ADVERTISEMENT

ಕೆಮ್ಮಣ್ಣಿನ ಕಣಿವೆಯಲಿ

ಬಿ.ಎಂ.ಹನೀಫ್
Published 8 ಮೇ 2019, 19:45 IST
Last Updated 8 ಮೇ 2019, 19:45 IST
ಕೆಮ್ಮಣ್ಣುಗುಂಡಿ
ಕೆಮ್ಮಣ್ಣುಗುಂಡಿ   

ಏಪ್ರಿಲ್ ಕೊನೆಯಲ್ಲಿ ಬೆಂಗಳೂರಿನ ಬಿಸಿ ತಾರಕಕ್ಕೆ ಏರಿತ್ತು. ಅಲ್ಲಲ್ಲಿ ಒಂದೆರಡು ಸಣ್ಣ ಮಳೆ ಬಿದ್ದಿದ್ದರೂ ತಾಪಮಾನ ಕೆಳಗಿಳಿದಿರಲಿಲ್ಲ. ಮಧ್ಯಾಹ್ನದ ಹೊತ್ತಿಗೆ ಬಿಸಿಗಾಳಿಯ ಅನುಭವ. ಕಾರು ಹತ್ತಿ ಹೊರಟದ್ದು ‘ಬಡವರ ಊಟಿ’ ಕೆಮ್ಮಣ್ಣುಗುಂಡಿಗೆ. ಬೆಂಗಳೂರು- ಹೊನ್ನಾವರ ಹೆದ್ದಾರಿಯಲ್ಲಿ ತುಮಕೂರು-ಅರಸೀಕೆರೆ- ತರೀಕೆರೆ- ಬೀರೂರುವರೆಗಿನ ಸಿಂಗಲ್ ಮಾರ್ಗ ಡ್ರೈವಿಂಗ್‍ಗೆ ಪರವಾಗಿಲ್ಲ. ಮಾರ್ಗವನ್ನು ಡಬಲ್ ಆಗಿಸುವ ಕೆಲಸ ಅಲ್ಲಲ್ಲಿ ನಡೆದಿದೆ. ತರೀಕೆರೆಯಲ್ಲಿ ನಿಲ್ಲಿಸಿ ಪಕ್ಕದಲ್ಲೆಲ್ಲಾದರೂ ಪಾರಂಪರಿಕ ಎಣ್ಣೆಗಾಣ ನೋಡಲು ಸಿಗುತ್ತದೆಯೆ ಎಂದು ಹುಡುಕಿದರೆ, ‘ಎಲ್ರೂ ಮೆಶಿನ್ ಹಾಕ್ಕೊಂಡಿದ್ದಾರೆ ಸಾರ್.. ಹಳೇ ಎಣ್ಣೆಗಾಣಗಳೆಲ್ಲ ಕಣ್ಮರೆಯಾಗಿವೆ’ ಎನ್ನುವ ಉತ್ತರ ಸಿಕ್ಕಿತು.

ಬೀರೂರು ಸರ್ಕಲ್‍ನಲ್ಲಿ ಎಡಕ್ಕೆ ತಿರುಗಿ ಲಿಂಗದಳ್ಳಿ ಮೂಲಕ ಕೆಮ್ಮಣ್ಣುಗುಂಡಿಗೆ ಹೋಗಬೇಕು. ಆ ಕಡೆ ಶಿವಮೊಗ್ಗದಿಂದ ಬರುವವರಿಗೂ ಇದೇ ಸಿಗ್ನಲ್. ಆದರೆ ಈ ಸರ್ಕಲ್‍ನಲ್ಲಿ ದೊಡ್ಡದೊಂದು ಸ್ವಾಗತ ಕಮಾನು ನಿರೀಕ್ಷಿಸಿದರೆ ನಿರಾಶೆಯಾಗುತ್ತದೆ. ಕರ್ನಾಟಕದ ಅತ್ಯುತ್ತಮ ಗಿರಿಧಾಮ ಕೆಮ್ಮಣ್ಣುಗುಂಡಿಯನ್ನು ಹುಡುಕಿ ಬರುವವರಿಗೆ ಪ್ರವಾಸೋದ್ಯಮ ಇಲಾಖೆ ಇಷ್ಟೊಂದು ನಿರ್ಲಕ್ಷ್ಯ ತೋರಬಾರದು. ರಸ್ತೆ ತಿರುವು ತೆಗೆದುಕೊಂಡ ಬಳಿಕ ಪ್ರವಾಸೋದ್ಯಮ ಇಲಾಖೆಯ ಸಣ್ಣದೊಂದು ಸೂಚನಾ ಫಲಕವಷ್ಟೆ ಕಾಣುತ್ತದೆ.

ಬೀರೂರು- ಕೆಮ್ಮಣ್ಣು ಗುಂಡಿ ರಸ್ತೆಯ ಇಕ್ಕೆಲಗಳು ನಿಜಕ್ಕೂ ಚೇತೋಹಾರಿ. ಅದರಲ್ಲೂ ಲಿಂಗದಳ್ಳಿಯಿಂದ ಬೆಟ್ಟ ಹತ್ತುವಾಗ ಹೆಚ್ಚು ಖುಷಿ ಕೊಡುತ್ತವೆ. ಅಡಿಕೆ ತೋಟಗಳೂ ಅಲ್ಲಲ್ಲಿ ಕಂಗೊಳಿಸುತ್ತವೆ. ಆದರೆ ಘಾಟಿ ಹತ್ತುವಾಗ ಸ್ವಲ್ಪ ಹುಷಾರಾಗಿರಬೇಕು. ಏಕೆಂದರೆ ಕಲ್ಲತ್ತಿ ಜಲಪಾತ ಮತ್ತು ದೇವಸ್ಥಾನದ ಬಳಿಕದ ಏರುದಾರಿ ಡಾಂಬರು ಕಿತ್ತುಹೋಗಿದೆ.

ADVERTISEMENT

ಕೆಮ್ಮಣ್ಣುಗುಂಡಿ ಶ್ರೀಕೃಷ್ಣರಾಜೇಂದ್ರ ಗಿರಿಧಾಮದ ಮೇಲೆ ಹತ್ತಿ ರಾಜಭವನ ಗೆಸ್ಟ್‌ಹೌಸ್ ತಲುಪಿ ಸುತ್ತ ನೋಡಿದಾಗ ಬೆಂಗಳೂರಿನಿಂದ 280 ಕಿ.ಮೀ ಕ್ರಮಿಸಿದ ಆಯಾಸ ಕ್ಷಣಮಾತ್ರದಲ್ಲಿ ಕಣ್ಮರೆಯಾಯಿತು. ಬಿರುಬಿಸಿಲಿನಲ್ಲೂ ತಂಪಾದ ವಾತಾವರಣ. ಏಪ್ರಿಲ್‍ನಲ್ಲಿ ಒಂದು ಮಳೆಯೂ ಬಿದ್ದಿರಲಿಲ್ಲ. ‘ಒಂದು ಮಳೆ ಬಿದ್ದಿದ್ದರೆ ವಾತಾವರಣ ಇನ್ನಷ್ಟು ಚೇತೋಹಾರಿಯಾಗುತ್ತಿತ್ತು’ ಎಂದರು ಅಲ್ಲಿನ ಸಿಬ್ಬಂದಿ. (ಗಿರಿಧಾಮದಲ್ಲಿ ಒಂದು ದಿನ ಉಳಿದು, ಮರುದಿನ ಚಿಕ್ಕಮಗಳೂರು ಮಾರ್ಗವಾಗಿ ಪಯಣಿಸುವಾಗ ಮೂಡಿಗೆರೆಯಲ್ಲಿ ಭಾರೀ ಮಳೆ ನಮ್ಮನ್ನು ಸ್ವಾಗತಿಸಿತ್ತು.)

ಸಂಜೆಯ ನಂತರ ಗೆಸ್ಟ್‌ಹೌಸ್ ಹಿಂದಿನ ಗುಡ್ಡ ಹತ್ತಿ ಸೂರ್ಯಾಸ್ತದ ಸೊಬಗು ಸವಿಯಲು ಕುಳಿತರೆ ಅದೊಂದು ಬೇರೆಯದ್ದೇ ಲೋಕ. ಸೂರ್ಯನ ಕೆಂಪು ಕಿರಣಗಳು ನಿಧಾನಕ್ಕೆ ಸುತ್ತಮುತ್ತಲಿನ ಬೆಟ್ಟ ಕಣಿವೆಗಳ ಮೇಲೆ ಪ್ರಭೆ ಬೀರುತ್ತಾ ಅಲೌಕಿಕ ದೃಶ್ಯಗಳನ್ನು ಸೃಷ್ಟಿಸಿದ್ದವು.

ಕೆಮ್ಮಣ್ಣುಗುಂಡಿ ಪ್ರಮುಖ ಟ್ರೆಕ್ಕಿಂಗ್ ಆಕರ್ಷಣೆಯಾದ ಝೆಡ್ ಪಾಯಿಂಟ್ ತುದಿಯನ್ನೇ ನೋಡುತ್ತಾ ಕುಳಿತುಕೊಂಡಿದ್ದೆ. ಆಕಾಶ ಮತ್ತು ಮತ್ತು ಬೆಟ್ಟದ ತುದಿ ಸಂಧಿಸಿದ ಕ್ಷಿತಿಜದಲ್ಲಿ ಐದಾರು ಮಾನವ ಆಕೃತಿಗಳು ಗೋಚರಿಸಿದವು. ಕಣ್ಣು ಕಿರಿದಾಗಿಸಿ ನೋಡಿದರೆ ಟ್ರೆಕ್ಕಿಂಗ್ ಸಾಹಸವೀರರು, ಬೆಟ್ಟ ಹತ್ತುತ್ತಾ ಮೇಲೇರುತ್ತಿದ್ದಾರೆ. (ಗೆಸ್ಟ್‌ಹೌಸ್‍ನಿಂದ ಎರಡೂವರೆ ಕಿ.ಮೀ ದೂರ ಇರುವ ಈ ಝೆಡ್ ಪಾಯಿಂಟ್‍ಗೆ ಶ್ರೀಕೃಷ್ಣರಾಜೇಂದ್ರ ಮಹಾರಾಜರು ಹಿಂದೆ ಕುದುರೆ ಮೇಲೆ ಹೋಗಿ ಬರುತ್ತಿದ್ದರಂತೆ.)

ಮರುದಿನ ಬೆಳಿಗ್ಗೆ ಐದೂಮುಕ್ಕಾಲಕ್ಕೇ ಎದ್ದು ಮತ್ತೆ ಅದೇ ಗುಡ್ಡದ ತುದಿ ಹತ್ತಿ ಕುಳಿತಿದ್ದೆ. ಸಂಜೆ ನಾನು ನೋಡಿದ್ದ ಕೆಮ್ಮಣ್ಣುಗುಂಡಿಯೇ ಬೇರೆ, ಬೆಳಿಗ್ಗೆಯ ಲೋಕವೇ ಬೇರೆ. ಕಣ್ಣನ್ನು ಕಿರುದಾಗಿಸಿ ಎಂಟೂ ದಿಕ್ಕುಗಳಲ್ಲಿ ನೋಡಬೇಕು. ದೂರದ ಬಾಬಾಬುಡನ್‍ಗಿರಿಯ ಅಂಚಿನಿಂದ ದಕ್ಷಿಣಕ್ಕೆ ಬೆಟ್ಟಸಾಲುಗಳ ಮೇಲೆ ಮಂಜಿನ ರಾಶಿ. ಗಾಳಿ ಹೆಚ್ಚಾದಂತೆ ಆ ಮಂಜಿನ ರಾಶಿ ನಿಧಾನಕ್ಕೆ ಸರಿಯುತ್ತಾ ಮೇಲೆ ಕೆಳಗೆ ಕಾಣುವ ಎಲ್ಲ ಬೆಟ್ಟಗಳ ಮೇಲೆ ಕವಿಯುತ್ತಾ ಬರುವ ನೋಟ ನಿಜಕ್ಕೂ ಅಪೂರ್ವವೇ ಸರಿ.

ಹಿಂದಕ್ಕೆ ತಿರುಗಿ ಪೂರ್ವಕ್ಕೆ ನೋಡಿದರೆ ಸೂರ್ಯೋದಯದ ಅದ್ಭುತ ನೋಟ. ಝಡ್ ಪಾಯಿಂಟ್‍ನ ಹಿಂದಿನ ದೂರ ದಿಗಂತದಿಂದ ಸೂರ್ಯ ನಿಧಾನಕ್ಕೆ ಅರುಣೋದಯದ ಕಿರಣಗಳನ್ನು ಬೀರುತ್ತಿದ್ದ. ಅರೆ..! ಝಡ್ ಪಾಯಿಂಟ್ ತುದಿಯಲ್ಲಿ ಆಕಾಶದ ಹಿನ್ನೆಲೆಯಲ್ಲಿ ಐದಾರು ಮಾನವ ಆಕೃತಿಗಳು ಸಣ್ಣ ಪೆನ್ಸಿಲ್ ಕಡ್ಡಿಯಂತೆ ಚಲಿಸುತ್ತಿವೆ!

ನಿನ್ನೆ ಮುಸ್ಸಂಜೆಯಲ್ಲಿ ಬೆಟ್ಟ ಹತ್ತಿದವರೇ ಇರಬೇಕು. ನಿಜಕ್ಕೂ ಸಾಹಸವೀರರೇ ಅನ್ನಿಸಿತ್ತು. ಗೆಸ್ಟ್‌ಹೌಸ್‍ನಿಂದ ಶಾಂತಿ ಜಲಪಾತವನ್ನು ನೋಡಲು ಹೋಗುವ ದಾರಿಯಲ್ಲಿ ಗುಡ್ಡದ ಇಳಿಜಾರಿನಲ್ಲೇ ಈ ಟ್ರೆಕಿಂಗ್ ಹಾದಿಯಿದೆ. ಅರ್ಧ ದೂರದವರೆಗೆ ಕಾರಿನಲ್ಲಿ ಹೋಗಬಹುದು. ಒಂದೂವರೆ ಕಿಮೀನಷ್ಟು ಹಾದಿಯನ್ನು ನಡೆದೇ ಸಾಗಬೇಕು. ಕಣಿವೆಯ ಕೆಳಭಾಗದಲ್ಲಿ ಹಸಿರುಕ್ಕುವ ಅರಣ್ಯದ ನಡುವೆ ಕೆಂಪು, ಹಳದಿ ಹೂಗಳ ರಾಶಿ ಅಲ್ಲಲ್ಲಿ ಕಾಣಿಸುತ್ತಿತ್ತು. ಮಳೆಬಿದ್ದ ಮೇಲೆ ಈ ಹೂಕಣಿವೆ ಇನ್ನಷ್ಟು ವ್ಯಾಪಕವಾಗಿ ಕಾಣಿಸಬಹುದು.

ಕೆಮ್ಮಣ್ಣುಗುಂಡಿಯ ವಿಶೇಷವೆಂದರೆ ಸಮಶೀತೋಷ್ಣದ ಹವಾಮಾನ. ಎಂತಹ ಬಿರುಬೇಸಿಗೆಯ ಮಧ್ಯಾಹ್ನದಲ್ಲೂ ಇಲ್ಲಿ ಉಷ್ಣಾಂಶ 28 ಡಿಗ್ರಿ ಸೆಲ್ಶಿಯಸ್ ದಾಟುವುದಿಲ್ಲ. ಹಾಗೆಯೇ ಎಂತಹ ಚಳಿಗಾಲದಲ್ಲೂ 8 ಡಿಗ್ರಿ ಸೆಲ್ಶಿಯಸ್‌ಗಿಂತ ಕಡಿಮೆ ಆಗುವುದಿಲ್ಲ. ತೋಟಗಾರಿಕೆ ಇಲಾಖೆಯು ಜತನದಿಂದ ರೂಪಿಸಿರುವ ಉದ್ಯಾನವನದಲ್ಲಿ ಸಾವಿರಾರು ಬಗೆಯ ಬಣ್ಣ ಬಣ್ಣದ ಹೂಗಳ ರಾಶಿ ಕೈಬೀಸಿ ಸ್ವಾಗತಿಸುತ್ತವೆ. ಗಿರಿಧಾಮದ ಈಗಿನ ವಿಶೇಷಾಧಿಕಾರಿ ಡಾ.ಬಿ.ಡಿ.ಯೋಗಾನಂದ ಅವರನ್ನು ಮಾತನಾಡಿಸಿದರೆ ಇಲ್ಲಿ ಕಾಣಸಿಗುವ ವಿಶಿಷ್ಟ ಪುಷ್ಪರಾಶಿಯ ಮಾಹಿತಿಯ ಭಂಡಾರವೇ ಸಿಗುತ್ತದೆ. ಟೇಲ್ ಫ್ಲವರ್, ಮೆಕ್ಸಿಕನ್ ಲಿಲ್ಲಿ, ಫ್ಲೆಮಿಂಗೋ ಪ್ಲಾಂಟ್, ಡ್ಯಾನ್ಸಿಂಗ್ ಡಾಲ್, ಸ್ಪೈಡರ್ ಲಿಲ್ಲಿ ಮುಂತಾದ ನೂರಾರು ಹೂವುಗಳ ಮಧ್ಯೆ ಅರಣ್ಯದ ಹಾದಿಯಲ್ಲಿ ಟುಲಿಪ್ ಮರ, ಪರಿಮಳದ ಚಂಪಕ, ಸ್ಪಾನಿಶ್ ಚೆರ್‍ರಿ, ಸೆಡ್ರಸ್ ದೇವ
ದಾರು ಮುಂತಾದ ಮರಗಳೂ ಕಾಣಿಸುತ್ತವೆ. ಸಸ್ಯ ವಿಜ್ಞಾನದ ಅಧ್ಯಯನ ಮಾಡುವವರಿಗೆ ಇದು ಚೇತೋಹಾರಿ ತಾಣ.

ಹಾಗೆಂದು ಗಿರಿಧಾಮದಲ್ಲಿ ಕೊರತೆಗಳು ಇಲ್ಲವೆಂದಲ್ಲ. ರಾತ್ರಿ ಎರಡು ಸಲ ಕರೆಂಟ್ ಹೋಯಿತು. ವಿದ್ಯುತ್ ಪ್ರಸರಣ ನಿಗಮದವರು ಆಗಾಗ್ಗೆ ಸಿಂಗಲ್ ಫೇಸ್ ಪೂರೈಕೆಗೆ ಇಳಿಯುವ ಬದಲು, ಪೂರ್ತಿ ಕರೆಂಟ್ ಕೊಡುವ ವ್ಯವಸ್ಥೆ ಮಾಡಬೇಕು. ಅರಣ್ಯ ಇಲಾಖೆಯವರು ಮೊಂಡು ಹಠ ಬಿಟ್ಟು ಗಿರಿಧಾಮದ ತುದಿಯಲ್ಲಿ, ‘ಇರುವಷ್ಟೇ ಅಗಲ’ದ ರಸ್ತೆಯ ಕಾಂಕ್ರೀಟೀಕರಣ ಯೋಜನೆಗೆ ನೀಡಿರುವ ತಡೆಯನ್ನು ತೆರವುಗೊಳಿಸಬೇಕು.

ಗೆಸ್ಟ್‌ಹೌಸ್‌ನಿಂದ 12 ಕಿಮೀ ದೂರದಲ್ಲಿರುವ ಹೆಬ್ಬೆ ಜಲಪಾತ ಕಡುಬೇಸಿಗೆಯಲ್ಲೂ ಸುರಿವ ನೀರಿನಿಂದ ಪ್ರವಾಸಿಗರ ದೊಡ್ಡ ಆಕರ್ಷಣೆ. ಕೆಲವು ಜೀಪುಗಳವರು ಜನರನ್ನು ಜಲಪಾತದ ಬುಡಕ್ಕೆ ಕರೆದೊಯ್ಯುತ್ತಾರೆ. ಒಳ್ಳೆಯದು. ಆದರೆ ಒಬ್ಬರಿಗೆ 400 ರೂಪಾಯಿ ಇವರು ವಿಧಿಸುವ ದರ ತೀರಾ ದುಬಾರಿ! ಈ ಹಿಂದೆ ರಾಜ್ಯ ಸಾರಿಗೆ ಸಂಸ್ಥೆಯವರು ಚಿಕ್ಕಮಗಳೂರು ಮತ್ತು ಬೆಂಗಳೂರಿನಿಂದ ಇಲ್ಲಿಗೆ ಓಡಿಸುತ್ತಿದ್ದ ಬಸ್‌ಗಳೂ ಈಗ ಕಣ್ಮರೆಯಾಗಿದ್ದು, ಖಾಸಗಿ ವಾಹನಗಳನ್ನೇ ಅವಲಂಬಿಸುವಂತಾಗಿದೆ. ಬಡವರ ಊಟಿಯಲ್ಲಿ ಪ್ರವಾಸಿಗರನ್ನು ಹೀಗೆ ಸುಲಿದರೆ ಹೇಗೆ?

ನಮ್ಮಲ್ಲಿ ಸಾಕಷ್ಟು ಪ್ರವಾಸಿ ತಾಣಗಳು ಖಾಸಗೀಕರಣಕ್ಕೆ ಒಳಗಾಗಿ ಉಳ್ಳವರ ಭೋಗತಾಣಗಳಾಗಿವೆ. ಕೆಮ್ಮಣ್ಣುಗುಂಡಿಗೆ ಪ್ರತಿದಿನ ನೂರಾರು ಜನರು ಬರುತ್ತಾರೆ. ಸುತ್ತಮುತ್ತಲ ಹಳ್ಳಿಗಳ ಜನರೂ ಊಟಕಟ್ಟಿಕೊಂಡು ಬಂದು ಸೂರ್ಯಾಸ್ತದವರೆಗೆ ಇಲ್ಲಿದ್ದು ಮರಳುತ್ತಾರೆ. ಇದು ನಿಜಕ್ಕೂ ಬಡವರ ಊಟಿಯೇ ಸರಿ. ಖಾಸಗೀಕರಣಕ್ಕೆ ಒಳಗಾಗುವುದು ಬೇಡ.

ಗಿರಿಧಾಮವಾದದ್ದು ಹೇಗೆ?

ಕೆಮ್ಮಣ್ಣುಗುಂಡಿ ಒಂದು ಕಾಲದಲ್ಲಿ ಕಬ್ಬಿಣದ ಅದಿರಿನ ಗಣಿಯಾಗಿತ್ತು. ಇದನ್ನು ಗಿರಿಧಾಮವನ್ನಾಗಿ ಪರಿವರ್ತಿಸಿದವರು ಮೈಸೂರಿನ ಶ್ರೀಕೃಷ್ಣರಾಜೇಂದ್ರ ಒಡೆಯರ್. ಅವರು ಹಿಂದೆ ಬೇಸಿಗೆಯಲ್ಲಿ ಊಟಿಗೆ ಹೋಗುತ್ತಿದ್ದರಂತೆ. (ಅವರು ಊಟಿಯಲ್ಲಿ ಕಟ್ಟಿಸಿದ ಅರಮನೆ ಈಗಲೂ ಪಾರಂಪರಿಕ ಹೋಟೆಲ್ ಆಗಿ ನಿಮ್ಮನ್ನು ಸ್ವಾಗತಿಸುತ್ತದೆ.) ಊಟಿಯ ಗಿರಿಧಾಮದಲ್ಲಿ ಸೂರ್ಯೋದಯದ ಹೊತ್ತಿಗೆ ಸೂರ್ಯನಮಸ್ಕಾರ ಮತ್ತು ಧ್ಯಾನ ಮಾಡುವುದು ಅವರ ಪದ್ಧತಿ. ಒಂದು ಸಲ ಧ್ಯಾನ ಮುಗಿಸಿ ಕಣ್ಣು ತೆರೆದರೆ ಕಿಡಿಗೇಡಿ ಸ್ನೇಹಿತರು ನಾಲ್ಕೈದು ಕತ್ತೆಗಳನ್ನು ಮುಂದೆ ತಂದು ನಿಲ್ಲಿಸಿದ್ದರಂತೆ. ಅಂದೇ ಮೈಸೂರು ರಾಜ್ಯದಲ್ಲೂ ಒಂದು ಗಿರಿಧಾಮ ಸ್ಥಾಪಿಸಬೇಕು ಎಂದು ಅವರು ಅಂದುಕೊಂಡರಂತೆ. ಕೆಮ್ಮಣ್ಣುಗುಂಡಿ ನಿಧಾನಕ್ಕೆ ಗಿರಿಧಾಮವಾಗಿ ಸೊಗಸು ಕಂಡುಕೊಂಡಿತು. ಸಮುದ್ರಮಟ್ಟದಿಂದ 4832 ಅಡಿ ಎತ್ತರದ, ವರ್ಷಕ್ಕೆ 100 ಇಂಚಿನಷ್ಟು ಮಳೆ ಬೀಳುವ ಈ ಸುಂದರ ತಾಣ ಈಗ ಪ್ರವಾಸಿಗರ ಬಹುದೊಡ್ಡ ಆಕರ್ಷಣೆಯಾಗಿದೆ. 1932ರಲ್ಲಿ ಪ್ರವಾಸಿಗರಿಗಾಗಿ ದತ್ತಾತ್ರೇಯ ಭವನ ಕಟ್ಟಿಸಿದ ಮಹಾರಾಜರು ಎಲ್ಲ ವರ್ಗದ ಜನರೂ ಈ ಗಿರಿಧಾಮಕ್ಕೆ ಭೇಟಿ ಕೊಡಲು ಅನುಕೂಲ ಮಾಡಿಕೊಟ್ಟರು.

ಅರಣ್ಯ ಇಲಾಖೆಯ ತಕರಾರು

ಕಲ್ಲತ್ತಿ ಜಲಪಾತ ಮತ್ತು ಅಲ್ಲಿರುವ ವೀರಭದ್ರೇಶ್ವರ ಸ್ವಾಮಿ ದೇವಾಲಯವನ್ನು ನೋಡಲು ಸದಾ ಜನಜಂಗುಳಿ. ಏಕಶಿಲಾ ಗುಹಾಂತರ ದೇವಾಲಯದ ಎದುರಿಗಿರುವ ಸ್ನಾನಘಟ್ಟದಲ್ಲಿ ಮೀಯುವುದು ಭಕ್ತಜನರ ಅಭಿಲಾಷೆ. ಇಲ್ಲಿಂದ ಮೇಲಕ್ಕೆ ಕೆಮ್ಮಣ್ಣುಗುಂಡಿ ಉದ್ಯಾನವನಕ್ಕೆ ಹೋಗುವ ದಾರಿ ಅಲ್ಲಲ್ಲಿ ಕಿತ್ತುಹೋಗಿದೆ. ಲಿಂಗದಳ್ಳಿ ಯಿಂದ ಕೆಮ್ಮಣ್ಣುಗುಂಡಿವರೆಗೆ ಪೂರ್ಣ ರಸ್ತೆಯನ್ನು ಕಾಂಕ್ರೀಟು ರಸ್ತೆಯನ್ನಾಗಿ ಮಾಡಲು ಯೋಜನೆ ಸಿದ್ಧವಿದೆ. ಆದರೆ ಅರಣ್ಯ ಇಲಾಖೆಯದ್ದೇ ತಕರಾರು. ಭದ್ರಾ ಹುಲಿ ಅಭಯಾರಣ್ಯದ ನೆಪ. ಇಲ್ಲಿ ರಸ್ತೆ ಸಾಕಷ್ಟು ಅಗಲವಾಗಿದೆ. ಹಾಗಾಗಿ ಇನ್ನಷ್ಟು ಅಗಲ ಮಾಡಬೇಕಾದ ಅಗತ್ಯವಿಲ್ಲ. ಇರುವ ರಸ್ತೆಗೇ ಕಾಂಕ್ರೀಟು ಹಾಕಿದರೆ ಅಕ್ಕಪಕ್ಕದ ಯಾವ ಮರವನ್ನೂ ಕಡಿಯಬೇಕಾದ ಅಗತ್ಯವಿಲ್ಲ.

ಚಿತ್ರಗಳು: ದಿನೇಶ್ ಪಟವರ್ಧನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.