ವರ್ಷವಿಡೀ ಬದಲಾಗುವ ಹವಾಮಾನದ ಪರಿಣಾಮ ಈ ಗಿರಿಧಾಮದ ಮೇಲೆ ಆಗುವುದೇ ಇಲ್ಲ. ಬೇಸಿಗೆ ಇರಲಿ, ಮಳೆಯೇ ಇರಲಿ, ಚಳಿಯೇ ಇರಲಿ- ಎಲ್ಲಾ ಕಾಲದಲ್ಲೂ ಅಲ್ಲಿ ಅದೇ ಸ್ವಚ್ಛ ಪರಿಸರ, ಕುಳಿರ್ಗಾಳಿ, ಹಿತವಾದ ವಾತಾವರಣ. ಅದು ಇಡುಕ್ಕಿ ಗಿರಿಧಾಮ. ಕೇರಳ ರಾಜ್ಯದ ಈ ಗಿರಿಧಾಮ ಮುನ್ನಾರ್‌ನಷ್ಟು ಜನಪ್ರಿಯವಲ್ಲ. ಆದರೆ ಇದರ ಅಂದಕ್ಕೆ ಒಮ್ಮೆ ಮನಸೋತವರು ಅದನ್ನು ಮರೆಯುವ ಹಾಗಿಲ್ಲ.
ಸಮುದ್ರ ಮಟ್ಟದಿಂದ 2500 ಅಡಿ ಎತ್ತರದಲ್ಲಿ ಇರುವ ಈ ಇಡುಕ್ಕಿ 70 ಚದರ ಕಿಲೋಮೀಟರ್ ವಿಸ್ತಾರ ಇದೆ. ಇಡುಕ್ಕಿ ಎಂದರೆ ಮಲಯಾಳಂ ಭಾಷೆಯಲ್ಲಿ ಇಕ್ಕಟ್ಟು ರಸ್ತೆ ಎಂದರ್ಥ. ಇಕ್ಕಟ್ಟಾದ ರಸ್ತೆ ಮೂಲಕ ಈ ಗಿರಿಧಾಮ ತಲುಪಬೇಕಾಗಿದ್ದ ಕಾರಣ ಅದಕ್ಕೆ ಆ ಹೆಸರು ಬಂದಿದೆ.
ಆದರೆ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ದೊಡ್ಡದಾದ ರಸ್ತೆಗಳನ್ನು ರಾಜ್ಯ ಸರ್ಕಾರ ನಿರ್ಮಿಸಿದೆ. ಆದರೆ ಇಕ್ಕಟ್ಟಾದ ಕಣಿವೆಗಳು ಮಾತ್ರ ಇಡುಕ್ಕಿ ಎಂಬ ಪದಕ್ಕೆ ಅರ್ಥಬರುವಂತೆಯೇ ಕೂಡಿಕೊಂಡಿವೆ.
ಪಶ್ಚಿಮ ಘಟ್ಟದ ಸಾಲುಗಳಲ್ಲಿ ಬರುವ ಇಡುಕ್ಕಿಯಲ್ಲಿ ಪೆರಿಯಾರ್, ಥಲಯಾರ್ ಮತ್ತು ತೊದುಪುಳಯಾರ್ ಎಂಬ ಹೆಸರಿನ ಮೂರು ನದಿಗಳು ಹರಿದು ಸಾಗುತ್ತವೆ. ಅವುಗಳ ಉಪನದಿಗಳು ಕೂಡ ಇಲ್ಲಿ ಜಾಗ ಕಂಡುಕೊಂಡಿವೆ.
ಅಲ್ಲದೇ ಪಂಬಾ ಎಂಬ ಪವಿತ್ರ ನದಿ ಕೂಡ ಈ ಬೆಟ್ಟದ ಸಾಲುಗಳಲ್ಲಿಯೇ ಹುಟ್ಟುತ್ತವೆ. ಅದರಿಂದ ಹಸಿರು ಹಾಸಿನ ನಡುವೆ ಹಾಲ್ನೊರೆಯಂತೆ ಧುಮುಕುವ ಸಣ್ಣ ಸಣ್ಣ ತೊರೆಗಳು ಮತ್ತು ಜಲಪಾತಗಳು ಈ ಗಿರಿಧಾಮದಲ್ಲಿ ಎಣಿಕೆಗೆ ಸಿಗವು.
2500 ಅಡಿ ಎತ್ತರ ಸಮುದ್ರ ಮಟ್ಟದಿಂದ ಕೇರಳದ ಸುಂದರ ಜಿಲ್ಲೆಗಳಲ್ಲಿ ಇದೂ ಒಂದು. ಪಶ್ಚಿಮ ಘಟ್ಟದಲ್ಲಿರುವ ಈ ಇಕ್ಕಟ್ಟು ಕಣಿವೆಗಳಲ್ಲಿ ಪವಿತ್ರ ನದಿ ಎನಿಸಿಕೊಂಡಿರುವ ಪಂಬಾ ಹುಟ್ಟುತ್ತದೆ.
ಇಡುಕ್ಕಿ ಗಿರಿಧಾಮ ತಲುಪುವ ದಾರಿಯಲ್ಲಿ ಇರುವ ದಟ್ಟ ಅರಣ್ಯದಲ್ಲಿ ವನ್ಯಮೃಗ ರಕ್ಷಣಾ ಧಾಮವೂ ಇದೆ. ಅಲ್ಲಿ ಟ್ರೆಕ್ಕಿಂಗ್ ಮತ್ತು ಆನೆಗಳ ಮೇಲೆ ಸವಾರಿ ಮಾಡಬಹುದು. ಹಾಗೆಯೇ ಆನೆ, ಕಾಡೆಮ್ಮೆ, ಜಿಂಕೆ ಮತ್ತು ವಿವಿಧ ಜಾತಿಯ ಬಣ್ಣ ಬಣ್ಣದ ಪಕ್ಷಿಗಳನ್ನು ನೋಡಬಹುದು.
ಇಡುಕ್ಕಿಗೆ ತೀರ ಹತ್ತಿರದಲ್ಲಿಯೇ ಇರುವ ತೇಕ್ಕಡಿಯಲ್ಲಿ ಪೆರಿಯಾರ್ ವನ್ಯಮೃಗ ಧಾಮ ಇದೆ. ಅಲ್ಲಿ ಕೃತಕ ಸರೋವರ ಇದ್ದು ದೋಣಿವಿಹಾರ ಮಾಡುತ್ತಾ ಸುತ್ತ ಆವರಿಸಿದ ಹಸಿರು ಗಿರಿಗಳ ಅಂದವನ್ನು ಸವಿಯಬಹುದು. ಕೊಟ್ಟಾಯಂನಿಂದ 121 ಕಿ.ಮೀ, ತಿರುವನಂತಪುರದಿಂದ 154 ಕಿ.ಮೀ, ಕೊಚ್ಚಿಯಿಂದ 64 ಕಿ.ಮೀ ದೂರದಲ್ಲಿದೆ.
ಇಡುಕ್ಕಿಯ ವಿಸ್ತೀರ್ಣ ಚಿಕ್ಕದಾದರೂ, ಅದರ ಹೆಸರಿನಲ್ಲಿ ಇಕ್ಕಟ್ಟು ಇದೆಯಾದರೂ, ಅಲ್ಲಿನ ಸೌಂದರ್ಯಕ್ಕೆ ಮಾತ್ರ ಯಾವುದೇ ಚೌಕಟ್ಟುಗಳಿಲ್ಲ. ನೋಡುಗರ ಎದೆಯಲ್ಲಿ ಹಸಿರು-ತಂಪು ಬಿತ್ತುವ ಈ ಗಿರಿಧಾಮದ ಪರಿಸರ ಮನಸ್ಸಿನ ಇಕ್ಕಟ್ಟನ್ನು ತೊಳೆದು ಉದಾತ್ತ ಭಾವವನ್ನು ಮೂಡಿಸುವಷ್ಟು ಪ್ರಶಾಂತವಾದುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.