ADVERTISEMENT

ಸೇತುವೆ ಬಂತು; ಶಾಲೆ ಉಳಿಯಿತು

ಕಾಡಶೆಟ್ಟಿಹಳ್ಳಿಯ ಸಮುದಾಯದ ಶ್ರಮದಾನ

ತುರುವೇಕೆರೆ ಪ್ರಸಾದ್
Published 23 ಸೆಪ್ಟೆಂಬರ್ 2019, 19:30 IST
Last Updated 23 ಸೆಪ್ಟೆಂಬರ್ 2019, 19:30 IST
ಸೇತುವೆ 
ಸೇತುವೆ    

ಕಾಡಶೆಟ್ಟಿಹಳ್ಳಿ ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಅಮೃತೂರು ಹೋಬಳಿಯ ಒಂದು ಗ್ರಾಮ. ಎಲ್ಲಾ ಗ್ರಾಮದಲ್ಲಿರುವಂತೆ ಇಲ್ಲಿಯೂ ಒಂದು ಸರ್ಕಾರಿ ಪ್ರಾಥಮಿಕ ಶಾಲೆಯಿದೆ. ಒಂದು ಕಾಲದಲ್ಲಿ 50-60 ಮಕ್ಕಳು ಕಲಿಯುತ್ತಿದ್ದ ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ ಏಕಾಏಕಿ 6 ಕ್ಕೆ ಕುಸಿದು ಶಾಲೆ ಮುಚ್ಚುವ ಸ್ಥಿತಿ ಬಂತು. ಆಗ ಊರಿನ ‘ದೈತ್ಯ ಮಾರಮ್ಮ ಟ್ರಸ್ಟ್’ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿಪಡಿಸುವ ನಿರ್ಧಾರ ಮಾಡಿತು.

ಶಾಲೆ ಅಭಿವೃದ್ಧಿಪಡಿಸುವುದೆಂದರೆ ಕೇವಲ ಕಟ್ಟಡಗಳನ್ನು ಕಟ್ಟುವುದಲ್ಲ. ‘ಸ್ಮಾರ್ಟ್’ ಸ್ಪರ್ಶ ಕೊಡುವುದೂ ಅಲ್ಲ. ಮಕ್ಕಳೇ ಇಲ್ಲದ ಶಾಲೆಗೆ ಏನು ಮಾಡಿದರೇನು? ಯಾವ ಕಟ್ಟಡ ಕಟ್ಟಿದರೇನು? ಏನು ಸೌಲಭ್ಯ ಒದಗಿಸಿಕೊಟ್ಟರೇನು? ಆಗ, ದೈತ್ಯಮಾರಮ್ಮ ವಿಶ್ವಸ್ಥ ಸಮಿತಿಗೆ ಶಾಲೆಯ ಮಕ್ಕಳ ದಾಖಲಾತಿ ಹೆಚ್ಚಿಸುವುದೇ ಒಂದು ದೊಡ್ಡ ಸವಾಲಿನ ಸಂಗತಿ ಆಯಿತು.

‌ಶಾಲೆ ಪೂರಾ ಕಣ್ಮುಚ್ಚುವ ಮುಂಚೆ ಕಾರ್ಯರೂಪಕ್ಕಿಳಿದ ಸಮಿತಿ ಪ್ರೀನರ್ಸರಿ, ನರ್ಸರಿ, ಎಲ್‍ಕೆಜಿ, ಯುಕೆಜಿ ವಿಭಾಗಗಳನ್ನು ತೆರೆಯಿತು. ದೂರದೂರದ ಕಾನ್ವೆಂಟ್ ಪಾಲಾಗುತ್ತಿದ್ದ ಸುತ್ತಲಿನ ಹಳ್ಳಿಗಳ ಮಕ್ಕಳನ್ನು ಈ ಶಾಲೆಗೆ ಸೇರಿಸಲು ಪೋಷಕರ ಮನ ಒಲಿಸಲು ಪ್ರಯತ್ನಿಸಿತು. ದೂರದ ಕಾರಣದಿಂದ ಬೇರೆ ಬೇರೆ ಕಾನ್ವೆಂಟ್‍ಗಳಿಗೆ ಹೋಗುತ್ತಿದ್ದ ಮಕ್ಕಳಿಗೆ ಟ್ರಸ್ಟ್ ಬಸ್ ವ್ಯವಸ್ಥೆ ಮಾಡಿ, ಒಂದಷ್ಟು ಮಕ್ಕಳನ್ನು ವಾಪಸ್ ಕಾಡಶೆಟ್ಟಿಹಳ್ಳಿ ಸರ್ಕಾರಿ ಶಾಲೆಗೆ ಬರುವಂತೆ ಮಾಡಿದರು. ಇದರಿಂದ ಕಣ್ಮುಚ್ಚುತ್ತಿದ್ದ ಕನ್ನಡ ಶಾಲೆಗೆ ಕುಟುಕು ಜೀವ ಬಂದಂತಾಯಿತು.

ADVERTISEMENT

ಅಡ್ಡಿಯಾಗಿದ್ದ ತೊರೆ

ಆದರೂ ಊರಿನ ಪಕ್ಕದಲ್ಲೇ ಅವಳಿ ಗ್ರಾಮದಂತಿದ್ದ ತೊರೆಹಳ್ಳಿ ಮತ್ತು ಸುತ್ತಮುತ್ತಲ ಗ್ರಾಮಗಳ ಮಕ್ಕಳು ಈ ಶಾಲೆಗೆ ಬರಲು ಮಾರ್ಕೊನಳ್ಳಿ ಜಲಾಶಯದ ಕಡೆಯಿಂದ ಹರಿವ ಒಂದು ತೊರೆ ಅಡ್ಡಿಯಾಗಿತ್ತು. ಅದನ್ನು ದಾಟಿ ಬರಲು ಮಕ್ಕಳಿಗೆ ಸಾಧ್ಯವಾಗುತ್ತಿರಲಿಲ್ಲ. ಬೇರೆ ಮಾರ್ಗದಿಂದ ಶಾಲೆಗೆ ಬರಲು ಸುಮಾರು 10 ಕಿಲೋಮೀಟರ್ ಬಳಸುವ ದಾರಿಯಲ್ಲಿ ಸಾಗಿ ಬರಬೇಕಿತ್ತು. ಈ ಕಾರಣಕ್ಕಾಗಿ ಹಲವು ಮಕ್ಕಳು ದೂರದ ಕಾನ್ವೆಂಟ್‍ಗಳಿಗೆ ಪ್ರಯಾಸದ ಪಯಣ ಮಾಡುತ್ತಿದ್ದರೆ, ಬಹುತೇಕ ಮಕ್ಕಳು ಓದಿಗೇ ತಿಲಾಂಜಲಿ ಇತ್ತಿದ್ದರು.

ವಾಸ್ತವವಾಗಿ ಸಹೋದರರಂತಿದ್ದ, ಗ್ರಾಮದೇವತೆ ದೈತ್ಯ ಮಾರಮ್ಮನನ್ನೇ ಎರಡೂ ಹಳ್ಳಿಯವರು ಆರಾಧ್ಯ ದೈವವಾಗಿಸಿಕೊಂಡಿರುವ ಕಾಡಶೆಟ್ಟಿಹಳ್ಳಿ ಮತ್ತು ತೊರೆಹಳ್ಳಿ ಗ್ರಾಮಸ್ಥರನ್ನು ಈ ತೊರೆ ಭೌತಿಕವಾಗಿ ದೂರ ಮಾಡಿತ್ತು. ಕೆ.ಟಿ.ಪಾಳ್ಯ, ಕಿರಂಗೂರು, ಶ್ಯಾನಭೋಗನಹಳ್ಳಿ, ಹನುಮಾಪುರ, ಮಲ್ಲನಕೊಪ್ಪಲು, ತೊರೆಮಲ್ಲನಾಯಕನಹಳ್ಳಿ, ಚಿಕ್ಕನಹಳ್ಳಿ, ತುಳಸಿಕಮರಿ, ಬಿಟ್ಟಗಾನಹಳ್ಳಿ ಮೊದಲಾದ ಸುತ್ತಲ ಹತ್ತು ಹಲವು ಹಳ್ಳಿಗಳಿಗೆ ಸಂಪರ್ಕ ಸಾಧಿಸುವುದೂ ದುಸ್ತರದ ಕೆಲಸವಾಗಿತ್ತು. ಅಗತ್ಯ ಕೆಲಸಗಳಿಗೆ ಅಮೃತೂರು, ನಾಗಮಂಗಲಕ್ಕೆ ಹೋಗುವವರು ದೂರದ ಬಳಸು ದಾರಿ ಹಿಡಿಯಬೇಕಿತ್ತು.

‘ಈ ತೊರೆಯ ಮೇಲೊಂದು ಸೇತುವೆ ನಿರ್ಮಿಸಿ’ ಎಂದು ಈ ಭಾಗದ ಜನ 50 ವರ್ಷಗಳಿಂದ ಜನಪ್ರತಿನಿಧಿಗಳಿಗೆ ನಿರಂತರ ಮೊರೆ ಇಡುತ್ತಲೇ ಬಂದಿದ್ದರು. ಆದರೆ ಈ ಜನರ ಕೂಗು ಆಳರಸರ ಕಿವಿಗೆ ಬಿದ್ದಿರಲೇ ಇಲ್ಲ. ಪ್ರತಿ ಚುನಾವಣೆಯಲ್ಲೂ ಈ ಸೇತುವೆ ವಿಷಯ ಪ್ರಸ್ತಾಪಕ್ಕೆ ಬಂದು ಹಾಗೇ ಮರೆಯಾಗಿ ಹೋಗುತ್ತಿತ್ತು. ಶಾಲೆಯ ಅಳಿವು ಉಳಿವು ಹಾಗೂ ತಮ್ಮ ಮಕ್ಕಳ ಭವಿಷ್ಯದ ಪ್ರಶ್ನೆ ಬಂದಾಗ ಕಾಡಶೆಟ್ಟಿಹಳ್ಳಿ ಮತ್ತು ತೊರೆಹಳ್ಳಿ ಗ್ರಾಮಸ್ಥರು ಜಾಗೃತರಾದರು. ಅವರಲ್ಲಿದ್ದ ಕ್ರಿಯಾಶೀಲತೆ, ಸಂಕಲ್ಪಶಕ್ತಿ ಪುಟಿದೆದ್ದಿತು. ಯಾರ ಹಂಗೂ ಇಲ್ಲದೆ ತಾವೇ ಶ್ರಮದಾನ ಮಾಡಿ ತೊರೆಯ ಮೇಲೆ ಸೇತುವೆ ನಿರ್ಮಿಸುವ ಸಂಕಲ್ಪ ಮಾಡಿದರು.

ಸಂಕಲ್ಪ ಮಾಡುವುದೇನೋ ಸುಲಭ, ಆದರೆ ಅದನ್ನು ಕಾರ್ಯರೂಪಕ್ಕೆ ತರುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಈ ತೊರೆ ದಾಟಲಾಗದ ಕಾರಣ ಜನ ಅತ್ತ ಓಡಾಡುವುದನ್ನೇ ಬಿಟ್ಟಿದ್ದರು. ಹಾಗಾಗಿ ಕಾಡಶೆಟ್ಟಿಹಳ್ಳಿಯ ದೈತ್ಯ ಮಾರಮ್ಮ ದೇವಸ್ಥಾನದಿಂದ ತೊರೆಯವರೆಗೆ ಸುಮಾರು ಒಂದು ಕಿ.ಮೀಗೂ ಹೆಚ್ಚು ದೂರದ ಸಂಪರ್ಕ ರಸ್ತೆಯೇ ಮುಚ್ಚಿ ಹೋಗಿ ಅಲ್ಲೊಂದು ಕಚ್ಚಾ ಕಾಲು ದಾರಿಯಷ್ಟೇ ಇತ್ತು. ಹೀಗಾಗಿ ಸೇತುವೆಗೆ ಮುಂಚೆ ಆ ರಸ್ತೆ ನಿರ್ಮಾಣವಾಗಬೇಕಿತ್ತು. ಲಕ್ಷಾಂತರ ರೂಪಾಯಿ ಹಣದ ಅವಶ್ಯಕತೆ ಇತ್ತು. ಊರಿನ ದೈತ್ಯ ಮಾರಮ್ಮ ಟ್ರಸ್ಟ್ ಇಷ್ಟೊಂದು ದೊಡ್ಡ ಮೊತ್ತವನ್ನು ಭರಿಸುವ ಸ್ಥಿತಿಯಲಿರಲಿಲ್ಲ. ಆಗ ನೆರವಿಗೆ ಬಂದು ಸಹಾಯ ಹಸ್ತ ಚಾಚಿದವರೇ ಬೆಂಗಳೂರಿನ ಉದ್ಯಮಿ, ಸಾಮಾಜಿಕ ಕಾರ್ಯಕರ್ತ ಕೆ.ಜಿ. ಶ್ರೀನಿವಾಸ್!

ಶ್ರೀನಿವಾಸ್ ಈ ಸೇತುವೆ ಕಟ್ಟುವ ಕೈಂಕರ್ಯಕ್ಕೆ ಬೆನ್ನೆಲುಬಾಗಿ ನಿಂತರು. ‘ಮಳೆ ಬಿದ್ದರೆ ಮತ್ತೊಂದು ವರ್ಷ ಸೇತುವೆ ಕೆಲಸ ನೆನೆಗುದಿಗೆ ಬೀಳುತ್ತದೆ’ ಎಂಬ ಅರಿವಿದ್ದ ರೈತರು ಮತ್ತು ಎರಡೂ ಹಳ್ಳಿಯ ನೂರಾರು ಗ್ರಾಮಸ್ಥರು ಕೂಡಲೇ ಕಾರ್ಯಪ್ರವೃತ್ತರಾದರು. ಜಿಟಿ ಜಿಟಿ ಹನಿವ ಮಳೆಯಲ್ಲೇ ರೈತರು ಒಂದೇ ದಿನದಲ್ಲಿ ಕಾಡಶೆಟ್ಟಿಹಳ್ಳಿಯಿಂದ ತೊರೆಯವರೆಗಿನ ಸಂಪರ್ಕ ರಸ್ತೆಯನ್ನು ಮಾಡಿ ಮುಗಿಸಿದರು. ದೈತ್ಯ ಬಂಡೆಗಳನ್ನು ಒಡೆದು ಕಲ್ಲು ಜೋಡಿಸಿದರು. ನೀರಿನ ಕೊಳಾಯಿಗಳನ್ನು ಉರುಳಿಸಿ ತಂದರು.

ಜುಲೈ 7ರಂದು ಪ್ರಾರಂಭವಾದ ಕಾಮಗಾರಿ ಹಗಲು ರಾತ್ರಿ ನಿರಂತರವಾಗಿ ನಡೆದು 9ರ ಹೊತ್ತಿಗೆ 200 ಅಡಿ ಉದ್ದದ ಸೇತುವೆ ಕೊನೆಗೊಂಡಿತು. ಶ್ರೀನಿವಾಸ್, ಬೆಂಗಳೂರಿನ ಗಾಂಧಿ ಪ್ರತಿಷ್ಠಾನದ ಕಾರ್ಯದರ್ಶಿ ಜಿ.ಬಿ. ಶಿವರಾಜ್, ಪ್ರೊ.ಕೆ. ಪುಟ್ಟರಂಗಪ್ಪ, ಟ್ರಸ್ಟ್ ಅಧ್ಯಕ್ಷ ರಂಗಯ್ಯ, ಕಾರ್ಯದರ್ಶಿ ನರಸಿಂಹಮೂರ್ತಿ, ಎಸ್. ಆರ್. ಮಂಜುನಾಥ್, ನಿರ್ದೇಶಕ ತಿಮ್ಮಪ್ಪ, ಕ್ಷೇತ್ರಶಿಕ್ಷಣಾಧಿಕಾರಿ ತಿಮ್ಮರಾಜು ರೈತರ ಜೊತೆಗಿದ್ದು ಅವರಿಗೆ ಅಗತ್ಯ ನೆರವು, ಮಾರ್ಗದರ್ಶನ ನೀಡಿದರು. ಎರಡೂ ಹಳ್ಳಿಯ ಗ್ರಾಮಸ್ಥರು ತಮ್ಮೂರಿಗೊಂದು ಹೊಸ ಇತಿಹಾಸ ಬರೆದ ಸಂತಸ, ಸಂತೃಪ್ತಿಯ ಸಂಭ್ರಮದಲ್ಲಿ ನಲಿದರು. ಈಗ ಶಾಲೆಯ ವಿದ್ಯಾರ್ಥಿಗಳ ಹಾಜರಾತಿ 70ಕ್ಕೆ ಏರಿದೆ. ಈ ಮಹತ್ಕಾರ್ಯಕ್ಕೆ ರೈತರೊಂದಿಗೇ ಮೂರೂ ದಿನ ಇದ್ದು ಅವರಿಗೆ ಹೆಗಲು ಕೊಟ್ಟ ಶ್ರೀನಿವಾಸ್ ಅವರನ್ನು ಎರಡೂ ಹಳ್ಳಿಯ ಗ್ರಾಮಸ್ಥರು ಕೃತಜ್ಞತೆಯಿಂದ ನೆನೆಯುತ್ತಾರೆ.

ಟ್ರಸ್ಟ್‌ ಅಸ್ತಿತತ್ವಕ್ಕೆ ಬಂದಿದ್ದು..

ಶ್ರೀನಿವಾಸ್ ತಂದೆ ಕೆ. ಜಿ. ಗೋವಿಂದಪ್ಪ ಮೂಲತಃ ಈ ಕಾಡಶೆಟ್ಟಿಹಳ್ಳಿಯವರು. ಗೋವಿಂದಪ್ಪ ಚಿಕ್ಕ ವಯಸ್ಸಿನಲ್ಲೇ ಉದ್ಯೋಗಕ್ಕಾಗಿ ಕಾಡಶೆಟ್ಟಿಹಳ್ಳಿ ತೊರೆದು ಬೆಂಗಳೂರಿನಲ್ಲಿ ನೆಲೆಸಿದ್ದರು. ಅವರಿಂದ ಶ್ರೀನಿವಾಸ್ ಊರಿನ ಹೆಸರು ಕೇಳಿದ್ದು ಬಿಟ್ಟರೆ ಸುಮಾರು 40 ವರ್ಷ ಈ ಗ್ರಾಮವನ್ನೇ ನೋಡಿರಲಿಲ್ಲ. ಅಪ್ಪನ ಊರು ಎಂಬ ಕಕ್ಕುಲತೆಯಿಂದ ಒಮ್ಮೆ ಊರಿಗೆ ಬಂದ ಶ್ರೀನಿವಾಸ್‍ಗೆ ತನ್ನೂರಿಗೆ ಏನಾದರೂ ಕಾಯಕಲ್ಪ ಮಾಡಬೇಕು ಅನಿಸಿಬಿಟ್ಟಿತು. ಆಗಲೇ ದೈತ್ಯ ಮಾರಮ್ಮ ಟ್ರಸ್ಟ್ ಅಸ್ತಿತ್ವಕ್ಕೆ ಬಂದದ್ದು.

ಹಳ್ಳಿಯಲ್ಲಿ ತಮ್ಮ ತಂದೆ ಗೋವಿಂದಪ್ಪ ಮತ್ತು ತಾಯಿ ಪುಟ್ಟ ಅರಸಮ್ಮ ದಂಪತಿ ನೆನಪಲ್ಲಿ ಶ್ರೀನಿವಾಸ್ ಒಂದು ಭವ್ಯ ಛತ್ರ ನಿರ್ಮಿಸಿ ಅಲ್ಲಿ ಸಾಮೂಹಿಕ ವಿವಾಹಗಳಿಗೆ ನಾಂದಿ ಹಾಡಿದರು. ಊರಿನಲ್ಲಿದ್ದ ಮದ್ಯದಂಗಡಿಗಳು ಎತ್ತಂಗಡಿಯಾದವು. ಜನ ಸ್ವಯಂ ಪ್ರೇರಣೆಯಿಂದ ಪಾನನಿರೋಧವನ್ನು ಒಪ್ಪಿಕೊಂಡರು.

ಊರಿನ ಅಭಿವೃದ್ಧಿಗಾಗಿ ಶ್ರೀನಿವಾಸ್ ಈ ಗ್ರಾಮದ ಮೂಲದವರನ್ನು ಹುಡುಕಿ ಅವರೊಂದಿಗೆ ಬೆಂಗಳೂರಿನಲ್ಲಿ ಈಗಲೂ ತಿಂಗಳಿಗೊಮ್ಮೆ ಸಭೆ ನಡೆಸುತ್ತಿದ್ದಾರೆ. ಸರ್ಕಾರಿ ಶಾಲೆಗೆ ಹೊಸ ಕಟ್ಟಡ ನಿರ್ಮಾಣವಾಗುತ್ತಿದೆ. ಇಬ್ಬರು ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಕ ಮಾಡಲು ಸ್ಥಳೀಯ ಕ್ಷೇತ್ರಶಿಕ್ಷಣಾಧಿಕಾರಿಗಳೂ ಒಪ್ಪಿದ್ದಾರೆ. ಕಾಡಶೆಟ್ಟಿಹಳ್ಳಿಯಲ್ಲಿ ಹೊಸದೊಂದು ಸನಿವಾಸ ಪ್ರೌಢಶಾಲೆ ಮಾಡುವ ಯೋಜನೆಯೂ ರೂಪುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.