ADVERTISEMENT

ಈ ವಾರದ ಪಿಕ್‌ನಿಕ್ ಸ್ಪಾಟ್: ಬೆಂಗಳೂರಿಗೆ ಹತ್ತಿರವಿರುವ ಕಾವೇರಿ ನದಿ ತೀರ

ಪವಿತ್ರಾ ಭಟ್
Published 5 ಡಿಸೆಂಬರ್ 2025, 10:36 IST
Last Updated 5 ಡಿಸೆಂಬರ್ 2025, 10:36 IST
<div class="paragraphs"><p>ದಬ್ಬಗುಳಿ– ಕಾವೇರಿ ನದಿ ತೀರ</p></div>

ದಬ್ಬಗುಳಿ– ಕಾವೇರಿ ನದಿ ತೀರ

   

ತಣ್ಣಗೆ, ಸದ್ದಿಲ್ಲದೆ ಹರಿಯುವ ಕಾವೇರಿ ನದಿ, ಒಂದು ದಡದಲ್ಲಿ ಕಲ್ಲುಗಳ ರಾಶಿ, ಇನ್ನೊಂದು ಬದಿ ಮರಳಿನ ದಿಬ್ಬ, ಸುತ್ತಲೂ ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಸಿರು ಮರಗಳು ಮತ್ತು ಹಸಿರ ರಾಶಿ ಹೊದ್ದ ಗುಡ್ಡಗಳು....ಇವೆಲ್ಲದರ ಅನುಭೂತಿ ಪಡೆಯಬೇಕೆಂದರೆ ಕನಕಪುರ ಬಲಿ ‘ದಬ್ಬಗುಳಿ’ ಜಾಗಕ್ಕೆ ಹೋಗಬೇಕು.

ಬೆಂಗಳೂರಿನಿಂದ ಒಂದು ದಿನದಲ್ಲಿ ಚಿಕ್ಕ ಪ್ರವಾಸ ಹೋಗಿ ಬರಬೇಕು, ಕುಟುಂಬದೊಂದಿಗೆ ಸಮಯ ಕಳೆಯಬೇಕು ಎಂದುಕೊಂಡಿದ್ದರೆ ಈ ಜಾಗ ಉತ್ತಮವಾಗಿದೆ. ಕಾವೇರಿ ನದಿಯ ತಣ್ಣನೆಯ ನೀರಿನಲ್ಲಿ ಕಾಲಿರಿಸಿ ಕುಳಿತರೆ ಆಹ್ಲಾದದ ಅನುಭವವಾಗುದಂತೂ ಸುಳ್ಳಲ್ಲ.

ADVERTISEMENT

ಬೆಂಗಳೂರಿನಿಂದ ಸುಮಾರು 110 ಕಿ.ಮೀ ದೂರದಲ್ಲಿದೆ ಈ ಜಾಗ. ಕೊನೆಯ 15 ಕಿ.ಮೀ ದಾರಿ ತುಸು ದುರ್ಗಮವಾಗಿದ್ದು, ಹಳ್ಳಿ, ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ದಾಟಿ ಸಾಗಬೇಕು.

ದಬ್ಬಗುಳಿ– ಕಾವೇರಿ ನದಿ ತೀರ

ವನ್ಯಜೀವಿ ಅಭಯಾರಣ್ಯ ಪ್ರವೇಶದ್ವಾರದಲ್ಲಿ ಗೇಟ್‌ ಇರಿಸಲಾಗಿದೆ. ಇಲ್ಲಿ ವಾಹನ ಶುಲ್ಕ ಪಾವತಿಸಿ, ವಾಹನದ ಮತ್ತು ನಿಮ್ಮ ಗುರುತಿನ  ದಾಖಲೆಗಳನ್ನು ತೋರಿಸಿ ಮುಂದೆ ಸಾಗಬೇಕಾಗುತ್ತದೆ. ಇಲ್ಲಿ ಬೆಳಿಗ್ಗೆ 8 ರಿಂದ ಸಂಜೆ 5ರವರೆಗೆ ಮಾತ್ರ ಪ್ರವೇಶವಿರುತ್ತದೆ.

ನೆನಪಿಡಿ ಹಳ್ಳಿಗಳ ಒಳಗೆ ಸಾಗುವಾಗ ಜಾಗರೂಕರಾಗಿರಿ. ಹಳ್ಳಿಯ ಜನರ ಓಡಾಟವಿರುತ್ತದೆ. ಜತೆಗೆ ಸಾಕುಪ್ರಾಣಿಗಳು ರಸ್ತೆ ಮಧ್ಯೆದಲ್ಲಿ ಇರುತ್ತವೆ.

ಇಲ್ಲಿ ಹೊಳ್ಳಕರೆ ದಬ್ಬಗುಳ್ಳೇಶ್ವರ ಎಂಬ ದೇವಾಲಯವಿದೆ. ಈ ದೇವಾಲಯದಿಂದಲೇ ಈ ಜಾಗಕ್ಕೆ ‘ದಬ್ಬಗುಳಿ’ ಎನ್ನುವ ಹೆಸರು ಬಂದಿರುವುದು. ಇದನ್ನು ದಬ್ಬಗುಳಿ ಅಥವಾ ಡಬ್ಬಗೌಲಿ ಎಂದೂ ಕರೆಯಲಾಗುತ್ತದೆ. ಇದು ವಾಸ್ತವವಾಗಿ ತಮಿಳುನಾಡಿನಲ್ಲಿದೆ. ಶೇ 99 ಮಾರ್ಗವು ಕರ್ನಾಟಕದಲ್ಲಿದ್ದರೂ, ಕೊನೆಯ ಕೆಲವು ಕಿಲೋಮೀಟರ್‌ಗಳಲ್ಲಿ ತಮಿಳುನಾಡನ್ನು ಪ್ರವೇಶಿಸಬೇಕಾಗುತ್ತದೆ.

ಇಲ್ಲಿರುವ ವಿಶಾಲವಾದ ಹುಣಸೆ ಮರಗಳು ತಂಪಾದ ಗಾಳಿ ಜತೆಗೆ ಉರಿಬಿಸಿಲಿನಿಂದ ನೆರಳನ್ನೂ ನೀಡುತ್ತವೆ. 

ದಬ್ಬಗುಳಿ– ಕಾವೇರಿ ನದಿ ತೀರ

ಆಹಾರವನ್ನು ಕೊಂಡೊಯ್ಯಿರಿ

ದಬ್ಬಗುಳಿ ಊರು ನಗರ ಪ್ರದೇಶದಿಂದ ಹೊರಗಿರುವ ಕಾರಣ ಹೋಟೆಲ್‌ ಅಥವಾ ಉಪಹಾರ ಮಂದಿರಗಳೇನು ದೊರಕುವುದಿಲ್ಲ. ಹೀಗಾಗಿ ಆಹಾರವನ್ನು ಕೊಂಡೊಯ್ಯುವುದು ಒಳಿತು. ನದಿಯ ತಟದಲ್ಲಿ ಕಲ್ಲುಗಳ ಮೇಲೆ ಕುಳಿತು ಅಥವಾ ಮರದ ಕೆಳಗೆ ಕುಳಿತು ಊಟ ಮಾಡಬಹುದು. ಆದರೆ ವಿಪರೀತ ಮಂಗಗಳಿದ್ದು, ಅವುಗಳಿಂದ ಎಚ್ಚರಿಕೆಯಿಂದಿರಿ. ಮಧ್ಯಾಹ್ನದ ವೇಳೆಯಲ್ಲಿ ತೆರಳಿದರೆ ದಬ್ಬಗುಳ್ಳೇಶ್ವರ ದೇಗುಲದಲ್ಲಿ ಊಟವಿರುತ್ತದೆ.

ಕಾಡುಪ್ರಾಣಿಗಳ ಬಗ್ಗೆ ಎಚ್ಚರಿಕೆಯಿಂದಿರಿ

ಕಾವೇರಿ ವನ್ಯಜೀವಿ ಅಭಯಾರಣ್ಯ ದಾಟುವಾಗ ಆದಷ್ಟು ಎಚ್ಚರಿಕೆಯಿಂದಿರಿ. ಏಕೆಂದರೆ ಆನೆ, ಕಾಡುಕೋಣಗಳಂತಹ ಕಾಡು ಪ್ರಾಣಿಗಳು ಎದುರಾಗಬಹುದು. 

ಮರವೇರಿ ಕುಳಿತ ಮಂಗಗಳು

ಸಾಗುವುದು ಹೇಗೆ?

ಬೆಂಗಳೂರಿನಿಂದ ಕನಕಪುರ ತಲುಪಿ ಅಲ್ಲಿಂದ ಕೋಡಿಹಳ್ಳಿ ಮೂಲಕ ಹುಣಸನಹಳ್ಳಿಗೆ ತಲುಪಬೇಕು. ಅಲ್ಲಿಂದ ಬನ್ನಿಮುಕ್ಕೋಡ್ಲು ಮೂಲಕ ಮಂಚುಕೊಂಡಪಲ್ಲಿ ಗ್ರಾಮದ ಹಾದಿಯಲ್ಲಿ ಸಾಗಿದರೆ ದಬ್ಬಗುಳಿ ಸಿಗುತ್ತದೆ. ಇದು ಬೆಂಗಳೂರಿನಿಂದ ಸುಮಾರು ಒಂದೂವರೆಯಿಂದ ಎರಡು ಗಂಟೆಯ ಪ್ರಯಾಣ.

ದಬ್ಬಗುಳಿಗೆ ಸಾಗುವ ದಾರಿಯಲ್ಲಿ ಸಿಗುವ ಕಾಡು ಹಣ್ಣು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.