ADVERTISEMENT

ಕ್ಲಿಪ್ ಆಫ್ ಮೊಹೆರ್

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2019, 19:30 IST
Last Updated 7 ಆಗಸ್ಟ್ 2019, 19:30 IST
 ಚಿತ್ರಗಳು: ಲೇಖಕರವು
ಚಿತ್ರಗಳು: ಲೇಖಕರವು   

ಐರ್ಲೆಂಡ್‍ನ ‘ಕ್ಲಿಪ್ಸ್ ಆಫ್ ಮೊಹೆರ್’ ಪ್ರದೇಶ ಆಕರ್ಷಣೀಯ ನೈಸರ್ಗಿಕ ಅದ್ಭುತ ತಾಣ. ಇದನ್ನು ಜಗತ್ತಿನ ಪಾರಂಪರಿಕ ತಾಣ (ವರ್ಲ್ಡ್ ಹೆರಿಟೇಜ್ ಸೈಟ್) ಎಂದು ಯುನೆಸ್ಕೊ ಗುರುತಿಸಿದೆ. ಪ್ರತಿ ವರ್ಷ ಒಂದು ದಶಲಕ್ಷ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ.

ಇದು ಐರ್ಲೆಂಡ್ ವಾಯವ್ಯ ಯುರೋಪ್‍ನಲ್ಲಿರುವ ಒಂದು ದ್ವೀಪ. ಇದರ ಪೂರ್ವದ ಅಂಚಿನಲ್ಲಿ ರಾಜಧಾನಿ ಡಬ್ಲಿನ್ ನಗರವಿದೆ. ಮತ್ತೊಂದು ಪ್ರಮುಖ ನಗರ ಗಾಲ್ವೆ ಪಶ್ಚಿಮ ತೀರದ ಅಂಚಿನಲ್ಲಿದೆ. ಇವೆರಡು ನಗರಗಳ ಅಂತರ 187 ಕಿ.ಮೀ. ದೂರ. ಗಾಲ್ವೆಯಿಂದ 76 ಕಿ.ಮೀ. ದೂರದಲ್ಲಿ ಅಟ್ಲಾಂಟಿಕ್ ಸಾಗರದ ಕಡಲ ತೀರವೇ ‘ಕ್ಲಿಪ್ಸ್ ಆಫ್ ಮೊಹೆರ್’.

ಐರ್ಲೆಂಡ್‍ನ ಮಧ್ಯಭಾಗದಲ್ಲಿರುವ ಅಥ್ಲೋನ್ ಪಟ್ಟಣದಲ್ಲಿ ವಾಸವಿರುವ ಮಗಳು, ಅಳಿಯನ ಮನೆಗೆ ಹೋಗಿದ್ದಾಗ ಆ ಅದ್ಭುತ ತಾಣ ನೋಡುವ ಅವಕಾಶ ದೊರಕಿತ್ತು. ಅಥ್ಲೋನ್‍ನಿಂದ ಕ್ಲಿಪ್ಸ್ ಆಫ್ ಮೊಹೆರ್ 138 ಕಿ.ಮೀ. ದೂರದಲ್ಲಿದೆ. ಒಂದು ಭಾನುವಾರ ಮನೆಯಲ್ಲೇ ಬೆಳಗಿನ ಉಪಹಾರ ಮುಗಿಸಿ, ಕಾರಿನಲ್ಲಿ ಕುಟುಂಬ ಸಮೇತ ಮೋಟಾರ್‍ವೇ ಹೆದ್ದಾರಿಯಲ್ಲಿ ಸಾಗಿದೆವು. ಹೆದ್ದಾರಿಯ ಎರಡು ಕಡೆಯ ಭೂಭಾಗ ಹಸಿರುಮಯವಾಗಿರುವುದರಿಂದ ನಮಗೆ ಪ್ರಯಾಣ ಹಿತಕರ ಎನಿಸಿತು. ಗಾಲ್ವೆ ನಗರ ತಲುಪಿದ ನಂತರ ಕಿನ್ವಾರಾ, ಲಿಸ್ಕಾನರ್, ಡೋಲಿನ್ ಗ್ರಾಮಗಳ ಮಾರ್ಗದ ಮೂಲಕ ಕ್ಲಿಪ್ಸ್ ಆಫ್ ಮೊಹೆರ್ ಪ್ರದೇಶ ತಲುಪಿದೆವು.

ADVERTISEMENT

ನಿಲ್ದಾಣದಲ್ಲಿ ಕಾರು ನಿಲ್ಲಿಸಿ ಮೊಹೆರ್ ಕಡೆ ನಡೆದು ಸ್ವಾಗತ ದ್ವಾರದ ಮೂಲಕ ಹಾದು ಹೋಗುವಾಗ ವಿಶಾಲ, ಎತ್ತರ, ಹಸಿರುಮಯವಾದ ಜಾಗ ಕಣ್ಣಿಗೆ ಕಾಣಿಸಿತು. ಮುಂದೆ ಸಾಗಿದಂತೆ ಎತ್ತರ ಪ್ರದೇಶ ಏರಲು ಮೆಟ್ಟಿಲು ನಿರ್ಮಿಸಿದ್ದಾರೆ. ಮೆಟ್ಟಿಲೇರಿ ಹೋಗುತ್ತಿದ್ದಂತೆ ಮೊಹೆರ್ ಪ್ರದೇಶ ಹೊಸ ಲೋಕವೊಂದನ್ನು ತೆರೆದಿಟ್ಟಿತು.

ಕ್ಲಿಪ್ಸ್ ಆಫ್ ಮೊಹೆರ್ ಅಟ್ಲಾಂಟಿಕ್ ಕಡಲ ತೀರದಲ್ಲಿದೆ. ಸುಮಾರು 8 ಕಿ.ಮೀ. ದೂರದ ಈ ಕಡಲ ತೀರ ಸಮುದ್ರ ಮಟ್ಟದಿಂದ ಸುಮಾರು 390 ಅಡಿಯಿಂದ 700 ಅಡಿ ಎತ್ತರದಲ್ಲಿದೆ. ಶಿಲಾ ಪದರಗಳಿಂದ ಆವೃತ್ತವಾಗಿರುವ ಈ ಸ್ಥಳದ ಒಂದು ಕಡೆ ವಿಶಾಲವಾದ ಸಮುದ್ರ, ಮತ್ತೊಂದು ಕಡೆ ಹಸಿರು ಹೊದ್ದುಕೊಂಡಿರುವ ಭೂಪ್ರದೇಶ.. ಎರಡೂ ನೋಡಿ ಆನಂದಿಸಿದೆವು.

ಆ ಸ್ಥಳದಲ್ಲಿದ್ದಾಗ ಹೊಸ ದೃಶ್ಯ ಕಾವ್ಯವೇ ಕಣ್ಮುಂದೆ ತೆರೆದುಕೊಂಡಿತು. ಬಹುಶಃ ಇದೇ ಕಾರಣಕ್ಕಾಗಿಯೇ ಈ ತಾಣ ಐರ್ಲೆಂಡ್‍ನಲ್ಲೇ ಹೆಚ್ಚು ಪ್ರವಾಸಿಗರನ್ನು ತನ್ನತ್ತ ಸೆಳೆದುಕೊಳ್ಳುತ್ತಿದೆ.

ಒಬ್ರಿನ್ ಗೋಪುರ

ಒಬ್ರಿನ್ ಗೋಪುರ 19ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಕಟ್ಟಡ. ಇದನ್ನು ಒಬ್ರೇನ್ ಎಂಬುವವನು ಕಟ್ಟಿಸಿದ್ದರಿಂದ ಅದು ಆತನ ಹೆಸರಿನಿಂದಲೇ ಕರೆಯಲಾಗುತ್ತಿದೆ. ಈ ಗೋಪುರದ ಒಳಗೆ ಸುರುಳಿಯಾಕಾರದ ಮೆಟ್ಟಿಲುಗಳನ್ನು ಏರಿ ಮೇಲ್ಚಾವಣಿಯಲ್ಲಿ ನಿಂತು ಆ ಪ್ರದೇಶವನ್ನು ನೋಡುವವರಿಗೆ ಆ ನೈಸರ್ಗಿಕ ಅದ್ಬುತ ಅರಿವಾಗುತ್ತದೆ. ಈ ಗೋಪುರ ಪ್ರವೇಶಕ್ಕೆ ಹಣ ನೀಡಿ ಹೋಗಬೇಕು.

ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರು ಚಾವಣಿ ಮೇಲ್ಭಾಗದಲ್ಲಿ ನಿಂತು ಕ್ಲಿಪ್ಸ್ ಆಫ್ ಮೊಹೆರ್ ಸ್ಥಳವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಾರೆ. ಈ ಅದ್ಭುತ ನೈಸರ್ಗಿಕ ತಾಣದಲ್ಲಿ ದಿ ಪ್ರಿನ್ಸಸ್ ಬ್ರೈಡ್ ಹಾಗೂ ಹ್ಯಾರಿ ಪಾಟರ್ ಎಂಬ ಚಲನಚಿತ್ರಗಳ ಚಿತ್ರೀಕರಣವೂ ನಡೆದಿದೆ. ಈ ಪ್ರದೇಶ ವನ್ಯಜೀವಿಗಳ ತಾಣವೂ ಆಗಿದೆ. ಇಲ್ಲಿ ಒಂಬತ್ತು ಪ್ರಭೇದಗಳ ಕಡಲ ಹಕ್ಕಿಗಳು, ಪಕ್ಷಿಗಳಿವೆ. ಪ್ರವಾಸಿಗರಿಗಾಗಿ ಗುಹೆಯಂತಹ ರುವ ಉಪಹಾರ ಮಂದಿರ, ಮಾರಾಟ ಮಳಿಗೆಗಳು ಇವೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.