ಬೈಕ್ ಸವಾರಿ ಅನುಭವ ಪಡೆಯಬಯಸುವ ಬೈಕರ್‌ಗಳು ಮುಂಗಾರು ಋತುವನ್ನೇ ಹೆಚ್ಚಾಗಿ ಇಷ್ಟಪಡುತ್ತಾರೆ. ಪ್ರಕೃತಿಯ ಸೊಬಗನ್ನು ಸವಿಯುವುದರ ಜೊತೆಗೆ ಸಾಹಸಗಳಿಗೆ ಮೈಯೊಡ್ಡುವುದು ಯುವಪೀಳಿಗೆಗೆ ಅಚ್ಚುಮೆಚ್ಚು. ಸಾಗುವ ಹಾದಿ, ಸ್ಥಳ, ಜನರನ್ನು ಆಪ್ತವಾಗಿಸಿಕೊಳ್ಳುತ್ತ, ಅನುಭವಗಳನ್ನು ಜೋಳಿಗೆಗೆ ತುಂಬಿಕೊಳ್ಳುತ್ತ, ಬದುಕಿನಲ್ಲಿ ಉತ್ಸಾಹ ತುಂಬಿಕೊಳ್ಳಲು ಇವರು ಬಯಸುತ್ತಾರೆ.
ಮಳೆ ಹನಿಗಳು ನೆಲವನ್ನು ಸೋಕಿದ ಕೆಲಕಾಲದ ಬಳಿಕ ಎಲ್ಲೆಡೆ ಹಸಿರು ಉಕ್ಕುತ್ತದೆ. ಬೆಟ್ಟಗಳಿಗೆ ಮುತ್ತಿಕ್ಕುವ ಮೋಡಗಳು, ಮೈಯನ್ನು ನೇವರಿಸುವ ತಂಪುಗಾಳಿ, ಸುರಿಯುವ ಸೋನೆ ಮಳೆ... ಬೈಕ್ ಚಾರಣಿಗರನ್ನು ಮನೆಯಲ್ಲಿ ಕೂತಿರಲು ಬಿಡುವುದಿಲ್ಲ. ಪರ್ವತ ಪ್ರದೇಶಗಳಲ್ಲಿನ ಹಸಿರು ಹೆದ್ದಾರಿಯ ಚಾರಣ ಅವರನ್ನು ಮಳೆ ಬೀಳುತ್ತಿದ್ದಂತೆ ಕೈಬೀಸಿ ಕರೆಯುತ್ತದೆ. ವೈವಿಧ್ಯಮಯ ಅನುಭವ ಪಡೆಯಲು ಹೊಸ ಸಾಹಸಕ್ಕೆ ಅಣಿಯಾಗುವಂತೆ ಪ್ರೇರೇಪಿಸುತ್ತದೆ. ಬೈಕ್ ಏರಿ ಹೊರಟ ಚಾರಣಿಗರಿಗೆ ಮಳೆಗಾಲದ ಪರ್ವತಗಳ, ಬೆಟ್ಟಗುಡ್ಡಗಳ ಪ್ರವಾಸ ಭಿನ್ನ ಲೋಕವನ್ನು ತೆರೆದಿಡುತ್ತದೆ.
ಮಳೆ ಸುರಿಯುವ ನಾದದ ಜೊತೆಗೆ ಎಲ್ಲೆಡೆ ಕಾಣುವ ಹಸಿರಿನಿಂದ ಭೂಮಿಯ ಚಿತ್ರಣ ಬದಲಾಗಿರುತ್ತದೆ. ಪಶ್ಚಿಮ ಘಟ್ಟದಿಂದ ಹಿಡಿದು ಪೂರ್ವದ ಪರ್ವತಗಳವರೆಗೆ, ಹಿಮಾಲಯದಿಂದ ಡೆಕ್ಕನ್ ಪ್ರಸ್ಥಭೂಮಿಯ ವರೆಗೂ ಹಸಿರು. ಈ ಹಸಿರಿನಲ್ಲೂ ವೈವಿಧ್ಯವಿದೆ. ತಿಳಿ ಹಸಿರು, ಗಿಣಿ ಹಸಿರು, ಗಾಢ ನೀಲಿಯಿಂದ ಕೂಡಿದ ಹಸಿರು ಜೀವಕ್ಕೆ ಹೊಸ ಉಸಿರು ಕೊಡುತ್ತದೆ. ಹಲವು ಕೆಲಸಗಳಲ್ಲಿ ಹೈರಾಣಾದ ಜೀವಕ್ಕೆ ಹೊಸ ಚೈತನ್ಯ, ಹೊಸ ಹುರುಪು ತುಂಬುತ್ತದೆ. ಹಾಗಾಗಿ ಚಾರಣವಾಗಲಿ, ಬೈಕ್ ಸವಾರಿಯಾಗಲಿ, ಬೀಸುವ ತಣ್ಣನೆ ಗಾಳಿಗೆ, ಮಳೆ ಹನಿಗೆ ಮೈಯೊಡ್ಡಿ ಸಾಗುವಾಗಿನ ಅದರ ರೋಮಾಂಚನ ಬೇರೆದೇ ರೀತಿಯದು.
ಮಳೆಗಾಲದಲ್ಲಿ ಬೈಕ್ ಸವಾರಿ ಎಂದರೆ ಮಳೆಗೆ ಮೈಯೊಡ್ಡುವುದಷ್ಟೇ ಅಲ್ಲ; ಹಲವು ಅನಿರೀಕ್ಷಿತ, ಅನಪೇಕ್ಷಿತ ಸನ್ನಿವೇಶಗಳಿಗೆ ಎದುರಾಗುವುದು ಅನಿವಾರ್ಯ. ಹಸಿರು ಹೊದ್ದ ಬೆಟ್ಟಗುಡ್ಡಗಳ ಜೊತೆಗೆ ನೊರೆ ಉಕ್ಕಿಸಿ ಹರಿಯುವ ಜಲಪಾತಗಳು, ಕೆಸರು ತುಂಬಿದ ರಸ್ತೆಗಳು, ಮನಸ್ಸಿಗೆ ಆಹ್ಲಾದ ನೀಡುವ ಜುಳುಜುಳು ಎನ್ನುವ ತೊರೆಗಳು, ದಾರಿಯ ನಡುವೆ ಕಪ್ಪು ಹಂಚಿನ ಮಾಡಿನ ಮನೆಗಳು, ನೀರು ತುಂಬಿದ ಗದ್ದೆಗಳು ಪ್ರಯಾಣದುದ್ದಕ್ಕೂ ಎದುರಾಗುತ್ತವೆ. ನೆನಪಿನಲ್ಲಿ ದಾಖಲಾಗುವ ಇಂತಹ ಚಿತ್ರಗಳು ಸವಾರರ ದಾರಿ ಸಾಗುವಾಗಿನ ಆಯಾಸವನ್ನು ಕಡಿಮೆ ಮಾಡುತ್ತವೆ; ಪ್ರಯಾಣದ ಹುರುಪನ್ನು ಹೆಚ್ಚಿಸುತ್ತವೆ.
ಬೈಕರ್ ಗ್ರೂಪ್‌ಗಳು ಈಗ ನಗರ, ಪಟ್ಟಣ ಎನ್ನದೆ ಎಲ್ಲೆಡೆ ಹುಟ್ಟಿಕೊಂಡಿವೆ. ಮುಂಜಾನೆ ರೈಡ್‌ನಿಂದ ಹಿಡಿದು ಮುಂಗಾರು ರೈಡ್‌ನವರೆಗೂ ಇವರು ಅನ್ವೇಷಣೆ ಮಾಡದ ದಾರಿಗಳಿಲ್ಲ. ನೋಡದೇ ಇರುವ ಚಂದದ ತಾಣಗಳಿಲ್ಲ. ಸಾಮಾಜಿಕ ಮಾಧ್ಯಮಗಳ ಭರಾಟೆಯ ಈ ದಿನಗಳಲ್ಲಿ ಇವರಲ್ಲಿ ಪ್ರತಿಯೊಬ್ಬರದ್ದೂ ಒಂದೊಂದು ಪ್ರವಾಸ ಕಥನ. ಪ್ರಕೃತಿಯ ಮೋಹಕ ದೃಶ್ಯಗಳನ್ನು ಕಂಡ ಯಾರಿಗಾದರೂ ಬೈಕ್ ಏರಿ ಹೊರಟುಬಿಡಬೇಕೆಂಬ ಹಂಬಲ ಉಂಟಾಗುವುದರಲ್ಲಿ ಆಶ್ಚರ್ಯವಿಲ್ಲ.
ಮಲೆನಾಡಿನ ಭಾಗದಲ್ಲಿನ ಪಯಣ ಕ್ಷಣಕ್ಷಣಕ್ಕೂ ವಿಸ್ಮಯಕಾರಿಯಾದ ಅನುಭವ. ಬೈಕ್‌ನಲ್ಲಿ ಸಾಗುವಾಗ ದಾರಿಯ ಪ್ರತಿ ತಿರುವೂ ಬದುಕಿನ ತಿರುವಿಗೆ ರೂಪಕವಾಗಿ ನಿಲ್ಲುತ್ತದೆ. ಅದು ನಮ್ಮ ಹಲವು ಕತೆಗಳನ್ನು ನೆನಪಿಸುತ್ತದೆ; ಬದುಕಿನ ಮತ್ತೊಂದು ನಿರ್ಧಾರಕ್ಕೆ ಪ್ರೇರಣೆ ನೀಡುತ್ತದೆ. ಮಳೆಗಾಲದಲ್ಲಿ ವಿಶಿಷ್ಟವಾದ ಪರಿಮಳ ಎಲ್ಲಡೆ ಹರಡಿರುತ್ತದೆ. ಅದು ಯಾವುದೋ ಕಾಡು ಹೂವಿನ ಪರಿಮಳವಾಗಿರಬಹುದು
ಅಥವಾ ಮಣ್ಣಿನ ಸುವಾಸನೆಯೂ ಇರಬಹುದು. ಅನಿರೀಕ್ಷಿತವಾಗಿ ಕಾಣಿಸುವ ದಾರಿ ಪಕ್ಕದ ಚಹಾದ ಅಂಗಡಿಯ ಒಲೆಯಿಂದ ಎದ್ದ ಹೊಗೆಯೂ ಆಗಿರಬಹುದು. ಇಂತಹ ಅಂಗಡಿಗಳಲ್ಲಿ ಚಹಾ ಕುಡಿದು ಮೈ ಮನಸ್ಸುಗಳನ್ನು ಹಗುರವಾಗಿಸಿಕೊಂಡು ಅಲ್ಲಿಂದ ಎದ್ದರೆ ಮುಂದಿನ ದಾರಿ ಖುಷಿಯಾಗಿ ತೆರೆದುಕೊಳ್ಳುತ್ತದೆ.
ರೂಪಕವಾಗುವ ಮಳೆ ಹಾದಿ
ಹೆಲ್ಮೆಟ್‌ನ ಗ್ಲಾಸ್ ಮೇಲೆ ಮುತ್ತುಗಳಂತೆ ಬಿದ್ದು, ದಾರದಂತೆ ಹರಿಯುವ ಹಾಗೂ ಬೈಕ್‌ನ ಟ್ಯಾಂಕ್ ಮೇಲೆ ಬಿದ್ದು ಸಿಡಿಯುವ ಮಳೆಯ ಹನಿಗಳು ಕವಿಯಾಗುವಂತೆ ಪ್ರೇರೇಪಿಸುತ್ತವೆ. ಸಿನಿಮಾಗಳ ಮಳೆ ಹಾಡುಗಳು ತಾವಾಗಿಯೇ ತುಟಿಮೀರಿ ಬರುತ್ತವೆ. ಬೈಕಿನ ಹಿಂದೆ ಕೂತ ಜೊತೆಗಾರ ಇಲ್ಲವೇ ಜೊತೆಗಾತಿ ಆ ಹಾಡಿಗೆ ತಮ್ಮದೇ ದನಿಯನ್ನು ಸೇರಿಸುತ್ತಾರೆ. ಇಲ್ಲವೇ ಹೊಸದೊಂದು ಹಾಡು ಹಿಂದಿನಿಂದ ಬರುತ್ತದೆ.
ಇದು ಒಂದು ಕಡೆ ಮಧುರವಾದ, ಖುಷಿಯಾದ ಪಯಣ ಎನಿಸಿದರೂ ಸಾಹಸಕ್ಕೆ ಆಹ್ವಾನಿಸುವ ಪಯಣವೂ ಹೌದು. ಮುಂದಾಗುವುದನ್ನು ಮೊದಲಿಗೇ ನಿರೀಕ್ಷಿಸುವಂತಿಲ್ಲವಾದರೂ ಅದಕ್ಕೆ ತಕ್ಕುದಾದ ಸಿದ್ಧತೆ ಮತ್ತು ಮುನ್ನೆಚ್ಚರಿಕೆ ಮಾಹಿತಿ ಪಡೆದು ಮುಂದುವರೆಯುವುದು ಉತ್ತಮ. ಇಲ್ಲದಿದ್ದರೆ ಅವಘಡಕ್ಕೆ ಬೈಕ್ ಸವಾರರು ಆಹ್ವಾನ ಕೊಟ್ಟಂತಾಗುತ್ತದೆ. ಹೀಗಾಗಿ, ಇಂತಹ ಪ್ರವಾಸಗಳಲ್ಲಿ ಪ್ರತಿಯೊಬ್ಬ ಬೈಕ್ ಸವಾರನದ್ದು ಒಂದೊಂದು ಅನುಭವ ಕಥನ...
ಪಶ್ಚಿಮ ಘಟ್ಟದಲ್ಲಿ ಕರ್ನಾಟಕ, ಕೇರಳ, ತಮಿಳುನಾಡಿನ ಸಾಕಷ್ಟು ಪ್ರದೇಶಗಳು ಮುಂಗಾರಿನಲ್ಲಿ ಬಗೆಬಗೆಯ ಅನುಭವ ನೀಡುವಂತಿವೆ. ತೀರ್ಥಹಳ್ಳಿ, ಮೈಸೂರು, ಮಡಿಕೇರಿ, ಕುಶಾಲನಗರ ರಸ್ತೆಗಳು, ಶಿರಾಡಿ ಹಾಗೂ ಚಾರ್ಮಾಡಿ ಘಾಟ್ ಮುಂಗಾರಿನಲ್ಲಿ ಅಪಾಯಕಾರಿಯಾದರೂ ಹೆಚ್ಚು ಖುಷಿ ನೀಡುವಂತದ್ದು. ಮಡಿಕೇರಿ, ಚಿಕ್ಕಮಗಳೂರಿನ ಕಾಫಿ ತೋಟಗಳು, ಪರ್ವತಕ್ಕೆ ಮುತ್ತಿಕ್ಕುವ ಮೋಡಗಳು ಹಾಗೂ
ಹೆಜ್ಜೆ ಹೆಜ್ಜೆಗೂ ಎದುರಾಗುವ ಸವಾಲುಗಳು ಕೊಡುವ ಖುಷಿಗೆ ಕೊನೆ ಮೊದಲಿಲ್ಲ.
ಕೇರಳದ ವಯನಾಡ್‌ನಿಂದ ಮುನ್ನಾರ್ ಮಾರ್ಗದ ಹಸಿರು ರಾಶಿ ತುಂಬಿದ ಕಣಿವೆಗಳು, ಮೆಣಸಿನ ತೋಟಗಳು ಮತ್ತು ಮಂಜು ತುಂಬಿದ ಟೀ ತೋಟಗಳು, ವಾಲ್‌ಪರೈ, ಆತೀರಪಿಳ್ಳಿ ಜಲಪಾತ, ವಯನಾಡ್, ವಾಗಮಾನ್, ಕುರುವಾ ದ್ವೀಪ, ಬಾಣಾಸುರ ಅಣೆಕಟ್ಟು ಹಾಗೂ ತಮಿಳುನಾಡಿನ ದಟ್ಟ ಕಾಡುಗಳು, ಅಲ್ಲಲ್ಲಿ ರಸ್ತೆ ದಾಟುವ ಆನೆಯ ಹಿಂಡುಗಳನ್ನು ಸುರಕ್ಷಿತ ಅಂತರದಿಂದ ನೋಡುವುದೇ ಸೊಬಗು.
ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರದ ಕೊಂಕಣ ಪ್ರದೇಶದ ರಸ್ತೆಯಲ್ಲಿ ಮುಂಗಾರಿನಲ್ಲಿ ಬೈಕ್‌ನಲ್ಲಿ ಸಾಗುವುದೂ ರೋಮಾಂಚನಕಾರಿ ಅನುಭವ. ಸಾಲು ಸಾಲು ತೆಂಗಿನಮರಗಳು, ಸಮುದ್ರ ತೀರ, ಹಿನ್ನೀರ ಬೆಡಗು, ಮೀನು ಹಿಡಿಯುವ ಚಿತ್ರಣ ಎಲ್ಲವೂ ಮನಸ್ಸಿಗೆ ಆಹ್ಲಾದ ನೀಡುವಂತದ್ದು. ಮಹಾರಾಷ್ಟ್ರದ ಲೋನಾವಾಲಾ, ಮಹಾಬಲೇಶ್ವರದ ಘಟ್ಟ ಪ್ರದೇಶದ ತಿರುವುಗಳಲ್ಲಿ ಸಾಗುವುದು ಮತ್ತೊಂದು
ಸಾಹಸದ ಅನುಭವ. ಮೇಘಾಲಯದ ಶಿಲ್ಲಾಂಗ್‌ನಿಂದ ಚಿರಾಪುಂಜಿ ನಡುವಿನ ಮಾರ್ಗದಲ್ಲಿ ಮೋಡಗಳ ತುಣುಕುಗಳು ಸಾಗುವುದು ಮತ್ತೊಂದು ಅನುಭವ. ಹೆಜ್ಜೆ ಹೆಜ್ಜೆಗೂ ಸಿಗುವ ಭೋರ್ಗರೆವ ಜಲಪಾತಗಳು, ಎಡೆಬಿಡದೆ ಸುರಿಯುವ ಮಳೆಯಲ್ಲಿ ಸಾಗುವ ಪ್ರಯಾಣ ಕೊಡುವ ಅನುಭವವೇ ಬೇರೆ ಎಂಬುದು ಅಲ್ಲಿ ಓಡಾಡಿರುವ ಬಹಳಷ್ಟು ಸವಾರರ ಅನಿಸಿಕೆ.
ಇದರಂತೆಯೇ ಸಿಕ್ಕಿಂನಿಂದ ಬಂಗಾಳದ ಉತ್ತರ ಭಾಗ, ಸಿಲಿಗುರಿಯಿಂದ ಜುಲುಕ್ ಅಥವಾ ಗಾಂಗ್‌ಟಕ್ ಮಾರ್ಗದ ಟೀ ತೋಟದ ರಮಣೀಯ ದೃಶ್ಯವನ್ನು ಒಮ್ಮೆಯಾದರೂ ಕಣ್ತುಂಬಿಕೊಳ್ಳಬೇಕು. ಮಳೆಗಾಲದಲ್ಲಿ ಬೈಕ್ ಸವಾರರದು ಕೇವಲ ಸೌಂದರ್ಯ ಕಣ್ತುಂಬಿಕೊಳ್ಳುವ ಅನುಭವಗಳ ಪಯಣವಷ್ಟೇ ಅಲ್ಲ. ಬದಲಿಗೆ ತಮ್ಮ ಕುಶಲತೆ, ಜಾಗೃತಿ ಹಾಗೂ ಪ್ರಕೃತಿಯನ್ನು ನಾವೆಷ್ಟು ಗೌರವಿಸುತ್ತೇವೆ, ಆನಂದಿಸುತ್ತೇವೆ, ಪ್ರೀತಿಸುತ್ತೇವೆ ಎಂಬುವುದನ್ನು ತೋರ್ಪಡಿಸುವ ಪಯಣವೂ ಹೌದು.
ಬೈಕ್ ಸವಾರಿ ಹಾದಿಯಲ್ಲಿ...
ಮುಂಗಾರಿನ ಆರಂಭದಲ್ಲಿ ರಸ್ತೆ ಜಾರುವುದು ಹೆಚ್ಚು. ಅದರಲ್ಲೂ ಅಲಲ್ಲಿ ಬಿದ್ದಿರುವ ಎಂಜಿನ್ ಆಯಿಲ್ ಹನಿಗಳು, ನೆನೆದ ಒಣ ಎಲೆಗಳಿಂದ ಬೈಕ್‌ಗಳು ಜಾರುವ ಅಪಾಯವೂ ಇದೆ. ಹೀಗಾಗಿ ಮುಂಗಾರಿನಲ್ಲಿ ಅವಸರ ಸಲ್ಲದು. ಇದರೊಂದಿಗೆ ಮಂಜು ಹೊದ್ದ ರಸ್ತೆಗಳಲ್ಲಿ ಮಂದ ಬೆಳಕು, ಆಗಾಗ್ಗ ಮಸುಕಾಗುವ ಹೆಲ್ಮೆಟ್‌ಗಳ ಗಾಜು, ಧೋ ಎಂದು ಸುರಿವ ಮಳೆಯಿಂದ ಪಾರಾಗಲು ಹೆಚ್ಚುವರಿ ಎಚ್ಚರಿಕೆ ಅತ್ಯಗತ್ಯ. ಏಕಾಏಕಿ ಜೋರಾದ ಮಳೆ, ಧುತ್ತನೆ ಎದುರಾಗುವ ಧರೆಗುರುಳಿದ ಮರ, ಅಲ್ಲಲ್ಲಿ ಗುಡ್ಡ ಕುಸಿತ ಹೀಗೆ ಹಲವು ಅನಿರೀಕ್ಷಿತಗಳಿಗೂ ಸವಾರರು ಸಜ್ಜಾಗಬೇಕು ಎಂಬುದು ರೂಬಿ ಅವರ ಅನುಭವದ ಮಾತು.
ನಗರ ಹಾಗೂ ಪಟ್ಟಣಗಳ ಪ್ರದೇಶಗಳಲ್ಲಿ ನೀರು ತುಂಬಿರುವ ರಸ್ತೆ ಗುಂಡಿಗಳ ಆಳವನ್ನು ಊಹಿಸುವುದು ಕಷ್ಟ. ಅದರಲ್ಲೂ ಬೃಹತ್ ವಾಹನಗಳು ಪಕ್ಕದಲ್ಲಿ ಸಾಗುವಾಗ ಇಂಥ ರಸ್ತೆ ಗುಂಡಿಗಳು ಎದುರಾದರೆ ದೊಡ್ಡ ಅಪಾಯವನ್ನೇ ಆಹ್ವಾನಿಸಿದಂತೆ.
ಪ್ರಯಾಣದುದ್ದಕ್ಕೂ ಸ್ಥಳೀಯ ಜನರು ಹಾಗೂ ಪ್ರಕೃತಿಯನ್ನು ಗೌರವಿಸಬೇಕು ಎಂಬುದು ಅನುಭವಿ ಸವಾರರ ಸಲಹೆ. ಹೀಗಾಗಿ, ಪ್ರಕೃತಿಯಲ್ಲಿ ಕಳಿಯದ ಪ್ಲಾಸ್ಟಿಕ್ ಹಾಗೂ ಇತರ ವಸ್ತುಗಳನ್ನು ಬೇಕಾಬಿಟ್ಟಿಯಾಗಿ ಬಿಸಾಡದೆ, ಜವಾಬ್ದಾರಿಯುತವಾಗಿ ವಿಲೇವಾರಿ ಮಾಡಬೇಕು ಎಂಬುದು ರೈಡರ್‌ಗಳ ಪ್ರಾಮಾಣಿಕ ಸಲಹೆ.
ಅದು ಕರ್ನಾಟಕದ ಮಲೆನಾಡಿನ ತಿರುವುಗಳೇ ತುಂಬಿರುವ ಪ್ರದೇಶವಾಗಲೀ, ಕರಾವಳಿಯ ಬೀಸುಗಾಳಿಯಲ್ಲಿ ಸಾಗುವುದೇ ಆಗಲಿ ಅಥವಾ ಹಿಮಾಲಯ ಪರ್ವತದ ಕಲ್ಲು ರಾಶಿಯ ರಸ್ತೆಯೇ ಆಗಿರಲಿ, ಅದು ಭಾರತದ ಪ್ರಕೃತಿ ಸೊಬಗಿನ ನಡುವೆ ಸಾಗುವ ಒಂದು ಭಾವನಾತ್ಮಕ ಪಯಣ; ಅದು ಭಾರತದ ಆತ್ಮವನ್ನು ಅರಿಯುವ ಯಾನ. ಇಲ್ಲಿನ ಪ್ರತಿಯೊಂದು ಪಯಣವೂ ಒಂದು ಪ್ರತ್ಯೇಕ ಜಗತ್ತನ್ನು, ಬದುಕನ್ನು ಕಾಣಿಸುತ್ತದೆ. ನಮ್ಮನ್ನು ಹೊಸ ಮನುಷ್ಯರನ್ನಾಗಿಸುತ್ತದೆ.
ಸಿಹಿ, ಕಹಿ ಅನುಭವ ಇದ್ದದ್ದೇ...
ಪ್ರತಿ ಬೈಕ್ ರೈಡ್‌ನಲ್ಲಿ ಶಿಸ್ತು ಮತ್ತು ಸಮಯ ಪಾಲನೆ ಮುಖ್ಯ. ನಾನು ಮುಂಜಾನೆ 5.30ಕ್ಕೆ ಏಳುತ್ತೇನೆ. ಮಂಜಿನಿಂದ ಆವರಿಸಿದ ಸಾಲು ಮರಗಳ ನಡುವೆ ಸಾಗುವುದು ಮನಸ್ಸಿಗೆ ಶಾಂತಿ, ಆಹ್ಲಾದ ನೀಡುತ್ತದೆ. ಹೀಗೆ ಹೊರಡುವ ಮುನ್ನ ನನ್ನ ಕಾಲುಗಳು, ಬೆನ್ನು ಮತ್ತು ಕೈಗಳು ಯಾವುದೇ ನೋವಿಲ್ಲದೆ ಆರಾಮವಾಗಿವೆಯೇ ಎಂಬುದನ್ನು ಮೊದಲು ಪರೀಕ್ಷಿಸಿಕೊಳ್ಳುತ್ತೇನೆ. ಅಲ್ಪ ಉಪಹಾರದೊಂದಿಗೆ ರೈಡಿಂಗ್ ಆರಂಭಗೊಳ್ಳುತ್ತದೆ.
ಮುಂಗಾರಿನ ಪ್ರಯಾಣದಲ್ಲಿ ಹಲವು ಸುಂದರ ಹಾಗೂ ಕಹಿ ಘಟನೆಗಳೂ ದಾಖಲಾಗಿವೆ. ಎಷ್ಟೇ ಎಚ್ಚರ ವಹಿಸಿದರೂ ಒಮ್ಮೆ ಬೈಕ್ ರಸ್ತೆ ಬದಿಗೆ ಜಾರಿಯೇಬಿಟ್ಟಿತು. ಕೆಳಗೆ ಬಿದ್ದ ನನಗೆ ಸಾಕಷ್ಟು ಪೆಟ್ಟಾಯಿತು. ಮೊಬೈಲ್ ಕೂಡಾ ಕೆಸರಿಗೆ ಬಿದ್ದ ಪರಿಣಾಮ, ಅಲ್ಲಿಯವರೆಗೂ ದಾಖಲಾಗಿದ್ದ ಎಲ್ಲಾ ಚಿತ್ರಗಳೂ ನಾಶವಾದವು. ಹೀಗಾಗಿ ಮುಂಗಾರು ಎಷ್ಟು ಸುಂದರವೋ, ಅಷ್ಟೇ ಅಪಾಯಕಾರಿಯೂ ಹೌದು ಎನ್ನುವುದನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು.
– ರೋಶಿನಿ ಮೀರಸ್ಕರ್, ಐಟಿ ಉದ್ಯೋಗಿ, ಬೆಂಗಳೂರು
ಪ್ರಯಾಣದ ವೇಳೆ ಹುಲಿ, ಆನೆಗಳು ಎದುರಾಗಬಹುದು ಎಚ್ಚರ!
ಮುಂಗಾರಿನಲ್ಲಿ ಮಳೆಕಾಡಿನಲ್ಲಿ ಬೈಕ್ ಪ್ರವಾಸ ನಡೆಸಬೇಕೆಂದರೆ ಕಾಡಷ್ಟೇ ಎಂದುಕೊಳ್ಳುವುದು ತಪ್ಪು. ಅಲ್ಲಿ ಹುಲಿ, ಆನೆಗಳು ಎದುರಾಗಬಹುದು. ಹೀಗೇ ಒಮ್ಮೆ ಚಲಕುಡಿಯಿಂದ ವಾಲ್‌ಪರೈಗೆ ಪ್ರಯಾಣಿಸುತ್ತಿದ್ದಾಗ, ಬಾಲಕನೊಬ್ಬನನ್ನು ಹುಲಿ ಎಳೆದೊಯ್ದಿದ್ದು ದೊಡ್ಡ ಸುದ್ದಿಯಾಗಿತ್ತು. ಆನೆಗಳೂ ಅಲ್ಲಲ್ಲಿ ಎದುರಾದವು. ಇವುಗಳಿಂದ ಅಂತರ ಕಾಯ್ದುಕೊಳ್ಳುವುದು ತಿಳಿದಿಲ್ಲವೆಂದರೆ, ಅಪಾಯಕ್ಕೆ ಆಹ್ವಾನ ನೀಡಿದಂತೆ.
ಮಳೆಗಾಲದಲ್ಲಿ ಬೈಕ್ ಸವಾರಿ ಅಪಾಯವೆಂದು ಹೆದರಬೇಕಿಲ್ಲ. ಮುಖ್ಯವಾಗಿ ಪ್ರಕೃತಿಯನ್ನು ಆಸ್ವಾದಿಸುವುದು ಈ ಸವಾರಿಯ ಮುಖ್ಯ ಉದ್ದೇಶ. ನಾನು ಈವರೆಗೂ ಪ್ರವಾಸ ಮಾಡಿದ್ದರಲ್ಲಿ ‘ಬಾಹುಬಲಿ’ ಸಿನಿಮಾದಲ್ಲಿ ಚಿತ್ರೀಕರಣಗೊಂಡಿರುವ ಮಿನಿ ನಯಾನಗರ ಎಂದೇ ಕರೆಯುವ ‘ಆತೀರಪಿಳ್ಳಿ ಜಲಪಾತ’ದ ಸೊಬಗು ಎಷ್ಟು ವರ್ಣಿಸಿದರೂ ಕಡಿಮೆ.
ಪ್ರತಿಯೊಂದು ಪ್ರಯಾಣದಲ್ಲೂ ಹೊಸ ಅನುಭವಗಳು ಸೇರಿಕೊಂಡಿವೆ. ನಾನು ಸುಮಾರು 34 ಬೈಕರ್ ಗುಂಪುಗಳಲ್ಲಿದ್ದೇನೆ. ಸುಮಾರು 600ಕ್ಕೂ ಹೆಚ್ಚು ಮಹಿಳಾ ಸವಾರರು ನನ್ನ ಗೆಳತಿಯರು. ಅವರ ಜತೆಗೂಡಿ ಪ್ರಕೃತಿಗೆ ಮೈಯೊಡ್ಡುವುದು ಒಂದು ರೋಮಾಂಚನ.
– ರೂಬಿ, ಉದ್ಯಮಿ ಹಾಗೂ ಬೈಕ್ ರೈಡರ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.