ADVERTISEMENT

ವೈಟ್‌ ಡೆಸರ್ಟ್‌

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 19:30 IST
Last Updated 13 ಫೆಬ್ರುವರಿ 2019, 19:30 IST
ಗುಜರಾತ್‌ನ ಕಛ್‌
ಗುಜರಾತ್‌ನ ಕಛ್‌   

'ಆಪ್ ನೇ ಕಚ್ ನಹಿ ದೇಖಾ ತೋ ಕುಚ್ ನಹಿ ದೇಖಾ ! ಕುಚ್ ದಿನ ತೋ ಗುಜಾರಿಯೇ ಗುಜರಾತ್ ಮೇ’...

ಜಾಹಿರಾತೊಂದರಲ್ಲಿ ಗುಜರಾತ್‌ನ ಕಛ್‌ ಜಿಲ್ಲೆಯ ಸಮುದ್ರ ತೀರದಲ್ಲಿ ಹೆಜ್ಜೆ ಹಾಕುತ್ತಾ ಬಾಲಿವುಡ್‌ ನಟ ಅಮಿತಾಭ್‌ ಬಚ್ಚನ್‌ ಹೇಳುವ ಈ ಡೈಲಾಗ್‌ ಒಮ್ಮೆ ಅಲ್ಲಿಗೆ ಹೋಗಲೇಬೇಕೆಂಬ ಆಸೆ ಹುಟ್ಟಿಸಿತು. ಅಲ್ಲಿಗೆ ಹೋಗಬೇಕೆಂದು ತೀರ್ಮಾನಿಸಿದ ಮೇಲೆ, ಒಂದಷ್ಟು ಆಸಕ್ತರು ಸೇರಿ ಖಾಸಗಿ ಪ್ರವಾಸಿ ಸಂಸ್ಥೆಯಲ್ಲಿ (Travels4u)ಹೆಸರು ನೋಂದಾಯಿಸಿ, ಜನವರಿ18ರಂದು ಭುಜ್‌–ಕಛ್‌ನತ್ತ ಪ್ರಯಾಣ ಬೆಳೆಸಿದೆವು. ಬೆಳಿಗ್ಗೆ ಬೆಂಗಳೂರಿನಿಂದ ಹೊರಟವರು, ಭುಜ್‌ ಮೂಲಕ ಮರುಭೂಮಿ ಪ್ರದೇಶ ತಲುಪುವ ಹೊತ್ತಿಗೆ ಮಧ್ಯಾಹ್ನವಾಗಿತ್ತು.

ಕಛ್‌ ಎಂಬುದು ಜಿಲ್ಲೆ. ಭುಜ್‌ ಜಿಲ್ಲಾ ಕೇಂದ್ರ (ಕೊಡಗು – ಮಡಿಕೇರಿ ಇದ್ದಂತೆ). ಮರುಭೂಮಿಯೇ ಪ್ರಧಾನವಾಗಿರುವ ಈ ಪ್ರದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ದೃಷ್ಟಿಯಿಂದ ಗುಜರಾತ್ ಸರ್ಕಾರ ಪ್ರತಿ ವರ್ಷ ಇಲ್ಲಿ ಡಿಸೆಂಬರ್‌ – ಫೆಬ್ರವರಿ ನಡುವೆ 'ರಣ್ ಉತ್ಸವ' ಎಂಬ ಕಾರ್ಯಕ್ರಮವನ್ನು ಆಯೋಜಿಸುತ್ತದೆ. ಗುಜರಾತಿ ಭಾಷೆಯಲ್ಲಿ ‘ರಣ್‌’ ಎಂದರೆ ಮರುಭೂಮಿ. ಈ ಬಾರಿ ಫೆಬ್ರುವರಿ 20ರವರೆಗೂ ‘ರಣ್‌ ಉತ್ಸವ್‌’ ಆಯೋಜಿಸಲಾಗಿತ್ತು. ನಮಗೂ ಆ ಉತ್ಸವ್‌ ನೋಡುವ ಭಾಗ್ಯ ಸಿಕ್ಕಿತು. ಅಂದ ಹಾಗೆ, ಈ ಉತ್ಸವ ನಡೆಯುವ ತಾಣ ಭುಜ್‌ನಿಂದ 80 ಕಿ.ಮೀ ದೂರದಲ್ಲಿದೆ.

ADVERTISEMENT

ಭುಜ್‌ ಮೂಲಕ ಮರುಭೂಮಿ ಪ್ರದೇಶ ತಲುಪಿ, ಪ್ರವೇಶದ್ವಾರದಲ್ಲಿ ₹100 ಕೊಟ್ಟು ಟಿಕೆಟ್ ಪಡೆದು, ನಮಗೆ ವಸತಿ ಕಲ್ಪಿಸಲಾಗಿದ್ದ 'ನೊವಾ ಪಾಟ್‌ಘರ್‌ ಟೆಂಟ್' ಗೆ ಬಂದೆವು. ಬಟ್ಟೆಯ ಟೆಂಟ್‌ ಆದರೂ ಅಚ್ಚುಕಟ್ಟಾಗಿದ್ದವು. ಟೆಂಟ್‌ನ ಹೊರಗಡೆ ಅಲಂಕಾರಿಕ ಲಾಟೀನು ತೂಗುಹಾಕಿದ್ದರು. ದೃಢವಾದ ಗೋಡೆ ಇಲ್ಲ ಎನ್ನುವುದನ್ನು ಬಿಟ್ಟರೆ, ಟೆಂಟ್ ನ ಒಳಗಡೆ ಬೆಡ್, ಕಪಾಟು, ಸ್ನಾನದ ಮನೆ ಎಲ್ಲವೂ ಅನುಕೂಲಕರವಾಗಿಯೇ ಇದ್ದವು.

ನಿಗದಿಪಡಿಸಿದ ಟೆಂಟ್‌ನಲ್ಲಿ ಲಗೇಜು ಇರಿಸಿ, ಉಪಾಹಾರ ಸೇವಿಸಿದ ನಂತರ ನಮ್ಮನ್ನು ಸಮೀಪದಲ್ಲಿದ್ದ ದೊರ್ಡೋ ಗ್ರಾಮದ ಸೂರ್ಯಾಸ್ತ ವೀಕ್ಷಣಾ ಸ್ಥಳಕ್ಕೆ ಕರೆದೊಯ್ದರು. ಅದು ನಾವು ಉಳಿದುಕೊಡಿದ್ದ ಸ್ಥಳದಿಂದ 5 ಕಿ.ಮೀ ದೂರದಲ್ಲಿತ್ತು ಆ ಜಾಗ. 'ದೋರ್ಡೋ' ಈ ಭಾಗದ ಕಡಲತೀರ. ಕಛ್‌ ಜಿಲ್ಲೆಯ ಮರುಭೂಮಿ ಪ್ರದೇಶದ ಸ್ವಲ್ಪ ಭಾಗದಲ್ಲಿ ಇಂಥ ಕಡಲ ತೀರವಿದೆ. ಬಿರುಗಾಳಿ ಬೀಸಿದಾಗ ಸಮುದ್ರದ ಅಲೆಗಳು ಇಲ್ಲಿಗೆ ತೆವಳಿಕೊಂಡು ಬಂದು ಇಂಗಿ, ಉಪ್ಪಿನ ಹರಳು ಸೃಷ್ಟಿಯಾಗುತ್ತದೆ. ಅದಕ್ಕೆ ಈ ಸ್ಥಳವನ್ನು ಬಿಳಿ ಮರುಭೂಮಿ(ಸಫಫೇದ್ ರಣ್ ಅಥವಾ ವೈಟ್ ಡೆಸರ್ಟ್‌) ಎಂದೂ ಕರೆಯುತ್ತಾರೆ. ಈ ಜಾಗದಲ್ಲಿ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ಪ್ರವಾಸಿಗರು, ಈ ಗೋಪುರದ ಮೇಲೆ ನಿಂತು ಉಪ್ಪಿನ ಮರುಭೂಮಿಯನ್ನು ನೋಡಬಹುದು.

ಸೂರ್ಯಾಸ್ತದ ವೇಳೆ ಬೆಂಕಿಯ ಚೆಂಡಿನಂತೆ ಹೊಳೆಯುವ ಸೂರ್ಯ ಉಪ್ಪಿನ ನೆಲದ ತುದಿಯಲ್ಲಿ ಮರೆಯಾಗುವ ದೃಶ್ಯ ನೋಡುವುದೇ ಒಂದು ಸೊಗಸು. ಕತ್ತಲಾವರಿಸಿದ ನಂತರ ಹುಣ್ಣಿಮೆ ಚಂದಿರನ ಬೆಳಕಲ್ಲಿ, ಉಪ್ಪಿನ ಮರುಭೂಮಿಯಲ್ಲಿ ಅಡ್ಡಾಡಿದ ಅನುಭವ ಅವಿಸ್ಮರಣೀಯ. ಅಂದ ಹಾಗೆ ಈ ಉಪ್ಪಿನ ಮರುಭೂಮಿ ತಲುಪಲು ಗೇಟ್‌ನಿಂದ 1.5 ಕಿ.ಮೀ ನಡೆಯಬೇಕು. ಅಲ್ಲಿ ಒಂಟೆ ಸವಾರಿ, ಕುದುರೆ ಗಾಡಿಗಳೂ ಇರುತ್ತವೆ. ಬಾಡಿಗೆಗೆ ಕೊಟ್ಟು ಅವುಗಳಲ್ಲಿ ಹೋಗಬಹುದು. ನಾವು ಅಲ್ಲಿಂದ ಹಿಂತಿರುಗಿ ಬರುವಾಗ ಒಂಟೆಗಾಡಿಯಲ್ಲಿ ‘ರಣ್ ಉತ್ಸವ’ ನಡೆಯುವ ಜಾಗಕ್ಕೆ ಬಂದೆವು. ರಸ್ತೆಯ ಇಕ್ಕೆಲದಲ್ಲಿ ಕಛ್ ನ ಕರಕುಶಲ ಅಲಂಕಾರಿಕ ವಸ್ತುಗಳು, ಕಸೂತಿ ಬಟ್ಟೆ ಮಾರಾಟದ ಅಂಗಡಿಗಳಿದ್ದವು. ಅಲ್ಲಲ್ಲಿ ಚಹಾ, ತಿಂಡಿ, ಪಾನೀಯದ ಅಂಗಡಿಗಳೂ ಸಾಲಿನಲ್ಲಿದ್ದವು.

ರಣ್‌ ಉತ್ಸವ್‌ದಲ್ಲಿ ಸಂಗೀತ, ನೃತ್ಯ ಕಾರ್ಯಕ್ರಮಗಳಿರುತ್ತವೆ. ನಾವು ಹೋದಾಗ ವೇದಿಕೆಗಳು ಅಲ್ಲಲ್ಲಿ ಕಂಡುಬಂದುವಾದರೂ, ಬಹುತೇಕ ವೇದಿಕೆಗಳಲ್ಲಿ ಆ ದಿನ ಕಾರ್ಯಕ್ರಮವಿದ್ದಂತಿರಲಿಲ್ಲ. ಅಷ್ಟಿಷ್ಟು ಸುತ್ತಾಡಿ, ಒಂದಿಷ್ಟು ಕನ್ನಡಿಗಳುಳ್ಳ ಕಸೂತಿ ಶಾಲುಗಳನ್ನು ಸ್ಮರಣಿಕೆಗಾಗಿ ಖರೀದಿಸಿ, ಸ್ಥಳೀಯ ಚಾಟ್ಸ್ ಸೇವಿಸಿ, ನಮ್ಮ ಟೆಂಟ್ ಗೆ ಹಿಂತಿರುಗಿದೆವು. ರಾತ್ರಿಯೂಟದ ನಂತರ ಟೆಂಟ್‌ ಮಧ್ಯೆ ಇದ್ದ ವಿಶಾಲವಾದ ಅಂಗಳದಲ್ಲಿ 'ಕ್ಯಾಂಪ್ ಫೈರ್ ' ಆರಂಭವಾಯಿತು. ಕಚ್ಚೆ ಧರಿಸಿ, ತಲೆಗೆ ಪೇಟಾ ಸುತ್ತಿದ್ದ ಸ್ಥಳೀಯ ಕಲಾವಿದರು ಸುಮಾರು ಒಂದು ಗಂಟೆಯ ಕಾಲ ಹಾಡು ಹೇಳಿ ರಂಜಿಸಿದರು. ನಮಗೆ ಮರುದಿನ ಬೇಗನೇ ಹೊರಡಲಿದ್ದುದರಿಂದ ಅನಿವಾರ್ಯವಾಗಿ 'ಕ್ಯಾಂಪ್ ಫೈರ್' ಜಾಗದಿಂದ ವಿಶ್ರಾಂತಿಗಾಗಿ ನಿರ್ಗಮಿಸಿದೆವು.

'ರಣ್ ಉತ್ಸವ' ಕ್ಕೆ ಬರುವ ಪ್ರವಾಸಿಗರು ಅಪರೂಪವೆನಿಸುವ ಉಪ್ಪು ಮರುಭೂಮಿಯಲ್ಲಿ ನಡೆದಾಡಿ , ಬೆಳದಿಂಗಳನ್ನು ಕಣ್ತುಂಬಿಸಿ, ಒಂಟೆ ಸವಾರಿ ಮಾಡಿ, ಗುಜರಾತಿನ ಸ್ಥಳೀಯ ಊಟೋಪಚಾರ ಸವಿದು, ಕಛ್ ಉಡುಗೆ ಧರಿಸಿ, ಆಸಕ್ತಿ ಇದ್ದರೆ ಸಾಹಸಮಯ ಕ್ರೀಡೆಗಳಲ್ಲಿಯೂ ಭಾಗವಹಿಸಿ, ಟೆಂಟ್ ನಲ್ಲಿ ನಿದ್ರಿಸುವ ವಿಶಿಷ್ಟ ಅನುಭವಗಳನ್ನು ಪಡೆಯಬಹುದು.

ಏನೇನು ನೋಡಬಹುದು :

ಭುಜ್‌ ನಗರದಲ್ಲಿ ತುಂಬಾ ಅಪರೂಪದ ಮ್ಯೂಸಿಯಂ ಇದೆ. ಭೂಕಂಪ ಸಂಭವಿಸಿದ ಜಾಗಗಳ ಚಿತ್ರಗಳಿವೆ. ಹರಪ್ಪ ಕಾಲದ ವಸ್ತುಗಳನ್ನು ನೋಡಬಹುದು. ಜತೆಗೆ ಸುಂದರವಾದ ಸ್ವಾಮಿ ನಾರಾಯಣ ಮಂದಿರವಿದೆ. ಪ್ರಾಗ್ ಮಹಲ್, ಕೋಟೇಶ್ವರ ಮಂದಿರ, ಮಾಂಡ್ವಿ ಬೀಚ್ ಗೆ ಭೇಟಿ ನೀಡಬಹುದು.

ಹೋಗುವುದು ಹೇಗೆ?

ಬೆಂಗಳೂರು – ಭುಜ್‌ ನಡುವೆ ವಿಮಾನ ಸೌಕರ್ಯ ಕಡಿಮೆ. ಬೆಂಗಳೂರು–ಮುಂಬೈ– ಭುಜ್‌ನಡುವೆ ಒಂದೇ ಒಂದು ಜೆಟ್‌ ಏರ್‌ವೇಸ್‌ ವಿಮಾನ ಹಾರಾಟವಿದೆ. ಅಹಮದಾಬಾದ್‌ವರೆಗೆ ವಿಮಾನದಲ್ಲಿ ಹೋಗಿ, ಅಲ್ಲಿಂದ ರೈಲಿನ ಮೂಲಕ ಭುಜ್‌ ತಲುಪಬಹುದು.

ರೈಲು ಸೌಲಭ್ಯ ಉತ್ತಮವಾಗಿದೆ. ಬೆಂಗಳೂರು ಸೇರಿದಂತೆ ಎಲ್ಲ ನಗರಗಳಿಂದಲೂ ರೈಲಿನ ಮೂಲಕ ಭುಜ್‌ ತಲುಪಬಹುದು. ಭುಜ್‌ನಿಂದ ರಣ್‌ ಉತ್ಸವ್‌ ನಡೆಯುವ ಸ್ಥಳ ಸುಮಾರು 80 ಕಿ.ಮೀ ದೂರವಿದೆ. ಕಾರು ಅಥವಾ ಬಸ್ಸಿನಲ್ಲಿ ಪ್ರಯಾಣಿಸಬಹುದು. ಸಾರ್ವಜನಿಕ ಸಾರಿಗೆ ವ್ಯವಸ್ಥೆ ಇಲ್ಲ.

ಮುಂಗಡ ಬುಕ್ಕಿಂಗ್‌ ಲಭ್ಯ:

ಮರುಭೂಮಿಗೆ ಪ್ರವೇಶವಾಗುವ ಮೊದಲು ಪ್ರವೇಶಕ್ಕೆ ಟಿಕೆಟ್ ಖರೀದಿಸಬೆಕಾಗುತ್ತದೆ. ಊಟ ವಸತಿಗಾಗಿ ಮುಂಗಡ ಕಾಯ್ದಿರಿಸುವಿಕೆಯ ಸೌಲಭ್ಯವಿದೆ. ಹೆಚ್ಚಿನ ವಿವರಗಳಿಗಾಗಿ www.rannutsav.com ಜಾಲತಾಣಕ್ಕೆ ಭೇಟಿ ಕೊಡಬಹುದು. ಆನ್ ಲೈನ್ ಮಲ್ಲಿ ಮುಂಗಡ ಬುಕ್ಕಿಂಗ್ ಗೆ ಅವಕಾಶವಿದೆ. ವಿವಿಧ ಶ್ರೇಣಿಯ ಟೆಂಟ್‌ಗಳು ವಿಭಿನ್ನ ದರಗಳಲ್ಲಿ ಸಿಗುತ್ತವೆ. ಕೆಲವು ಖಾಸಗಿ ಪ್ರವಾಸಿ ಸಂಸ್ಥೆಯವರ ಮೂಲಕವೂ ಪ್ರಯಾಣಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.