ಉದಯಗಿರಿ ಬೆಟ್ಟದ ಮೇಲಿರುವ ಗುಹೆಯ ಹೊರನೋಟ
ಒಡಿಶಾದ ರಾಜಧಾನಿ ಭುವನೇಶ್ವರದ ವಿಮಾನ ನಿಲ್ದಾಣದಿಂದ ಆರೇಳು ಕಿಲೋಮೀಟರ್ ದೂರದಲ್ಲಿ ಉದಯಗಿರಿ ಮತ್ತು ಖಂಡಗಿರಿ ಬೆಟ್ಟಗಳಿವೆ. ಅವುಗಳ ಮೇಲೆ ಅದೇ ಹೆಸರಿನ ಗುಹೆಗಳಿವೆ. ಈ ಎರಡೂ ಬೆಟ್ಟಗಳು ಕುಮಾರಿ ಪರ್ವತಶ್ರೇಣಿಯ ಭಾಗ. ಎರಡು ಸಾವಿರ ವರ್ಷಗಳು ಸಂದರೂ ಜೈನ ಭಕ್ತರನ್ನು, ಸಾವಿರಾರು ಪ್ರವಾಸಿಗರನ್ನೂ ತನ್ನೆಡೆಗೆ ಸೆಳೆಯುತ್ತಿವೆ. ಈಗೀನ ಒಡಿಶಾ ರಾಜ್ಯ ಹಿಂದೆ ಕಳಿಂಗ ರಾಜ್ಯ ಎಂದೂ ಕರೆಯಲ್ಪಡುತ್ತಿತ್ತು. ಮೌರ್ಯ ಸಾಮ್ರಾಟ್ ಅಶೋಕನೊಡನೆ ಮಾಡಿದ ಕಳಿಂಗ ಯುದ್ಧ ಇತಿಹಾಸ ಪ್ರಸಿದ್ಧ.
ಇದರಲ್ಲಿರುವ ಹೆಚ್ಚಿನ ಗುಹೆಗಳು ಮಾನವ ನಿರ್ಮಿತ. ಕೆಲವು ನೈಸರ್ಗಿಕ. ಅಜಂತಾ, ಎಲ್ಲೋರಾಗೆ ಹೋಲಿಸಿದರೆ ಇಲ್ಲಿ ರೋಮಾಂಚನಗೊಳ್ಳುವಂತಹ ಆಕರ್ಷಕ ಕೆತ್ತನೆಗಳಾಗಲಿ, ಮೂರ್ತಿಗಳಾಗಲಿ ಇಲ್ಲ. ವಾಸಿಸಲು ಮತ್ತು ಧ್ಯಾನಿಸಲು ಅನುಕೂಲವಿರುವಂತಹ ಗುಹೆಗಳು. ಕ್ರಿಸ್ತಪೂರ್ವ ಮೊದಲು ಮತ್ತು ಎರಡನೆ ಶತಮಾನದ ಕಾಲಘಟ್ಟದಲ್ಲಿ ನಿರ್ಮಿಸಿದ ಗುಹೆಗಳನ್ನು ಮಹಾಮೇಘವಾಹನ ರಾಜವಂಶದ ರಾಜ ಕರವೇಲನ ನೇತೃತ್ವದಲ್ಲಿ ನಿರ್ಮಿಸಲಾಯಿತು. ಎಲ್ಲವನ್ನು ತ್ಯಾಗ ಮಾಡಿ ಸದಾ ತಿರುಗಾಟದಲ್ಲಿರುವ ಜೈನ ಮುನಿಗಳಿಗೆ ಆಸರೆ ಕೊಡಲು ಇದನ್ನು ನಿರ್ಮಿಸಿದರು.
ಗುಹೆಗಳು ನೆಲದಿಂದ ಸುಮಾರು 150 ಅಡಿ ಎತ್ತರದಲ್ಲಿವೆ. ಮೊದಲಿಗೆ 117 ಗುಹೆಗಳು ನಿರ್ಮಾಣವಾದರೂ 33 ಗುಹೆಗಳನ್ನು ಮಾತ್ರ ಈಗ ನೋಡಬಹುದು. ಉದಯಗಿರಿಯಲ್ಲಿ 18, ಖಂಡಗಿರಿಯಲ್ಲಿ 15 ಗುಹೆಗಳಿವೆ. ಗುಹೆಗಳು ಒಂದು ಕಾಲದಲ್ಲಿ ಕಳಿಂಗ ರಾಜ್ಯವಾಳಿದ, ಶಕ್ತಿಯುತ ಶ್ರೀಮಂತ ಪ್ರಸಿದ್ಧ ಗುಪ್ತ, ಮಹಾಮೇಘವಾಹನ, ಮೌರ್ಯ, ರಾಜವಂಶದವರ ಏಳುಬೀಳನ್ನು ಕಂಡಿವೆ. ಇವು ಕೇವಲ ಕಲ್ಲುಗಳ ರಾಶಿಯಲ್ಲ, ಇವು ಆ ಕಾಲದ ಇತಿಹಾಸ, ಸಂಸ್ಕೃತಿ, ಕಲೆ, ಧರ್ಮದ ಬಗ್ಗೆ ಹೆಚ್ಚಿನ ಮಾಹಿತಿ ಕೊಡುತ್ತವೆ.
ಜೈನ ಮುನಿಗಳಿಗಾಗಿ ನಿರ್ಮಿಸಿದ ಗುಹೆಯ ಮುಚ್ಚಿಗೆ ಬಹಳ ಕೆಳಮಟ್ಟದಲ್ಲಿದ್ದು ಮನುಷ್ಯ ತಗ್ಗಿ, ಬಗ್ಗಿ ನಡೆಯಬೇಕು ಎನ್ನುವಂತಿದೆ. ಪ್ರತಿ ಗುಹೆಯಲ್ಲಿ ಕುಡಿಯುವ ನೀರು ಬರುವ ವ್ಯವಸ್ಥೆಯಿದೆ. ಮುನಿಗಳ ಮಧ್ಯೆ ಸಂವಹನಕ್ಕಾಗಿ ತೂತುಗಳು, ದೀಪವಿಡಲು ಕಿಂಡಿಗಳಿವೆ. ಕೆಲವೊಂದು ಗುಹೆಗಳಲ್ಲಿ ಎರಡು ಅಂತಸ್ತಿದ್ದು, ಮೇಲಿನಂತಸ್ತು ಮುನಿಗಳಿಗೆ ಧ್ಯಾನ ಮಾಡಲು ಇರಬಹುದು. ಹೆಚ್ಚಿನ ಗುಹೆಗಳು 4-6 ಜನರು ಕುಳಿತುಕೊಳ್ಳಬಹುದಾದಷ್ಟು ದೊಡ್ಡದಿದ್ದರೆ, ಕೆಲವೊಂದು 10-12 ಜನರು ಕುಳಿತುಕೊಳ್ಳಬಹುದಾದಷ್ಟು ದೊಡ್ಡದಿವೆ. ಜೈನರ 24ನೇ ತೀರ್ಥಂಕರ ಮಹಾವೀರ ಈ ಕುಮಾರಿ ಪರ್ವತ ಶ್ರೇಣಿಗೆ ಬಂದು ಬೋಧಿಸಿದನೆಂದು ಹೇಳಲಾಗಿದ್ದರಿಂದ ಜೈನರಿಗಿದು ಪವಿತ್ರ ಯಾತ್ರಾಸ್ಥಳ.
ಕ್ರಿಸ್ತಪೂರ್ವ ಕಾಲಘಟ್ಟದಲ್ಲಿ ನಿರ್ಮಿಸಿದರೂ ಕಾಲಚಕ್ರ ತಿರುಗಿದಂತೆ ನಿಧಾನವಾಗಿ ನೇಪಥ್ಯಕ್ಕೆ ಸರಿದು, ಜನಮನದಿಂದ ದೂರವಾಯಿತು. ಮತ್ತೆ 19ನೇ ಶತಮಾನದಲ್ಲಿ ಬ್ರಿಟಿಷ್ ಆಫೀಸರ್ ಆಂಡ್ರ‍್ಯೂ ಸ್ಟರ‍್ಲಿಂಗ್ ಕಣ್ಣಿಗೆ ಬಿದ್ದು ಜನಪ್ರಿಯವಾಯಿತು. ಈಗ ಭುವನೇಶ್ವರಕ್ಕೆ ಪ್ರವಾಸ ಬಂದವರು ಅಗತ್ಯವಾಗಿ ನೋಡುವ ಸ್ಥಳವಾಗಿದೆ.
ಇಲ್ಲಿರುವ 18 ಗುಹೆಗಳಲ್ಲಿ ಅತ್ಯಂತ ದೊಡ್ಡದು ಹಾಗೂ ಮುಖ್ಯವಾದದ್ದು ʻರಾಣಿ ಗುಂಪʼ (ರಾಣಿ ಗುಹೆ). ಇದು ಎರಡಂತಸ್ತಿನಲ್ಲಿದ್ದು ಮೂರು ವಿಭಾಗದಲ್ಲಿದೆ. ಮಧ್ಯದ ವಿಭಾಗವು ದೊಡ್ಡದಾಗಿದ್ದು ಕೆಳಅಂತಸ್ತಿನಲ್ಲಿ 7 ಪ್ರವೇಶದ್ವಾರ ಮತ್ತು ಮೇಲಿನಂತಸ್ತಿನಲ್ಲಿ 9 ಕಂಬಗಳಿವೆ. ಗೋಡೆಗಳ ಮೇಲೆ, ಬಾಗಿಲಿನ ತೊಲೆಯ ಮೇಲೆ ವಾದ್ಯ ನುಡಿಸುತ್ತಿರುವ ಮಹಿಳೆ, ಮಾನವ ಗೋಪುರ, ಮರಗಿಡಗಳು, ಪ್ರಾಣಿಗಳ ಕೆತ್ತನೆಯಿದೆ. ಇದು ಸಾಕಷ್ಟು ಎತ್ತರವೂ ಇದೆ. ʻಗಣೇಶ ಗುಂಪʼ, ಇದು ಇಲ್ಲಿರುವ ಮತ್ತೊಂದು ಆಕರ್ಷಕ ಗುಹೆ. ಗುಹೆಯ ಹಿಂಭಾಗದ ಗೋಡೆಯ ಮೇಲೆ ಗಣೇಶನ ಕೆತ್ತನೆಯಿದೆ. ಹಾರವನ್ನು ಸೊಂಡಿಲಲ್ಲಿ ಹಿಡಿದಿರುವ ಆನೆ ಮತ್ತು ದ್ವಾರಪಾಲಕನ ಮೂರ್ತಿಗಳಿವೆ.
ಉದಯಗಿರಿ ಗುಹೆ
ಇಲ್ಲಿರುವ ಗುಹೆಗಳು ಅಡ್ಡಡ್ಡಕ್ಕೆ ಹರಡಿಕೊಂಡಿದ್ದು ಹೆಚ್ಚಿನವು ಒಂದಕ್ಕೊಂದು ಜೋಡಿಸಿಕೊಂಡಿವೆ. ಪ್ರತಿಯೊಂದು ಗುಹೆಗೂ ಸಂಖ್ಯೆ ಮತ್ತು ಹೆಸರಿದೆ, ʻಛೋಟಾ ಹಾತಿ ಗುಂಪʼ, ʻಹಾತಿ ಗುಂಪʼ, ʻಅಲಕಪುರಿ ಗುಂಪʼ, ʻಜಯ, ವಿಜಯ ಗುಂಪʼ, ʻಟಕುರಾನಿ ಗುಂಪʼ, ʻಏಕಾದಶಿ ಗುಂಪʼ, ʻಸರ್ಪ ಗುಂಪʼ ಮುಂತಾದವು. ಸ್ಥಳೀಯ ಭಾಷೆಯಲ್ಲಿರುವ ಈ ಹೆಸರುಗಳನ್ನು ಇತ್ತೀಚೆಗೆ ಕೊಟ್ಟಿರಬಹುದೇನೋ. ಇಲ್ಲಿ ಗುಂಪ ಎಂದರೆ ಗುಹೆ ಎಂದರ್ಥ. ಕೆಲವೊಂದು ಗುಹೆಯ ಹೊರಗೆ ಹೆಸರನ್ನು ಸೂಚಿಸುವ ಫಲಕಗಳನ್ನೂ ಕಾಣಬಹುದು. ಗುಹೆಗಳು ಒಂದೇ ಆಕಾರದಲ್ಲಿಲ್ಲ. ಇಲ್ಲಿರುವ ಕೆತ್ತನೆಗಳೂ, ಮೂರ್ತಿಗಳೂ ಬೇರೆ, ಬೇರೆ ರೀತಿಯಲ್ಲಿವೆ. ಗುಹೆಯೊಂದರ ಮುಂಭಾಗದಲ್ಲಿಆರು ಚಿಕ್ಕ ಆನೆಗಳ ಮೂರ್ತಿ ಮತ್ತು ಕಾವಲುಗಾರನ ಮೂರ್ತಿಯಿದೆ. ಮತ್ತೊಂದು ಗುಹೆಯ ಮುಂಭಾಗದಲ್ಲಿ ತನ್ನ ಆಹಾರವನ್ನು ಬಾಯಲ್ಲಿ ಕಚ್ಚಿಕೊಂಡಿರುವ ಸಿಂಹದ ಮೂರ್ತಿಯಿದೆ.
ಅಗಲವಾದ ರಾಂಪ್ ಮತ್ತು ಮೆಟ್ಟಿಲುಗಳಿದ್ದು ಗುಹೆಯನ್ನು ಸುಲಭದಲ್ಲಿ ತಲುಪಬಹುದು. ಬೆಟ್ಟದ ತುದಿ ತಲುಪಿದಾಗ ಸುತ್ತಮುತ್ತಲಿರುವ ಹಳ್ಳಿಗಳು, ಮರ-ಗಿಡಗಳಿರುವ ಸುಂದರ ದೃಶ್ಯ ನಮ್ಮದಾಗುತ್ತದೆ. ಉದಯಗಿರಿ ಗುಹೆಗಳು ಹೆಚ್ಚು ಸುಂದರ, ಸ್ವಚ್ಛ ಮತ್ತು ಮನಸೆಳೆಯುತ್ತದೆ.
ಖಂಡಗಿರಿಯಲ್ಲಿವೆ 15 ಗುಹೆಗಳು, ʻತೋತ್ವ ಗುಂಪʼ, ʻಅನಂತ ಗುಂಪʼ, ʻಖಂಡಗಿರಿ ಗುಂಪʼ, ʻನವಮುನಿ ಗುಂಪʼ, ʻಬಾರಾಭುಜಿ ಗುಂಪʼ, ʻತ್ರುಶುಲಾ ಗುಂಪʼ, ʻಅಂಬಿಕಾ ಗುಂಪʼ ಮುಂತಾದವು. ಎಲ್ಲವೂ ಸ್ಥಳೀಯ ಭಾಷೆಯಲ್ಲಿರುವ ಹೆಸರುಗಳು.
ಬೆಟ್ಟವೇರುತ್ತಿದ್ದಂತೆ ಮೊದಲಿಗೆ ಸಿಗುವ ಗುಹೆಯೇ ʻತೋತ್ವ ಗುಂಪʼ. ಎದುರಿನಲ್ಲಿರುವ ಕಮಾನಿನಲ್ಲಿ ಎರಡು ಗಿಳಿಗಳ ಕೆತ್ತನೆಯಿದೆ. ಗುಹೆಯ ಎರಡೂ ಕಡೆ ದ್ವಾರಪಾಲಕರು, ಸಿಂಹ ಮತ್ತು ಎತ್ತಿನ ಚಿತ್ರಣವಿದೆ. ಇಲ್ಲಿನ ಕೆಲವೊಂದು ಗುಹೆಯ ಗೋಡೆಗಳಲ್ಲಿ ಜೈನ ತೀರ್ಥಂಕರರ ಮೂರ್ತಿಗಳಿವೆ. ಮತ್ತೊಂದು ಗುಹೆಯ ಹೊರಗಡೆ ಎರಡು ಹಾವುಗಳು, ಆಟಗಾರ, ಹೆಂಗಸಿನ ಕೆತ್ತನೆಗಳಿವೆ.
ಖಂಡಗಿರಿ ಬೆಟ್ಟದ ಮೇಲೆ ಜೈನ ಮಂದಿರವೂ ಇದೆ. ನಾವು ಇಲ್ಲಿಗೆ ಭೇಟಿ ಕೊಟ್ಟಾಗ ಉತ್ಸವ ನಡೆಯುತ್ತಿದ್ದು ಹೆಚ್ಚಿನ ಗುಹೆಗಳಲ್ಲಿ ತಾಂತ್ರಿಕರು ಕುಳಿತಿದ್ದರು. ಅಲ್ಲಲ್ಲಿ ಬಳೆ, ಸರ ಮಾರಾಟ ಮಾಡುವವರಿದ್ದರು. ಹಾಗೆಯೇ ಹೋಮ, ಹವನಗಳೂ ಅಲ್ಲಲ್ಲಿ ನಡೆಯುತ್ತಿದ್ದವು. ಹಾಗಾಗಿ ಖಂಡಗಿರಿ ಬೆಟ್ಟದ ಎಲ್ಲಾ ಗುಹೆಗಳನ್ನು ಸಮೀಪದಿಂದ ನೋಡಲಾಗಲಿಲ್ಲ. ಇಲ್ಲಿ ಮೇಲೆ ಹತ್ತಿ ಹೋಗಲು ಸರಿಯಾದ ಮೆಟ್ಟಿಲುಗಳೂ ಇಲ್ಲ.
ಕೆಲವೊಂದು ಗುಹೆಯ ಮೇಲೆ ಶಾಸನಗಳು ಮತ್ತು ಬರಹಗಳು ಕಂಡು ಬಂದವು. ಬರಹಗಳೆಲ್ಲವೂ ರಾಜ ಕರವೇಲನ ಕಾಲದ್ದು ಹಾಗೂ ಅವನಿಗೆ ಸಂಬಂಧಿಸಿದ್ದೇ. ಇಲ್ಲಿನ ಬರಹವೊಂದು ರಾಜ ಕರವೇಲ ಮತ್ತು ಅವನ ಎರಡನೆಯ ಹೆಂಡತಿಯ ಮೇಲಿರುವ ಪ್ರೀತಿಯ ಬಗ್ಗೆ ಇದೆಯಂತೆ. ಮತ್ತೊಂದು ಅಲೆಕ್ಸಾಂಡರ್ ದಿ ಗ್ರೇಟ್‌ನೊಂದಿಗಿರುವ ಸಂಭಾಷಣೆಯಂತೆ. ಇಂತಹ ಬರವಣಿಗೆಗಳು, ಶಾಸನಗಳು ಇತಿಹಾಸಕ್ಕೆ ಸಾಕ್ಷಿಯಾಗುತ್ತವೆ. ಇಲ್ಲಿ ಬರೆದು ದಾಖಲಾಗಿರುವ ಘಟನೆಗಳು ಕಾಲಾನುಕ್ರಮವಾಗಿವೆ. ಹಾಗೆಯೇ ಒಡಿಶಾದಲ್ಲಿ ನಡೆದಿರುವ ಅಶೋಕ ಮತ್ತು ಕಳಿಂಗ ಯುದ್ಧದ ದಾಖಲೆಯೂ ಇದೇ ಗುಹೆಯಲ್ಲಿ ಸಿಗುತ್ತದೆ. ಅವು ಬ್ರಾಹ್ಮಿಲಿಪಿಯಲ್ಲಿವೆ.
ಇಲ್ಲಿಗೆ ಭೇಟಿ ಕೊಡಲು ಬೆಳಿಗ್ಗೆ ಸೂಕ್ತ ಸಮಯ. ಮಧ್ಯಾಹ್ನದ ಹೊತ್ತು ತಲೆ ಸುಡುವ ಬಿಸಿಲು ಮತ್ತು ಕಾದಿರುವ ಬಂಡೆಗಳು ಹೆಚ್ಚು ಹೊತ್ತು ಅಲ್ಲಿರಲು ಬಿಡಲಾರವು. ಪ್ರವೇಶ ಸಮಯ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ. ಉದಯಗಿರಿ, ಕಂದಗಿರಿಯ ಪ್ರವಾಸ ಕೇವಲ ಮೋಜಿನದ್ದಲ್ಲ, ಇದು ಧಾರ್ಮಿಕ ಮತ್ತು ಅಧ್ಯಯನ ಪ್ರವಾಸವೂ ಹೌದು. ಎಲ್ಲವನ್ನು ತಿಳಿದುಕೊಳ್ಳಲು ಮನಸ್ಸನ್ನು ತೆರೆದಿಡಬೇಕಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.