ADVERTISEMENT

ಬೆಟ್ಟದ ಮೇಲೊಂದು ಒನಕೆ !

ಅಮರಜಾ ಹೆಗಡೆ
Published 29 ಜೂನ್ 2013, 19:59 IST
Last Updated 29 ಜೂನ್ 2013, 19:59 IST

ಪಶ್ಚಿಮ ಘಟ್ಟಗಳು, ಸಹ್ಯಾದ್ರಿ ಪರ್ವತ ಶ್ರೇಣಿಗಳು, ಚಿತ್ರದುರ್ಗದ ಕೋಟೆ ಕೊತ್ತಲಗಳು- ಇಂಥ ಪ್ರಕೃತಿಯ ರೋಚಕ ಮತ್ತು ರಮಣೀಯ ತಾಣಗಳ ಕಾರಣದಿಂದಲೇ ಕರ್ನಾಟಕ ಚಾರಣಿಗರ ಪಾಲಿಗೆ ಸ್ವರ್ಗ ಎನ್ನಿಸಿದೆ. ಈ ಸ್ವರ್ಗಸದೃಶ ತಾಣಗಳಲ್ಲೊಂದು ಮೈಸೂರಿನ ಸಮೀಪ ಇರುವ `ಒನಕೆ ಬೆಟ್ಟ'.

ಮಂಡ್ಯ ಜಿಲ್ಲೆಯ ಪಾಂಡವಪುರ ಬಸ್ ನಿಲ್ದಾಣದಿಂದ ಎಡಕ್ಕೆ ಹೊರಳಿ ಸುಮಾರು ಎರಡೂವರೆ ಕಿಮೀ ದೂರ ಸಾಗಿದರೆ (ವಾಹನಗಳಲ್ಲಿ ಹೋಗಬಯಸುವವರಿಗೆ ಬೆಟ್ಟದ ಬುಡದವರೆಗೂ ಡಾಂಬರು ರಸ್ತೆಯಿದೆ) ಸಿಗುವುದೇ ಪುರಾಣ ಪ್ರಸಿದ್ಧ ಅವಳಿ ಬೆಟ್ಟಗಳಾದ `ಕುಂತಿ' ಹಾಗೂ `ಒನಕೆ' ಬೆಟ್ಟಗಳ ಬುಡ. ಇಲ್ಲಿಂದ ನೂರು ಮೆಟ್ಟಿಲು ಹತ್ತಿದರೆ ಮೊದಲು ಸಿಗುವುದು ಬೃಹತ್ ಬಂಡೆಯಲ್ಲಿ ಕೊರೆದ ಗಣಪತಿಯ ಏಕಶಿಲಾ ವಿಗ್ರಹ, ಮಲ್ಲಿಕಾರ್ಜುನ ಮತ್ತು ಆಂಜನೇಯ ಸ್ವಾಮಿಯ ದೇವಸ್ಥಾನಗಳು. ಗುಡಿಗಳ ಎದುರಿಗೆ ಶಿಥಿಲಾವಸ್ಥೆಯಲ್ಲಿ ಇರುವ ನೀರು ತುಂಬಿರುವ ಕಲ್ಯಾಣಿ ಇದೆ. ಇಲ್ಲಿಂದ ಮುಂದೆ ದೇಗುಲಗಳ ಎಡ-ಬಲಗಳ್ಲ್ಲಲಿರುವ `ಕುಂತಿ' ಹಾಗೂ `ಒನಕೆ' ಬೆಟ್ಟಗಳಿಗೆ ಚಾರಣಿಗರೇ ದಾರಿಮಾಡಿಕೊಂಡು ಸಾಗಬೇಕು.

ಪೌರಾಣಿಕ ಕಥನಗಳ ಪ್ರಕಾರ ವನವಾಸದ ಕಾಲದಲ್ಲಿ, ಪಾಂಡವರು ತಾಯಿ ಕುಂತಿಯ ಜೊತೆಯಲ್ಲಿ `ಕುಂತಿ' ಹಾಗೂ `ಒನಕೆ' ಬೆಟ್ಟಗಳ ಆಸುಪಾಸಿನಲ್ಲಿ ವಾಸ ಮಾಡುತ್ತಿದ್ದರಂತೆ. ಈ ಬೆಟ್ಟಗಳ ಗವಿಗಳಲ್ಲಿ ವಾಸಿಸುತ್ತಿದ್ದ ಬಕಾಸುರನೆಂಬ ದೈತ್ಯನನ್ನು ಭೀಮ ಇಲ್ಲಿ ವಧಿಸಿದನಂತೆ. ಐತಿಹಾಸಿಕ ಕಾರಣಗಳಿಂದಲೂ ಈ ಬೆಟ್ಟಗಳಿಗೆ ಪ್ರಾಮುಖ್ಯ ಇದೆ. ಟಿಪ್ಪು ಸುಲ್ತಾನ್ ಬ್ರಿಟಿಷರನ್ನು ಸದೆಬಡಿಯಲು ಫ್ರೆಂಚ್ ಸೈನ್ಯದ ನೆರವು ಪಡೆದು, ಆ ಸೈನಿಕರನ್ನು ಈ ಬೆಟ್ಟಗಳ ಬುಡದಲ್ಲಿ ಇರಿಸಿದ್ದನಂತೆ. ಹಾಗಾಗಿ ಈ ಬೆಟ್ಟಗಳಿಗೆ `ಫ್ರೆಂಚ್ ರಾಕ್ಸ್' ಎಂದೂ ಕರೆಯುತ್ತಾರೆ. ಕಲ್ಲು ಬಂಡೆಗಳಿಂದ ಆವೃತವಾದ ಈ ಬೆಟ್ಟಗಳು `ರಾಕ್ ಕ್ಲೈಂಬಿಗ್'ಗೆ ಪ್ರಶಸ್ತವಾಗಿವೆ.

ಬೆಟ್ಟದ ತುದಿಯಲ್ಲಿ ಒನಕೆಯಂತಹ ಕಲ್ಲು ಕಂಬ ಇದೆ. ಈ ಕಂಬದಿಂದಾಗಿಯೇ ಬೆಟ್ಟಕ್ಕೆ `ಒನಕೆ ಬೆಟ್ಟ' ಎನ್ನುವ ಹೆಸರು ಬಂದಿದೆ. ಕೇವಲ ಒಂದೂವರೆ ಗಂಟೆಯಲ್ಲಿ ಏರಬಹುದಾದ `ಒನಕೆ ಬೆಟ್ಟ'ದ ಕೆಲವೆಡೆ ಅತ್ಯಂತ ಕಡಿದಾದ ಬಂಡೆಗಳಿವೆ. ಇವುಗಳನ್ನು ಹಗ್ಗದ ಸಹಾಯದಿಂದ ಏರಿಳಿಯಬೇಕು. ಬೆಟ್ಟದ ಕೆಲವೆಡೆ ನೈಸರ್ಗಿಕ ಗುಹೆಗಳಿದ್ದು ಅವುಗಳ ಒಳಗೆ ಹೋದರೆ ಹವಾನಿಯಂತ್ರಿತ ಕೊಠಡಿ ಪ್ರವೇಶಿಸಿದಂತೆ ಭಾಸವಾಗುತ್ತದೆ.

ಎತ್ತರದ ಕಲ್ಲುಬಂಡೆಗಳನ್ನು ಏರುತ್ತಾ ಗಿರಿಯ ತುತ್ತ ತುದಿಗೆ ತಲುಪಿದಾಗ ಸಿಗುವ ಆನಂದ ವರ್ಣನಾತೀತ! ಆವರೆಗಿನ ನಮ್ಮ ಆಯಾಸವೆಲ್ಲ  ಮಾಯವಾಗುವಂತಹ ಅನುಭೂತಿ. ಒನಕೆ ಬೆಟ್ಟದ ಎದುರಿಗೆ ಕಾಣುವುದೇ `ಕುಂತಿಬೆಟ್ಟ'. ಆ ಬೆಟ್ಟವನ್ನು ಸುತ್ತುವರೆದು ಹರಿಯುತ್ತಿದೆ ಲೋಕಪಾವನಿ ನದಿ. ಸಾಹಸಿಗರು ಬೆಟ್ಟದ ತುದಿಯಲ್ಲಿರುವ ಸುಮಾರು ಹನ್ನೆರಡು ಅಡಿ ಎತ್ತರದ ಒನಕೆಯಂತಹ ಕಂಬ ಏರಿ ತಮ್ಮ ಧೈರ್ಯಪರೀಕ್ಷೆಯನ್ನೂ ಮಾಡಿಕೊಳ್ಳುವುದಿದೆ.

ರಕ್ಕಸ ಗಾತ್ರದ ಬಂಡೆಗಳನ್ನು ಏರುವಷ್ಟೇ ಸಾಹಸ-ಶ್ರಮವನ್ನು ಇಳಿಯುವಾಗಲೂ ಮಾಡಬೇಕಾಗುತ್ತದೆ. ಕೆಲವೆಡೆ ನೈಸರ್ಗಿಕ ಜಾರುಬಂಡೆಗಳಿವೆ. ಈ ಬಂಡೆಗಳ ಮೇಲೆ ಮಕ್ಕಳಂತೆ ಜಾರುತ್ತಾ ಜಾಗರೂಕತೆಯಿಂದ ಹೆಜ್ಜೆಯಿಡುತ್ತಾ ಬೆಟ್ಟ ಇಳಿಯಬೇಕು. ಮೈಸೂರು ಮತ್ತು ಬೆಂಗಳೂರಿನಿಂದ ಪಾಂಡವಪುರಕ್ಕೆ ರೈಲು ಮತ್ತು ಬಸ್ಸಿನ ಸೌಕರ್ಯಗಳಿವೆ.

ಚಾರಣಿಗರು ತಮಗೆ ಬೇಕಾದ ನೀರು ಹಾಗೂ ಆಹಾರವನ್ನು ಜೊತೆಯಲ್ಲಿಯೇ ತೆಗೆದುಕೊಂಡು ಹೋಗುವುದು, ಬೆಟ್ಟದ ಕುರಿತು ಸ್ಥಳೀಯರಿಂದ ಮಾರ್ಗದರ್ಶನ  ಪಡೆಯುವುದು ಒಳ್ಳೆಯದು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.