ADVERTISEMENT

ಹಸಿರಿನ ನಗರ ಕೋಟೆ

ವಿ.ಎಸ್.ಕುಮಾರ್‌
Published 17 ಜುಲೈ 2019, 19:30 IST
Last Updated 17 ಜುಲೈ 2019, 19:30 IST
 ನಗರಕೋಟೆ
 ನಗರಕೋಟೆ   

ಶಿವಮೊಗ್ಗ ಜಿಲ್ಲೆ ಹೊಸನಗರದ ಬಳಿಯಿರುವ ಕೊಡಚಾದ್ರಿ ತಪ್ಪಲಿನಲ್ಲಿ ನಗರ ಕೋಟೆ ಇದೆ. ಇದನ್ನು ಶಿವಪ್ಪನಾಯಕನ ಕೋಟೆ ಅಥವಾ ಬಿದನೂರು ಕೋಟೆ ಎಂದು ಕರೆಯುತ್ತಾರೆ. ಅಚ್ಚ ಹಸಿರ ಹುಲ್ಲು ಹಾಸನ್ನು ಹೊದ್ದು ನಿಂತಿರುವ ಈ ಕೋಟೆಯನ್ನು ಶ್ರಮಪಟ್ಟು ಏರಿ ನಿಂತರೆ, ಎತ್ತ ನೋಡಿದರೂ ಸುತ್ತಲಿನ ಮಲೆನಾಡ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದು. ಬೆಟ್ಟಗುಡ್ಡಗಳು, ತಂಗಾಳಿಯ ಆಹ್ಲಾದದೊಂದಿಗೆ ದೂರದ ಕೊಡಚಾದ್ರಿ ಪರ್ವತ ಶ್ರೇಣಿಗಳ ವಿಹಂಗಮ ನೋಟ, ದೂರದ ಮೂಕಾಂಬಿಕೆ ಅಭಯಾರಣ್ಯದ ನಯನ ಮನೋಹರ ದೃಶ್ಯ, ಹತ್ತಿರದ ಕೆರೆಯಂಗಳದ ಕಣ್ಮನ ತಣಿಸುವ ದೃಶ್ಯ ಕಾಣಿಸುತ್ತದೆ. ನಗರ ಕೋಟೆಯ ವಿಹಂಗಮ ನೋಟದ ಸೊಬಗು ಪ್ರವಾಸಿಗರ ಮನದಂಗಳೆದಲ್ಲಿ ಬಹುಕಾಲ ನೆನಪಿನಲ್ಲುಳಿಯುತ್ತದೆ.

ಇತಿಹಾಸದಲ್ಲಿ...

ಬಿದನೂರು ಕೋಟೆ, ನಗರ ಕೋಟೆ ಅಥವಾ ಶಿವಪ್ಪನಾಯಕನ ಕೋಟೆ ಎಂಬೆಲ್ಲಾ ಹೆಸರುಗಳಿಂದ ಖ್ಯಾತಿಗಳಿಸಿರುವ ಈ ಕೋಟೆಗೆ ಸುಮಾರು 500 ವರ್ಷಗಳ ಇತಿಹಾಸವಿದೆ. ಶಿವಪ್ಪನಾಯಕನ ಆಳ್ವಿಕೆಯಲ್ಲಿ ಅಂದರೆ ಕ್ರಿ.ಶ 1645 –1665ರ ಅವಧಿಯಲ್ಲಿ ಈ ಕಲ್ಲಿನ ಕೋಟೆಯನ್ನು ಅನೇಕ ಮಾರ್ಪಾಟುಗಳೊಂದಿಗೆ ಅಲಂಕರಿಸಿದ್ದಾರೆ.

ADVERTISEMENT

ವಿಶೇಷ ವಿನ್ಯಾಸ

ಕೋಟೆಯ ಉತ್ತರ ಭಾಗದಲ್ಲಿ ಕಂದಕಗಳಿಂದ ಹೊರಚಾಚಿದ ಹಾಗೂ ಬತೇರಿಯಿಂದ ಆವೃತವಾದ ಪ್ರವೇಶದ್ವಾರವಿದೆ. ಕೋಟೆಯ ಗೋಡೆಗೆ ಹೊಂದಿಕೊಂಡಂತೆ ನಾಲ್ಕೂ ದಿಕ್ಕುಗಳಲ್ಲಿ ಆರು ಬತೇರಿಗಳಿವೆ. ಬೃಹತ್ ಗಾತ್ರದ ಕೋಟೆಯ ಗೋಡೆಗಳಲ್ಲಿ ನವಿರಾದ ರಂದ್ರಗಳನ್ನು ಅಳವಡಿಸಲಾಗಿದೆ. ಇನ್ನು ಕೋಟೆಯ ಒಳಭಾಗವಂತೂ ಸದಾ ಹಸಿರಿನಿಂದ ಕಂಗೊಳಿಸುತ್ತಿದ್ದು ಮಲೆನಾಡ ಸೀಮೆಯ ಕೋಟೆಗೆ ಸಾಕ್ಷಿಯಾಗಿ ನಿಂತಿದೆ.

ಈಗಲೂ ಅಲ್ಲಲ್ಲಿ ಅರಮನೆಯ ಭಗ್ನಾವಶೇಷಗಳನ್ನು ಕಾಣಬಹುದು. ಕಾವಲುಗಾರರ ಕೋಣೆ, ಕೊಳದ ಬಾವಿಗಳು, ಹಜಾರಗಳು ಮತ್ತು ಅರಮನೆಯ ಕೋಣೆಗಳ ಅವಶೇಷಗಳು ಅಷ್ಟಮೂಲೆಯ ಬಾವಿ ಮೊದಲಾದವು ಈ ಕೋಟೆಯ ಆಕರ್ಷಣೆಗಳು. ಶಿವಪ್ಪನಾಯಕನ ಕಾಲದಲ್ಲಿ ಮಲೆನಾಡ ಮಧುಮಗಳಂತೆ ಅಲಂಕರಿಸಲ್ಪಟ್ಟ ಈ ಕೋಟೆಯು ಶಿವಪ್ಪನಾಯಕನ ಕೋಟೆಯೆಂದೇ ಖ್ಯಾತಿ ಪಡೆಯಿತು.

ಹಸಿರು ಹೊದ್ದ ಕೋಟೆಯ ಆವರಣದಲ್ಲಿ ನಡೆದಾಡುವುದೇ ವಿಶಿಷ್ಟ ಅನುಭವ. ಕೋಟೆಯ ಚೆಲುವನ್ನು ಕಣ್ತುಂಬಿಕೊಂಡು ಕೋಟೆಯ ತುದಿಯ ಮೇಲೇರಿ ನಿಂತಲ್ಲಿ ಕಾಣಸಿಗುವ ಸುತ್ತಮುತ್ತಣದ ಪ್ರಾಕೃತಿಕ ಸೊಬಗು ನಿಜಕ್ಕೂ ಮೈಮನಗಳಿಗೆ ನವೋಲ್ಲಾಸ ನೀಡುತ್ತದೆ.

ಎಲ್ಲಿದೆ ಈ ನಗರಕೋಟೆ

ಹೊಸನಗರದಿಂದ ಕೊಡಚಾದ್ರಿ, ಕೊಲ್ಲೂರಿಗೆ ಹೋಗುವ ಹಾದಿಯಲ್ಲಿ ಕೇವಲ 16 ಕಿ.ಮೀ. ದೂರದಲ್ಲಿದೆ ಈ ಸುಂದರ ಕೋಟೆ. ಕರಾವಳಿ ತೀರದಿಂದ ಹಿಂತಿರುಗುವಲ್ಲಿ ಕಮಲ ಶಿಲೆಯ ದುರ್ಗಾಪರಮೇಶ್ವರಿ ದೇವಿಯ, ಕೊಲ್ಲೂರು ಮೂಕಾಂಬಿಕೆಯ ದರ್ಶನ ಮಾಡಿಕೊಂಡು ಕೊಡಚಾದ್ರಿ ಹಾದಿಯಲ್ಲಿ ಕೊಡಚಾದ್ರಿಯನ್ನೂ ನೋಡಿಕೊಂಡು ಹೊಸನಗರದ ಕಡೆಗೆ ಹಿಂತಿರುಗುವಾಗ ಈ ನಗರ ಕೋಟೆ ಸಿಗುತ್ತದೆ. ಕೊಡಚಾದ್ರಿ ಕ್ರಾಸ್‍ನಿಂದ ಕೇವಲ 30 ಕಿ.ಮೀ. ದೂರದಲ್ಲಿದೆ. ಈ ನಗರ ಕೋಟೆಯನ್ನು ವೀಕ್ಷಿಸಲು ಪ್ರವಾಸಿಗರು ಒಂದೆರಡು ತಾಸು ಮೀಸಲಿಟ್ಟರೆ ಸಾಕು. ಇಲ್ಲಿಂದ ಮುಂದೆ ಹೊಸನಗರಕ್ಕೆ ಹೋಗುವ ಹಾದಿಯಲ್ಲಿ ಸಿಗುವ ಗಾಜಿನ ಚೂರುಗಳಿಂದಲೇ ಅಲಂಕರಿಸುವ ಸುಂದರವಾದ ಕಾರಣಗಿರಿ ಗಣಪತಿ ದೇಗುಲ ದರ್ಶನವನ್ನೂ ಮಾಡಿಕೊಂಡು ಪಯಣ ಬೆಳೆಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.