ADVERTISEMENT

ಸಂಪನ್ನ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2011, 19:30 IST
Last Updated 2 ಏಪ್ರಿಲ್ 2011, 19:30 IST
ಸಂಪನ್ನ
ಸಂಪನ್ನ   

ಮಳೆ ಸುರಿವಾಗ ಇದು ನಿತ್ಯಹರಿದ್ವರ್ಣದ ಬೀಡು; ಬೇಸಿಗೆಯಲ್ಲಿ ಬೆಂಗಾಡು. ಅದೇ ಈ ಕಾಡಿನ ವೈಶಿಷ್ಟ್ಯ. ಇದು ಮಧ್ಯಪ್ರದೇಶದ ಚಿತ್ತರ್‌ಪುರದ ಪನ್ನ ರಾಷ್ಟ್ರೀಯ ಉದ್ಯಾನವನ. ಇದನ್ನು ಹುಲಿಗಳ ಸಂರಕ್ಷಣಾ ವಲಯ ಎಂದೂ ಕರೆಯಲಾಗುತ್ತದೆ. ಹುಲಿಗಳಷ್ಟೇ ಅಲ್ಲದೇ ಚಿರತೆ, ಸಿಂಹ, ಲಂಗೂರ, ಜಿಂಕೆ, ನರಿ, ಸಾರಂಗ, ಕಾಡು ನಾಯಿ, ಕಾಡುಬೆಕ್ಕು, ತೋಳ, ಕಿರುಬ ಹೀಗೆ ವಿವಿಧ ಪ್ರಾಣಿಗಳ ಸಂಚಾರ ಇಲ್ಲಿ ಸಾಮಾನ್ಯ.

ಕಾಡಿನುದ್ದಕ್ಕೂ ಹರಿಯುವ ಕೆನ್ ನದಿ ಹಲವು ಜಲಪಾತಗಳನ್ನು ಸೃಷ್ಟಿಸಿದೆ. ಅದರಲ್ಲಿ ಪಾಂಡವ ಜಲಪಾತ ಪ್ರಮುಖವಾದುದು. ಕಮರಿಗಳ ಕಾಡು ಎಂದೇ ಖ್ಯಾತವಾಗಿರುವ ಈ ಪನ್ನ ರಾಷ್ಟ್ರೀಯ ಉದ್ಯಾನವನಕ್ಕೆ ಪ್ರತೀವರ್ಷ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಾರೆ. 543 ಚದರ ಕಿ.ಮೀ ಇರುವ ಪನ್ನ ಕಾಡಿನಲ್ಲಿ ಜುಲೈಗೆ ಆರಂಭವಾಗುವ ಮಳೆ ಸೆಪ್ಟೆಂಬರ್ ಮಧ್ಯಭಾಗದವರೆಗೂ ಸುರಿಯುತ್ತಲೇ ಇರುತ್ತದೆ. ಅರ್ಧ ಭಾಗ ಹುಲ್ಲುಗಾವಲು ಮತ್ತರ್ಧ ಭಾಗ ನೀಲಾಕಾಶ ಮುಟ್ಟುವಂಥ ಮರಗಳಿಂದ ಕಾಡು ಆವೃತವಾಗಿದೆ.

ದೋಣಿ ವಿಹಾರ, ಆನೆ ಸವಾರಿ, ರಾತ್ರಿ ಸಫಾರಿ ಈ ಕಾಡಿನ ವೈಶಿಷ್ಟ್ಯಗಳು. 200ಕ್ಕೂ ಹೆಚ್ಚು ಕಾಡು ಪ್ರಾಣಿಗಳು ಮತ್ತು ವಿವಿಧ ಜಾತಿಯ ಪಕ್ಷಿಗಳು ಹಾಗೂ ಹಾವುಗಳಿಗೆ ನೆಲೆ ಈ ಕಾಡು. ಪನ್ನದಲ್ಲಿ ಇರುವ ವಜ್ರದ ಗಣಿ ಕಾರ್ಖಾನೆ ಮತ್ತು ರಾಜಗರ್ ಅರಮನೆಯನ್ನು ಕೂಡ ಪ್ರವಾಸಿಗರು ಪಟ್ಟಿಯಲ್ಲಿ ಸೇರಿಸಿಕೊಳ್ಳಬಹುದು. ಇಲ್ಲಿಗೆ ಸಟ್ನಾ ಹತ್ತಿರದ ರೈಲ್ವೆ ನಿಲ್ದಾಣ. ಕೇವಲ 57 ಕಿ.ಮೀ ಅಂತರದಲ್ಲಿರುವ ಜಗತ್ಪ್ರಸಿದ್ಧ ಖಜುರಾಹೊದಿಂದ ಬಸ್ ಸಂಪರ್ಕ ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.