ADVERTISEMENT

ಸಿಂಗಪುರದಲ್ಲಿ ಏನೇನ್‌ ಕಂಡೆ...

ವಿ.ಶ್ರೀನಿವಾಸ
Published 6 ಡಿಸೆಂಬರ್ 2025, 23:33 IST
Last Updated 6 ಡಿಸೆಂಬರ್ 2025, 23:33 IST
ಸಿಂಗಪುರದ ಪಕ್ಷಿನೋಟ 
ಸಿಂಗಪುರದ ಪಕ್ಷಿನೋಟ    

ಅದು ಎಸ್.ಎಂ.ಕೃಷ್ಣ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕಾಲ. ವಿದೇಶದಲ್ಲಿ ಕಲಿತು, ಹಲವಾರು ದೇಶಗಳನ್ನು ಕಂಡಿದ್ದ ಅವರು ‘ಬೆಂಗಳೂರನ್ನು ಸಿಂಗಪುರದಂತೆ ಮಾಡಬೇಕು’ ಎಂಬ ತಮ್ಮ ಮನದಾಸೆಯನ್ನು ಬಹಿರಂಗವಾಗಿ ಹೇಳಿದರು. ಆಗ ಸಿಂಗಪುರದ ಬಗ್ಗೆ ಒಂದಷ್ಟು ಮಾಹಿತಿ ಪತ್ರಿಕೆಗಳ ತುಂಬಾ ವಿಜೃಂಭಿಸಿತು. ಆಗಲೇ ಸಿಂಗಪುರ ಹೇಗಿದೆ ಎಂದು ನೋಡಬೇಕೆಂಬ ಕನಸು ನನ್ನಲ್ಲೂ ಸುಪ್ತವಾಗಿತ್ತು ಎನಿಸುತ್ತದೆ. ಪಾಸ್‌ಪೋರ್ಟ್‌ ಮಾಡಿಸಿ, ವಿದೇಶ ಪ್ರಯಾಣದ ತಯಾರಿ ನಡೆಸುತ್ತಿದ್ದಾಗ ಸಿಂಗಪುರ ನಮ್ಮ ‘ಬಕೆಟ್‌ ಲಿಸ್ಟ್‌’ ನಲ್ಲಿ ಅಗ್ರಸ್ಥಾನ ಪಡೆದಿತ್ತು. (ಇದು ಈಗಿನ ಭಾಷೆ. ಆಗ ಬಕೆಟ್ಟೂ ಇರಲಿಲ್ಲ, ಲಿಸ್ಟೂ ಇರಲಿಲ್ಲ). ಎಸ್.ಎಂ.ಕೃಷ್ಣ ಅವರ ಬೆಂಗಳೂರನ್ನು ಸಿಂಗಪುರದಂತೆ ಮಾಡುವ ಕನಸಿನ ಯೋಜನೆಗೆ ಸಿಕ್ಕ ಸಹಕಾರಕ್ಕಿಂತ ಆಡಿಕೊಂಡು ನಕ್ಕವರೇ ಹೆಚ್ಚು. ಈಗಿನ ಭಾಷೆಯಲ್ಲಿ ಹೇಳುವುದಾದರೆ, ಅದರ ಬಗೆಗಿನ ಟ್ರೋಲ್‌ಗಳು ವೈರಲ್‌ ಆಗಿದ್ದವು.

ಒಳಾಂಗಣದಲ್ಲಿನ ಬೃಹತ್‌ ಜಲಪಾತ

ಸಿಂಗಪುರ ಎಂದರೆ ಅಲ್ಲಿಯ ರಸ್ತೆಗಳು, ಶುಚಿತ್ವ ಮುಂತಾದ ಬಾಹ್ಯ ಲಕ್ಷಣಗಳ ಬಗ್ಗೆ ಮಾತ್ರ ಹೆಚ್ಚು ಪ್ರಚಾರವಾಗಿ, ‘ಅಷ್ಟೇನಾ?’ ಎಂದು ಭಾವಿಸುವವರೇ ಹೆಚ್ಚು. ವ್ಯಕ್ತಿಯ ಸೌಂದರ್ಯವೆಂದರೆ ಮುಖದ ಮೇಕಪ್ಪು, ಸೆಂಟು, ಬಟ್ಟೆ ಮಾತ್ರವಲ್ಲ. ವ್ಯಕ್ತಿಯ ದೈಹಿಕ ಸೌಷ್ಟವ ಹಾಗೂ ಮಾನಸಿಕ ಆರೋಗ್ಯ ಹೇಗೆ ಮುಖ್ಯವಾಗುತ್ತದೋ ಹಾಗೆ ಒಂದು ನಗರಕ್ಕೂ, ಒಂದು ದೇಶಕ್ಕೂ ರಸ್ತೆಗಳು, ಕಟ್ಟಡಗಳು ಮಾತ್ರ ಮಾನದಂಡವಲ್ಲ. ಉನ್ನತ ಸ್ಥಾನ ಪಡೆಯುವುದಕ್ಕಿಂತ, ಸತತವಾಗಿ ಅದೇ ಸ್ಥಾನವನ್ನು ಕಾಯ್ದುಕೊಳ್ಳುವುದು ಬಹಳ ಕಷ್ಟ. ಅಲ್ಲಿಯ ಗೈಡ್‌ ಪದೇ ಪದೇ ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಸಿಂಗಪುರ ಅತ್ಯಂತ ಸುರಕ್ಷಿತ ನಗರ. ಅಪರಾಧ ಪ್ರಕರಣಗಳು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ ಪ್ರಮಾಣದಲ್ಲಿವೆ. ಕಠಿಣ ಕಾನೂನುಗಳು, ಅವುಗಳ ಕಟ್ಟುನಿಟ್ಟಿನ ಅನುಷ್ಠಾನದ ಜೊತೆಗೆ ಅಪರಾಧಗಳ ಬಗೆಗೆ ಸಾಮಾಜಿಕ ಅರಿವು ಇದನ್ನು ಸಾಧಿಸಲು ಸಾಧ್ಯವಾಗಿದೆ. ಅತಿ ಹೆಚ್ಚು ಮಿಲಿಯನಿಯರ್‌ಗಳಿರುವ ಶ್ರೀಮಂತ ದೇಶ. ಒಬ್ಬೊಬ್ಬರೂ ಹತ್ತಾರು ಕಾರು, ಬಂಗಲೆಗಳನ್ನು ಕೊಳ್ಳಬಲ್ಲವರಾದರೂ, ಅಲ್ಲಿ ವಾಹನ ದಟ್ಟಣೆ ಇಲ್ಲ. ಏಕೆಂದರೆ ಕಾರುಗಳನ್ನು ಕೊಳ್ಳಲು ನಿಮ್ಮ ಬಳಿ ಹಣವಿದ್ದರೆ ಸಾಲದು. ಸರ್ಕಾರದ ಅನುಮತಿ ಬೇಕು. ಅದಕ್ಕಾಗಿ ದುಬಾರಿ ಶುಲ್ಕ ತೆರಬೇಕು. ಅದಕ್ಕಿಂತ ಮುಖ್ಯವಾಗಿ ನಗರದ ಧಾರಣಶಕ್ತಿಗನುಗುಣವಾಗಿ ಸರ್ಕಾರ ಕಾರುಗಳ ಸಂಖ್ಯೆಯನ್ನು ಮಿತಿಗೊಳಿಸಿದೆ. ಸಾರ್ವಜನಿಕ ಸಂಚಾರ ವ್ಯವಸ್ಥೆಗಳಾದ ಬಸ್ಸು, ಮೆಟ್ರೊಗಳನ್ನು ಹೆಚ್ಚು ಹೆಚ್ಚು ಜನಪ್ರಿಯಗೊಳಿಸಿದೆ.

ಗಾರ್ಡನ್‌ ಬೈದಿ ಬೇ

ಮುಖ್ಯ ವಿಷಯವೆಂದರೆ, ದೇಶವು ಭ್ರಷ್ಟಾಚಾರ ಮುಕ್ತವಾಗಿದ್ದು ಜನರ ಶಿಕ್ಷಣ, ಆರೋಗ್ಯ ಸೇವೆಗಳಿಗೆ ಹೆಚ್ಚಿನ ಮಹತ್ವವನ್ನು ಸರ್ಕಾರ ನೀಡುತ್ತಿದೆ. ಸಿಂಗಪುರ ಇರುವುದೇ 735 ಚದರ ಕಿಲೋಮೀಟರ್‌. ಅಂದರೆ 49 ಕಿಲೋಮೀಟರ್‌ ಅಗಲ, 28 ಕಿಲೋಮೀಟರ್‌ ಉದ್ದದ ಪುಟ್ಟ ದ್ವೀಪ. ಸ್ವಲ್ಪ ಸ್ವಲ್ಪ ಸಮುದ್ರವನ್ನು ಒತ್ತುವರಿ ಮಾಡಿಕೊಂಡು ಬೆಳೆದಿದೆಯಾದರೂ, ಅತ್ತ ರಾಮನಗರ, ಇತ್ತ ತುಮಕೂರು ಎಲ್ಲವನ್ನೂ ಒತ್ತರಿಸಿಕೊಂಡು ಗ್ರೇಟರ್‌ ಬೆಂಗಳೂರಿನಂತೆ ಬೆಳೆಯಲು ಸಿಂಗಪುರಕ್ಕೆ ಸಾಧ್ಯವಿಲ್ಲ. ನಾವು ಭೇಟಿ ನೀಡಿದಾಗ, 1965 ಆಗಸ್ಟ್‌ 9 ರಂದು ಸ್ವತಂತ್ರ ಪಡೆದ ಸಿಂಗಪುರ ತನ್ನ 60ನೇ ವರ್ಷದ ಜನ್ಮದಿನದ ಸಂಭ್ರಮಾಚರಣೆಯ ತಯಾರಿಯಲ್ಲಿತ್ತು.

ADVERTISEMENT

ಮೊದಲಿಗೆ ಸಿಂಗಪುರದ ಲಾಂಛನ ‘ಮರ್ಲಯನ್‌’ ತೋರಿಸುತ್ತಾರೆ. ಸಿಂಹದ ತಲೆ, ಮೀನಿನ ದೇಹವಿರುವ ಬಿಳಿ ಪ್ರತಿಮೆಯದು. ಸಿಂಗಪುರಕ್ಕೆ ಹೋಗಿದ್ದರ ನೆನಪಿಗಾಗಿ ಅದರೊಂದಿಗೆ ಫೋಟೊ ಶೂಟ್‌ಗಾಗಿ ಪ್ರವಾಸಿಗರು ನೆರೆದಿರುತ್ತಾರೆ. ಅದರ ಸುತ್ತಲೂ ಇರುವ ಅನೇಕ ಬಹುಮಹಡಿ ಕಟ್ಟಡಗಳಲ್ಲಿ ಪ್ರಪಂಚದ 130ಕ್ಕೂ ಹೆಚ್ಚು ದೇಶಗಳ ಎಲ್ಲ ಪ್ರಮುಖ ಬ್ಯಾಂಕುಗಳ ಶಾಖೆಗಳು ಕಾರ್ಯನಿರ್ವಹಿಸುವ ಫೈನಾನ್ಷಿಯಲ್‌ ಸಿಟಿ ಕಾಣುತ್ತದೆ. ಸತತವಾಗಿ ಅತ್ಯುನ್ನತ ಸ್ಥಾನವಾದ ‘ಎಎಎ’ ರೇಟಿಂಗ್‌ ಪಡೆದಿರುವ ಏಷ್ಯಾದ ಏಕೈಕ ದೇಶವಿದು.

ಬಿಡಿ ಬಿಡಿಯಾದ ಮೂರು ಗಗನಚುಂಬಿ ಕಟ್ಟಡಗಳ ಮೇಲೆ ಒಂದು ಹಡಗಿನಾಕಾರ ಜೋಡಿಸಿರುವ ಸಿಂಗಪುರದ ಐಕಾನಿಕ್‌ ‘ಮರಿನಾ ಬೇ ಸ್ಯಾಂಡ್ಸ್‌’ ಮೇಲಿನಿಂದ ನಗರದ ವಿಹಂಗಮ ನೋಟ ಕಣ್ತುಂಬಿಕೊಳ್ಳಬಹುದು. ಅಲ್ಲಿ ಐಷಾರಾಮಿ ಹೋಟೆಲಿನಲ್ಲಿ ವಾಸ್ತವ್ಯ ಇರುವವರಿಗಷ್ಟೇ ಮೇಲ್ಛಾವಣಿಯಲ್ಲಿರುವ ಈಜುಕೊಳ ಬಳಕೆ ಭಾಗ್ಯವಿದೆ. ನಂತರ ಕ್ಲೌಡ್‌ ಫಾರೆಸ್ಟ್‌ ಹಾಗೂ ಫ್ಲವರ್‌ ಡೋಂ ಎಂಬ ಬೃಹತ್‌ ಜೋಡಿ ಗ್ರೀನ್‌ ಹೌಸ್‌ ಡೋಂಗಳಿಗೆ ಭೇಟಿ ನೀಡಿದೆ. ಹೆಸರೇ ಹೇಳುವಂತೆ ಒಂದರಲ್ಲಿ ಮಳೆ ಕಾಡು, ಅದರಲ್ಲಿ ಅತಿ ಎತ್ತರದ ಕೃತಕ ಒಳಾಂಗಣ ಜಲಪಾತ, ಡೈನೋಸಾರ್‌ ಪ್ರತಿಮೆ ಇಲ್ಲಿಯ ಮುಖ್ಯ ಆಕರ್ಷಣೆ. ಇನ್ನೊಂದರಲ್ಲಿ ಬಗೆ ಬಗೆಯ ಹೂಗಳು. ನಂತರ ಪಕ್ಕದಲ್ಲಿರುವ ‘ಗಾರ್ಡನ್‌ ಬೈ ದಿ ಬೇ’ಗೆ ಭೇಟಿ. ಇಲ್ಲಿ ಎತ್ತರದ ಮರಗಳ ಆಕಾರದ ಮೆಟಲ್‌ ರಚನೆಗಳ ಮೇಲೆ ಬಣ್ಣ ಬಣ್ಣದ ಲೈಟ್‌ ಶೋ ಕಾರ್ಯಕ್ರಮ ನೋಡಿದೆವು. ಇದು ಸಿಂಗಪುರದ ವಿಶೇಷ.

ಗಿಡಗಳಲ್ಲಿ ಜೀವತಳೆದ ‘ಡೆಸ್ಪಿಕೇಬಲ್‌ ಮಿ’ ಸಿನಿಮಾದ ಪಾತ್ರಗಳು

ಮರುದಿನ ಒಂದಿಡೀ ದಿವಸ ‘ಯೂನಿವರ್ಸಲ್‌ ಸ್ಟುಡಿಯೋಸ್‌’ ಪ್ರವಾಸ. ದುಬಾರಿ ಪ್ರವೇಶ ಶುಲ್ಕವಿದ್ದರೂ ಸದಾ ಜನ ಜಂಗುಳಿಯಿಂದ ತುಂಬಿರುತ್ತದೆ. ಹತ್ತು–ಹದಿನೈದು ನಿಮಿಷಗಳ ಒಂದೊಂದು ಶೋಗಳಿಗೂ ಒಂದರಿಂದ ಎರಡು ಗಂಟೆ, ಎರಡೂವರೆಗಂಟೆ ಸರತಿ ಸಾಲುಗಳಲ್ಲಿ ನಿಂತು ಕಾಯಬೇಕು.

ಮೂರನೇ ದಿನ ‘ಸಂಟೋಸ ಐಲೆಂಡ್‌’ಗೆ ಮೊನೊ ರೈಲು, ಕೇಬಲ್‌ ಕಾರುಗಳ ಮೂಲಕ ಹೋಗುವ ಅನುಭವ. ಸಂಟೋಸ ಎಂದರೆ ನಮ್ಮ ಕನ್ನಡದ ‘ಸಂತೋಷ’ ಎಂದೇ ಅರ್ಥವಂತೆ. ಅಲ್ಲಿ ಆಟವಾಡಲು ಅನೇಕ ಥೀಮ್‌ ಪಾರ್ಕ್‌ಗಳೂ, ಬೀಚ್‌, ಮೇಡಂ ಟುಸಾಡ್ಸ್‌ , ಬಂಜೀ ಜಂಪ್‌, ತಿಂಡಿ ತಿನಿಸುಗಳ ಅಂಗಡಿಗಳು, ಒಟ್ಟಿನಲ್ಲಿ ಮನರಂಜನಾ ದ್ವೀಪವದು. ತಮಗೆಲ್ಲ ತಿಳಿದಿರುವಂತೆ ಮೇಡಂ ಟುಸಾಡ್ಸ್‌ನಲ್ಲಿ ಖ್ಯಾತ ವ್ಯಕ್ತಿಗಳ ಯಥಾವತ್‌ ಮೇಣದಪ್ರತಿಮೆಗಳೊಂದಿಗೆ ಫೋಟೊ ತೆಗೆದುಕೊಳ್ಳುವ ಸಂಭ್ರಮ. ಸಂಜೆ ಬೀ‌ಚಿನಲ್ಲಿ ‘ವಿಂಗ್ಸ್‌ ಆಫ್‌ ಫೈರ್’ ಎಂಬ ಸ್ಥಳೀಯ ಜನಪದ ಕತೆಯ ರೂಪಕ, ಬೃಹತ್‌ ಲೇಸರ್‌ ಶೋ ಅಲ್ಲಿಯ ಪ್ರಮುಖ ಆಕರ್ಷಣೆ. ಸಿಂಗಪುರದ ಚೈನಾಟೌನ್‌ ಲಿಟಲ್‌ ಇಂಡಿಯಾ ಅಲ್ಲಿಯ ಸ್ಟ್ರೀಟ್‌ ಫುಡ್‌ಗಳ ಬಗ್ಗೆ ಕೇಳಿದ್ದೆ. ಆದರೆ ಸಮಯದ ಮಿತಿಯಿಂದಾಗಿ ಅಲ್ಲಿಗೆ ಹೋಗಲಾಗಲಿಲ್ಲ.

ಯೂನಿವರ್ಸಲ್‌ ಸ್ಟುಡಿಯೊದಲ್ಲಿ ಹೆಜ್ಜೆ ಹಾಕುತ್ತಾ...

‘ಫೈನ್‌ ಸಿಟಿ’ ಅರ್ಥಾತ್‌ ‘ದಂಡದ ನಗರ’ ಎಂದು ಹೆಸರಾಗಿರುವ ಸಿಂಗಪುರದಲ್ಲಿ ಎಲ್ಲವೂ ಹೊರಗಿನಿಂದ ಬರಬೇಕಾಗಿರುವುದರಿಂದ ಪ್ರತಿ ವಸ್ತುವೂ ದುಬಾರಿ. ಎಲ್ಲ ಹೋಟೆಲ್‌ಗಳಲ್ಲೂ ತಿನ್ನದೇ ಬಿಡುವ ಆಹಾರಕ್ಕೆ ದಂಡ ವಿಧಿಸುತ್ತಾರೆ ಎಂದು ನಮ್ಮ ಗೈಡ್‌ ಮೊದಲೇ ಎಚ್ಚರಿಸಿದ್ದರು. ಅಂತೂ ಸಿಂಗಪುರದ ‘ನಾಕು ದಿನದ ಬದುಕಿನಲಿ’ ಹೊಂದಿಕೊಂಡು, ಯಾವುದೇ ದಂಡವಿಲ್ಲದೆ ಬಂದೆವು! ‘ನಮ್ಮ ಮದುವೆ ಮನೆಗಳಲ್ಲೂ ಹೀಗೇ ದಂಡ ಹಾಕ್ಬೇಕು ಕಣ್ರೀ’ ಎಂದು ಜೊತೆಗಿದ್ದವರೊಬ್ಬರು ಆಹಾರ ವ್ಯರ್ಥವಾಗುವುದರ ಬಗ್ಗೆ ಕಾಳಜಿಯಿಂದ ಮತ್ತೊಬ್ಬರಿಗೆ ಹೇಳುತ್ತಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.