ADVERTISEMENT

ಪ್ರವಾಸ: ಶೈಯೋಕ್‌ ಕಣಿವೆಯ ಚೆಲುವು

ರಹಮತ್ ತರೀಕೆರೆ
Published 4 ಅಕ್ಟೋಬರ್ 2025, 23:30 IST
Last Updated 4 ಅಕ್ಟೋಬರ್ 2025, 23:30 IST
ಶೈಯೋಕ್‌ ಕಣಿವೆಯ ವಿಹಂಗಮ ನೋಟ
ಶೈಯೋಕ್‌ ಕಣಿವೆಯ ವಿಹಂಗಮ ನೋಟ   
ಲಡಾಖ್‌ನಲ್ಲಿರುವ ಪರ್ವತಗಳ ತಪ್ಪಲಿನಲ್ಲಿ ಹರಿಯುವ ಶೈಯೋಕ್‌ ನದಿಯ ಸಂಗ ಕೆಲವೊಮ್ಮೆ ಏಕತಾನತೆ ಅನಿಸಿದರೆ, ಅದು ಮರೆಯಾದಾಗ ಕಸಿವಿಸಿ ಸೃಷ್ಟಿಯಾಗುತ್ತದೆ. ಲಡಾಖಿನಲ್ಲಿ ಹಲವು ನದಿಗಳು ಸೇರಿ ಒಂದುಗೂಡಿದರೆ ಇವೇ ನದಿ ದೇಶಗಳ ಗಡಿಯಾಗಿ ಬೇರ್ಪಡಿಸುವ ರೇಖೆಗಳಾಗುತ್ತವೆ. ಇಂಥ ನದಿಯ ದಡದಲ್ಲೇ ಸಾಗಿದಾಗ ಆದ ಸಂಭ್ರಮ, ಭ್ರಮೆ, ದುಗುಡ ಹೀಗೆ ನಾನಾನುಭವಗಳಿಗೆ ಅಕ್ಷರ ರೂಪ ನೀಡಿದ್ದಾರೆ ಲೇಖಕರು.

ಲಡಾಖಿನಲ್ಲಿ ನಮ್ಮ ವಾಹನವು ಲೆಹ್ ನಗರದಿಂದ ಮೇಲೇರುತ್ತ ಏರುತ್ತ ಜಗತ್ತಿನ ಅತಿ ಎತ್ತರದ ರಸ್ತೆಯಿರುವ ಕರ್ದುಂಗಲಾ ಪಾಸ್‌ಗೆ ಮುಟ್ಟುತ್ತದೆ. ಬಳಿಕ ಅಂಕುಡೊಂಕು ರಸ್ತೆಯಲ್ಲಿ ಗಿರಿಗಿರಿ ತಿರುಗುತ್ತ ಪರ್ವತ ಶ್ರೇಣಿಯೊಂದರ ತಳಕ್ಕಿಳಿಯುತ್ತದೆ. ಆಗ ತಟ್ಟನೆ ಒಂದು ಕೆಸರು ಬಣ್ಣದ ಹೊಳೆ ಕಾಣಿಸಿಕೊಳ್ಳುತ್ತದೆ. ಅದೇ ಶೈಯೋಕ್! ಮುಂದೆ ಇದು ನುಬ್ರಾ ಹೊಳೆಯನ್ನು ಸೇರಿಸಿಕೊಂಡು ಸಿಂಧುವಿನಲ್ಲಿ ಮಿಲನಗೊಳ್ಳುತ್ತದೆ. ಲಡಾಖಿನ ಬಹುತೇಕ ನದಿಗಳ ಹುಟ್ಟು ಟಿಬೆಟ್. ಹರಿವು ಭಾರತ. ಗಮ್ಯ ಪಾಕಿಸ್ತಾನ. ತಣ್ಣನೆಯ ಮರುಭೂಮಿಯಲ್ಲಿ ಹುಟ್ಟುವ ಇವು ಸೇರುವುದು ಆಫ್ರಿಕಾ ಅರಬಸ್ಥಾನ ಭಾರತಗಳ ನಡುವಣ ಕಡಲಿಗೆ. ಜಲದ ಖಂಡಾಂತರ ಪಯಣವೇ ಸೋಜಿಗ. ಸಹಸ್ರಮಾನಗಳಿಂದ ಹರಿಯುತ್ತ ಪಥ ಬದಲಿಸುತ್ತ ಅದು ಪರ್ವತಗಳನ್ನು ಕೊರೆದು ಹೊಸಪಥಗಳನ್ನು ರಚಿಸಿಕೊಂಡಿದೆ. ಹಿಂದೆ ಹರಿದಿರಬಹುದಾದ ಕುರುಹಾಗಿ ದೊಡ್ಡಮೊಟ್ಟೆಗಳನ್ನು ಜೋಡಿಸಿದಂತೆ ನುಣುಪಾದ ಮರಳುಗಲ್ಲುಗಳು ಪರ್ವತಗಳ ನೂರಾರು ಅಡಿಯ ಎತ್ತರದಲ್ಲಿವೆ.

ನಾವು ಶೈಯೋಕ್ ದಡದಲ್ಲಿ ಭಾರತದ ಕೊನೆಯ ಹಳ್ಳಿ ಥಾಂಗ್ ತನಕ 200 ಕಿಲೋಮೀಟರ್‌ ಹೋದೆವು. ಹೊಳೆಯ ಪಾತ್ರ ಕಿಲೋಮೀಟರ್‌ಗಟ್ಟಲೆ ಅಗಲವಾಗಿತ್ತು. ನೀರು ಬಗ್ಗಡವಾಗಿತ್ತು. ಹೊಸಮಳೆಗೆ ಹೊಳೆ ಮಲಿನವಾಗುವುದು ಸಹಜ. ಆದರೆ ಲಡಾಖಿನಲ್ಲಿ ಮಳೆ ಬೀಳುವುದು ಕಡಿಮೆ. ಗ್ಲೇಶಿಯರುಗಳು ಕರಗುತ್ತಿದ್ದರಿಂದ ಈ ಬಣ್ಣ ಬಂದಿತ್ತು. ಬಿಳಿಮಣ್ಣಿನ ಪರ್ವತಗಳು ನೆಗಡಿಯ ಮೂಗು ಸಿಂಬಳ ಸುರಿವಂತೆ ಮಣ್ಣನ್ನು ಅದಕ್ಕೆ ಸುರಿಯುತ್ತಿದ್ದವು. ಶೈಯೋಕ್, ಬಿಳಿಯ ಮರಳುಗಲ್ಲು ಮತ್ತು ಉಸುಕಿನ ಹಾಸಿನಲ್ಲಿ ಹರಿವುದರಿಂದ ನದಿಯೆಂದು ತಟ್ಟನೆ ಕೂನ ಸಿಗುತ್ತಿರಲಿಲ್ಲ. ಆದರೆ ಹುಚ್ಚುಕುದುರೆಗಳ ಹಿಂಡು ಮೈದಾನದಲ್ಲಿ ಕುಣಿಯುತ್ತ ಓಡುವಂತಿದ್ದ ಅಲೆಗಳು ಇದು ಹೊಳೆಯೆಂದು ದೃಢಪಡಿಸುತ್ತಿದ್ದವು. ಹೊಳೆ ಪರ್ವತಗಳ ಬುಡದಲ್ಲಿ ಜನಸದ್ದಿಗೆ ತಪ್ಪಿಸಿಕೊಂಡು ಹುಲ್ಲಿನಲ್ಲಿ ಮರೆಯಾಗುವ ಹಾವಿನಂತೆ, ಕೆಲವೆಡೆ ಮಣ್ಣಿನ ಚಾಪೆ ಹಾಸಿದಂತೆ ತೋರುತ್ತಿತ್ತು. ಅಲೆಗಳ ಮೇಲೆ ಬಿಸಿಲು ಬಿದ್ದು ಕೆಸರಿನ ಲಾವಾರಸದ ಭ್ರಮೆ ಹುಟ್ಟಿಸುತ್ತಿತ್ತು. ಆಳವಾದ ಕಣಿವೆಗಳಲ್ಲಿ ಗಂಭೀರವಾಗಿ; ಇಳಿಜಾರಿನಲ್ಲಿ ಸಿಕ್ಕಾಪಟ್ಟೆ ಗಲಭೆ ಎಬ್ಬಿಸುತ್ತ, ಆಳವಿರುವಲ್ಲಿ ಕಡಾಯಿಯಲ್ಲಿ ಮರಳುತ್ತಿರುವ ಕಬ್ಬಿನಹಾಲಿನಂತೆ, ಪರ್ವತಗಳ ಇರುಕುಗಳಲ್ಲಿ ಮೇಕೆದಾಟುವಿನಂತೆ ಕಿರಿಯ ಕಾಲುವೆಯಾಗಿ ಹರಿಯುತ್ತಿತ್ತು. ರಸ್ತೆ ಹೊಳೆದಡದಲ್ಲೇ ಇದ್ದುದರಿಂದ, ಅದರಿಂದ ನಮಗೆ ಬಿಡುಗಡೆ ಇರಲಿಲ್ಲ. ಇದರ ಸಂಗ ಸಾಕಪ್ಪ ಎನಿಸುವಷ್ಟು ಏಕತಾನತೆ ಬರಿಸುತ್ತಿತ್ತು. ಅದು ಪರ್ವತಗಳ ಸಂದಿನಲ್ಲಿ ಮರೆಯಾದಾಗ ನದಿಯಿಲ್ಲದ ಇದೆಂತಹ ಪಯಣವೆಂದು ಕಸಿವಿಸಿ ಆಗುತ್ತಿತ್ತು. ಅದು ಪರ್ವತವನ್ನು ಸುತ್ತುಹಾಕಿ ತಟ್ಟನೆ ಕಾಣಿಸಿಕೊಂಡಾಗ ಕಳೆದ ಸಂಗಾತಿ ಸಿಕ್ಕ ಉಲ್ಲಾಸವಾಗುತ್ತಿತ್ತು. ರಸ್ತೆಯ ತಿರುವುಗಳಲ್ಲಿ ಹಿಂತಿರುಗಿ ನೋಡಿದರೆ ಹತ್ತಾರು ಕಿಲೋಮೀಟರ್‌ ಉದ್ದಕ್ಕೆ ಅದರ ಸುಂದರ ಕಣಿವೆಯ ದರ್ಶನ. ಕೆಲವು ಜಾಗಗಳಲ್ಲಿ ಪಟ ತೆಗೆಯಲು ಭಾರತೀಯ ಸೇನೆ ವೇದಿಕೆಗಳನ್ನು ನಿರ್ಮಿಸಿದೆ.

ಕೆಸರಿನ ಲಾವಾರಸ ಹರಿದಂತೆ ಕಾಣುವ ಶೈಯೋಕ್‌ ನದಿ

ಶೈಯೋಕ್‌ನ ಬಗ್ಗಡತನವು ಅದಕ್ಕೆ ಬಂದು ಸೇರಿ ಮೂಲರೂಪ ಕಳೆದುಕೊಳ್ಳುತ್ತಿದ್ದ ನೀಲಬಿಳುಪಿನ ಹಳ್ಳಗಳಿಂದ ಮತ್ತಷ್ಟು ಎದ್ದು ಕಾಣುತ್ತಿತ್ತು. ಹೊಳೆಗೆ ಶುದ್ಧ ಅಶುದ್ಧ ಭೇದವೆಲ್ಲಿದೆ? ಚಳಿಗಾಲದಲ್ಲಿ ಹೆಪ್ಪುಗಟ್ಟುವ ಶೈಯೋಕ್, ಬೇಸಿಗೆಯಲ್ಲಿ ಹಸಿರುನೀಲಿಗೆ ತಿರುಗುತ್ತದೆಯಂತೆ. ಮರುಭೂಮಿಯ ಬಿಳಿಉಸುಕಿನೊಳಗೆ ಕಪ್ಪುಬಿಳಿ ಪರ್ವತಗಳ ಬುಡದಲ್ಲಿ ಹರಿವ ನೀಲಜಲ ಕಲ್ಪಿಸಿಕೊಂಡು ನವಿರೆದ್ದಿತು. ಆಗ ಸಾಧ್ಯವಾದರೆ ಸರ್ಫಿಂಗ್ ಮಾಡಬೇಕು. ನೀರ ಮೇಲಿಂದ ಪರ್ವತಗಳನ್ನು ನೋಡಬೇಕು. ಹಗಲು ನೀಲಾಂಬರವಾಗಿ ರಾತ್ರಿ ಕಪ್ಪುಛಾವಣಿಯಾಗುವ ಸ್ವಚ್ಛಾಗಸದಲ್ಲಿ, ನಕ್ಷತ್ರಗಳ ಚಾಪೆಯಂತಹ ಗೆಲಾಕ್ಸಿಯನ್ನು ನೋಡಬೇಕು. ಆದರೆ ರಕ್ಷಣಾ ದೃಷ್ಟಿಯಿಂದ ಸೂಕ್ಷ್ಮವಾಗಿರುವ ಈ ಪ್ರದೇಶದಲ್ಲಿ ಇದಕ್ಕೆಲ್ಲ ಅವಕಾಶವಿಲ್ಲ. ಗಿಡಮರಗಳ ಹೆಸರಿಲ್ಲದ ಲಡಾಖಿನ ನಗ್ನ ಪರ್ವತಗಳು ನೀಲಗಗನವನ್ನು ಕತ್ತರಿಸಿ ದಿಗಂತವನ್ನು ಸೃಷ್ಟಿಸುವ ಬಗೆಯೇ ಚಂದ. ಇಷ್ಟಕ್ಕೂ ಪರ್ವತ ಹೊಳೆ ಆಗಸಗಳ ನಡುವೆ ಭೇದ ಎಣಿಸುವುದೇ ತಪ್ಪು. ಹೊಳೆಯ ಚೆಲುವನ್ನು ಪರ್ವತಗಳೂ ಪರ್ವತಗಳ ಭವ್ಯತೆಯನ್ನು ಹೊಳೆಯೂ ಪರಸ್ಪರ ಕನ್ನಡಿಸುತ್ತವೆ.

ADVERTISEMENT

ಶೈಯೋಕ್ ಮೀನಿಲ್ಲದ ನದಿ ಎಂದು ನಿರಾಶೆಯಾಗಿತ್ತು. ಆದರೆ ನುಬ್ರಾ ಕಣಿವೆ ಎಂದು ಹೆಸರಾಗಿರುವ ಶೈಯೋಕಿನ ನಿಜವಾದ ಚೆಲುವಿರುವುದು ದಡದ ತೋಟಪಟ್ಟಿಗಳಿಂದ. ಅದು ಪರ್ವತಗಳ ತಪ್ಪಲಿನಲ್ಲಿ ನಿರ್ಮಿಸಿದ ಮಣ್ಣದಿಬ್ಬಗಳಲ್ಲಿ ತೋಟ, ಊರು ಎದ್ದಿವೆ. ಅಗೋಚರ ಹಿಮಶಿಖರಗಳಿಂದ ಬರುವ ಹಾಲಿನ ಝರಿಗಳನ್ನು ತಿರುಗಿಸಿಕೊಂಡು ರೈತರು ಮರುಭೂಮಿಯನ್ನು ನಂದನವನ ಮಾಡಿರುವರು. ಕುರ್ತುಕ್‌ನ ರೈತ ಹೇಳಿದ: ‘ನಾವು ಗ್ಲೇಶಿಯರ್ ನೀರನ್ನು ಹೊಲಗಳಿಗೆ ಹರಿಸುವುದಿಲ್ಲ. ತಿಳಿಯಾದ ಪುಟ್ಟ ಹೊಳೆಗಳನ್ನಷ್ಟೆ ತಿರುಗಿಸಿಕೊಳ್ಳುತ್ತೇವೆ.’ ಹೊಲಗಳಲ್ಲಿ ಆಫ್ರಿಕಾಟ್ ಸೇಬು ಬದಾಮಿ ಗಿಡ; ಆಲೂ ಗೋಧಿ ಬಾರ್ಲಿ ಬೆಳೆ; ಸೈನಿಕರು ಕವಾಯತಿಗೆ ನಿಂತಂತೆ, ನೆಟ್ಟ ಬಾವುಟಗಳಂತೆ ತಿಳಿಹಸಿರಿನ ಪೊಪ್ಲಾರ್ ಮರಗಳು. ಈ ಗದ್ದೆ ತೋಟಗಳು, ಶೈಯೋಕಿನ ಬಿಳಿಯ ಮರಳ ಪತ್ತಲಕ್ಕೆ ಹಸಿರು ನೂಲಿನಿಂದ ಹಾಕಿದ ಕಸೂತಿಗಳು.

ನಾವು ಹೋದಾಗ ಗದ್ದೆಗಳೆಲ್ಲ ಕಟಾವಿಗೆ ಬಂದಿದ್ದವು. ಗೋಧಿ ಸಿವುಡನ್ನು ಹೆಮ್ಮಕ್ಕಳು ಬೆನ್ನಮೇಲೆ ಹೊತ್ತು ಕಣಕ್ಕೆ ಅಡಕುತ್ತಿದ್ದರು. ಮನೆಗಳ ಛಾವಣಿ ಮೇಲೆಯೂ ಸಿವುಡನ್ನು ಒಟ್ಟಲಾಗಿತ್ತು. ಸೇಬು ಇನ್ನೂ ಎಳಸಾಗಿತ್ತು. ಬಾರ್ಲಿ ಮೊಳಕೆ ಒಡೆಯುತ್ತಿತ್ತು. ಆಲೂಗೆಡ್ಡೆ ಹೂಬಿಟ್ಟಿತ್ತು. ಬರ‍್ರಿ ಆಫ್ರಿಕಾಟು ಹಣ್ಣು ನೆಲಕ್ಕೆ ಸುರಿದಿದ್ದವು. ಇವಕ್ಕೆ ಲಡಾಖ್‌ ಸೀಮೆಯ ಹಕ್ಕಿಗಳೆಲ್ಲ ಪರಿಸೆ ಕೂಡಿ ಕಲರವ ಎಬ್ಬಿಸಿದ್ದವು. ಸುತ್ತ ಹಸಿರು. ಕೆಳಗೆ ಹೊಳೆ. ಮೇಲೆ ಪರ್ವತ. ಅದರಾಚೆ ಚೂಪಾಗಿ ಕಾಣುವ ಹಿಮಶಿಖರ. ಅದರಾಚೆ ನೀಲಾಕಾಶ. ಇಲ್ಲಿನ ಜನ ಅದೃಷ್ಟವಂತರು. ಆದರೆ ಈ ಚೆಲುವಿನ ಜತೆಗೆ ಅವರವೇ ನೂರಾರು ಬವಣೆಗಳಿವೆ.

ನದಿಯ ಹರಿವನ್ನು ಹೀಗೂ ವೀಕ್ಷಿಸಬಹುದು...

ಶೈಯೋಕ್ ದಡದಲ್ಲಿ ಬಿಳಿ ಮರುಭೂಮಿಯಿದೆ. ಅಲ್ಲಿ ಕುರುಚಲು ಸಸ್ಯಗಳು ಇರದಿದ್ದರೆ ಅದೊಂದು ತಲಕಾಡಿನ ಮರಳರಾಶಿ ಆಗಿರುತ್ತಿತ್ತು. ಮರಳ ದಿಬ್ಬಗಳ ನಡುವೆ ತೋಡು ಮಾಡಿಕೊಂಡು ಅದು ಹರಿಯುತ್ತ ಅಲ್ಲಲ್ಲಿ ಜೌಗು ನಿರ್ಮಿಸಿದೆ. ಈ ಜೌಗಿನಲ್ಲಿ ಪುಟ್ಟ ಸರೋವರಗಳು. ಅವುಗಳಲ್ಲಿ ಹಸಿರು ಕಂಬಳಿ ಹೊದಿಸಿದಂತೆ ಜಲಸಸ್ಯಗಳು. ಕ್ರೀಡಿಸುವ ಪಟ್ಟೆ ಬಾತು. ಭಾರತದಲ್ಲೇ ನುಬ್ರಾ ಕಣಿವೆ ಪರಿಸರದ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶ. ಕಣಿವೆಯ ವಿಶಾಲ ನೋಟವನ್ನು ದಿಸ್ಕಿತ್‌ನಲ್ಲಿರುವ ಮೈತ್ರೇಯಿ ಬುದ್ಧನ ಬೃಹದಾಕಾರದ ಪ್ರತಿಮೆಯಿರುವ ಪರ್ವತ ಮೇಲಿಂದ ನೋಡಬೇಕು. ಎದೆ ಝಲ್ಲೆನ್ನುತ್ತದೆ. ವಿಹಾರದಲ್ಲಿರುವ ಭಿಕ್ಕುಗೆ ಕೇಳಿದೆ: ‘ಇಲ್ಲಿ ಮಳೆ ಬರುತ್ತದೆಯೇ?’ ಆತ ಹೇಳಿದ: ‘ನೀರು ಚಿಮಿಕಿಸಿದಂತೆ ಬರುತ್ತದೆ. ಹಿಮಪಾತವೂ ಕಡಿಮೆ. ಹಿಮಶಿಖರಗಳಿಂದ ಬರುವ ನೀರು ಕಣಿವೆಯನ್ನು ಸಮೃದ್ಧಗೊಳಿಸುತ್ತದೆ’. ಕಠೋರ ಪರಿಸರವೇ ಮನುಷ್ಯ ಸಾಹಸಕ್ಕೆ ಆಹ್ವಾನ ಕೊಟ್ಟಿದೆ. ಹೊಳೆಪಾತ್ರದಲ್ಲಿ ವಿಹಾರ, ಹಳ್ಳಿ, ಹೊಲಗದ್ದೆ, ಪ್ರವಾಸಿ ಹೋಟೆಲುಗಳು, ಸೈನಿಕಠಾಣೆ, ವಿಮಾನ ನಿಲ್ದಾಣಗಳಿವೆ. ಪರ್ವತಗಳ ಮೈಕತ್ತರಿಸಿ ರಸ್ತೆ ಮಾಡಲಾಗುತ್ತಿದೆ. ಚೀನಾ ಜತೆ ಸಂಘರ್ಷವಾದ ಬಳಿಕ ಕಾಮಗಾರಿ ಹೆಚ್ಚಾಗಿದೆ. ಇವು ನುಬ್ರಾ ಕಣಿವೆಯ ಚಹರೆಯನ್ನು ಹೇಗೆ ಬದಲಿಸಬಲ್ಲವೊ ತಿಳಿಯದು.

ಶೈಯೋಕ್‌, ಥಾಂಗನ್ನು ದಾಟಿ ಪಾಕಿಸ್ತಾನ ವಶದಲ್ಲಿರುವ ಗಿಲ್ಗಿಟ್ ಪ್ರಾಂತ್ಯದೊಳಗೆ ಪ್ರವೇಶಿಸಿ ಕಣ್ಮರೆಯಾಗುತ್ತದೆ. ಪಯಣದುದ್ದಕ್ಕೂ ಮಾತುಕತೆ ಮಾಡಿಕೊಂಡು ಬಂದಿದ್ದ ಸಹಯಾತ್ರಿ ಅಗಚುವ ಹಾದಿಯಲ್ಲಿ ತಟ್ಟನೆ ಅಗಲಿದಂತೆ ದುಗುಡವಾಗುತ್ತದೆ. ಲಡಾಖಿನಲ್ಲಿ ಹಲವು ನದಿಗಳು ಸೇರಿ ಒಂದಾಗುತ್ತವೆ. ಒಂದಾಗುವ ನದಿಗಳನ್ನು ಗಡಿ ಮಾಡಿಕೊಂಡು ದೇಶಗಳು ಬೇರ್ಪಡುತ್ತವೆ. ಶೈಯೋಕ್ ಮಾತ್ರ ಈ ರಾಜಕೀಯ ಹಂಚಿಕೆ ನಿಮ್ಮದು ನನ್ನದಲ್ಲ ಎಂಬಂತೆ, ತನ್ನ ತೋಳಸೆಳವಿಗೆ ಸಿಕ್ಕ ಎಲ್ಲ ಪ್ರದೇಶಗಳನ್ನು ಸಮಾನವಾಗಿ ಸಮೃದ್ಧಗೊಳಿಸುತ್ತ ಹರಿಯುತ್ತದೆ.

ಗೋಧಿ ಸಿವುಡು ಹೊತ್ತ ಅಜ್ಜಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.