ADVERTISEMENT

ನೋಡಿದ್ರಾ? ಬಾಂದ್ರಾ

​ಪ್ರಜಾವಾಣಿ ವಾರ್ತೆ
Published 25 ಜೂನ್ 2011, 19:30 IST
Last Updated 25 ಜೂನ್ 2011, 19:30 IST
ನೋಡಿದ್ರಾ? ಬಾಂದ್ರಾ
ನೋಡಿದ್ರಾ? ಬಾಂದ್ರಾ   

ಇದೊಂದು ಕೌತುಕದ ತಾಣ. ಪುಟ್ಟದಾದ ಕೋಟೆ. ಕೋಟೆಯನ್ನು ನೋಡಲು ಹೋಗುತ್ತಿದ್ದಂತೆ ನಿಮಗೊಂದು ಅಚ್ಚರಿ ಕಾದಿರುತ್ತದೆ. `ಲ್ಯಾಂಡ್ ಎಂಡ್ ಬಾಂದ್ರಾ ಫೋರ್ಟ್~ ಎಂಬ ಫಲಕ ಕಾಣುತ್ತದೆ. ಎಂದರೆ ಬಾಂದ್ರಾ ಕೋಟೆಗೆ ಭೂಮಿ ಕೊನೆಗೊಳ್ಳುತ್ತದೆ.

ಅಲ್ಲಿಂದಾಚೆಗೆ ಕಣ್ಮನ ಸೆಳೆಯುವ ಅಪೂರ್ವ ಜಲರಾಶಿ. ಸಮೃದ್ಧ ಸಮುದ್ರ..!
ಹೌದು. ದಕ್ಷಿಣ ಮುಂಬಯಿ ಅಷ್ಟೇ ಅಲ್ಲ, ದಕ್ಷಿಣ ಭಾರತದ ಒಂದು ಕುತೂಹಲ ಕೆರಳಿಸುವ ಪ್ರವಾಸಿ ತಾಣ ಈ ಬಾಂದ್ರಾ. ಇಲ್ಲಿರುವುದು ಒಂದು ಸಣ್ಣ ಕೋಟೆ. ಸರಿಸುಮಾರು 16ನೇ ಶತಮಾನದಲ್ಲಿ ಪೋರ್ಚುಗೀಸರು ಇದನ್ನು ಕಟ್ಟಿಸಿದರು ಎನ್ನುತ್ತದೆ ಇತಿಹಾಸ. ಆದರೆ ಈಗ ಕೋಟೆಗೆ ಆಧುನಿಕತೆಯ ಸ್ಪರ್ಶ ಎಡತಾಕಿದ್ದು, ಹೊಸ ರೂಪ ತಾಳಿದೆ.

ಪುಟ್ಟದಾಗಿ ಕಟ್ಟಿದ ಕೋಟೆ, ಕೋಟೆಯ ಮೇಲೆ ಏರಿದಾಗ ಕಂಡುಬರುವ ದೃಶ್ಯಗಳು ನೆನಪಿನಂಗಳದಲ್ಲಿ ನಿಲ್ಲುವಂತಿವೆ. ಪ್ರವಾಸಿಗರಿಗೆ ಸ್ವರ್ಗ. ಕಡಲುಪ್ರಿಯರಿಗೆ ಇಷ್ಟವಾಗುವ ತಾಣ. ಜಲರಾಶಿ, ದಿಗಂತ ಎರಡನ್ನೂ ಕಣ್ಣು ತುಂಬಿಸಿಕೊಳ್ಳುವಂತಹ ಅಪೂರ್ವ ಸ್ಥಳ. ಕಣ್ಣು ಎಟುಕುವಷ್ಟೂ ನೀರ ಅಲೆಗಳು ಅಲೆಅಲೆಯಾಗಿ ಕಾಣುವ ಜಾಗ. ಮರಳೇ ಇಲ್ಲದೆ ಬರೀ ಕರಿಗಲ್ಲಿನಿಂದಲೇ ಕೂಡಿದ ಸಮುದ್ರ ಕಿನಾರೆ. ಪುಟ್ಟ ಕೋಟೆ ಮೇಲೆ ನಿಂತು ಮನಮೋಹಕ ದೃಶ್ಯ ನೋಡುವುದಂತೂ ಕಣ್ಣಿಗೆ ಹಬ್ಬ!

ಬಾಂದ್ರಾಕ್ಕೆ `ಪೋರ್ಚುಗೀಸ್ ಫೋರ್ಟ್ ಆಫ್ ವಾಟರ್ ಪಾಯಿಂಟ್~ ಎಂಬ ಇನ್ನೊಂದು ಹೆಸರೂ ಇದೆ. ಲ್ಯಾಂಡ್ ಎಂಡ್ ಇನ್ ಬಾಂದ್ರಾ ಸರ್ವ ಜನಾಂಗದ ಶಾಂತಿಯ ತೋಟ. ಪುಟ್ಟ ಊರಾದರೂ ಹಿಂದೂ, ಕ್ರಿಶ್ಚಿಯನ್, ಮುಸ್ಲಿಂ, ಪಾರ್ಸಿ ಎಲ್ಲ ಧರ್ಮೀಯರೂ ಇಲ್ಲಿದ್ದು, ಎಲ್ಲರಿಗೂ ಅವರವರ ಪೂಜೆ, ಪ್ರಾರ್ಥನೆಗೆ ದೇವಸ್ಥಾನ, ಮಂದಿರ, ಚರ್ಚ್, ಮಸೀದಿ ಎಲ್ಲವೂ ಇದೆ. ಇಲ್ಲಿರುವ ಬಾಂದ್ರಾ ಬ್ಯಾಂಡ್‌ಸ್ಟ್ಯಾಂಡ್ ರೆಸಿಡೆಂಟ್ಸ್ ಗಾರ್ಡನ್ ಕೂಡ ಪುಟ್ಟದಾಗಿದ್ದು, ನೋಡಲು ಆಕರ್ಷಕವಾಗಿದೆ. ಇದಕ್ಕೆ ರಾಜ್ಯಸಭಾ ಸದಸ್ಯೆ ಶಬಾನಾ ಅಜ್ಮಿ 2003ರಲ್ಲಿ ಕಾಯಕಲ್ಪ ಕಲ್ಪಿಸಿದ್ದು, ಪುಟ್ಟ ಉದ್ಯಾನವನ್ನು ಸುಸಜ್ಜಿತಗೊಳಿಸಲಾಗಿದೆ.

`ದಿಲ್ ಚಾಹ್‌ತಾ ಹೈ~, `ಬುದ್ಧ ಮಿಲ್ ಗಯ~ ಹಿಂದಿ ಚಲನಚಿತ್ರಗಳಲ್ಲಿ ಬಾಂದ್ರಾದ ಸೌಂದರ್ಯವನ್ನು ಸೆರೆಹಿಡಿಯಲಾಗಿದೆ. ಬಾಂದ್ರಾಕ್ಕೆ `ಕ್ವೀನ್ ಆಫ್ ಸಬರ್ಬ್~ ಎಂದೂ ಹೆಸರಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.