ADVERTISEMENT

ಸ್ಥಾವರ ಮೀರಿದ ಅಸ್ಮಿತೆ

ಬಿಂಡಿಗನವಿಲೆ ಭಗವಾನ್
Published 12 ಡಿಸೆಂಬರ್ 2018, 19:30 IST
Last Updated 12 ಡಿಸೆಂಬರ್ 2018, 19:30 IST
   

ಅಮೆರಿಕಕ್ಕೆ ಹೊರಟಿದ್ದೇನೆ ಎಂದು ಯಾರೇ ಹೇಳಲಿ ಪುಣ್ಯವಂತರಪ್ಪ ನೀವು ’ಸ್ಟ್ಯಾಚು ಅಫ್ ಲಿಬರ್ಟಿ’ ಕಣ್ತುಂಬಿಕೊಳ್ಳುವಿರಿ ಎನ್ನುವ ಉದ್ಗಾರ ಧ್ವನಿಸಿರುತ್ತದೆ. ಹೌದು, ಆ ಮೂರ್ತಿ ಅಷ್ಟೊಂದು ಹಿರಿಮೆಗಳನ್ನು ತನ್ನಲ್ಲಿ ಮಡುಗಟ್ಟಿಸಿಕೊಂಡಿದೆ. 'ಲಿಬರ್ಟಿ ಸ್ಟ್ಯಾಚು’ ಅಂತ ಪ್ರವಾಸಿಗರು ಉಚ್ಚರಿಸಿದರೆ; ಹಾಗೆನ್ನಬೇಡಿ....‘ಸ್ಟ್ಯಾಚು ಅಫ್ ಲಿಬರ್ಟಿ’ ಎನ್ನಿ ಎಂಬ ತಿದ್ದುಪಡಿ ಮಾರ್ಗದರ್ಶಕರಿಂದ ಕಾದಿರುತ್ತದೆ!

ನ್ಯೂಯಾರ್ಕ್ ನಗರದ ಬಂದರಿನ ಪ್ರವೇಶ ದ್ವಾರದಲ್ಲಿ ನೆಲೆಗೊಂಡಿರುವ ‘ಸ್ವಾತಂತ್ರ್ಯ ದೇವತೆ’ ಪ್ರತಿಮೆ 1886 ರಲ್ಲಿ ಫ್ರಾನ್ಸ್ ದೇಶದ ಪ್ರಜೆಗಳು ಅಮೆರಿಕಗೆ ನೀಡಿದ ಉಡುಗೊರೆ. ಹಾಗಾಗಿ ಅದು ಉಭಯ ದೇಶಗಳ ಸ್ನೇಹದ ದ್ಯೋತಕ ಮಾತ್ರವಲ್ಲ. ವಿಶ್ವಭ್ರಾತೃತ್ವದ ಸಂದೇಶವನ್ನು ದಿಗಂತದತ್ತ ಒಯ್ಯುವ ದಿಬ್ಬಣ. ನಿಲುವಂಗಿ ಧರಿಸಿದ ಸ್ತ್ರೀಯ ಪ್ರತಿಮೆ ರೋಮನ್ ಸ್ವಾತಂತ್ರ್ಯ ದೇವತೆ ಲಿಬರ್ಟಾಸ್‌ಳನ್ನು ಪ್ರತಿನಿಧಿಸುತ್ತದೆ. 1878ರಲ್ಲಿ ಪ್ಯಾರಿಸ್ ನಲ್ಲಿ ನೆರವೇರಿದ ‘ವರ್ಲ್ಡ್ ಫೇರ್’ ನಲ್ಲಿ ಪ್ರತಿಮೆಯೆ ಶಿರೋಭಾಗವನ್ನು ಪ್ರದರ್ಶಿಸಲಾಗಿತ್ತು.

ಅದೊಂದು ರೋಚಕ ಕಥಾನಕ. 1884ರ ಜುಲೈ 4 ರಂದೇ ಅಧಿಕೃತವಾಗಿ ಫ್ರಾನ್ಸ್ ದೇಶದ ಅಧಿಕಾರಿಗಳು ಶಿಲ್ಪಿ ಫೆಡ್ರಿಕ್ ಅಗಸ್ಟೆ ಬತೇಲ್‌ಡಿ ರಚಿಸಿದ ಪ್ರತಿಮೆ ಅಮೆರಿಕಾದ ಅಧಿಕಾರಿಗಳಿಗೆ ಪ್ಯಾರಿಸ್‌ನಲ್ಲಿ ನೀಡಿತು. ಜೋಡಿಸಿದ್ದ ಪ್ರತಿಮೆಯನ್ನು ಮತ್ತೆ 214 ಬಿಡಿ ಭಾಗಗಳನ್ನಾಗಿಸುವುದು ಸಾಗಾಣಿಕೆಯ ದೃಷ್ಟಿಯಿಂದ ಅಗತ್ಯವಾಗಿತ್ತು. ಒಂದೊಂ ದನ್ನೂ ಮರದ ಮಂಕರಿಗಳಲ್ಲಿ ತುಂಬಿ ಹಡಗಿನಲ್ಲಿ ನ್ಯೂಯಾರ್ಕ್‌ಗೆ ರವಾನಿಸಲಾಯಿತು. 1885 ರ ಜೂನ್ 17 ರಂದು ಹಡಗು ನ್ಯೂಯಾರ್ಕ್ ಮುಟ್ಟಿತು.

ADVERTISEMENT

ಬಲಗೈನಲ್ಲಿ ಎತ್ತಿ ಹಿಡಿದ ಪಂಜು. ಅದರಲ್ಲಿ ಉರಿಯುವ ಹೊಂಬಣ್ಣದ ಜ್ವಾಲೆ. ಎಡಗೈನಲ್ಲಿ ಸ್ವಾತಂತ್ರ್ಯ ಬಂದ ದಿನಾಂಕದ ಕೆತ್ತನೆಯುಳ್ಳ ( 4, ಜುಲೈ 1776) ಫಲಕ ಮಂತ್ರ ಮುಗ್ಧಗೊಳಿಸುತ್ತದೆ. ಆಧಾರಪೀಠದಿಂದ ಪಂಜಿನ ತುದಿವರೆಗೆ 305 ಅಡಿ, ಆರು ಅಂಗುಲ. ಇದು 22 ಅಂತಸ್ತುಗಳ ಕಟ್ಟಡದ ಎತ್ತರಕ್ಕೆ ಸಮ. ತೂಕ 225 ಟನ್. ಮುಖದ ಎತ್ತರವೆ 8 ಅಡಿ. ಸೊಂಟದ ಸುತ್ತಳತೆ 25 ಅಡಿ. ಕಬ್ಬಿಣದ ಸರಪಳಿ ಜಾಡಿಸಿ ಕಿತ್ತು ಹೊರಬಂದ ಕಾಲು. ದೇವತೆ ಧರಿಸಿರುವ ಬೂಟು 879 ಅಳತೆಯದು. ಮುಡಿಗೆ 25 ಕಿಟಕಿಗಳಿವೆ. ಅದರ ಏಳು ಸಲಾಕಿಗಳು ಸಪ್ತ ಸಮುದ್ರಗಳನ್ನು, ಸಪ್ತ ಬಣ್ಣಗಳನ್ನು ಹಾಗೂ ಸಪ್ತ ಖಂಡಗಳನ್ನು ಸೂಚಿಸುತ್ತವೆ.

ಮುಕುಟ ಏರಲು 354 ಮೆಟ್ಟಿಲುಗಳಿವೆ. ರಚನೆ ಉಕ್ಕಿನದಾದರೂ ಆಮ್ಲಜನಕದೊಂದಿಗಿನ ಸಂಯೋಜನೆಯ ಪರಿಣಾಮದಿಂದಾಗಿ ನೀಲಿ ವರ್ಣಕ್ಕೆ ತಿರುಗಿದೆ. 8 ಎಕರೆ ವಿಸ್ತೀರ್ಣದ ಲಿಬರ್ಟಿ ನಡುಗಡ್ಡೆಯಲ್ಲಿನ ಈ ಭವ್ಯ ಮೂರ್ತಿ 1800 ರ ತನಕ ಅಮೆರಿಕದ ಪ್ರಜೆಗಳು ಅನುಭವಿಸಿದ ನಿರಂಕುಶತೆ, ಆರ್ಥಿಕ ಮುಗ್ಗಟ್ಟು ಹಾಗೂ ನಾನಾ ವಲಸಿಗರು ಒಡ್ಡಿದ ಬವಣೆಯಿಂದ ಮುಕ್ತವಾಗಿದ್ದರ ನಿರಾಳತೆ ಬಿಂಬಿಸುತ್ತದೆ. ನನಗೆ ಯಾರ ಬಗೆಗೂ ಸೇಡು, ಹಗೆತನವಿಲ್ಲ, ಅಮೆರಿಕಗೆ ಬರುವವರಿಗೆಲ್ಲ ಇದೋ ಮಮತೆಯ ಸ್ವಾಗತ ಎನ್ನುತ್ತಿದೆ ದೇವತೆ. ಅಕ್ಷರಶಃ ಮೂರ್ತಿ ವಿಶ್ವ ಪಥದ, ಮನುಜ ಮತದ ಸಾಕಾರ ಸ್ವರೂಪ. ಆಧಾರ ಸ್ತಂಭಕ್ಕೆ ಹೊಂದಿಕೊಂಡಂತೆ ಪುತ್ಥಳಿ ಕುರಿತ ಇತಿಹಾಸ ವಿವರಿಸುವ ವಸ್ತು ಪ್ರದರ್ಶನಾಲಯವಿದೆ.

ದಿನಕ್ಕೆ ಸರಾಸರಿ ನಾಲ್ಕು ದಶಲಕ್ಷ ಪ್ರವಾಸಿಗರು ಪ್ರತಿಮೆ ನೋಡಲು ಬರುತ್ತಾರೆ. ಇಲ್ಲಿಗೆ ಹೋಗಲು ಮುಂಗಡ ಟಿಕೆಟ್ ಖರೀಸಬಹುದು. ದರ 18 ಡಾಲರ್. ಹಿರಿಯ ನಾಗರಿಕರಿಗೆ 14 ಡಾಲರ್, 4ರಿಂದ 12 ವರ್ಷದ ಹಾಗೂ 9 ಡಾಲರ್, 4 ವರ್ಷಕ್ಕೂ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ ಪ್ರವೇಶ.

ಮುಡಿ ಭಾಗದ ವೀಕ್ಷಣೆಗೆ ಪ್ರತ್ಯೇಕ ಶುಲ್ಕವಿದೆ. ಇಂದಿಗೂ ಪುತ್ಥಳಿಯನ್ನು ವೈವಿಧ್ಯಮಯವಾಗಿ ನಿರ್ವಚಿಸುವ ಪ್ರಯತ್ನ ನಡದೇ ಇದೆ.

ಸ್ವಾತಂತ್ರ್ಯ ದೇವತೆಯ ಮುಖಾರವಿಂದದಲ್ಲಿ ಬಿಡುಗಡೆಯ ಜೀವಸ್ವರವನ್ನು ಕೆಲವರು ಕಂಡರೆ ಮತ್ತೆ ಕೆಲವರು ಅದು ಮನುಷ್ಯನ ಅಹಂಭಾವ ಅಳಿಸಿ ಆತ್ಮಗೌರವ ಬೆಳೆಸುವುದೆನ್ನುತ್ತಾರೆ.

**

ಹೋಗುವುದು ಹೇಗೆ?

ವಿಮಾನಯಾನ: ಬೆಂಗಳೂರಿನಿಂದ ಫ್ರಾಂಕ್ಫರ್ಟ್ ಮೂಲಕ ನ್ಯೂಯಾರ್ಕ್‌ಗೆ ವಿಮಾನ ಸೌಲಭ್ಯವಿದೆ. ಇಲ್ಲಿನ ಜಾನ್ ಎಫ್ ಕೆನೆಡಿ ವಿಮಾನ ನಿಲ್ದಾಣದಿಂದ ಸಬ್ ವೇ ಅಥವಾ ಟ್ಯಾಕ್ಷಿ ಹತ್ತಿ ಮ್ಯಾನ್‌ಹಟನ್‌ಗೆ ಹೋಗಬೇಕು. ಅಲ್ಲಿನ ಫೆರಿಯಿಂದ ಧಾರಾಳವಾಗಿ ಮಿನಿ ಜಹಜಿನಂಥಹ ಸುಸಜ್ಜಿತ ದೋಣಿಗಳು ನಿಮ್ಮನ್ನು ಲಿಬರ್ಟಿ ದ್ವೀಪವಷ್ಟೇ ಅಲ್ಲ ಎಲಿಸ್, ದ್ವೀಪಗಳನ್ನೂ ತಲುಪಿಸುತ್ತವೆ. ಸಮುದ್ರ ಪರ್ಯಟನೆಯನ್ನೆ ಮಾಡಿಸುತ್ತವೆ. ‌

ಸಬ್ ವೇ ಪ್ರಯಾಣ: ಸಬ್ ವೇ, ಟ್ಯಾಕ್ಷಿಯ ಪ್ರಯಾಣದವಧಿ ಕ್ರಮವಾಗಿ ಒಂದೂವರೆ ತಾಸು ಮತ್ತು ಎರಡು ತಾಸುಗಳು.

ಆಂಗಿಕ ಕವಾಯತು: ಪುತ್ಥಳಿಯ ಆಸುಪಾಸಿನಲ್ಲಿ ಭಿಕ್ಷುಕರು ಇಲ್ಲದಿಲ್ಲ. ಮೈನವಿರೇಳಿಸುವ ಆಂಗಿಕ ಕವಾಯತು ಪೂರೈಸಿ, ತೆಗಿಯಿರಿ ಡಾಲರ್ ಇಲ್ಲವೇ ಒಡವೆ ಎಂದು ನಸುನಗುತ್ತಲೆ ಕೈವೊಡ್ಡುವವರುಂಟು.

ವಾದ್ಯಗಳಲ್ಲಿ ರಾಷ್ಟ್ರೀಗೀತೆಗಳು.. ಎಲ್ಲ ದೇಶಗಳ ರಾಷ್ಟ್ರಗೀತೆಗಳನ್ನು ಪಿಟೀಲಿನಲ್ಲಿ ನುಡಿಸುವವರು ಪಿಯಾನೊ, ತಬಲಾ ಬಾರಿಸುವವರು ಕಂಡುಬರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.