
ಕೃಷ್ಣಾ ನದಿಗೆ ಕಟ್ಟಿರುವ ಜುರಾಲಾ ಜಲಾಶಯದ ಹಿನ್ನೀರಿನಿಂದ ದ್ವೀಪವೊಂದು ನಿರ್ಮಾಣವಾಗಿದೆ. ಅದುವೇ ನಾರದಗಡ್ಡೆ. ನೋಡಲು ತುಂಬಾ ಆಕರ್ಷಕವಾಗಿರುವ ಈ ದ್ವೀಪ ಮನ ಅರಳಿಸುವ ತಾಣವೂ ಆಗಿದೆ. ನಾರದಗಡ್ಡೆಯು ರಾಯಚೂರು ತಾಲ್ಲೂಕಿನಲ್ಲಿದೆ. ಈ ಸುಂದರ ದ್ವೀಪವನ್ನು ತಲುಪಲು ಒಂದು ಹಂತದವರೆಗೆ ರಸ್ತೆ ಸಾರಿಗೆ ಬಸ್ಸಿನ ವ್ಯವಸ್ಥೆ ಇದೆ. ರಾಯಚೂರು ನಗರದಿಂದ ಬುರ್ದಿಪಾಡವು 35 ಕಿಲೋಮೀಟರ್ ಅಂತರದಲ್ಲಿದ್ದು, ಬಸ್ ಸೌಕರ್ಯವಿದೆ. ಬುರ್ದಿಪಾಡದಿಂದ ಐದು ನಿಮಿಷದಲ್ಲೇ ಕೃಷ್ಣ ನದಿಯ ದಡ ತಲುಪಬಹುದು. ಅಲ್ಲಿಂದ ನಾರದಗಡ್ಡೆಗೆ ನೀರು ಹೆಚ್ಚಿದ್ದಾಗ ಎಂಜಿನ್ ಬೋಟ್ ಅನ್ನು, ನೀರು ಕಡಿಮೆ ಇದ್ದಾಗ ತೆಪ್ಪವನ್ನು ಬಳಸಲಾಗುತ್ತದೆ. ಆಚೆ ದಡ ತಲುಪಿಸಲು ಮತ್ತು ಅಲ್ಲಿಂದ ಮರಳಿ ಕರೆತರಲು ಒಬ್ಬರಿಗೆ ನೂರು ರೂಪಾಯಿ ಕೊಡಬೇಕು.
ಹತ್ತು ನಿಮಿಷದಲ್ಲಿ ಬೋಟ್ ಮೂಲಕ ದಡ ಸೇರಿಸಿದೆ. ಈಜು ಬರದ ನಾನು ಜೀವವನ್ನು ಅಂಗೈಯಲ್ಲಿಟ್ಟುಕೊಂಡು, ಭಯದಲ್ಲೇ ದಡ ಬೇಗ ಬರಲಿ ಎಂದುಕೊಳ್ಳುತ್ತಿದ್ದೆ. ನದಿಯಲ್ಲಿ ಮೊಸಳೆಗಳಿವೆ ಎಂದು ಕೇಳಿದ್ದೆ. ಅದು ಸಹ ಭಯ ಹೆಚ್ಚಾಗಲು ಕಾರಣವಾಗಿತ್ತು. ಆ ಕಡೆ ನದಿ ತೀರ ತಲುಪಿದ ಮೇಲೆ ಐದು ನಿಮಿಷ ಕಾಲ್ನಡಿಗೆಯಲ್ಲಿ ಸಾಗಿದರೆ ನಾರದಗಡ್ಡೆಯ ಶ್ರೀ ಚನ್ನಬಸವೇಶ್ವರ ದೇವಾಲಯ ಸಿಗುತ್ತದೆ. ನೆರೆಯ ರಾಜ್ಯವಾದ ತೆಲಂಗಾಣದ ಭಕ್ತರು ಗದ್ವಾಲದ ನೆಂಟಂಪಾಡು, ಮಕ್ತಲದ ಮುಸಲಾಯಿಪಲ್ಲಿಯ ಮಾರ್ಗದಿಂದ ಬಸ್‌ನಲ್ಲಿ ಬಂದು, ಅವರೂ ಸಹ ನಮ್ಮಂತೆ ಬೋಟ್ ನೆರವಿನಿಂದ ದೇವಾಲಯ ತಲುಪುತ್ತಾರೆ.
ಈ ಕ್ಷೇತ್ರದಲ್ಲಿ ಪ್ರತಿ ವರ್ಷ ಶಿವರಾತ್ರಿ ಅಮಾವಾಸ್ಯೆಯಾದ ಐದು ದಿನಗಳ ನಂತರ ರಥೋತ್ಸವ ನಡೆಯುತ್ತದೆ. ಈ ರಥೋತ್ಸವದಲ್ಲಿ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ ಜಿಲ್ಲೆಯ ಸುತ್ತಮುತ್ತಲಿರುವ ಹಲವಾರು ಹಳ್ಳಿಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಚನ್ನಬಸವೇಶ್ವರ ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಾರೆ.
ಬುರ್ದಿಪಾಡ ಗ್ರಾಮದಿಂದ ನಾರದಗಡ್ಡೆಗೆ ಸುಲಭವಾಗಿ ಹೋಗಲು ಸೇತುವೆಯೊಂದು ನಿರ್ಮಾಣವಾಗಬೇಕಿದೆ. ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಕ್ಷೇತ್ರ ಅಭಿವೃದ್ಧಿ ಆಗಬೇಕಿದೆ. ಪ್ರದೇಶದ ಸಮಗ್ರ ಅಭಿವೃದ್ಧಿ ಮಾಡಿದರೆ ಜನರಿಗೆ ಅನುಕೂಲವಾಗುತ್ತದೆ. ಇದರಿಂದ ಪ್ರವಾಸೋದ್ಯಮ ಬೆಳೆಯುತ್ತದೆ. ತನ್ಮೂಲಕ ಎಡೆದೊರೆ ನಾಡು ರಾಯಚೂರು ಜಿಲ್ಲೆಯ ಅಪರೂಪದ ಯಾತ್ರಾತಾಣವಾದ ನಾರದಗಡ್ಡೆಯ ಹಿರಿಮೆ ಹೊರ ಜಗತ್ತಿಗೆ ಪರಿಚಯಿಸಿದಂತಾಗುತ್ತದೆ.