ADVERTISEMENT

ಸಸ್ಯಸಿರಿಯಲ್ಲಿ ಸಿರಿಮನೆ ಸೊಬಗು

ಎನ್.ಸ್ವಾತಿ
Published 2 ಅಕ್ಟೋಬರ್ 2017, 19:30 IST
Last Updated 2 ಅಕ್ಟೋಬರ್ 2017, 19:30 IST
ಸಸ್ಯಸಿರಿಯಲ್ಲಿ ಸಿರಿಮನೆ ಸೊಬಗು
ಸಸ್ಯಸಿರಿಯಲ್ಲಿ ಸಿರಿಮನೆ ಸೊಬಗು   

ಮಳೆಗಾಲವೆಂದರೆ, ಮೌನ ತಾಳಿದ್ದ ನದಿಗಳಲ್ಲಿ ಜುಳು ಜುಳು ನಾದ ಹೊಮ್ಮುವ ಸಮಯ. ಇದು ಕರ್ನಾಟಕದ ಪಶ್ಚಿಮ ಘಟ್ಟಗಳ ಸೊಬಗನ್ನು ಇಮ್ಮಡಿಗೊಳಿಸುವ ಕಾಲವೂ ಹೌದು. ಲೆಕ್ಕವಿಲ್ಲದಷ್ಟು ಜಲಪಾತಗಳನ್ನು ತನ್ನೊಡಲಲ್ಲಿ ಪೊರೆಯುವ ಪಶ್ಚಿಮಘಟ್ಟದಲ್ಲಿ, ತನ್ನ ಸೌಂದರ್ಯದಿಂದಲೇ ಸೆಳೆಯುವ ಮತ್ತೂ ಒಂದು ಜಲಪಾತವಿದೆ. ಅದೇ ಸಿರಿಮನೆ.

ಹಸಿರಿನಿಂದ ಕಂಗೊಳಿಸುವ ಚಿಕ್ಕಮಗಳೂರು ಜಿಲ್ಲೆಯ ಒಂದು ಪುಟ್ಟ ಗ್ರಾಮವಾದ ಕಿಗ್ಗದಿಂದ 5 ಕಿ.ಮೀ. ಅಂತರದಲ್ಲಿದೆ ಈ ಜಲಪಾತ. ಕಾಫಿ ತೋಟಗಳು, ಭತ್ತದ ಗದ್ದೆಗಳನ್ನು ದಾಟಿ ಸಾಗಿದರೆ, ಅಲ್ಲೇ ತನ್ನ ‍ಪಾರುಪತ್ಯವನ್ನು ಸಾಬೀತುಗೊಳಿಸುತ್ತದೆ ಸಿರಿಮನೆ.

40 ಅಡಿ ಎತ್ತರದಿಂದ ಧುಮುಕುವ ಈ ಜಲರಾಣಿಯನ್ನು ನೋಡಿದ ನಂತರ ಅದರ ಬುಡಕ್ಕೆ ಹೋಗಲು ಅವಕಾಶವಿದೆ. ಆದರೆ ಮಳೆಗಾಲದಲ್ಲಿ ನೀರಿನ ರಭಸ ಹೆಚ್ಚಾಗಿದ್ದಾಗ ಇಲ್ಲಿಗೆ ಹೋಗದೇ ಇರುವುದು ಒಳಿತು.

ADVERTISEMENT

ಶೃಂಗೇರಿ ಶ್ರೀಶಾರದಾಂಬ ದೇವಸ್ಥಾನಕ್ಕೆ ಪ್ರವಾಸ ಕೈಗೊಳ್ಳುವವರು ಅಲ್ಲಿಂದ 20 ಕಿ.ಮೀ. ದೂರದಲ್ಲಿರುವ ಸಿರಿಮನೆ ಜಲಧಾರೆಯನ್ನು ವೀಕ್ಷಿಸಿ ಬರಬಹುದು. ಜೊತೆಗೆ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನ, ಕಳಸದ ಚಹಾ ತೋಟ ಹಾಗೂ ಕಳಸೇಶ್ವರನ ದೇವಸ್ಥಾನಕ್ಕೆ ಹೋದವರಿಗೂ ಇದು ಸನಿಹವೇ.ಜಲಪಾತಕ್ಕೆ ಭೇಟಿ ನೀಡಲು ಸೆಪ್ಟೆಂಬರ್‌ನಿಂದ ಫೆಬ್ರುವರಿ ತಿಂಗಳವರೆಗೂ ಸೂಕ್ತ. ಬೆಂಗಳೂರಿನಿಂದ 300 ಕಿ.ಮೀ. ದೂರದಲ್ಲಿದೆ.

ಜಲಪಾತದ ಪ್ರವೇಶ ಶುಲ್ಕವಾಗಿ ತೆಗೆದುಕೊಳ್ಳುವ ಐದು ರೂಪಾಯಿಯನ್ನು ಸಂಗ್ರಹಿಸಿ ಸಣ್ಣ ಪ್ರಮಾಣದ ವಿದ್ಯುದುತ್ಪಾದನಾ ಘಟಕದ ನಿರ್ವಹಣೆಗೆ ಬಳಕೆಯಾಗುತ್ತಿದೆ. ಇದರಿಂದ ಕಿಗ್ಗದ ಅನೇಕ ಮನೆಗಳು ಬೆಳಕು ಕಾಣುತ್ತಿರುವುದು ಮತ್ತೂ ಒಂದು ವಿಶೇಷ. ಚಿಕ್ಕಮಗಳೂರಿಗೆ ಹೋಗುವವರು ಸಿರಿಮನೆಗೂ ಹೋಗಿಬರಲು ಯೋಜಿಸಿದರೆ ಪ್ರವಾಸಕ್ಕೆ ಮತ್ತಷ್ಟು ಹುರುಪು ಬಂದಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.