ADVERTISEMENT

ಘನತ್ಯಾಜ್ಯದ ಉದ್ಯಾನ

ಕೆ.ಚೇತನ್
Published 6 ಏಪ್ರಿಲ್ 2020, 19:45 IST
Last Updated 6 ಏಪ್ರಿಲ್ 2020, 19:45 IST
.
.   
""
""

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ತುಮ್ಮಿನಕಟ್ಟಿ ಗ್ರಾಮದಲ್ಲಿ ಪಾಳುಬಿದ್ದಿದ್ದ ನೈಸರ್ಗಿಕ ನೀರು ಶುದ್ಧೀಕರಣ ಘಟಕದ ಒಂದು ಎಕರೆ ಮೂವತ್ತು ಗುಂಟೆ ಆವರಣದಲ್ಲೀಗ ವಿಶಿಷ್ಟ ಉದ್ಯಾನವೊಂದು ರೂಪುಗೊಂಡಿದೆ.

ಇಲ್ಲಿ ಸಸ್ಯಗಳ ಜತೆಗೆ, ಬಣ್ಣ ಬಣ್ಣದ ಆಕರ್ಷಕ ಕಲಾಕೃತಿಗಳಿವೆ. ಇವೆಲ್ಲವೂ ಗ್ರಾಮದಲ್ಲಿ ಬಳಸಿ ಬಿಸಾಡಿದ ಘನತ್ಯಾಜ್ಯ ವಸ್ತುಗಳಿಂದ ಅರಳಿದಂತಹವು. ಹಾಗಾಗಿ ಇದನ್ನು ವಿಶಿಷ್ಟ ಉದ್ಯಾನ ಎನ್ನಬಹುದು. ದೂರದಿಂದ ನೋಡಿದರೆ ಅವು ತ್ಯಾಜ್ಯದ ಕಲಾಕೃತಿಗಳು ಅಂತ ಎನಿಸುವುದಿಲ್ಲ. ಹತ್ತಿರ ಹೋದಾಗಲೇ ಹಳೆಯ ಟೈರುಗಳಲ್ಲಿ ಗಿಡಗಳು ಬೆಳೆದಿರುವುದು, ಹಳೆ ಬಾಟಲಿಗಳೆಲ್ಲ ಗಿಡಗಳಿಗೆ ಪಾತಿಯಾಗಿರುವುದು, ಶೀಶೆಗಳ ಮುಚ್ಚಳಗಳೆಲ್ಲ ವಿಶಿಷ್ಟ ಆಕಾರ ಪಡೆದುಕೊಂಡಿರುವುದು ಗೊತ್ತಾಗುತ್ತದೆ!

ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಯೋಜನೆಯಡಿ, ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ರೂಪುಗೊಂಡಿರುವ ಈ ಅಪರೂಪದ ಉದ್ಯಾನದಲ್ಲಿ ವಾಕಿಂಗ್‌ ಪಾತ್‌ ರಸ್ತೆಗೂ ಘನತ್ಯಾಜ್ಯವನ್ನೇ ಬಳಸಿದ್ದಾರೆ. ಬಳಸಿ ಬಿಸಾಡಿದ ವಸ್ತುಗಳಲ್ಲಿ ಕೆಲವು ‘ಹಂಸ‘ಗಳ ರೂಪ ಪಡೆದುಕೊಂಡಿವೆ. ಶೀಶೆಗಳನ್ನು ಒಂದರ ಮೇಲೊಂದರಂತೆ ಜೋಡಿಸಿ, ಅಲ್ಲಲ್ಲೇ ವೃತ್ತಗಳಾಗಿವೆ.

ADVERTISEMENT

ಆರು ತಿಂಗಳ ಸತತ ಪ್ರಯತ್ನ..
ಅಂದ ಹಾಗೆ, ಈ ಸೃಜನಾತ್ಮಕ ಉದ್ಯಾನ ನಿರ್ಮಾಣದ ಆಲೋಚನೆ ಏಕಾಏಕಿ ರೂಪಿತಗೊಂಡಿದ್ದಲ್ಲ. ಇದರ ಹಿಂದೆ ಆರೇಳು ತಿಂಗಳ ಪ್ರಯತ್ನವಿದೆ.ಈ ಹಿಂದೆ ಘನತ್ಯಾಜ್ಯ ಸಂಪನ್ಮೂಲ ಘಟಕವನ್ನು ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಲ್ಲಿ ಯಶಸ್ವಿಯಾಗಿದ್ದ ಗ್ರಾಮ ಪಂಚಾಯ್ತಿ ಆಡಳಿತ ಮಂಡಳಿ, ಅಧಿಕಾರಿಗಳು ಮತ್ತು ಸಿಬ್ಬಂದಿ ಪರಿಶ್ರಮವಿದೆ.

ಘನತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಬೇಕು. ಇದಕ್ಕಾಗಿ ಪ್ರತ್ಯೇಕ ಘಟಕ ಆರಂಭಿಸಬೇಕು ಎಂಬ ಉದ್ದೇಶಗಳೊಂದಿಗೆ ‘ಎಸೆಯುವ ಮುನ್ನ ಆಲೋಚಿಸಿ’ ಎಂಬ ಜಾಗೃತಿ ಅಭಿಯಾನವನ್ನು ಗ್ರಾಮ ಪಂಚಾಯ್ತಿ ಆರಂಭಿಸಿತು. ಉತ್ಪತ್ತಿಯಾಗುವ ಕಸದ ಪ್ರಮಾಣವನ್ನು ತಗ್ಗಿಸುವುದು ಹಾಗೂ ಉತ್ಪತ್ತಿಯಾದ ಕಸವನ್ನು ಸಾಧ್ಯವಾದಷ್ಟು ಮರುಬಳಕೆಯಾಗುವಂತೆ ಪರಿವರ್ತಿಸಬೇಕು ಎಂಬುದು ಈ ಅಭಿಯಾನದ ಹಿಂದಿನ ಉದ್ದೇಶ. ಇದಕ್ಕಾಗಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಕೆಲಸವಾಯಿತು.

ಇದರ ಜತೆ ಜತೆಗೆಗ್ರಾಮ ಪಂಚಾಯ್ತಿ ತನ್ನ ಸಿಬ್ಬಂದಿ ಬಳಸಿಕೊಂಡು ಘನತ್ಯಾಜ್ಯ ಸಂಗ್ರಹಿಸುವ ಕೆಲಸವನ್ನೂ ಆರಂಭಿಸಿತು. ಗ್ರಾಮದಲ್ಲಿ ಹರಡಿದ್ದ ಪ್ಲಾಸ್ಟಿಕ್ ಬಾಟಲಿಗಳು, ಪ್ಲಾಸ್ಟಿಕ್ ಡಬ್ಬಗಳು, ಗಾಜಿನ ಬಾಟಲಿಗಳು, ಅನುಪಯುಕ್ತ ಟೈರ್‌ಗಳನ್ನು ಸಂಗ್ರಹಿಸಿದರು. ದಿನ ಕಳೆದಂತೆ ತ್ಯಾಜ್ಯ ಸಂಗ್ರಹ ಪ್ರಮಾಣ ಹೆಚ್ಚಿತು. ಕೊನೆಗೆ ತ್ಯಾಜ್ಯ ವಿಲೇವಾರಿಯೇ ಸವಾಲಾಯಿತು. ಇದಕ್ಕೆ ಪರಿಹಾರ ಹುಡುಕಲು ಹೊರಟಾಗ, ಘನತ್ಯಾಜ್ಯ ಸಂಗ್ರಹಿಸುವುದಕ್ಕಾಗಿಯೇ ಒಂದು ಘಟಕ ತೆರೆಯುವ ಆಲೋಚನೆ ಹೊಳೆಯಿತು.

ತ್ಯಾಜ್ಯ ಸಂಗ್ರಹ ಘಟಕ
ಘನತ್ಯಾಜ್ಯವನ್ನು ಒಂದೆಡೆ ಸಂಗ್ರಹಿಸಿ ಇಡಲು ಊರಿನಲ್ಲಿದ್ದ ಪಾಳುಬಿದ್ದ ಸರ್ಕಾರಿ ಶಾಲಾ ಕಟ್ಟಡ ಗುರುತಿಸಲಾಯಿತು. ಶಿಕ್ಷಣ ಇಲಾಖೆಗೆ ಪತ್ರಬರೆದು, ಕಟ್ಟಡ ಬಳಸಿಕೊಳ್ಳಲು ಅನುಮತಿ ಕೇಳಿದರು ಗ್ರಾ.ಪಂ ಸದಸ್ಯರು. ಸಂಗ್ರಹಿಸಿದ ಘನತ್ಯಾಜ್ಯವನ್ನು ಬಹಳ ಒಪ್ಪವಾಗಿ ಈ ಕಟ್ಟಡದಲ್ಲಿ ಜೋಡಿಸಿದರು. ತುಮ್ಮಿನಕಟ್ಟಿ ಗ್ರಾಮ ಪಂಚಾಯಿತಿಯ ಇಂಥ ಕ್ರಿಯಾಶೀಲ ಚಟುವಟಿಕೆಗಳು ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಗಮನ ಸೆಳೆಯಿತು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ದೇಸಾಯಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಶ್ಯಾಮ್ ಸುಂದರ್ ಕಾಂಬಳೆ ಗ್ರಾಮದ ಘನತ್ಯಾಜ್ಯ ಸಂಪನ್ಮೂಲ ಘಟಕಕ್ಕೆ ಭೇಟಿ ನೀಡಿ, ಗ್ರಾಮ ಪಂಚಾಯ್ತಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಬೆನ್ನುತಟ್ಟಿ ಪ್ರೋತ್ಸಾಹಿಸಿದರು.

ಉದ್ಯಾನ ರೂಪಿಸುವ ಯೋಜನೆ..
ಸಂಗ್ರಹಿಸಿದ ಘನತ್ಯಾಜ್ಯವನ್ನು ಬಳಸಿಕೊಂಡು ಉದ್ಯಾನ ರೂಪಿಸುವ ಯೋಜನೆಯನ್ನು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ(ಪಿಡಿಒ) ಎಂ.ಅಂಬಿಕಾ ಗ್ರಾಮ ಪಂಚಾಯ್ತಿ ಸದಸ್ಯರ ಎದುರು ಇಟ್ಟರು.ಇದಕ್ಕೆ ಆಡಳಿತ ಮಂಡಳಿ ಸದಸ್ಯರು ಸ್ಪಂದಿಸಿದರು. ಜತೆಗೆ ಗ್ರಾಮಸ್ಥರು ನೆರವು ನೀಡಲು ಮುಂದಾದರು.

ಯೋಜನೆಯ ನೀಲನಕ್ಷೆ ಸಿದ್ಧವಾಯಿತು. ಆದರೆ, ಉದ್ಯಾನ ಮಾಡುವುದೆಲ್ಲಿ ಎಂದು ಯೋಚಿಸಿದಾಗ, ಕಣ್ಣಿಗೆ ಬಿದ್ದಿದ್ದೇ, ಪಾಳು ಬಿದ್ದಿರುವ ನೈಸರ್ಗಿಕ ನೀರು ಶುದ್ಧೀಕರಣ ಘಟಕ ಮತ್ತು ಅದರ ಆವರಣ. 1987ರಲ್ಲಿ ಈ ಘಟಕ ನಿರ್ಮಾಣವಾಗಿತ್ತು. ಆದರೆ, ಬಳಕೆಯಾಗದೇ ಪಾಳುಬಿದ್ದಿತ್ತು. ಘಟಕದ ಆವರಣದಲ್ಲಿ ಗಿಡಗಂಟಿಗಳು ಬೆಳೆದಿದ್ದವು. ತಗ್ಗು–ದಿಣ್ಣೆಯಂತಹ ಜಾಗವದು.

ಸಂಬಂಧಪಟ್ಟವರ ಅನುಮತಿ ಪಡೆದು, ಈ ಜಾಗದಲ್ಲಿ‘ಘನತ್ಯಾಜ್ಯ’ಗಳನ್ನು ಬಳಸಿ ಉದ್ಯಾನ ನಿರ್ಮಾಣ ಮಾಡುವ ಕಾರ್ಯ ಆರಂಭವಾಯಿತು. ಮೊದಲು ಗಿಡಗಂಟಿಗಳನ್ನು ತೆಗೆದು, ತಗ್ಗು–ದಿಣ್ಣೆಯನ್ನು ಸಮತಟ್ಟು ಮಾಡಿ, ಪಾಳುಬಿದ್ದಿದ್ದ ನೀರು ಶುದ್ಧೀಕರಿಸುವ ಘಟಕವನ್ನು ಪುನಶ್ಚೇತನಗೊಳಿಸಿ ಜೀವಕಳೆ ನೀಡಲಾಯಿತು. ಇದೇ ಸ್ಥಳದ ಆವರಣದಲ್ಲಿ ಗಾಜಿನ ಶೀಶೆಗಳು ಪ್ಲಾಸ್ಟಿಕ್ ಬಾಟಲ್ಸ್, ಪ್ಲಾಸ್ಟಿಕ್ ಚಮಗಳು, ನೀರಿನ ಶೀಶೆಗಳ ಮುಚ್ಚಳ, ಟೈರ್‌ಗಳನ್ನು ಬಳಸಿಕೊಂಡುಆಕರ್ಷಕ ಕಲಾಕೃತಿಗಳನ್ನು ರಚಿಸಲಾಯಿತು. ಒಂದು ಎಕರೆ ಮೂವತ್ತು ಗುಂಟೆಯಲ್ಲಿಪಾಳು ಬಿದ್ದಿದ್ದ ಜಾಗವೀಗ ಘನತ್ಯಾಜ್ಯಗಳಿಂದ ಸುಂದರ ಉದ್ಯಾನವಾಗಿ ರೂಪುಗೊಂಡಿದೆ. ಉದ್ಯಾನ ನಿರ್ಮಾಣಕ್ಕೆ ತಗುಲಿದ ವೆಚ್ಛವನ್ನುಗ್ರಾಮ ಪಂಚಾಯ್ತಿಯ ಸಂಪನ್ಮೂಲದಿಂದಲೇ ಭರಿಸಲಾಗಿದೆ.

ಎಲ್ಲರ ಪ್ರೋತ್ಸಾಹದಿಂದ ಸಾಕಾರ
‘ಗ್ರಾಮ ಪಂಚಾಯ್ತಿ ಸದಸ್ಯರ ಬೆಂಬಲ, ನಮ್ಮ ಸಿಬ್ಬಂದಿ ಸಹಕಾರ, ಅಧಿಕಾರಿಗಳ ಪ್ರೋತ್ಸಾಹದಿಂದಲೇ ಈ ಪ್ರಯತ್ನ ಯಶಸ್ವಿಯಾಗಿದೆ’ ಎಂಬುದು ಪಿಡಿಒ ಅಂಬಿಕಾ ಅಭಿಪ್ರಾಯ. ಕಸವನ್ನು ಕೇವಲ ಕಸವೆಂದು ತಿಳಿಯದೇ ಅದು ಗೊಬ್ಬರ ನೀಡುವ, ಆದಾಯ ತರಬಲ್ಲ ಸಂಪನ್ಮೂಲ ಎಂದು ಭಾವಿಸಬೇಕು. ಆಗ ಮಾತ್ರ ಇಂಥ ಯೋಜನೆಯ ಆಶಯ ಸಂಪೂರ್ಣ ಈಡೇರುತ್ತದೆ’ ಎನ್ನುತ್ತಾರೆ ಅವರು.

ಇನ್ನಷ್ಟು ಪ್ರಗತಿಯ ಹೆಜ್ಜೆಗಳು
ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಸ್ಯಾನಿಟರಿ ಪ್ಯಾಡ್ ಅನ್ನು ವೈಜ್ಞಾನಿಕವಾಗಿ ವಿಲೇ ಮಾಡಲು ಇನ್ಸಿನರೇಟರ್ ಯಂತ್ರವನ್ನು ಉಚಿತವಾಗಿ ನೀಡಲಾಗಿದೆ. ಇದರ ಬಳಕೆ ಕುರಿತು ಯುವತಿಯರು, ಮಹಿಳೆಯರು, ಆಶಾ-ಅಂಗನವಾಡಿ ಕಾರ್ಯಕರ್ತೆಯರಿಗೆ ಕಾರ್ಯಾಗಾರವನ್ನೂ ಆಯೋಜಿಸಿದೆ.

ಹಸಿ–ಒಣ ಕಸ ಬೇರ್ಪಡಿಸಿ ಸಂಗ್ರಹಿಸಲು ಪಂಚಾಯತ್ ವ್ಯಾಪ್ತಿಯ ಎಲ್ಲಾ ಕುಟುಂಬಗಳಿಗೂ ಎರಡು ಕಸ ಸಂಗ್ರಹ ಡಬ್ಬಗಳನ್ನು ನೀಡಿದೆ. ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಯೋಜನೆಯ ಆಶಯಗಳು ಇಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಆಗುತ್ತಿದೆ.

**

'ಆಡಳಿತ ಮಂಡಳಿಯ ಸಹಭಾಗಿತ್ವ, ಜನರ ಪಾಲ್ಗೊಳ್ಳುವಿಕೆ, ಪಿಡಿಒ ಮತ್ತು ಸಿಬ್ಬಂದಿ ಆಸಕ್ತಿ ಫಲವಾಗಿ ಘನತ್ಯಾಜ್ಯ ವಸ್ತುಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಮಾದರಿ ಉದ್ಯಾನ ರೂಪುಗೊಂಡಿದೆ.
-ರಮೇಶ್ ದೇಸಾಯಿ, ಸಿಇಒ, ಜಿಲ್ಲಾಪಂಚಾಯ್ತಿ, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.