಳು, ಹೂ ತೆನೆದು ನಿಂತ ಹುಲ್ಲು. ಈ ವಿಶಾಲ ಜಾಗದಲ್ಲಿ ಕೇವಲ 7 ರಿಂದ 8 ಸೆಂ.ಮೀ ಎತ್ತರ ಬೆಳೆಯುವ ಆರ್ಕಿಡ್ ಸಸ್ಯಗಳೆಲ್ಲಿರಬಹುದೆಂದು ಆಶ್ಚರ್ಯದಿಂದ ಹುಡುಕಾಟ ಪ್ರಾರಂಭ ಮಾಡಿದೆ.
ಮಾನವ ದೇಹವನ್ನು ಸ್ಕ್ಯಾನ್ ಮಾಡಿದ ರೀತಿಯಲ್ಲಿ, ದೂರಸಂವೇದಿ ಉಪಗ್ರಹದಿಂದ ಭೂಸಂಪನ್ಮೂಲ ಅನ್ವೇಷಣೆ ಮಾಡುವ ರೂಪದಲ್ಲಿ ಐದು ಎಕರೆ ವಿಸ್ತೀರ್ಣದ ಮೂಲೆಮೂಲೆ ಜಾಗದ ಮೇಲಿನ ಹುಲ್ಲನ್ನು ಹುಡುಕುತ್ತಾ ಬಂದೆ. ಅಕ್ಟೋಬರ್ ತಿಂಗಳ ಮಾಗಿ ಬಿಸಿಲು ಮುಖಕ್ಕೆ ರಾಚುತ್ತಿತ್ತು. ಬೆಳಿಗ್ಗೆ ಏಳು ಗಂಟೆಯಿಂದ 10.30 ರವರೆಗೆ ಓಡಾಡಿದರೂ ಆರ್ಕಿಡ್ ಗಿಡ ಸಿಗುವ ಭರವಸೆ ಕಡಿಮೆಯಾಯಿತು. ನಿರಾಸೆಯಿಂದ ಹುಲ್ಲಿನ ಮೇಲೆ ನಡೆದಾಡಿಕೊಂಡು ಭಾರದ ಮನಸ್ಸಿನಿಂದ ಹಿಂದಿರುಗುವಾಗ ಗಾಢವಾದ ಹಳದಿ ಬಣ್ಣದ ಗೆಜ್ಜೆಯಾಕಾರದ ಹೂಗೊಂಚಲು ಹುಲ್ಲಿನ ಮಧ್ಯೆ ಕಾಣಿಸಿದಾಗ ಕುಣಿದಾಡಿದೆ.
ಹ್ಯಾಬಿನೇರಿಯ ಜಾತಿಯ ಹ್ಯಾಬಿನೇರಿಯಾ ಮಾರ್ಜಿನೇಟ, ಹ್ಯಾಬಿನೇರಿಯ ರೇರಿಫ್‌ಲೋರ, ಹ್ಯಾಬಿನೇರಿಯಾ ಲೊಂಗಿಕೋರ್ನು, ಹ್ಯಾಬಿನೇರಿಯಾ ರಾಕ್ಸ್‌ಬರ್ಗಿ ಎಂಬ ನಾಲ್ಕು ಪ್ರಭೇದದ ಆರ್ಕಿಡ್‌ಗಳು ಹಾಗೂ ಜಿಯೋಡರಮ್ ಡೆನ್ಸಿಫಲೋರಮ್ ಎಂಬ ಒಂದು ಪ್ರಭೇದದ ನೆಲ ಆರ್ಕಿಡ್‌ಗಳು ದೇವರಾಯನದುರ್ಗದ ಒಣ ಎಲೆ ಉದುರುವ ಕಾಡಿನಲ್ಲಿ ಕಾಣಸಿಗುತ್ತವೆ. ನೆಲದಲ್ಲಿ ಬೆಳೆಯುವ ಪುಟ್ಟ ಮೂಲಿಕೆ ರೂಪದ ಅಲ್ಪಾಯುಷಿಗಳಾದ ಈ ಆರ್ಕಿಡ್‌ಗಳು ಮಳೆಗಾಲದಲ್ಲಿ ಮಾತ್ರ ಕಂಡು ಬರುತ್ತವೆ.
ಆರ್ಕಿಡ್ ಸಸ್ಯಗಳೆಂದರೆ ಪಶ್ಚಿಮಘಟ್ಟದ ಮಳೆ ಕಾಡುಗಳಲ್ಲಿ ಮಾತ್ರ ಕಾಣಸಿಗುತ್ತವೆ ಎಂಬ ಭ್ರಮೆ ನಮ್ಮಲ್ಲಿದೆ. ಆದರೆ ಬಯಲು ನಾಡಿನ ದೇವರಾಯನದುರ್ಗ, ಸಿದ್ಧರಬೆಟ್ಟ, ರಾಮದೇವರಬೆಟ್ಟಗಳ ಇಳಿಜಾರಿನಲ್ಲಿ ಶಿಲೆಗಳ ಛಿದ್ರೀಕರಣದಿಂದ ಸಂಗ್ರಹವಾದ ಮೃದು ಮಣ್ಣಿನಲ್ಲಿ ಬೆಳೆಯುವ ಹುಲ್ಲು, ಇನ್ನಿತರ ಗಿಡಮೂಲಿಕೆಗಳ ಮಧ್ಯೆ ಈ ಪುಟ್ಟ ಸಸ್ಯಗಳು ಬೆಳೆಯುತ್ತವೆ. ಈ ಆರ್ಕಿಡ್‌ಗಳು ಕೊಳೆತಿನಿಗಳಾಗಿದ್ದು, ಸತ್ತ ಸಾವಯವ ವಸ್ತುಗಳಲ್ಲಿನ ಪೋಷಕಾಂಶಗಳನ್ನು ಹೀರುತ್ತವೆ. ಮಳೆಗಾಲದಲ್ಲಿ ಭೂಮಿಯೊಳಗಿನ ಗೆಡ್ಡೆಗಳು ಚಿಗುರೊಡೆದು ಮೂರ್ನಾಲ್ಕು ಹಸಿರು ಎಲೆ, ದುರ್ಬಲ ಕಾಂಡ ಹಾಗೂ ಬಿಳಿ, ಹಳದಿ ಅಥವಾ ಹಸಿರು ಹೂ ಬಿಟ್ಟಾಗ ಮಾತ್ರ ಗೋಚರವಾಗುತ್ತವೆ. ಬೇಸಿಗೆಯಲ್ಲಿ ಭೂಮಿಯೊಳಗಿನ ಗೆಡ್ಡೆಯನ್ನು ಬಿಟ್ಟು ಮೇಲ್ಭಾಗದ ಎಲೆ, ಕಾಂಡ ಹೂಗಳು ಸಂಪೂರ್ಣ ಒಣಗಿಹೋಗುತ್ತವೆ.
ವ್ಯಾಂಡಾ ಟೆಸ್ಸೆಲ್ಲೇಟಾ, ವ್ಯಾಂಡ ಟೆಸ್ಟೇಸಿಯಾ ಎಂಬ ಎರಡು ಪ್ರಭೇದದ ಮರವಾಸಿ ಆರ್ಕಿಡ್‌ಗಳು ದೇವರಾಯನ ದುರ್ಗದಲ್ಲಿ ಕಂಡುಬರುತ್ತವೆ. ಇವು ಮರಗಳ ಮೇಲೆ ಬೆಳೆದರೂ ಪರೋಪ ಜೀವಿಗಳಲ್ಲ. ಇವುಗಳನ್ನು ಅಪ್ಪು ಸಸ್ಯಗಳೆಂದೂ ಕರೆಯುತ್ತಾರೆ. ಬೇರುಗಳು ಗಾಳಿಯಲ್ಲಿ ತೇಲಾಡುವುದರಿಂದ ಏರಿಯಲ್ ರೂಟ್ಸ್ ಎಂದು ಕರೆಯುತ್ತಾರೆ. ಇವುಗಳ ಬೇರುಗಳು ಗಾಳಿಗೆ ತೆರೆದುಕೊಂಡಿದ್ದು, ಗಾಳಿಯಲ್ಲಿನ ತೇವಾಂಶ ಹಾಗೂ ಪೋಷಕಾಂಶಗಳನ್ನು ಹೀರಲು ಮಾರ್ಪಾಡಾಗಿವೆ.
ಇವುಗಳಲ್ಲಿ ಉತ್ಪತ್ತಿಯಾಗುವ ಹೂಗಳು ಆಕರ್ಷಣೀಯವಾಗಿದ್ದು, ಪರಾಗ ಸ್ಪರ್ಶಕರಾದ ಕೀಟಗಳನ್ನು ಆಕರ್ಷಿಸುತ್ತವೆ. ಇವುಗಳಲ್ಲಿ ಉತ್ಪತ್ತಿಯಾಗುವ ಬೀಜಗಳು ತುಂಬಾ ಚಿಕ್ಕದಾಗಿದ್ದು, ದೂಳಿನ ಕಣಗಳಂತೆ ಗಾಳಿಯಲ್ಲಿ ತೇಲುತ್ತಾ ಕಾಡಿನ ಬಂಡೆಗಳ ಮೇಲೆ, ಹುಲ್ಲಿನ ಮೇಲೆ, ಗಿಡ ಮರಗಳ ಮೇಲೆ ಬೀಳುತ್ತವೆ. ಇಂತಹ ಬೀಜಗಳು ಮೊಳಕೆಯೊಡೆಯಲು ಹೆಚ್ಚು ತೇವಾಂಶ ಹಾಗೂ ಸಹಜೀವನ ನಡೆಸುವ ಶಿಲೀಂಧ್ರಗಳ ಅವಶ್ಯಕತೆ ಇರುತ್ತದೆ.
ಪ್ರಪಂಚದಲ್ಲಿ 18 ಸಾವಿರ ಪ್ರಭೇದದ ಆರ್ಕಿಡ್‌ಗಳಿದ್ದು, ನಮ್ಮ ದೇಶವೊಂದರಲ್ಲಿ 1300 ಪ್ರಭೇದಗಳಿವೆ. ದೇವರಾಯನದುರ್ಗ ಕಾಡಿನಲ್ಲಿ ಹ್ಯಾಬಿನೇರಿಯ ಜಾತಿಯ ನೆಲ ಆರ್ಕಿಡ್‌ಗಳು ಒಟ್ಲು ರೂಪದಲ್ಲಿ ಯಥೇಚ್ಛವಾಗಿ, ದಟ್ಟವಾಗಿ ಬೆಳೆಯುತ್ತಿದ್ದವು. ಇಲಿ, ಮುಂಗುಸಿ, ಕಾಡುಹಂದಿಗಳಿಗೆ ಆರ್ಕಿಡ್ ಗೆಡ್ಡೆ ಮುಖ್ಯ ಆಹಾರ ಕೂಡ. ಕೆಲವು ಆರ್ಕಿಡ್ ಸಸ್ಯಗಳ ಎಲೆ ಹಾಗೂ ಗಡ್ಡೆಗಳನ್ನು ಸ್ಥಳೀಯ ನಾಟಿವೈದ್ಯರು ಹಾವು, ಚೇಳು ಕಡಿತದ ಉರಿಯೂತ ಶಮನಗೊಳಿಸಲು ಔಷಧಿಯಾಗಿ ಬಳಸುವರು. ಬೇಗ ಬಾಡದ ಅವುಗಳ ಹೂಗಳನ್ನು ಆಲಂಕಾರಿಕವಾಗಿ ಉಪಯೋಗಿಸುತ್ತಾರೆ. ಇತ್ತೀಚಿನ ದಶಕದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ನೀರಿನ ಅಭಾವದಿಂದ ಹಾಗೂ ಕಾಡಿನ ಆವಾಸ ನಾಶದಿಂದ ಇವುಗಳ ಸಂತತಿ ಕಡಿಮೆಯಾಗಿ, ಕಣ್ಮರೆಯಾಗುವ ಹಂತ ತಲುಪಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.