ADVERTISEMENT

ಕಯಾಮಾ ಚೆಲುವಿನ ಖನಿ

ವೈ.ಕೆ.ಸಂಧ್ಯಾಶರ್ಮ
Published 15 ಫೆಬ್ರುವರಿ 2020, 19:30 IST
Last Updated 15 ಫೆಬ್ರುವರಿ 2020, 19:30 IST
   
""
""

ಎದುರಿನ ಸುಂದರ ದೃಶ್ಯ ಕಾಣುತ್ತ ತೆರೆದ ಬಾಯಿ ತೆರೆದ ಹಾಗೇ ಬೆಕ್ಕಸ ಬೆರಗಿನಿಂದ ಅರಳಿಕೊಂಡುಬಿಟ್ಟಿತ್ತು! ಕಲಾವಿದನೊಬ್ಬ ಹರವಾದ ಕ್ಯಾನ್ವಾಸಿನ ಮೇಲೆ ತನ್ನ ಕಲ್ಪನೆಯ ಕುಂಚವರಳಿಸಿ ಅದ್ಭುತ ವರ್ಣಮೇಳದಲ್ಲಿ ಮನೋಹರ ಚಿತ್ರ ಬಿಡಿಸಿದಂತೆ ಭಾಸ. ಹೌದು... ಆ ಮನಸೆಳೆವ ದೃಶ್ಯ ದಂಗುಬಡಿಸಿತ್ತು. ಕಣ್ಣದಿಗಂತದವರೆಗೂ ಪಸರಿಸಿದ ಸಾಗರದ ಹೆದ್ದೆರೆಗಳು ನಿಧಾನವಾಗಿ ನಮ್ಮತ್ತ ಬಿಳಿನೊರೆಯುಕ್ಕಿಸುತ್ತ ಫ್ರಿಲ್‍ ಲಂಗ ತೊಟ್ಟ ಪುಟ್ಟಬಾಲೆಯಂತೆ ಕುಪ್ಪಳಿಸಿಕೊಂಡು ಚಿಮ್ಮಿಬರುತ್ತಿದ್ದವು.

ಹಾಗಂಥ ಅದು ಸಮುದ್ರದ ದಂಡೆಯಲ್ಲ. ಸಾಗರದಂಚಿನ ನೀರು ತೆಳುವಾಗಿ ಹರಿಯುತ್ತ ‘ಕೊಲ್ಲಿ’ಯಂಥ ವಿನ್ಯಾಸದಲ್ಲಿ ಭೂಸೆರಗಿಗೆ ತಾಗಿ ನಿಲ್ಲುವ ರಮ್ಯತಾಣ. ಅದಕ್ಕೆ ತಡೆಗೋಡೆ ಒಡ್ಡಿದಂತೆ ಕಪ್ಪನೆಯ ಶಿಲೆಯ ದಿಂಡುಗಲ್ಲುಗಳು ಉದ್ದಕ್ಕೂ ಚೆಲ್ಲಿ ಬಿದ್ದಿದ್ದವು. ಸಣ್ಣಗುಡ್ಡದ ಹಚ್ಚಹಸುರಿನ ಲಾನಿನ ಮೇಲೆ ನಿಂತು ಸುತ್ತಣ ಸುಂದರ ಪ್ರಕೃತಿ ನೋಟಗಳನ್ನು ಕಣ್ಣಿನಲ್ಲಿಯೇ ಹೀರಿಕೊಳ್ಳುತ್ತಿದ್ದೆವು.

ನೀರಿನ ಈ ದಂಡೆಯ ಮೇಲೆ ನಾವಿದ್ದರೆ ಅನತಿ ದೂರದ ಎದುರು ತೀರದ ಪ್ರದೇಶ ಹಸಿರುಹುಲ್ಲಿನ ಮಕಮಲ್ಲಿನಂಥ ಗುಡ್ಡಗಳ ಮಾಲೆ. ಅದರ ಮೇಲೆ ಅಲ್ಲಲ್ಲಿ ಬೆಳೆದು ನಿಂತ ಉದ್ದನೆಯ ಪೈನ್‍ಮರಗಳ ಸೊಬಗಿನ ಹಿನ್ನೆಲೆಯಲ್ಲಿ ಅಂದವಾದ ಹೆಂಚಿನ ಮನೆಗಳು.

ADVERTISEMENT

ಸುತ್ತ ಕೊರಳು ಹೊರಳಿಸಿ ನೋಡುತ್ತ, ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುತ್ತಲೇ ಸಣ್ಣಗುಡ್ಡವೇರಿದರೆ ಅದರ ನೆತ್ತಿಯ ಮೇಲಿದ್ದ ಹಾಲುಬಿಳುಪಿನ ನೀಳಗಂಭವೇ ಲೈಟ್‌ಹೌಸ್ ಗೋಪುರ. 1887ರಲ್ಲಿ ನಿರ್ಮಾಣವಾದದ್ದು. ಅಲ್ಲಿಂದ ಮುಂದಕ್ಕೆ ನೂರು ಹೆಜ್ಜೆ ಹಾಕಿದರೆ ಕಾಣುವುದೇ, ವಿಶ್ವದಲ್ಲೇ ಅತ್ಯಂತ ಪ್ರಸಿದ್ಧಿಯಾದ ದೊಡ್ಡ‘ಬ್ಲೋ ಹೋಲ್’ ಎಂಬ ವಿಸ್ಮಯ!

ಸಾವಿರಾರು ವರ್ಷಗಳ ಕೆಳಗೆ ಪರ್ವತದಿಂದ ಉಕ್ಕಿಹರಿದ ಜ್ವಾಲಾಮುಖಿಯ ಪಳೆಯುಳಿಕೆಗಳಂತೆ ಕಾಣುವ ಸುತ್ತ ರಾಶಿ ರಾಶಿ ಬಿದ್ದಿರುವ ಕಡುಗಪ್ಪು ಬಣ್ಣದ ನುಣ್ಣನೆಯ ಶಿಲೆಗಳು ಸಮುದ್ರಕ್ಕೆ ಕೋಟೆಗಟ್ಟಿದಂತಿವೆ. ಜ್ವಾಲಾಮುಖಿ ಉಕ್ಕಿದ ಆ ಪರ್ವತದ ಒಳಗೆಲ್ಲ ಬರಿದಾಗಿ ಕುಗ್ಗಿ, ಈಗ ಸಣ್ಣಗುಡ್ಡದಂತೆ ಹರಡಿಕೊಂಡಿರುವ ಸ್ಥಳದ ನೆತ್ತಿಯ ಮೇಲೆಯೇ ನಾವು ನಿಂತದ್ದು. ಇಂದು ಅದೇ ಜಾಗ ಸುಂದರ ಉದ್ಯಾನ, ಹಸಿರುಹುಲ್ಲಿನ ಲಾನ್ ಆಗಿ, ‘ಬ್ಲೋ ಹೋಲ್’ ಪ್ರಸಿದ್ಧಿಯ ಪ್ರವಾಸಿ ಆಕರ್ಷಣಾ ಕೇಂದ್ರವಾಗಿದೆ. ಕಳೆದ ನೂರು ವರ್ಷಗಳಿಗೂ ಹಿಂದಿನಿಂದ ಜನಗಳನ್ನು ಸೆಳೆಯುತ್ತಿರುವ ಅಚ್ಚರಿಯ ಕೇಂದ್ರವಾಗಿ ಪ್ರಸಿದ್ಧವಾದ ಈ ‘ಬ್ಲೋ ಹೋಲ್’ ನೋಡಲು ಪ್ರಪಂಚದ ಮೂಲೆ ಮೂಲೆಗಳಿಂದ ಪ್ರತಿವರ್ಷ ಆರು ಲಕ್ಷಕ್ಕೂ ಹೆಚ್ಚು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆಂಬ ಅಂದಾಜಿದೆ.

ಅದೆಷ್ಟೋ ಶತಮಾನಗಳಿಂದ ದೈತ್ಯಾಕಾರದ ಅಲೆಗಳ ಹೊಡೆತಕ್ಕೆ ಸಿಕ್ಕ ಹೆಬ್ಬಂಡೆಯ ನಡುವೆ ದೊಡ್ಡ ರಂಧ್ರದಂತಾಗಿ ಅಥವಾ ಬಿರುಕು ಬಿಟ್ಟಂತಾಗಿ ರಂಧ್ರದೊಳಗೆ ಭರದಿಂದ ನುಗ್ಗುವ ಅಲೆಗಳ ಅಬ್ಬರದ ನೀರು, ಬಂಡೆಗಳ ಈ ಬದಿ ಜೋರಾಗಿ ಚಿಮ್ಮುವ ವಿಸ್ಮಯ ನೋಟವೇ ಈ ‘ಬ್ಲೋ ಹೋಲ್’.

ಸಮುದ್ರದ ವಾತಾವರಣದ ಸ್ಥಿತಿಗೆ ಅನುಗುಣವಾಗಿ ಅಲೆಗಳು ಭರದಿಂದ ಹೆಬ್ಬಂಡೆಯ ಬಿರುಕಿನ ರಂಧ್ರದೊಳಗಿಂದ ತೂರಿ ಇತ್ತಕಡೆ ಜೋರಾಗಿ ಹೊರಚಿಮ್ಮುವ ಕಾರಂಜಿ ಸುಮಾರು 25 ಮೀಟರ್‌ಗಳಷ್ಟು ಎತ್ತರಕ್ಕೇರಿ ಚಿಮುಕಿಸುವ ಜಲರಾಶಿಯ ಸೊಬಗಿನ ನೋಟವೇ ನೋಟ!

ಸಮುದ್ರತೀರದ ಈ ಪುಟ್ಟ ಊರು ನಿಜವಾಗಲೂ ನೋಡಲು ಬಲು ಮಾಟವಾಗಿದೆ. ದಕ್ಷಿಣ ಸಿಡ್ನಿಯ ಭಾಗದ ‘ಇಲ್ಲಾವರ’ ಜಿಲ್ಲೆಯಲ್ಲಿರುವ ಈ ಕಯಾಮಾ, ಸಿಡ್ನಿ ನಗರದಿಂದ 120 ಕಿ.ಮೀ. ದೂರದಲ್ಲಿದೆ. 12,817 ಜನಸಂಖ್ಯೆ ಇರುವ ಈ ಊರಿನ ಸುತ್ತಮುತ್ತ ಅನೇಕ ಪ್ರವಾಸಿ ತಾಣಗಳಿವೆ. ನೀರಿನಾಟ ಸರ್ಫಿಂಗ್ ಮಾಡಲು ಅನೇಕ ರಮಣೀಯ ಬೀಚ್‍ಗಳಿವೆ. ರಮ್ಯವಾದ ಕ್ಯಾರವಾನ್ ಪಾರ್ಕ್‌ಗಳು ಇರುವ ಈ ಸ್ಥಳದ ಸುತ್ತ ಕರಾವಳಿಯ ಗುಡ್ಡಗಳು ಮಳೆ ಬೀಳುವ ಕಾನನದ ದಟ್ಟಪೊದೆಗಳಿಂದಆವೃತವಾಗಿವೆ.

ಈ ಪುಟ್ಟ ಊರಿನ ಸ್ವಚ್ಛ ಮುಖ್ಯರಸ್ತೆಯ ಒಂದು ಬದಿಗೆ ಸಾಲಾಗಿ ವಿವಿಧ ಬಗೆಯ ಅಂಗಡಿಗಳು, ಬೇಕರಿ, ಕಾಫಿಶಾ‍ಪ್‌ಗಳು, ರೆಸ್ಟುರಾಗಳಿವೆ. ಎದುರುಬದಿಯಲ್ಲಿ ಸುಂದರ ಹೂದೋಟಕ್ಕೆ ಅಂಟಿಕೊಂಡಂತೆ ಯುದ್ಧ ಸ್ಮಾರಕವಿದೆ. ಅನತಿ ದೂರದಲ್ಲಿ ಆರ್ಟ್‌ ಗ್ಯಾಲರಿ. ಚಾರಿತ್ರಿಕ ಹಳೆಯ ಕಟ್ಟಡಗಳಲ್ಲಿ ಇಲ್ಲಿನ ಕೆಂಪುಬಣ್ಣದ ಪೋಸ್ಟ್ ಆಫೀಸ್ ಕೂಡ ಒಂದು.

ಹಾಗೇ ರಸ್ತೆಯ ದಿಣ್ಣೆಯೇರಿ ಸಾಗಿದರೆ ಗುಡ್ಡವೇರಿದಂತೆ ಭಾಸವಾಗುತ್ತ ನಡೆಯಲು ತ್ರಾಸವಾಗುತ್ತದೆ. ಎಡ– ಬಲಗಳಲ್ಲೂ ರಸ್ತೆಗಳು ಏರುತ್ತ, ಇಳಿಯುತ್ತ ಸಾಗುತ್ತವೆ. ಹೆಚ್ಚೂಕಡಿಮೆ ಒಂದು ಕಿ.ಮೀ.ನೊಳಗೆ ಊರು ಮುಗಿದೇ ಹೋಗುತ್ತದೆ. ‘ಬ್ಲೋ ಹೋಲ್‌’ನ ಉತ್ತರದ ಪಶ್ಚಿಮಕ್ಕೆ ‘ಕಯಾಮಾ’ ಬಂದರು ಇದೆ. ಕಯಾಮಾ ಯಾರೂ ಮಿಸ್ ಮಾಡಲೇಬಾರದಂಥ ಚೆಲುವಿನ ಖನಿ.

ಕಯಾಮಾ ಬ್ಲೋ ಹೋಲ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.