ಕಾರವಾರದ ದೇವಗಡ ದ್ವೀಪದಲ್ಲಿರುವ ದೀಪಸ್ತಂಭ
ಚಿತ್ರಗಳು: ಗಣಪತಿ ಹೆಗಡೆ
ಬೇಸಿಗೆ ರಜೆ ಕಳೆಯಲು ಕಾರವಾರಕ್ಕೆ ಬಂದಿದ್ದ ದೂರದ ಬೆಂಗಳೂರಿನ ಅಶ್ವಿನ್, ಟ್ಯಾಗೋರ್ ಕಡಲತೀರದಲ್ಲಿ ಸಂಜೆಯ ವೇಳೆ ಓಡಾಡುವಾಗ ಸಮುದ್ರದಿಂದ ಪ್ರತಿ ಹತ್ತು ಸೆಕೆಂಡಿಗೆ ಬೆಳಕೊಂದು ಹಾಯುತ್ತಿರುವುದುನ್ನು ಕಂಡು ಅಚ್ಚರಿಗೆ ಒಳಗಾದರು. ಸಮುದ್ರಕ್ಕಿಂತ ಎತ್ತರದಿಂದ ಬರುತ್ತಿದ್ದ ಬೆಳಕು ಹಡಗು ಅಥವಾ ದೋಣಿಯಿಂದ ಬರುತ್ತಿಲ್ಲ ಎಂಬುದು ಅವರಿಗೆ ಖಾತ್ರಿಯಾಯಿತು. ಈ ಬೆಳಕಿನ ಕುರಿತಾಗಿಯೇ ಕುತೂಹಲಗೊಂಡ ಅವರು ಮರುದಿನ ಬೆಳಿಗ್ಗೆ ಮತ್ತದೇ ಜಾಗಕ್ಕೆ ಬಂದು ಸಮುದ್ರದತ್ತ ದಿಟ್ಟಿಸತೊಡಗಿದರು. ಆದರೆ, ಅಲ್ಲಿ ಅವರಿಗೆ ಬೆಳಕು ಕಾಣಲಿಲ್ಲ.
‘ಅರೇ ನಿನ್ನೆ ಬೆಳಕು ಕಂಡ ಜಾಗದಲ್ಲಿ ದೊಡ್ಡ ಗುಡ್ಡ ಇದೆಯಲ್ಲ. ಬಹುಶಃ ಅದರ ಮೇಲೆ ನಿಂತು ಯಾರೋ ಪ್ರಖರ ಟಾರ್ಚ್ ಮೂಲಕ ಬೆಳಕು ಚೆಲ್ಲಿದ್ದಿರಬಹುದು’ ಎಂದು ಮನಸ್ಸಿನಲ್ಲೇ ಅಂದುಕೊಂಡರೂ ಕುತೂಹಲದ ಅನಾವರಣಕ್ಕೆ ಸಿಕ್ಕಸಿಕ್ಕವರಲ್ಲಿ ಮಾಹಿತಿ ಕೇಳತೊಡಗಿದರು.
ಹೀಗೆ ಬೆಳಕಿನ ಕುತೂಹಲ ತಣಿಸಲು ಹೊರಟವರಿಗೆ ಕಾರವಾರದ ಕಡಲತೀರದಿಂದ ಹತ್ತು ಕಿ.ಮೀ ದೂರದಲ್ಲಿ ಅರಬ್ಬಿ ಸಮುದ್ರದ ನಡುವೆ ನೆಲೆನಿಂತ ಐತಿಹಾಸಿಕ ತಾಣವೊಂದರ ಪರಿಚಯವಾಯಿತು. ಈ ‘ದೀಪಸ್ತಂಭ’ ಶತಮಾನಗಳಿಂದ ಸಾವಿರಾರು ಹಡಗುಗಳಿಗೆ ಮಾರ್ಗದರ್ಶನ ಮಾಡಿದ್ದನ್ನು ಅರಿತು ಮತ್ತಷ್ಟು ಚಕಿತರಾದರು.
ಶತಮಾನದ ಇತಿಹಾಸ
ವಿಶಾಲವಾದ ಸಮುದ್ರದಲ್ಲಿ ದೂರದ ದೇಶಗಳಿಂದ ಸಾಗಿ ಬಂದ ಹಡಗುಗಳಿಗೆ ಸೂಕ್ತ ಪಥದಲ್ಲಿ ಸಾಗಲು ದಾರಿ ತೋರಿಸುವ ‘ದೀಪಸ್ತಂಭ’ ಕಾರವಾರದ ಸಮೀಪದಲ್ಲಿರುವ ದೇವಗಡ ದ್ವೀಪದಲ್ಲಿದೆ. ಸೈಜುಗಲ್ಲುಗಳಿಂದ ನಿರ್ಮಾಣಗೊಂಡ 20 ಅಡಿ ಎತ್ತರದ ಸ್ತಂಭವು ಪ್ರಖರ ಬೆಳಕು ಸೂಸುವ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿಂದ ಬೆಳಗುವ ಬೆಳಕು ದ್ವೀಪದಿಂದ 25 ನಾಟಿಕಲ್ ಮೈಲು ದೂರದವರೆಗೆ (46.25 ಕಿ.ಮೀ) ಗೋಚರಿಸಬಲ್ಲ ಸಾಮರ್ಥ್ಯ ಹೊಂದಿದೆ.
ಸುಮಾರು ನಾಲ್ಕೂವರೆ ದಶಕಗಳ ಹಿಂದಿನವರೆಗೂ ಹಡಗುಗಳಿಗೆ ‘ದೀಪಸ್ತಂಭ’ವೇ ಮಾರ್ಗದರ್ಶನಕ್ಕೆ ಆಧಾರವಾಗಿತ್ತು. ಉಪಗ್ರಹ ಆಧಾರಿತ ನೌಕಾಯಾನ ವ್ಯವಸ್ಥೆ ಬಲಗೊಂಡ ಬಳಿಕ ದೀಪಸ್ತಂಭಗಳ ಮಹತ್ವ ಕಡಿಮೆಯಾಗಿದೆ. ಆದರೂ, ನೌಕೆಗಳಿಗೆ ತುರ್ತು ಸಂದರ್ಭಗಳಲ್ಲಿ ದೀಪಸ್ತಂಭವೇ ಆಧಾರವಾಗುತ್ತಿದೆ ಎಂಬುದಾಗಿ ಹಡಗಿನ ಕ್ಯಾಪ್ಟನ್‍ಗಳು ಹೇಳುತ್ತಾರೆ.
1860ರಲ್ಲಿ ಬ್ರಿಟಿಷರು ಸ್ಥಾಪಿಸಿದ ಸ್ತಂಭವು ಸ್ಥಾಪನೆಗೊಂಡ ನಾಲ್ಕು ವರ್ಷದ ಬಳಿಕ, ಅಂದರೆ 1864ರಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿತು ಎಂಬುದಾಗಿ ಇಲ್ಲಿರುವ ಫಲಕಗಳಲ್ಲಿ ಉಲ್ಲೇಖಿಸಲಾಗಿದೆ.
ಮೊದಲೆಲ್ಲ ದೀಪಸ್ತಂಭದ ತುದಿಯಲ್ಲಿ ದೊಡ್ಡಗಾತ್ರದ ಲಾಟೀನು ಉರಿಸಲಾಗುತ್ತಿತ್ತು. ಅದರ ಬೆಳಕನ್ನು ಕಂಡು ನಾವಿಕರು ಬಂದರಿನ ಪಥ ಗುರುತಿಸುತ್ತಿದ್ದರು ಎಂಬುದಾಗಿ ಇತಿಹಾಸ ಹೇಳುತ್ತದೆ. ಕಾಲಕ್ರಮೇಣ ತಂತ್ರಜ್ಞಾನ ಬದಲಾದಂತೆ ಸೌರವಿದ್ಯುತ್ ಬಳಕೆ ಮಾಡಿ ಬೆಳಕು ಉರಿಸಲು ಆರಂಭಿಸಲಾಯಿತು. 1933ರ ವೇಳೆಗೆ ದೇವಗಡ ದ್ವೀಪದಲ್ಲಿರುವ ದೀಪಸ್ತಂಭದಲ್ಲಿ ಬಲ್ಬ್ ಅಳವಡಿಸುವ ಕೆಲಸ ನಡೆದಿತ್ತು. ಆದರೆ, 1999ರಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಬಲ್ಬ್‌ಗಳು ಅಳವಡಿಕೆಯಾದವು. ಸದ್ಯ ಇಲ್ಲಿ ತಲಾ 70 ವ್ಯಾಟ್ ಸಾಮರ್ಥ್ಯದ ಮೂರು ಬಲ್ಬ್‌ಗಳನ್ನು ಅಳವಡಿಸಿದ್ದು, ಅವುಗಳ ಹೊರಭಾಗದಲ್ಲಿ ವೃತ್ತಾಕಾರದ ಸ್ಫಟಿಕದ ಫಲಕ ಅಳವಡಿಸಲಾಗಿದೆ. ಬೆಳಕನ್ನು ಸುತ್ತಲೂ ಚೆಲ್ಲುತ್ತ ದೂರದವರೆಗೆ ಪಸರಿಸಲು ಈ ಫಲಕ ಆಧಾರವಾಗಿದೆ.
ಕೇಂದ್ರ ಸರ್ಕಾರದ ಅಧೀನದಲ್ಲಿರುವ ಲೈಟ್‍ಹೌಸ್ ನಿರ್ದೇಶನಾಲಯದ ಅಡಿಯಲ್ಲಿ ಕಾರ್ಯಾಚರಿಸುವ 17 ದೀಪಸ್ತಂಭಗಳು ಪಶ್ಚಿಮ ಕರಾವಳಿ ತೀರದಲ್ಲಿವೆ. ಅವುಗಳ ಪೈಕಿ ಕಾರವಾರದಲ್ಲಿ ಬ್ರಿಟಿಷರು ನಿರ್ಮಿಸಿದ ದೀಪಸ್ತಂಭಕ್ಕೆ ವಿಶೇಷ ಮಹತ್ವವಿದೆ.
‘ದೇವಗಡ ದ್ವೀಪ ಬಿಟ್ಟರೆ ಅರಬ್ಬಿ ಸಮುದ್ರದಲ್ಲಿ ಸಮೀಪದಲ್ಲೆಲ್ಲೂ ದ್ವೀಪಗಳಿರಲಿಲ್ಲ. ಅಲ್ಲದೆ ಗಟ್ಟಿಮುಟ್ಟಾದ ಬಂಡೆಕಲ್ಲುಗಳನ್ನು ಒಳಗೊಂಡ ದ್ವೀಪವು ಸುರಕ್ಷತೆ ದೃಷ್ಟಿಯಿಂದಲೂ ಉತ್ತಮ ಎಂದು ಭಾವಿಸಿದ್ದರು. ಈ ದ್ವೀಪದ ಕಲ್ಲುಗಳಲ್ಲಿ ಚಿಪ್ಪಿಗಳು ಹೆಚ್ಚಾಗಿ ಬೆಳೆದಿದ್ದವು. ಇದೇ ಕಾರಣಕ್ಕೆ ಬ್ರಿಟಿಷರು ದೇವಗಡದ ಬದಲು ಈ ದ್ವೀಪಕ್ಕೆ ‘ಆಯ್‍ಸ್ಟರ್ ರಾಕ್ ದ್ವೀಪ’ ಎಂದು ನಾಮಕರಣ ಮಾಡಿದ್ದರು. ಇಲ್ಲಿ ನಿರ್ಮಿಸಿದ ದೀಪಸ್ತಂಭಕ್ಕೆ ರಕ್ಷಣೆಯನ್ನೂ ಬಿಗುಗೊಳಿಸಿದ್ದರು. ಸ್ತಂಭದ ಸುತ್ತ ಫಿರಂಗಿಗಳನ್ನು ಇರಿಸಲಾಗಿತ್ತು. ಈಗ ಅಲ್ಲಿ ಒಂದು ಫಿರಂಗಿ ಉಳಿದುಕೊಂಡಿದ್ದು ಇತಿಹಾಸ ಸಾರಿ ಹೇಳುತ್ತಿದೆ’ ಎನ್ನುತ್ತಾರೆ ನೌಕಾದಳದ ನಿವೃತ್ತ ಕ್ಯಾಪ್ಟನ್ ಅರುಣ ಗಾಂವಕರ್.
‘ದೀಪಸ್ತಂಭದ ಮಹತ್ವ ಈಗಿನ ನೌಕಾಯಾನಿಗಳಿಗೆ ಅಷ್ಟಾಗಿ ಅರಿವಿಗೆ ಬರುವುದಿಲ್ಲ. ಉಪಗ್ರಹ ಆಧಾರಿತ ನೌಕಾಯಾನಕ್ಕೆ ಮುನ್ನ ನಾವು ದೀಪಸ್ತಂಭ ಬೀರುವ ಬೆಳಕು ಆಧರಿಸಿ ಹಡಗನ್ನು ಸರಿಯಾದ ಪಥದಲ್ಲಿ ಸಾಗುವಂತೆ ಮಾಡಬೇಕಿತ್ತು. ಕಾರವಾರ ದೇವಗಡ, ಗೋವಾದ ಆಗೊಂದಾ ದೀಪಸ್ತಂಭಗಳಿಂದ ಬಂದ ಬೆಳಕು ಸಂಧಿಸುವ ರೇಖೆ ಆಧರಿಸಿ ಹಡಗನ್ನು ಅದೇ ಪಥದಲ್ಲಿ ಸಾಗಿಸುತ್ತಿದ್ದೆವು. ಹೀಗೆ ಪ್ರತಿ 30 ರಿಂದ 40 ನಾಟಿಕಲ್ ಮೈಲಿ ದೂರಕ್ಕೆ ಒಂದರಂತೆ ಇರುವ ದೀಪಸ್ತಂಭಗಳೇ ಹಡಗುಗಳ ಪಥ ಸರಿಯಾಗಿಸುತ್ತಿದ್ದವು’ ಎಂದು ಅವರು ವಿವರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.