ADVERTISEMENT

ಬಾನಿಂದ ಲಂಡನ್ ನೋಡಿದಾಗ..

ಪ್ರೊ.ಸಿ.ಸಿದ್ದರಾಜು ಆಲಕೆರೆ
Published 11 ಡಿಸೆಂಬರ್ 2019, 19:30 IST
Last Updated 11 ಡಿಸೆಂಬರ್ 2019, 19:30 IST
ವೀಕ್ಷಣಾ ಚಕ್ರದ ಕ್ಯಾಪ್ಸೂಲ್‌
ವೀಕ್ಷಣಾ ಚಕ್ರದ ಕ್ಯಾಪ್ಸೂಲ್‌   

ಲಂಡನ್‌ ನಗರದ ಥೇಮ್ಸ್ ನದಿಯ ದಕ್ಷಿಣ ದಂಡೆಯ ಸಮೀಪವಿರುವ ‘ಲಂಡನ್ ಐ’ ಎಂಬ ‘ವೀಕ್ಷಣಾ ಚಕ್ರ’ ಪ್ರಮುಖ ಪ್ರವಾಸ ಕೇಂದ್ರವಾಗಿದೆ. ಪ್ರತಿ ವರ್ಷ ಸುಮಾರು ಮೂರು ಮುಕ್ಕಾಲು ದಶಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಈ ಚಕ್ರದಲ್ಲಿ ಕುಳಿತು, ಎತ್ತರದಿಂದ ಇಡೀ ಲಂಡನ್ ನಗರವನ್ನೇ ಕಣ್ತುಂಬಿಕೊಳ್ಳುತ್ತಾರೆ.

ಇತ್ತೀಚೆಗೆ ಅಳಿಯ, ಮಗಳು, ಪತ್ನಿ ಸಮೇತ ಲಂಡನ್‍ಗೆ ಹೋಗಿದ್ದಾಗ ಈ ವೀಕ್ಷಣಾ ಚಕ್ರದಲ್ಲಿ ಕುಳಿತು ಎತ್ತರದಿಂದ ಲಂಡನ್‌ ನಗರದ ವಿಹಂಗಮ ನೋಟ ಸವಿಯುವ ಅವಕಾಶ ಒದಗಿಬಂತು.

ಲ್ಯಾಂಬೆತ್‍ನಲ್ಲಿ ಥೇಮ್ಸ್‌ನದಿ ಮೇಲೆ ನಿರ್ಮಿಸಿರುವ ವೆಸ್ಟ್‌ಮಿನಿಸ್ಟರ್ ಸೇತುವೆ ದಾಟಿ ನದಿಯ ದಂಡೆಯಲ್ಲಿರುವ ಹೋಟೆಲ್‌ನಲ್ಲಿ ಬೆಳಗಿನ ಉಪಹಾರ ಮುಗಿಸಿ, ಲಂಡನ್ ಐ ಹತ್ತಿರ ಹೋದೆವು. ಆನ್‍ಲೈನ್‍ನಲ್ಲಿ ಟಿಕೆಟ್ ಬುಕ್ ಮಾಡಿದ್ದರಿಂದ, ಟಿಕೆಟ್‌ಗಾಗಿ ಸರದಿಯಲ್ಲಿ ನಿಲ್ಲದೇ ನೇರವಾಗಿ ‘ಚಕ್ರ’ ಪ್ರವೇಶಿಸಿದೆವು.

ADVERTISEMENT

ಬಾನಿಂದ ನಗರ ವೀಕ್ಷಣೆ

‘ಕೊಕೊ-ಕೋಲಾ ಲಂಡನ್ ಐ’ ಎಂದು ಕರೆಯುವ ಕ್ಯಾಂಟಿಲಿವರ್ಡ್ ವೀಕ್ಷಣಾ ಚಕ್ರ, 443 ಅಡಿ ಎತ್ತರವಿದೆ. 334 ಅಡಿ ವ್ಯಾಸವಿದೆ. ಅದನ್ನು ನೋಡಬೇಕೆಂದರೆ ಕತ್ತು ಮೇಲೆತ್ತಬೇಕು. ಇದರ ವಿನ್ಯಾಸ ತಾಂತ್ರಿಕವಾಗಿ ಒಂದು ಸಾಧನೆಯೇ ಸರಿ. ಆ ಚಕ್ರದಲ್ಲಿ ಪ್ರವಾಸಿಗರಿಗಾಗಿ ಕೋಳಿಮೊಟ್ಟೆಯಾಕಾರದ 32 ಹೈಟೆಕ್‌ ಗಾಜಿನ ಕ್ಯಾಪ್ಸೂಲ್ ಕ್ಯಾಬಿನ್‌ಗಳಿವೆ. ಒಂದೊಂದರಲ್ಲಿ ಗರಿಷ್ಠ 25 ಮಂದಿಗೆ ಕೂರಬಹುದು.

ಈ ವೀಕ್ಷಣಾ ಚಕ್ರ ಒಂದು ಸುತ್ತು ಬರಲು 30 ನಿಮಿಷ ನಿಗದಿಪಡಿಸಲಾಗಿದೆ. ಈ ಚಕ್ರ ನಿಧಾನವಾಗಿ ತಿರುಗುವುದರಿಂದ ಕ್ಯಾಪ್ಸೂಲ್‍ನಲ್ಲಿ ಕುಳಿತ ನಾವು ಅದು ಮೇಲಕ್ಕೆ ಹೋಗಿ ಕೆಳಗೆ ಇಳಿದಿದ್ದು ಗೊತ್ತಾಗಲಿಲ್ಲ. ಅದರೊಳಗೆ ಕೂರುವುದು ಅಷ್ಟೇ ಅಲ್ಲ ಅಲ್ಲಿನ ವೀಕ್ಷಣಾ ಗಾಜಿನ ಪೆಟ್ಟಿಯೊಳಗೆ ತಿರುಗಾಡಿಕೊಂಡು ಎಲ್ಲವನ್ನೂ ವೀಕ್ಷಿಸಬಹುದು. ಚಕ್ರ ಎತ್ತರಕ್ಕೆ ಹೋದಾಗ ಥೇಮ್ಸ್ ನದಿಯ ಎರಡು ಕಡೆ ಹತ್ತಾರು ಕಿಲೋಮೀಟರ್ ಚಾಚಿಕೊಂಡಿರುವ ಲಂಡನ್ ನಗರ ಕಾಣುತ್ತದೆ. ಆ ನಗರದ ಸೌಂದರ್ಯವನ್ನು ಕಂಡು ಬೆರಗಾದೆವು. ಮೇಲ್ಭಾಗದಿಂದ ನಗರವನ್ನು ನೋಡುವಾಗ ವಿಮಾನದಲ್ಲಿ ಕುಳಿತು ನಗರ ದರ್ಶನ ಮಾಡಿದಂತಹ ಅನುಭವವಾಯಿತು. ಈ ವೀಕ್ಷಣಾ ಗೋಪುರದಲ್ಲಿ ಒಂದು ಸುತ್ತು ಬರುವುದು ಪ್ರವಾಸಿಗರಿಗೆ ಹೊಸ ಅನುಭವ ನೀಡುತ್ತದೆ.

ಸುರಂಗದೊಳಗೆ ಅಕ್ವೇರಿಯಂ..

ಲಂಡನ್‌ ಐ ನೋಡಿಕೊಂಡು, ಸನಿಹದಲ್ಲೇ ಇದ್ದ ಲಂಡನ್ ಅಕ್ವೇರಿಯಂಗೆ ಭೇಟಿ ನೀಡಿದೆವು. ಇದನ್ನು ‘ಸೀ ಲೈಫ್ ಲಂಡನ್ ಅಕ್ವೇರಿಯಂ’ ಎಂದು ಕರೆಯುತ್ತಾರೆ. ಈ ಅಕ್ವೇರಿಯಂನಲ್ಲಿ ನಮ್ಮ ಜೀವನದಲ್ಲಿ ನೋಡಿರದಂತಹ ಜಲಚರ ಜೀವಿಗಳನ್ನು ಕಂಡೆವು.

ನೆಲಮಹಡಿಯಲ್ಲಿರುವ ಲಂಡನ್ ಅಕ್ವೇರಿಯಂ ಅನ್ನು 1997ರಲ್ಲಿ ನಿರ್ಮಿಸಲಾಗಿದೆ. ಇಪ್ಪತ್ತು ಲಕ್ಷ ಲೀಟರ್ ನೀರನ್ನು ಬಳಸಿಕೊಂಡಿರುವ ಈ ಅಕ್ವೇರಿಯಂಗೆ ಒಳಹೋಗಲು ಸುರಂಗ ಮಾರ್ಗದಂತೆ ದಾರಿ ಇದೆ. ಆ ಮಾರ್ಗದಲ್ಲಿ ಹೋಗುವಾಗ ವಿವಿಧ ರೀತಿಯ ಜಲಚರ ಪ್ರಾಣಿಗಳನ್ನು ನೋಡಿದೆವು. ಇಲ್ಲಿರುವ ಐನೂರಕ್ಕೂ ಹೆಚ್ಚು ಸಮುದ್ರ ಜೀವಿಗಳು ಎಲ್ಲ ವಯಸ್ಸಿನ ಪ್ರವಾಸಿಗರನ್ನು ಆಕರ್ಷಿಸುತ್ತವೆ.

ಆ ಸುರಂಗದಲ್ಲಿ ನಡೆದು ಹೋಗುತ್ತಿದ್ದಾಗ, ಸಮುದ್ರದ ಆಳಕ್ಕೆ ಹೋದಂತಹ ಅನುಭವವಾಯಿತು. ಸಮುದ್ರದಲ್ಲಿ ಜೀವಿಸುವಂತಹ ಜೆಲ್ಲಿ ಮೀನು, ಶಾರ್ಕ್, ಆಮೆ, ಏಡಿ ಸೇರಿದಂತೆ ವಿವಿಧ ಜಾತಿಯ ಚಿಕ್ಕ ಹಾಗೂ ದೊಡ್ಡ ಜೀವಿಗಳನ್ನು ಕಂಡು ಆಶ್ಚರ್ಯಪಟ್ಟೆವು. ಕ್ಲೌನ್‍ಫಿಶ್, ನಕ್ಷತ್ರ ಮೀನು, ಸಮುದ್ರ ಕುದುರೆ, ಪಾಶ್ಚಾತ್ಯ ಮೊಸಳೆ, ವಿಚಿತ್ರ ಜೀವಿಗಳು ಭಾಗಶಃ ಅಟ್ಲಾಂಟಿಕ ಸಾಗರದಲ್ಲಿ ದೊರೆತಿರುವ ಹಲವಾರು ಸಮುದ್ರ ಜೀವಿಗಳನ್ನು ಅಲ್ಲಿ ನೋಡಿ ಕಣ್ತುಂಬಿಸಿಕೊಂಡೆವು. ಇಲ್ಲಿಗೂ ಪ್ರತಿವರ್ಷ ಸುಮಾರು ಒಂದು ದಶಲಕ್ಷ ಪ್ರವಾಸಿಗರು ಭೇಟಿ ನೀಡುತ್ತಾರೆ.

ಲಂಡನ್‌ನಲ್ಲಿ ಕಂಡ ‘ಗಾಂಧಿ’

ಲಂಡನ್‌ ಪ್ರವಾಸಿ ತಾಣಗಳನ್ನು ಸುತ್ತಾಡುತ್ತಾ, ಸಂಸತ್ ಚೌಕದ ಸಮೀಪ ಬಂದಾಗ ಅಲ್ಲಿ ಗಾಂಧಿ ಪ್ರತಿಮೆ ಕಂಡಿತು. ಲಂಡನ್‍ ಶಿಲ್ಪಿ ಫಿಲಿಪ್ ಜಾಕ್ಸನ್ ಈ ಪುತ್ಥಳಿ ನಿರ್ಮಾಣ ಮಾಡಿದ್ದಾರೆ. ಒಂಬತ್ತು ಅಡಿ ಎತ್ತರದ ಕಂಚಿನ ಪ್ರತಿಮೆ ಅದು. ಮಾ. 14, 2015ರಂದು ಅಂದಿನ ಭಾರತೀಯ ಹಣಕಾಸು ಸಚಿವರಾಗಿದ್ದ ಅರುಣ್ ಜೇಟ್ಲಿ ಅವರು ಅನಾವರಣ ಮಾಡಿದ್ದರು. ಗಾಂಧೀಜಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ ಶತಮಾನೋತ್ಸವ ವರ್ಷಾಚರಣೆ ನೆನಪಿಗಾಗಿ ಈ ಪ್ರತಿಮೆ ಸ್ಥಾಪಿಸಲಾಗಿದೆ. ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ಶಾಂತಿದೂತ ಮಹಾತ್ಮಾ ಗಾಂಧೀಜಿಯವರ ಪ್ರತಿಮೆಯನ್ನು ಲಂಡನ್‍ನಲ್ಲಿ ನೋಡಿ ಪುಳಕಿತನಾದೆ.

ಚಿತ್ರಗಳು: ಲೇಖಕರವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.