ADVERTISEMENT

Deepavali: ಕನ್ನಡ ಕಾವ್ಯ, ಗೀತೆಗಳಲ್ಲೂ ಮೊಳಗಿದ ದೀಪಾವಳಿ ಕಂಪು

ಪ್ರಜಾವಾಣಿ ವಿಶೇಷ
Published 20 ಅಕ್ಟೋಬರ್ 2025, 8:47 IST
Last Updated 20 ಅಕ್ಟೋಬರ್ 2025, 8:47 IST
SATISH BADIGER
   SATISH BADIGER

ಕವಿಯ ಹಣತೆಯಲಿ ಬಾಳ ಬೆಳಕು

ದೀಪಾವಳಿಗೂ ಬೆಳಕಿಗೂ ಬೆಸೆದ ಬಂಧದಲ್ಲಿ.. ಹಣತೆಗಳ ಸಾಲಿನಲ್ಲಿ.. ತಳಿರು, ತೋರಣಗಳ ವೈಯಾರದಲ್ಲಿ.. ದೀಪ ಬೆಳಗುವ ಅವಳ ಸೊಬಗಿನಲ್ಲಿ.. ಬದುಕ ಭರವಸೆಯಲ್ಲಿ.. ಕವಿಯ ಕಾವ್ಯಗಳೂ ಬೆಸೆದಿವೆ.
ದೀಪಾವಳಿಯ ಬೆಳಕು ಅಕ್ಷರಗಳು ಮೂಡುವಲ್ಲಿ ಹಿಂದೆ ಉಳಿದಿಲ್ಲ. ಸಾಹಿತ್ಯದ ಹಣತೆಯಲ್ಲಿ ದೀಪ ಬದುಕಾಗಿ, ಬೆಳಕಾಗಿ, ಪ್ರೀತಿಯಾಗಿ ಎಲ್ಲೆಡೆ ಹಬ್ಬಿದೆ.
ದೀಪಾವಳಿ ಎಂದಾಕ್ಷಣ ನಮ್ಮ ರಾಷ್ಟಕವಿ ಜಿ.ಎಸ್.ಶಿವರುದ್ರಪ್ಪ ಅವರ ‘ಹಣತೆ’ ಕವಿತೆ ನೆನಪಾಗುತ್ತದೆ.

ಹಣತೆ ಹಚ್ಚುತ್ತೇನೆ ನಾನು
ಈ ಕತ್ತಲನ್ನೂ ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ
ಲೆಕ್ಕವೇ ಇರದ ದೀಪಾವಳಿಯ ಹಡುಗುಗಳೇ
ಇದರಲ್ಲಿ ಮುಳುಗಿ ಕರಗಿರುವಾಗ
ನಾನು ಹಚ್ಚುವ ಹಣತೆ ಶಾಶ್ವತ ಎಂಬ ಭ್ರಾಂತಿ ನನಗಿಲ್ಲ.

ADVERTISEMENT

ಎನ್ನುವ ಕವಿ ಕೊನೆಗೆ..
 

ನನ್ನ ಮುಖ ನೀನು
ನಿನ್ನ ಮುಖ ನಾನು
ನೋಡಬಹುದೆಂಬ ಆಸೆಯಿಂದ
ಹಣತೆ ಆರಿದ ಮೇಲೆ,
ನೀನು ಯಾರೋ ಮತ್ತೆ
ನಾನು ಯಾರೋ
ಎನ್ನುತ್ತಾ ಇಲ್ಲಿ ಯಾವುದೂ ಶಾಶ್ವತವಲ್ಲ ಎಂಬ ಸಂದೇಶ ನೀಡುತ್ತಾರೆ.

ಬಡವನ ದೀಪಾವಳಿ ಕುರಿತು ಬರೆಯುವ ಕವಿ ಜಿಎಸ್‌ಎಸ್‌

ಈ ಮುರುಕು ಗುಡಿಸಲಲಿ
ಕಿರಿಹಣತೆ ಬೆಳಗುತಿದೆ
ಧ್ಯಾನಸ್ಥಯೋಗಿಯೊಲು ಸ್ತಿಮಿತವಾಗಿ
ಬಡವರಾತ್ಮದ ಹಣತೆ
ಇಂತೆ ಬೆಳಗುವುದಲ್ತೆ
ಅಜ್ಞಾತವಾಸದಲಿ ದೀನವಾಗಿ
ಬಡವರ ಮನೆಯಲಿ ಬೆಳಗುವ ದೀಪಗಳು ಯಾವುದಕ್ಕೂ ಕಡಿಮೆಯಿಲ್ಲ ಎನ್ನುವ ಅವರು ಅದನ್ನು ಅಧ್ಯಾತ್ಮದೊಡನೆ ಬೆಸೆಯುತ್ತಾರೆ.

ಪ್ರೇಮ ಕವಿ ಕೆ.ಎಸ್.ನರಸಿಂಹಸ್ವಾಮಿ ದೀಪಾವಳಿಯನ್ನು ತನ್ನವಳಿಗಾಗಿ ಮುಡಿಪಿಡುತ್ತಾರೆ.
ನಕ್ಕಂತೆ ಇರುವ ಸಿರಿಮೊಗವೆ
ತಕ್ಕಂತೆ ಇರುವ ಕಣ್‌ಬೆಳಕೆ
ನಿಂತಂತೆ ಕಾಣುವ ನಿರಾತಂಕ ದೀಪವೇ
ಅಂತರಂಗದ ಜೀವನದಿಯೇ... ಎನ್ನುವ ಕವಿ
ಹಣತೆಯನು ಹಚ್ಚಿಬಿಡು
ಬಾಗಿಲಲಿ ಇಟ್ಟು ಬಿಡು
ನಿನ್ನಿಂದ ದೀಪಾವಳಿ
ಬರುವ ಸಡಗರದಲ್ಲೆ ಮುತ್ತೊಂದು ಕೊಟ್ಟು ಬಿಡು
ಕೊಡನೆಂದು ನಗುತ ಹೇಳಿ
ಎನ್ನುತ್ತಲೇ ಓದುಗರ ಮೊಗದಲ್ಲೂ ಬೆಳಕಿನಂತ ನಗೆ ತರಿಸುತ್ತಾರೆ. ತುಸು ನಾಚಿಕೆಯನ್ನೂ..

ಕವಿ ಡಿ.ಎಸ್.ಕರ್ಕಿ ‘ಹಚ್ಚೆವು ಕನ್ನಡ ದೀಪ’ ಎನ್ನುತ್ತಾ ಕನ್ನಡದ ಕಂಪು ಸೂಸಿದ್ದಾರೆ. ಎಂ.ಆರ್.ಕಮಲ ಅವರ ‘ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ. ಮನಕೆ ಮಬ್ಬು ಕವಿಯದಂತೆ ಇನ್ನೂ ಕಾದಿದೆ’ ಎನ್ನುವ ಸಾಲುಗಳು ಸಿ.ಅಶ್ವಥ್‌ರ ಸಂಗೀತದಲ್ಲಿ, ಎಂ.ಡಿ.ಪಲ್ಲವಿಯವರ ಕಂಠದಿಂದ ಕರ್ಣಗಳು ಇಂಪುಗೊಳ್ಳುತ್ತವೆ.

ಇತ್ತೀಚಿನ ಕವಿ, ಕವಿಯತ್ರಿಯರ ಕಾವ್ಯದಲ್ಲೂ ದೀಪಾವಳಿಯ ನಂಟಿದೆ. ಕವಿಯತ್ರಿ ಡಾ. ಪ್ರೀತಿ ಕೆ.ಎನ್, ಹೆಣ್ಣಿನ ದೃಷ್ಟಿಯಲ್ಲಿ ಕಂಡ ‘ಅವಳ ದೀಪಾವಳಿ’ ಕವಿತೆ ಸ್ರ್ತೀ ಸಂವೇದನೆಯನ್ನೊಳಗೊಂಡಿದೆ.

ಅವಳು ಹಚ್ಚಿದ ಹಣತೆಯೂ
ಹೇಳುತ್ತಿದೆ ಒಂದೊಂದು ಕತೆಯ
ಕೇಳಲು ಕಿವಿಯಿದ್ದರಷ್ಟೇ ಸಾಲದು
ಬೇಕಿದೆ ಆರ್ದ್ರ ಮನಸೂ..!
ಅವನೊಡನೆ ಕೂಡಿ ಕಳೆದ
ಆ ಮೊದಲ ದೀಪಾವಳಿ
ಕಣ್ಣಲ್ಲಿ ಕೋಲ್ಮಿಂಚು

ಚಲನಚಿತ್ರಗಳಲ್ಲೂ ದೀಪಾವಳಿಗೆ ಸಂಬಂಧಪಟ್ಟ ಹಾಡುಗಳು ಜನಪ್ರಿಯತೆ ಪಡೆದಿವೆ. ಶಿವರಾಜಕುಮಾರ ನಟನೆಯ ‘ನಂಜುಂಡಿ’ ಸಿನಿಮಾದಲ್ಲಿ ಹಂಸಲೇಖರ ಸಾಹಿತ್ಯ ಹಾಗೂ ಸಂಗೀತದಲ್ಲಿ ಮೂಡಿದ ‘ದೀಪದಿಂದ ದೀಪವಾ ಹಚ್ಚಬೇಕು ಮಾನವ ಪ್ರೀತಿಯಿಂದ ಪ್ರೀತಿ ಹಂಚಲೂ’ ಬೆಳಕಿನ ಹಬ್ಬದಲ್ಲಿ ಪ್ರೀತಿಯನ್ನು ವಿಸ್ತರಿಸಿದೆ. ಶಶಿಕುಮಾರ, ಶೃತಿ, ಎಸ್.ಪಿ.ಬಾಲಸುಬ್ರಹ್ಮಣ್ಯ ಅವರ ನಟನೆಯ ಮುದ್ದಿನ ಮಾವ ಸಿನಿಮಾದಲ್ಲಿ ‘ದೀಪಾವಳಿ ದೀಪಾವಳಿ ಗೋವಿಂದ ಲೀಲಾವಳಿ’ ಹಾಡು ವರನಟ ರಾಜಕುಮಾರ್‌ ಅವರ ಕಂಠದಲ್ಲಿ ಮೊಳಗಿದೆ. ಕೆ.ಕಲ್ಯಾಣ ಅವರ ಸಾಹಿತ್ಯದ ‘ಸ್ನೇಹಾ ದೀಪಾವಳಿ ಕಣ್ಣಾ ಬೆಳಕಾಗಲಿ ನನ್ನ ಎದೆಯಾಳದಿಂದ ಈ ಹಾಡು’ ಎನ್ನುವ ಗೀತೆ ಕನ್ನಡಿಗರ ಎದೆಯಾಳದಲ್ಲಿ ನಿತ್ಯ ಹಸಿರು. ‘ದೀಪ ದೀಪಾ ಕಣ್ತುಂಬ ದೀಪಾ ಹೃದಯ ತುಂಬಾ ಉಲ್ಲಾಸ ದೀಪ ಚಿಂತಗೂ ವಿದಾಯ ಇರುಳೆಲ್ಲವೂ ಮಾಯ’ ಎನ್ನುವ ಶ್ರೀ ಸಿನಿಮಾದ ಹಾಡು ಅಷ್ಟೇ ಸ್ವಾರಸ್ಯಕರವಾಗಿದೆ.

ಹೀಗೆ ಕನ್ನಡ ಕಾವ್ಯಗಳಲ್ಲಿ, ಗೀತೆಗಳಲ್ಲಿ ದೀಪಾವಳಿ ಆಶಾಕಿರಣದಂತೆ ಹೊಮ್ಮಿದೆ. ಕತ್ತಲು ಸರಿಸುವ ದೀಪಾವಳಿ ಬದುಕಿನ ತುಂಬಾ ಬೆಳಕ ಹಬ್ಬಲಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.