ಒಡಿಶಾ ರಾಜ್ಯದಲ್ಲಿರುವ ಪ್ರವಾಸಿ ತಾಣಗಳು ಒಂದಕ್ಕಿಂತ ಒಂದು ಆಕರ್ಷಕವಾಗಿದ್ದು ಅವು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತವೆ. ಅದರಲ್ಲೂ ಹೆಚ್ಚಿಗೆ ಪ್ರವಾಸಿಗರು ಭೇಟಿ ಕೊಡುವ ತಾಣವೇ ಚಿಲಿಕಾ ಸರೋವರ. ಇಲ್ಲಿರುವ ವಿಶೇಷ ರೀತಿಯ ಡಾಲ್ಫಿನ್‌ಗಳನ್ನು ನೋಡಲೆಂದೇ ದಿನವೂ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಮುಕ್ಕಾಲು ದಿನ ಚಿಲಿಕಾ ಸರೋವರದಲ್ಲೇ ಕಳೆದುಹೋಗುತ್ತದೆ.
ಪುರಿಯಿಂದ ಸುಮಾರು ಒಂದೂವರೆ ತಾಸು ಪ್ರಯಾಣ ಮಾಡಿ 50 ಕಿಲೋಮೀಟರ್ ದೂರದಲ್ಲಿರುವ ಸತ್ಪಾದ ಎಂಬ ಊರನ್ನು ತಲುಪಿದರೆ, ವಿಶ್ವ ಪಾರಂಪರಿಕ ತಾಣದ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಚಿಲಿಕಾ ಸರೋವರದ ದಡದಲ್ಲಿ ಇರುತ್ತೇವೆ. ಚಿಲಿಕಾ ಸರೋವರ ಏಷ್ಯಾದ ಅತಿ ದೊಡ್ಡ ಉಪ್ಪು ನೀರಿನ ಸರೋವರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪೇರಳೆ ಹಣ್ಣಿನ ಆಕಾರದಲ್ಲಿರುವ ಈ ಸರೋವರ 64 ಕಿಲೋಮೀಟರ್ ಉದ್ದ ಹಾಗೂ 5 ರಿಂದ 18 ಕಿಲೋಮೀಟರ್ ಅಗಲ ಹಾಗೂ ಸುಮಾರು 18 ಅಡಿ ಆಳವಿದ್ದು, ಪ್ರವಾಸಿಗರ ನೆಚ್ಚಿನ ತಾಣವಾಗಿದೆ.
ಈ ಸರೋವರದಲ್ಲಿ ಹಲವಾರು ದ್ವೀಪ ಪ್ರದೇಶಗಳಿದ್ದು, ಚಳಿಗಾಲದಲ್ಲಿ ವಿವಿಧ ಪ್ರಭೇದದ ಪಕ್ಷಿಗಳಿಗೆ ಆಶ್ರಯತಾಣವಾಗಿದೆ. ಈ ಸರೋವರದ ಸುತ್ತಮುತ್ತ ಸುಮಾರು 150 ವಿವಿಧ ರೀತಿಯ ಪಕ್ಷಿಗಳನ್ನು ನೋಡಬಹುದು. ಸರೋವರದ ಸುತ್ತ ಸುಮಾರು 800 ಪ್ರಭೇದದ ಜೀವಸಂಕುಲಗಳು ವಾಸವಾಗಿವೆ. ದಯಾ ಹಾಗೂ ಭಾರ್ಗವಿ ನದಿಗಳು ಬಂಗಾಳ ಕೊಲ್ಲಿಯನ್ನು ಸೇರುವ ಮುಂಚೆ ಮಳೆಗಾಲದಲ್ಲಿ ಈ ಸರೋವರಕ್ಕೆ ನೀರುಣಿಸುತ್ತವೆ. ಸತ್ಪಾದ ಊರನ್ನು ಪ್ರವೇಶಿಸುತ್ತಿದ್ದಂತೆ ಹಲವು ರೀತಿಯ ಬಾತುಕೋಳಿಗಳು ಸರೋವರಕ್ಕೆ ಸ್ವಾಗತಿಸುತ್ತವೆ. ಪ್ರವಾಸಿಗರು ಪಕ್ಷಿ ಪ್ರಿಯರಾಗಿದ್ದರೆ ಇದು ಪಕ್ಷಿ ವೀಕ್ಷಣೆಗೆ ಹೇಳಿಮಾಡಿಸಿದ ತಾಣ. ಹಲವು ಹಕ್ಕಿಗಳ ಕಲರವ ಸಮ್ಮೋಹನಗೊಳಿಸುತ್ತದೆ. ಈ ಸರೋವರದಲ್ಲಿ ಸುಮಾರು 150 ಪ್ರಭೇದದ ಪಕ್ಷಿಗಳು, 87 ಪ್ರಭೇದದ ಮೀನುಗಳು, 9 ರೀತಿಯ ಏಡಿಗಳು, 53 ಪ್ರಭೇದದ ಪಾಚಿ ಸಸ್ಯಗಳು ಇವೆ.
ಡಾಲ್ಫಿನ್‌ಗಳು ಪ್ರಮುಖ ಆಕರ್ಷಣೆ
ಈ ಸರೋವರದ ಇನ್ನೊಂದು ಪ್ರಮುಖ ಆಕರ್ಷಣೆ ಇಲ್ಲಿರುವ ಡಾಲ್ಫಿನ್‌ಗಳು. ಈ ಡಾಲ್ಫಿನ್‌ಗಳನ್ನು ನೋಡಲೆಂದೇ ಇಲ್ಲಿಗೆ ಪ್ರವಾಸಿಗರ ದಂಡು ಬರುತ್ತದೆ. ಈ ಡಾಲ್ಫಿನ್‌ಗಳನ್ನು ನೋಡಲು ಬೋಟ್ ಬಾಡಿಗೆಗೆ ಪಡೆದು ಸರೋವರದಲ್ಲಿ ಹಲವಾರು ಕಿಲೋಮೀಟರ್ ಸಾಗಬೇಕು. ಚಿಲಿಕಾ ಸರೋವರದಲ್ಲಿರುವ ‘ಇರಾವಾಡಿ’ ಎಂಬ ಪ್ರಭೇದದ ಮೊಂಡು ಮೂತಿಯ ವಿಶೇಷ ಡಾಲ್ಫಿನ್‌ಗಳನ್ನು ನೋಡಲೆಂದೇ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇರೆ ಡಾಲ್ಫಿನ್‌ಗಳಿಗೆ ಹೋಲಿಸಿದರೆ ಇಲ್ಲಿರುವ ಡಾಲ್ಫಿನ್‌ಗಳ ಬಣ್ಣ ಹಾಗೂ ಆಕಾರ ಬೇರೆಯಾಗಿದೆ. ಬೂದು ತಿಳಿ ನೀಲಿ ಬಣ್ಣದಿಂದ ಕೂಡಿರುವ ಈ ಡಾಲ್ಫಿನ್‌ಗಳು 7-8 ಅಡಿ ಉದ್ದವಿದ್ದು ಪೂರ್ತಿ ಬೆಳೆದಾಗ ಸುಮಾರು 200 ಕೆ.ಜಿ.ಯಷ್ಟು ತೂಗುತ್ತವೆ. ಬೇರೆ ಡಾಲ್ಫಿನ್‌ಗಳ ಮೂತಿ ಉದ್ದವಾಗಿದ್ದರೆ, ಇವುಗಳದ್ದು ಮೊಂಡಾಗಿದ್ದು ನೋಡಲು ವಿಶೇಷವಾಗಿರುತ್ತವೆ.
ಗುಂಪು ಗುಂಪಾಗಿ ವಾಸಿಸುವ ಇವು ನಾಚಿಕೆ ಸ್ವಭಾವದ್ದಾಗಿವೆ. ಆಗಾಗ ನೀರಿನಿಂದ ಮೇಲೆ ಬಂದು ಮುಳುಗು ಹಾಕುತ್ತಿರುತ್ತವೆ. ಇತ್ತೀಚೆಗೆ ಇಲ್ಲಿ ಪ್ರವಾಸಿಗರು ಅಧಿಕವಾಗಿರುವ ಕಾರಣ ಇಲ್ಲಿಗೆ ಬರುವ ದೋಣಿಗಳ ಸಂಖ್ಯೆಯೂ ಹೆಚ್ಚಾಗಿದೆ. ಮೋಟರ್ ಬೋಟ್ ಮಾಡುವ ಶಬ್ದದಿಂದ ಇವುಗಳು ಕಣ್ಣಿಗೆ ಕಾಣುವುದೇ ಅಪರೂಪ. ಬೋಟ್ ಓಡಿಸುವವರಿಗೆ ಇವು ಎಲ್ಲಿ ಹೆಚ್ಚಾಗಿ ಕಾಣುತ್ತವೆ ಎಂದು ಗೊತ್ತಿರುತ್ತದೆ. ಹಾಗಾಗಿ ಅಲ್ಲಿ ಎಲ್ಲಾ ಬೋಟ್‌ಗಳು ತಲುಪಿ ಶಬ್ದ ಮಾಡದೇ ಸ್ವಲ್ಪ ಹೊತ್ತು ನಿಲ್ಲುತ್ತವೆ. ಆಗ ಗುಂಪು ಗುಂಪಾಗಿ ನೀರಿನಿಂದ ಮೇಲೆದ್ದು ಜಿಗಿಯುವ ಡಾಲ್ಫಿನ್‌ಗಳನ್ನು ಕಣ್ತುಂಬಿಕೊಳ್ಳಬಹುದು.
ಬೋಟ್ ಪ್ರಯಾಣ ಮಾಡುವಾಗ ಸರೋವರದಲ್ಲಿರುವ ಹಲವಾರು ದ್ವೀಪಗಳಿಗೂ ಕರೆದುಕೊಂಡು ಹೋಗುತ್ತಾರೆ.ಇಲ್ಲಿ ಕೆಂಪು ಬಣ್ಣದ ಏಡಿಗಳ ದರ್ಶನವೂ ಆಗುತ್ತದೆ. ಕೆಲವು ದ್ವೀಪಗಳಲ್ಲಿ ಇರುವ ಸ್ವಚ್ಛ ಸುಂದರ ಸರೋವರದ ತೀರದಲ್ಲಿ ಕುಳಿತು ವಿರಮಿಸಬಹುದು. ಬೋಟ್ ಪ್ರಯಾಣ ಮಾಡುವಾಗ ಹಲವಾರು ರೀತಿಯ ಹಕ್ಕಿಗಳು ಬೋಟ್‌ಗಳನ್ನು ಹಿಂಬಾಲಿಸುವುದು, ಅವುಗಳ ಮೇಲೆ ಕೂರುವುದು ಮಾಡುತ್ತವೆ. ಪ್ರವಾಸಿಗರು ಆಹಾರ ಕೊಟ್ಟು ಅಭ್ಯಾಸವಾಗಿರುವುದರಿಂದ ಅವು ಹೀಗೆ ಮಾಡುತ್ತವೆ.
ಬೋಟ್ ಪ್ರಯಾಣದಲ್ಲಿ ಹಲವು ರೀತಿಯ ಪಕ್ಷಿಗಳ ದರ್ಶನವೂ ಆಯಿತು. ಈ ಚಿಲಿಕಾ ಸರೋವರವನ್ನು ಸುತ್ತಲು ಏನಿಲ್ಲವೆಂದರೂ ಮೂರು ಗಂಟೆಗಳು ಬೇಕು. ಇಲ್ಲಿರುವ ನಲ್‌ಬಾನ ಎಂಬ ದ್ವೀಪದಲ್ಲಿ ಪಕ್ಷಿಧಾಮವಿದ್ದು ಸಾವಿರಾರು ಪಕ್ಷಿಗಳು ಬೇರೆ ಬೇರೆ ದೇಶಗಳಿಂದ ಇಲ್ಲಿಗೆ ವಲಸೆ ಬರುತ್ತವೆ. ನವೆಂಬರ್‌ನಿಂದ ಫೆಬ್ರುವರಿಯವರೆಗೆ ಇಲ್ಲಿ ಪಕ್ಷಿಗಳನ್ನು ನೋಡಬಹುದು. ಇಲ್ಲಿರುವ ಮೀನುಗಾರರು ಕಣ್ಣೆದುರಿಗೆ ಕಪ್ಪೆ ಚಿಪ್ಪನ್ನು ಒಡೆದು ಒಳಗಿರುವ ಮುತ್ತನ್ನು ತೆಗೆದು ತೋರಿಸುತ್ತಾರೆ. ಒಟ್ಟಿನಲ್ಲಿ ಚಿಲಿಕಾ ಸರೋವರದ ಸುತ್ತಮುತ್ತಲ ಪರಿಸರ ಕಣ್ಮನ ಸೆಳೆಯುತ್ತದೆಯಲ್ಲದೇ, ಮನಸ್ಸಿಗೆ ಮುದ ನೀಡುತ್ತದೆ. ಚಿಲಿಕಾ ಸರೋವರ ಪರಿಸರ ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ತಾಣವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.