ADVERTISEMENT

ಮೋಡದ ಮರೆಯಲ್ಲಿ ಮಾಗೋಡ

ಗ.ಮ.ತುಂಬೇಮನೆ
Published 28 ಸೆಪ್ಟೆಂಬರ್ 2025, 0:14 IST
Last Updated 28 ಸೆಪ್ಟೆಂಬರ್ 2025, 0:14 IST
ಮೈದುಂಬಿರುವ ಮಾಗೋಡು ಜಲಪಾತದ ವಿಹಂಗಮ ನೋಟ
ಮೈದುಂಬಿರುವ ಮಾಗೋಡು ಜಲಪಾತದ ವಿಹಂಗಮ ನೋಟ   

ಮಳೆಗಾಲ ಜಲಪಾತಗಳಿಗೆ ನೀರಿನ ಟಾನಿಕ್ ನೀಡಿ ಮೈದುಂಬಿಸುತ್ತದೆ. ಜಲಪಾತದ ಸಂಪೂರ್ಣ ಸೌಂದರ್ಯ ಸವಿಯಲು ಮಳೆಗಾಲವೇ ಸೂಕ್ತ. ಆದರೆ ದುರ್ಗಮ ಮಾರ್ಗಗಳಿರುವ ಕಡೆ ಮಳೆಗಾಲದಲ್ಲಿ ಎಲ್ಲ ಜಲಪಾತಗಳಿಗೆ ಹೋಗಲು ಸಾಧ್ಯವಾಗುವುದೇ ಇಲ್ಲ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಿಂದ ಹದಿನೇಳು ಕಿಲೋಮೀಟರ್ ದೂರವಿರುವ ಮಾಗೋಡ ಜಲಪಾತಕ್ಕೆ ಮಾತ್ರ ಎಂತಹ ಮಳೆಗಾಲದಲ್ಲೂ ಸುಲಭವಾಗಿ ಹೋಗಬಹುದು.

ಮಳೆಗಾಲದ ಮಧ್ಯ ಅಂದರೆ ಆಗಸ್ಟ್‌ ತಿಂಗಳಲ್ಲಿ ಜಲಪಾತದ ವೈವಿಧ್ಯಮಯ ನೋಟಗಳು ಲಭ್ಯ. ಮಾಗೋಡಿನಲ್ಲಿ ಬೇಡ್ತಿ ನದಿ ಎರಡು ಹಂತಗಳಲ್ಲಿ ಸುಮಾರು ನಾಲ್ಕು ನೂರು ಮೀಟರ್ ಎತ್ತರದಿಂದ ಧುಮ್ಮಿಕ್ಕುತ್ತದೆ. ಮಳೆಗಾಲದಲ್ಲಿನ ಅಗಾಧ ನೀರು ಬೀಳುವ ರಭಸಕ್ಕೆ ಸಿಡಿದು ತುಂತುರುಗಳಾಗಿ ನಮಗೆಲ್ಲ ಸಿಂಚನವಾಗುವುದು. ನಮಗೆ ಅದೃಷ್ಟವಿದ್ದರೆ ಬಿಸಿಲು ಮತ್ತು ಮಳೆ ಜೊತೆಯಾಗಿ ಬಂದರೆ ಇಡೀ ಜಲಪಾತಕ್ಕೆ ಕಾಮನಬಿಲ್ಲು ಸಿಂಗಾರ ಮಾಡಿ ಕಿನ್ನರಲೋಕವನ್ನೇ ಕ್ಷಣಾರ್ಧದಲ್ಲೇ ನಿರ್ಮಿಸಿಬಿಡುವುದು. ದಟ್ಟಡವಿಯ ಕಣಿವೆಯಿಂದ ಎದ್ದು ಬರುವ ಮೋಡಗಳು ಜಲಪಾತಕ್ಕೆ ಮುಸುಕಿ ಭ್ರಮಾಲೋಕವನ್ನೆ ಸೃಷ್ಟಿಸಿಬಿಡುವುದು.

ಕೆಲವೊಮ್ಮೆ ಮಂಜು ಪೂರ್ತಿ ಆವರಿಸಿ ಜಲಪಾತದ ಇರುವನ್ನೇ ಇಲ್ಲವಾಗಿಸಿಬಿಡುತ್ತದೆ. ದಿಗಿಲು ಹುಟ್ಟಿಸುವ ಜಲಪಾತದ ಭೋರ್ಗರೆತದ ದಿಕ್ಕಿನಲ್ಲಿ ನೋಡುತ್ತಿರುವಂತೆ ಬೀಸುವ ಗಾಳಿಗೆ ನಿಧಾನವಾಗಿ ಮಂಜಿನ ಪರದೆ ಸರಿಯತೊಡಗಿ ಸಿನಿಮಾದಲ್ಲಿ ನಾಯಕ ಬಂದಂತೆ ಜಲಪಾತದ ದರ್ಶನವಾಗುವುದನ್ನು ಅನುಭವಿಸಿಯೇ ನೋಡಬೇಕು. ಮೋಡದ ಮರೆಯಿಂದ ತೂರಿ ಬರುವ ಸೂರ್ಯಕಿರಣಗಳು ಅಲ್ಲಲ್ಲಿ ಸ್ಪಾಟ್‌ಲೈಟ್ ಬಿಟ್ಟು ಜಲಪಾತದ ಕೆಲವು ಭಾಗಗಳಿಗೆ ಮಹತ್ವ ನೀಡುತ್ತವೆ.

ADVERTISEMENT

ಗಾಳಿ ಜೋರಾಗಿ ಬೀಸಿದರೆ ಜಲಪಾತಕ್ಕೆ ಕವಿದ ಮಂಜು ನಮಗೂ ಬಂದು ಮುತ್ತಿಕೊಂಡು ಹತ್ತಿರವಿರುವವರೇ ಗೋಚರಿಸುವುದಿಲ್ಲ! ನಾವು ಮಧ್ಯಾಹ್ನದಲ್ಲಿದ್ದರೂ ದಟ್ಟ ಮಂಜಿಗೆ ಸೂರ್ಯನೂ ಮಬ್ಬಾಗಿ ಬೆಳಗಿನ ಜಾವಕ್ಕೆ ಹೋಗಿಬಿಡುತ್ತೇವೆ. ಜಲಪಾತ ವೀಕ್ಷಿಸಲು ಬಾನಿಂದ ಭೂಮಿಗೆ ಮೋಡ ಇಳಿವ ವೈಭವ ನೋಡಲು ನಾವೂ ಮಳೆಗಾಲದಲ್ಲಿ ಹಾಗೂ ನಂತರ ಮರೆಯದೇ ಜಲಪಾತ ನೋಡಲು ಹೋಗಬೇಕು. v

ಮೈದುಂಬಿರುವ ಮಾಗೋಡು ಜಲಪಾತದ ವಿಹಂಗಮ ನೋಟ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.