ADVERTISEMENT

ಪ್ರವಾಸ: ಭಾರತ-ಚೀನಾ ಗಡಿಯ ಸುಂದರವಾದ ಪರ್ವತ ಶ್ರೇಣಿ ಸಿಕ್ಕಿಂನ ನಾಥು ಲಾ

ಜಿ.ನಾಗೇಂದ್ರ ಕಾವೂರು
Published 12 ಜುಲೈ 2025, 21:16 IST
Last Updated 12 ಜುಲೈ 2025, 21:16 IST
ಭಾರತ ಮತ್ತು ಚೀನಾ ಗಡಿಯಲ್ಲಿರುವ ನಾಥು ಲಾ ಪ್ರದೇಶ
ಭಾರತ ಮತ್ತು ಚೀನಾ ಗಡಿಯಲ್ಲಿರುವ ನಾಥು ಲಾ ಪ್ರದೇಶ   

ಸಿಕ್ಕಿಂ ರಾಜ್ಯದಲ್ಲಿರುವ ನಾಥು ಲಾ ಅತ್ಯಂತ ಸುಂದರವಾದ ಪರ್ವತ ಶ್ರೇಣಿಯನ್ನು ಹೊಂದಿದೆ. ಈ ಭಾಗಕ್ಕೆ ಪ್ರವಾಸ ಮಾಡುವುದು ಮನಸ್ಸಿಗೆ ಮುದ ನೀಡುತ್ತದೆ. ಇಲ್ಲಿಗೆ ಭೇಟಿ ನೀಡಿದ ಲೇಖಕರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

––––

ಸಿಕ್ಕಿಂ ರಾಜ್ಯವು ಹಿಮಾಲಯದ ನಯನ ಮನೋಹರ ಪ್ರಕೃತಿಗೆ ಹೆಸರಾಗಿದೆ. ಆಕಾಶವನ್ನು ಚುಂಬಿಸುತ್ತಿರುವಂತೆ ಕಾಣುವ ಹಿಮದಿಂದ ಆವೃತವಾಗಿರುವ ಪರ್ವತಗಳು, ಮೋಡಿ ಮಾಡುವ ಭೂದೃಶ್ಯಗಳು ಪ್ರವಾಸಿಗರನ್ನು ಆಕರ್ಷಿಸುತ್ತವೆ. ಸಿಕ್ಕಿಂನಲ್ಲಿ ಹಲವಾರು ಪ್ರವಾಸಿ ಆಕರ್ಷಣೆಗಳಿವೆ. ಅವುಗಳಲ್ಲಿ ರಾಜಧಾನಿ ಗ್ಯಾಂಗ್‌ಟಾಕ್‌ನಿಂದ ಸುಮಾರು 53 ಕಿಲೋಮೀಟರ್‌ ದೂರದಲ್ಲಿರುವ ಭಾರತ-ಚೀನಾ ನಡುವಿನ ಮೂರು ಮುಕ್ತ ವ್ಯಾಪಾರ ಗಡಿ ಪೋಸ್ಟ್‌ಗಳಲ್ಲಿ ಒಂದಾಗಿರುವ ‘ನಾಥು ಲಾ’ ಅತ್ಯಂತ ಜನಪ್ರಿಯ ಪ್ರವಾಸಿ ತಾಣ.

ADVERTISEMENT

ನಾಥು ಲಾ ಚೀನಾ ಮತ್ತು ಭಾರತ ನಡುವೆ ವ್ಯಾಪಾರದಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಾಥು ಲಾ, ಪೂರ್ವ ಸಿಕ್ಕಿಂ ಜಿಲ್ಲೆಯ ಹಿಮಾಲಯ ಪರ್ವತದ ಹಾದಿಯಾಗಿದ್ದು, ಸಿಕ್ಕಿಂ ಮತ್ತು ಚೀನಾದ ಟಿಬೆಟ್‌ ಸ್ವಾಯುತ್ತ ಪ್ರದೇಶವನ್ನು ಸಂಪರ್ಕಿ ಸುತ್ತದೆ. ಟಿಬೆಟಿಯನ್‌ ಭಾಷೆಯಲ್ಲಿ ‘ನಾಥು’ ಎಂದರೆ ಕೇಳುವ ಕಿವಿಗಳು ಮತ್ತು ‘ಲಾ’ ಎಂದರೆ ‘ಪಾಸ್‌’ ಎಂದರ್ಥ. ಪ್ರಮುಖ ಬೌದ್ಧ ಮತ್ತು ಹಿಂದೂ ಯಾತ್ರಾಸ್ಥಳಗಳ ನಡುವಿನ ಅಂತರವನ್ನು ಕಡಿಮೆಗೊಳಿಸುವುದರೊಂದಿಗೆ ಆರ್ಥಿಕತೆಯನ್ನು ಬಲಪಡಿಸಲು ಸಹಕಾರಿಯಾಗಿದೆ. ಮಾನಸ ಸರೋವರ ಯಾತ್ರೆ ಕೈಗೊಳ್ಳಲು ಹಲವು ಮಾರ್ಗಗಳಿವೆ. ಹಿಮಾಲಯದಲ್ಲಿ ಚಾರಣ ನಡೆಸಲು ಸಾಧ್ಯವಾಗದವರು ನಾಥು ಲಾ ತಲುಪಿ ಅಲ್ಲಿಂದ ಚೀನಾ ಸರ್ಕಾರ ಒದಗಿಸುವ ವಾಹನ ಅಥವಾ ಕುದುರೆಗಳನ್ನೇರಿ ಮಾನಸ ಸರೋವರ ತಲುಪಬಹುದು.

ನಾಥು ಲಾ ಸಮೀಪವೇ ಹರ್ಭಜನ್‌ ಸಿಂಗ್‌ ದೇವಾಲಯ ಮತ್ತು ಚಾಂಗು ಸರೋವರ ಇರುವುದರಿಂದ ನಾಥು ಲಾ ವೀಕ್ಷಿಸಲು ತೆರಳುವ ಪ್ರವಾಸಿರು ಈ ಎರಡನ್ನೂ ತಪ್ಪದೇ ನೋಡುತ್ತಾರೆ.

ಚಳಿಗಾಲದಲ್ಲಿ ಹಿಮದಿಂದ ಆವೃತವಾಗಿರುವ ಪ್ರಕೃತಿ ವಿಭಿನ್ನ ಅನುಭವ ನೀಡುತ್ತದೆ. ಹೆಚ್ಚಾಗಿ ಪ್ರವಾಸಿಗರು ಚಳಿಗಾಲದಲ್ಲಿ ಗ್ಯಾಂಗ್‌ಟಾಕ್‌ ಹಾಗೂ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡುತ್ತಾರೆ. ಆದರೂ, ಮೇಘಾಲಯದ ಹಲವು ಪ್ರದೇಶಗಳಲ್ಲಿ ಆರು ದಿನಗಳ ಚಾರಣ ನಡೆಸಿ ಹಿಂದಿರುಗುವ ಸಮಯದಲ್ಲಿ ಸಿಕ್ಕಿಂಗೆ ಭೇಟಿ ನೀಡಲು ನಾವು ನಿರ್ಧರಿಸಿದ್ದೆವು.

ಗ್ಯಾಂಗ್‌ಟಾಕ್‌ನಿಂದ 53 ಕಿಲೋಮೀಟರ್‌ ದೂರದಲ್ಲಿರುವ ‘ನಾಥು ಲಾ’ಗೆ ನಾಲ್ಕು ಮಂದಿ ಹೊರಟೆವು. ಅಲ್ಲಿಗೆ ತಲುಪಲು ಸುಮಾರು 2 ರಿಂದ 3 ಗಂಟೆಗಳು ಹಿಡಿಯಿತು. ಪ್ರಯಾಣದ ಉದ್ದಕ್ಕೂ ಹಿಮಾಲಯ ಶ್ರೇಣಿಯ ರುದ್ರ ರಮಣೀಯ ದೃಶ್ಯಗಳು ಅನನ್ಯ ಅನುಭೂತಿ ನೀಡಿದವು. ಗ್ಯಾಂಗ್‌ಟಾಕ್‌ನಿಂದ ಹತ್ತು ಕಿಲೋಮೀಟರ್‌ ದೂರದಲ್ಲಿರುವ ಚೆಕ್‌ಪೋಸ್ಟ್‌ನಲ್ಲಿ ಚಾಂಗು ಸರೋವರ ವೀಕ್ಷಿಸಲು ಟಿಕೆಟ್‌ ಖರೀದಿಸಿದೆವು. ರಸ್ತೆ ಬದಿಯಲ್ಲಿ ಎತ್ತರಕ್ಕೆ ಬೆಳೆದು ನಿಂತಿರುವ ಕೋನಿಫೆರಸ್‌ ಮರಗಳು, ಪರ್ವತದ ಸಾಲುಗಳನ್ನು ಚುಂಬಿಸುತ್ತಿದ್ದ ಮೋಡಗಳು ಮಂತ್ರಮುಗ್ಧರನ್ನಾಗಿಸಿದವು. ನಮ್ಮ ಡ್ರೈವರ್‌ ಹೇಳಿದ ಹಾಗೆ ಒಂದೆರಡು ನಿಮಿಷಗಳಲ್ಲೇ ವಾತಾವರಣ ಬದಲಾಗುತ್ತಿತ್ತು. ಮೋಡಗಳು ಕೆಲವೇ ಸೆಕೆಂಡ್‌ಗಳಲ್ಲಿ ಚದುರಿಹೋಗುತ್ತಿದ್ದವು.ಮಾರ್ಗ ಮಧ್ಯೆ ಸಿಗುವ ವ್ಯೂ ಪಾಯಿಂಟ್‌ನಿಂದ ಕಾಣುವ ಕಾಂಚನ ಗಂಗಾ ಪರ್ವತದ ಸುಂದರ ನೋಟವನ್ನು ಕಣ್ತುಂಬಿಕೊಂಡೆವು. ನಾಥು ಲಾ ಐದು ಕಿಲೋಮೀಟರ್‌ ದೂರವಿರುವಾಗ ಮತ್ತೊಂದು ಚೆಕ್‌ ಪೋಸ್ಟ್‌ ಎದುರಾಯಿತು. ಇಲ್ಲಿ ಅನುಮತಿ ಪತ್ರಗಳನ್ನು ಪರಿಶೀಲಿಸಿದರು. ನಾಥು ಲಾಗೆ ಕರೆದುಕೊಂಡು ಹೋಗಲು ವ್ಯವಸ್ಥೆ ಮಾಡಲಾಗಿರುವ ವಾಹನಗಳನ್ನು ಹೊರತು ಪಡಿಸಿದರೆ, ಇತರೆ ಯಾವುದೇ ವಾಹನಗಳನ್ನು ಒಳಗೆ ಬಿಡುವುದಿಲ್ಲ. ನಾವೆಲ್ಲರೂ ನಿಗದಿತ ವಾಹನಗಳಲ್ಲಿ ತೆರಳಿದೆವು.

ಬೇಲಿಯಿಂದ ಸುತ್ತುವರೆದಿರುವ ಇಂಡೋ-ಚೀನಾ ಗಡಿಯನ್ನು ತಲುಪಲು ಮೆಟ್ಟಿಲುಗಳನ್ನೇರಿ ಹೋಗಬೇಕು. ಎರಡೂ ಕಡೆಗಳಲ್ಲಿ ಆಯಾ ದೇಶಗಳ ಸೈನಿಕರು ಕಾವಲು ಕಾಯುತ್ತಿರುತ್ತಾರೆ. ಇಲ್ಲಿ ಇಂಡೋ-ಚೀನಾ ಯುದ್ಧದಲ್ಲಿ ವೀರ ಮರಣವನ್ನಪ್ಪಿದ
ಸೈನಿಕರಿಗಾಗಿ ಸ್ಮಾರಕ ಮತ್ತು ಭಾರತೀಯ ಸೈನ್ಯದ ವಸ್ತುಪ್ರದರ್ಶನ ಕೇಂದ್ರವಿದೆ. ಸ್ಮಾರಕವು ಸೈನಿಕರ ಹೆಸರು, ಹುದ್ದೆ, ಹುತಾತ್ಮರಾದ ದಿನಾಂಕ ಮತ್ತು ಪಾಲ್ಗೊಂಡಿದ್ದ ಯುದ್ಧ ಮೊದಲಾದ ವಿವರಗಳನ್ನು ಒಳಗೊಂಡಿದ್ದು, ಸೈನಿಕರ ಶೌರ್ಯ ಮತ್ತು ತ್ಯಾಗದ ಐತಿಹಾಸಿಕ ದಾಖಲೆಗಳಾಗಿವೆ.

‘ನಾಥು ಲಾ’ದಿಂದ 17 ಕಿಲೋಮೀಟರ್‌ ದೂರದಲ್ಲಿ ನೀರ್ಗಲ್ಲಿನ ಸರೋವರ ‘ಚಾಂಗು’ ಪ್ರವಾಸಿಗರನ್ನು ಸೆಳೆಯುತ್ತದೆ. ಕಡಿದಾದ ಪರ್ವತಗಳಿಂದ ಆವೃತವಾಗಿರುವ ಚಾಂಗು ಸರೋವರವನ್ನು ಪವಿತ್ರವೆಂದು ಪರಿಗಣಿಸಲಾಗಿದ್ದು, ಋತುಗಳಿಗೆ ಅನುಗುಣವಾಗಿ ಬಣ್ಣ ಬದಲಾಯಿಸುತ್ತದೆ. ಚಳಿಗಾಲದಲ್ಲಿ ಹೆಪ್ಪುಗಟ್ಟುವ ಸರೋವರದಲ್ಲಿ ಆಯೋಜಿಸಲಾಗುವ ಸ್ಕೇಟಿಂಗ್‌ ಮತ್ತು ಸ್ನೋಬಾಲ್‌ ಪಂದ್ಯಗಳು
ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುತ್ತವೆ. ಹಿಮಾಲಯದಲ್ಲಿ ಮಾತ್ರ ಕಾಣಸಿಗುವ ‘ಯಾಕ್‌’ ಪ್ರಾಣಿಗಳನ್ನು ಸುಂದರವಾಗಿ ಅಲಂಕರಿಸಿರುತ್ತಾರೆ. ಚಾಂಗು ಸರೋವರವನ್ನು ವೀಕ್ಷಿಸಲು ಬರುವ ಪ್ರವಾಸಿಗರು ‘ಯಾಕ್‌’ ಸವಾರಿ ಮಾಡಿ ಫೋಟೊ ಕ್ಲಿಕ್ಕಿಸಿಕೊಳ್ಳಲು ಮರೆಯುವುದಿಲ್ಲ.

‘ನಾಥು ಲಾ’ಗೆ ಹೋಗಲು ಭಾರತೀಯ ಪ್ರಜೆಗಳು ಮಾತ್ರ ಅರ್ಹರಾಗಿರುತ್ತಾರೆ. ಗ್ಯಾಂಗ್‌ಟಾಕ್‌ನಲ್ಲಿರುವ ಪ್ರವಾಸೋದ್ಯಮ ಮತ್ತು ನಾಗರಿಕ ವಿಮಾನಯಾನ ಇಲಾಖೆಗೆ ‘ನಾಥು ಲಾ’ಗೆ ಪ್ರವೇಶಿಸುವ ಒಂದು ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಿ ಅನುಮತಿ ಪತ್ರವನ್ನು ಪಡೆದುಕೊಳ್ಳಬೇಕು. ಸಿಕ್ಕಿಂ ಸರ್ಕಾರದ ಅಧಿಕೃತ ವಾಹನಗಳಲ್ಲಿ ಮಾತ್ರ ಇಲ್ಲಿಗೆ ಭೇಟಿ ನೀಡಬಹುದು. ನಾಥು ಲಾ 14,140 ಅಡಿ ಎತ್ತರದಲ್ಲಿದೆ. ಆದ್ದರಿಂದ ಆಮ್ಲಜನಕದ ಕೊರತೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ ಉಸಿರಾಟದ ತೊಂದರೆಯಿಂದ ಕುಸಿದು ಬೀಳುವ ಸಾಧ್ಯತೆಗಳಿವೆ. ದೀರ್ಘವಾಗಿ ಉಸಿರಾಡುವುದರಿಂದ ಕುಸಿದು ಬೀಳುವುದರಿಂದ ತಪ್ಪಿಸಿಕೊಳ್ಳ
ಬಹುದು. ಸೋಮವಾರ ಮತ್ತು ಮಂಗಳವಾರ ಹೊರತುಪಡಿಸಿ ಇತರೆ ದಿನಗಳಲ್ಲಿ ನಾಥು ಲಾ ವೀಕ್ಷಿಸಲು ಬೆಳಿಗ್ಗೆ 8 ರಿಂದ ಮಧ್ಯಾಹ್ನ 3ರ ವರೆಗೆ ಮಾತ್ರ ಅನುಮತಿ ನೀಡುತ್ತಾರೆ. ಹಾಗಾಗಿ ಪ್ರವಾಸಿಗರು ಮೊದಲು ನಾಥು ಲಾ ವೀಕ್ಷಿಸಿ ನಂತರ ಹರ್ಭಜನ್‌ ಸಿಂಗ್‌ ದೇವಾಲಯ ಮತ್ತು ಚಾಂಗು ಲೇಕ್‌ಗಳನ್ನು ವೀಕ್ಷಿಸುತ್ತಾರೆ.

ಚಾಂಗು ಸರೋವರದ ನೋಟ
ಹಿಮದಿಂದ ಆವೃತವಾದಾಗ ನಾಥು ಲಾ ಹೀಗೆ ಕಾಣುತ್ತದೆ...
‘ನಾಥು ಲಾ’ದಲ್ಲಿರುವ ಬುದ್ಧನ ಪ್ರತಿಮೆ
ಹರ್ಭಜನ್‌ ಸಿಂಗ್‌ ದೇವಾಲಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.