ADVERTISEMENT

ಅಪೂರ್ವ ಕೊಹಿನೂರ್‌ ವಜ್ರ ಹೇಳುವ ಕತೆ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2024, 0:10 IST
Last Updated 29 ಡಿಸೆಂಬರ್ 2024, 0:10 IST
<div class="paragraphs"><p>ಬೆಳಕಿನ ಪರ್ವತ ಎಂದೂ ಕರೆಯಲ್ಪಡುವ ಕೊಹಿನೂರ್‌ ವಜ್ರವಿರುವ ಕಿರೀಟ</p></div>

ಬೆಳಕಿನ ಪರ್ವತ ಎಂದೂ ಕರೆಯಲ್ಪಡುವ ಕೊಹಿನೂರ್‌ ವಜ್ರವಿರುವ ಕಿರೀಟ

   

ವಿಶ್ವದಲ್ಲಿಯೇ ಪುರಾತನವಾದ, ಅತಿ ಹೆಚ್ಚು ತೂಕ ಹಾಗೂ ಮೌಲ್ಯವನ್ನು ಹೊಂದಿರುವ ಕೊಹಿನೂರ್‌ ವಜ್ರ 1850ರಿಂದ ಬ್ರಿಟಿಷ್ ಸಾಮ್ರಾಜ್ಯದ ಸೊತ್ತಾಗಿದೆ. ಲಂಡನ್‌ನ ಟವರ್ ಮ್ಯೂಸಿಯಂನ ಹದ್ದಿನ ಕಣ್ಗಾವಲಿನಲ್ಲಿ ಇದು ಪ್ರದರ್ಶಿತವಾಗಿದೆ. ಈ ಮ್ಯೂಸಿಯಂ ಜಗತ್ತಿನಲ್ಲಿ ಪ್ರಖ್ಯಾತಿ ಹೊಂದಿದ್ದು ಕೊಹಿನೂರ್ ವಜ್ರದಿಂದಾಗಿಯೇ. ಟವರ್ ಕಟ್ಟಡ ಎಂದೇ ಜನಪ್ರಿಯವಾದ ಇದು ಹದಿನೆಂಟು ಎಕರೆ ಪ್ರದೇಶದಲ್ಲಿ ಹರಡಿದೆ. ಒಳಾಂಗಣ ಗೋಡೆಯೊಳಗೆ 12 ಎಕರೆ ಇದೆ. ಎತ್ತರ 27 ಮೀಟರ್ ಹೊಂದಿದೆ. ಈ ಬೃಹತ್ ಕಟ್ಟಡದ ಒಂದು ಭಾಗ ಅಪರಾಧಿಗಳನ್ನು ಕೂಡಿ ಹಾಕುವ ವಿವಿಧ ರೀತಿಯ ಕತ್ತಲೆ ಕೋಣೆಗಳನ್ನು ಹೊಂದಿತ್ತು.‌ ಕೈ ಕಾಲಿಗೆ ಸರಪಳಿಯನ್ನು ಹಾಕಿ ಬ್ರಿಟಿಷ್ ಕಾಲೊನಿಗಳಿಂದ ಹಡಗಲ್ಲಿ ತಂದು ಕ್ರೂರ ಹಿಂಸೆಯನ್ನು ನೀಡಿ ಸಾಯಿಸಲಾಗುತ್ತಿತ್ತು. ಅಷ್ಟೇ ಅಲ್ಲ, ಕಾರಾಗೃಹದ ಕೋಣೆಗೆ ಹೊಂದಿಕೊಂಡು ಇರುವ ಕಪ್ಪು ವಿಷ ನೀರು, ಮೊಸಳೆಯಿರುವ ಆಳವಾದ ಕಾಲುವೆಗಳಿಗೆ ದೂಡಲಾಗುತಿತ್ತು ಎಂದು ಹೇಳಲಾಗಿದೆ.

ಇದೇ ಕಾರಾಗೃಹವು ಮುಂದೆ ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿತು. ಬ್ರಿಟಿಷರ ಶೌರ್ಯವನ್ನು ಎತ್ತಿ ಹೇಳುವ ಯುದ್ಧಗಳನ್ನು ಹೊಗಳುವ ಕತೆಗಳನ್ನು ಇಲ್ಲಿ ವೈಭವೀಕರಿಸಲಾಗಿದೆ.

ADVERTISEMENT

ಇಲ್ಲಿಯ ಸಂಗ್ರಹದಲ್ಲಿ ಉಡುಗೊರೆಯಾಗಿ ಬಂದ ವಿವಿಧ ದೇಶಗಳ ಅಮೂಲ್ಯ ವಜ್ರಗಳನ್ನು ಇಲ್ಲಿನ ಕತ್ತಲೆ ಕೋಣೆಯಲ್ಲಿ ಇಡಲಾಗಿದೆ. ಬೆಳಕಿನ ಕಿರಣಗಳು ವಿವಿಧ ಕೋನಗಳಲ್ಲಿ ಇವುಗಳ ಮೇಲೆ ಬಿದ್ದಾಗ ಕಾಣುವ ದೃಶ್ಯ ಅಪೂರ್ವವಾದುದು. ಒಮ್ಮೆ ನೋಡಿದವನಿಗೆ ಮತ್ತೆ ಹಿಂದೆ ಬಂದು ನೋಡಲು ಅವಕಾಶ ಇಲ್ಲ.ಇವುಗಳನ್ನು ನೋಡಲು ನಿಮಿಷ ಅಥವಾ ಅದಕ್ಕಿಂತ ಕಡಿಮೆ ಕಾಲಾವಕಾಶವಷ್ಟೇ ದೊರಕುತ್ತದೆ. ಇದರಿಂದಾಗಿಯೇ ಲಂಡನ್‌ಗೆ ಹೋದವರು ಕೊಹಿನೂರ್ ವಜ್ರ ನೋಡದೇ ಹಿಂದಿರುಗುವುದು ಅಪರೂಪ ಎಂದೇ ಹೇಳಬಹುದು.

ರೋಚಕ ಕತೆ

ಕೊಹಿನೂರ್ ವಜ್ರದ ಇತಿಹಾಸದ ಕತೆ ರೋಚಕವಾಗಿದೆ. 12-14ನೇ ಶತಮಾನದಲ್ಲಿ ಇದನ್ನು ಗಣಿಯಿಂದ ಹೊರ ತೆಗೆಯಲಾಯಿತು ಎನ್ನಲಾಗಿದೆ. ಒಬ್ಬ ರಾಜನ ಕೈಯಿಂದ ಮತ್ತೊಬ್ಬ ರಾಜನಿಗೆ, ಆತನಿಂದ ಮಗದೊಬ್ಬನಿಗೆ ಹೀಗೆ ಕೈ ಬದಲಾಯಿಸುತ್ತಾ ಬೇರೆ, ಬೇರೆ ದೇಶಗಳಿಗೆ ಇದು ಪ್ರಯಾಣಿಸಿತು. 1739ರವರೆಗೂ ಈ ವಜ್ರಕ್ಕೆ ಹೆಸರು ಇರಲಿಲ್ಲ. ದೆಹಲಿ ಸಾಮ್ರಾಜ್ಯವನ್ನು ಪರ್ಷಿಯನ್‌ ರಾಜ ನಾದಿರ್ ಶಾ ವಶಕ್ಕೆ ಪಡೆದಾಗ ಆತ ಈ ವಜ್ರವನ್ನು ಮೊದಲ ಬಾರಿಗೆ ನೋಡಿದ. ಅದರ ಪ್ರಖರತೆಗೆ ಮೆಚ್ಚಿ, ‘ಕೊಹ್‌ ಇ ನೂರ್‌’ ಎಂದು ಉಲ್ಲೇಖಿಸಿದ ಎಂದು ಇತಿಹಾಸದಲ್ಲಿ ದಾಖಲಾಗಿದೆ. ಕೊಹ್‌ ಇ ನೂರ್‌ ಎಂದರೆ ‘ಬೆಳಕಿನ ಪರ್ವತ’ ಎಂದರ್ಥ. ಅಂದಿನಿಂದ ಈ ವಜ್ರಕ್ಕೆ ಕೊಹ್‌ ಇ ನೂರ್ ಎಂಬ ಹೆಸರೇ ಉಳಿಯಿತು. ಕಾಲಾಂತರದಲ್ಲಿ ಅದು ಕೊಹಿನೂರ್ ಆಗಿ ಬದಲಾಯಿತು ಎಂದಿದ್ದಾರೆ ಇತಿಹಾಸ ತಜ್ಞರು. ಮೊಘಲರ ರಾಜರಾದ ಬಾಬರ್, ಶಹಜಹಾನ್ ಮುಂತಾದವರಿಂದ ಇದು ಹಸ್ತಾಂತರವಾಗಿದೆ. ಶಹಜಹಾನನ ರಾಣಿಯರಲ್ಲಿ ಒಬ್ಬರಾದ ವಫಾ ಬೇಗಂ ಈ ವಜ್ರದಿಂದ ತನ್ನ ರಾಜನಿಗೆ ಹಾಗೂ ರಾಜಕುವರನಿಗೆ ಕೆಡಕಾಗಬಹುದು ಎಂಬ ಭಯದಿಂದ ತನ್ನ ಬಳಿ ಇಟ್ಟುಕೊಳ್ಳಲು ಹಿಂಜರಿದಳು ಎನ್ನಲಾಗಿದೆ. ಪಂಜಾಬಿನ ಸಿಖ್ ಚಕ್ರವರ್ತಿ ತಾನು ನೀಡಿದ ಆದರಾತಿಥ್ಯಕ್ಕೆ ಪ್ರತಿಯಾಗಿ ಕೊಹಿನೂರ್ ವಜ್ರವನ್ನು ಪಡೆದ ಎನ್ನಲಾಗುತ್ತದೆ.

ಈ ಅಮೂಲ್ಯ ವಜ್ರವನ್ನು 1849ರಲ್ಲಿ ಹನ್ನೊಂದು ವರ್ಷ ವಯಸ್ಸಿನ ಮಹಾರಾಜ ದುಲೀಪ್ ಸಿಂಗ್, ಲಾಹೊರ್ ಒಪ್ಪಂದಕ್ಕೆ ಪ್ರತಿಯಾಗಿ ಹಾಗೂ ಬ್ರಿಟಿಷ್ ರಾಣಿಗೆ ಕಾಣಿಕೆಯಾಗಿ ಈಸ್ಟ್‌ ಇಂಡಿಯಾ ಕಂಪನಿಗೆ ಹಸ್ತಾಂತರಿಸಿದ. 1851ರಲ್ಲಿ ಮೊದಲ ಬಾರಿ ಸಾರ್ವಜನಿಕವಾಗಿ ‘ಗ್ರೇಟ್ ಎಕ್ಸಿಬಿಷನ್ ಲಂಡನ್‌’ನಲ್ಲಿ ಇದನ್ನು ಪ್ರದರ್ಶಿಸಲಾಯಿತು. ಆದರೆ ಜನರ ಮನಗೆಲ್ಲಲಿಲ್ಲ ಎಂಬ ಕಾರಣಕ್ಕಾಗಿ ಪ್ರಿನ್ಸ್ ಆಲ್ಬರ್ಟ್‌ ಕೊಹಿನೂರ್‌ ಅನ್ನು ಮರು ಕತ್ತರಿಸಲು ಹಾಗೂ ಪಾಲಿಷ್ ಮಾಡಲು ಆದೇಶಿಸಿದ. ಆಗ ರಾಜಮನೆತನದ ಅಕ್ಕಸಾಲಿಗರ ಮಾರ್ಗದರ್ಶನದಲ್ಲಿ ಕೊಹಿನೂರ್ ವಜ್ರವನ್ನು ಕತ್ತರಿಸಿ, ಅದಕ್ಕೆ ಈಗಿನ ಆಕಾರ ಮತ್ತು ಹೊಳಪು ನೀಡಲಾಯಿತು. ಈ ಪ್ರಕ್ರಿಯೆಯಲ್ಲಿ ಕೊಹಿನೂರ್ ವಜ್ರವು 105.6 ಕ್ಯಾರೆಟ್‌ನಿಂದ ಅರ್ಧಕ್ಕೆ ಇಳಿಯಿತು ಎಂಬ ವದಂತಿ ಹರಡಿತು. ತೆಗೆದು ಇರಿಸಬಹುದಾದ ಸ್ವರೂಪದಲ್ಲಿ ಈ ವಜ್ರವನ್ನು ಕಿರೀಟದಲ್ಲಿ ಕೂರಿಸಲಾಗಿದೆ. ರಾಣಿ ಮೇರಿಯ ಕಿರೀಟದಲ್ಲಿ ಮೊದಲು ಇದನ್ನು ಕೂರಿಸಲಾಗಿತ್ತು. ನಂತರ ರಾಣಿ ಮೊದಲನೇ ಎಲಿಜಬೆತ್‌ ಅವರ ಕಿರೀಟದಲ್ಲಿ ಈ ವಜ್ರವನ್ನು ಕೂರಿಸಲಾಯಿತು. ಈ ಕಿರೀಟವನ್ನು ‘ಕ್ವೀನ್‌ ಎಲಿಜಬೆತ್ ದಿ ಕ್ವೀನ್ ಮದರ್ಸ್‌ ಕ್ರೌನ್‌’ ಎಂದು ಕರೆಯಲಾಗುತ್ತದೆ.

ಟವರ್ ಮ್ಯೂಸಿಯಂನಲ್ಲಿನ ಚಿತ್ರವೊಂದರಲ್ಲಿ ವಿಕ್ಟೋರಿಯಾ ರಾಣಿಗೆ ಕೊಹಿನೂರ್‌ ಅನ್ನು ಕಾಣಿಕೆಯಾಗಿ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಇಲ್ಲಿಗೆ ಕೊಹಿನೂರ್ ವಜ್ರದ ಪಯಣ ಮುಗಿದು ‘ಸೆರೆಮನೆ’ಯಲ್ಲಿ ಬಂಧಿಯಾಗಿದೆ ಎಂದರೂ ತಪ್ಪಾಗದು.

ಟವರ್ ಮ್ಯೂಸಿಯಂ ಆವರಣದಲ್ಲಿ ಅಲ್ಲಲ್ಲಿ ಕಾಗೆಗಳಿಂದ ದೂರವಿರಿ ಎಂಬ ಫಲಕಗಳಿವೆ. ಸಾಮಾನ್ಯ ಕಾಗೆಗಳಿಗಿಂತ ಎರಡು ಪಟ್ಟು ದೊಡ್ಡವಿರುವ ಕಾಗೆಗಳಿವು. ಇವುಗಳಿಗೆ ವಿಶೇಷ ಮಹತ್ವವಿದೆ. ಇವು ಆಕ್ರಮಣಕಾರಿ.

ಕೊಹಿನೂರ್ ಮತ್ತೆ ಮರಳಿ ಮೂಲ ಸ್ಥಾನ ಸೇರಲು ರಾಜತಾಂತ್ರಿಕ ಚರ್ಚೆ ಅಥವಾ ಒಪ್ಪಂದದಿಂದ ಸಾಧ್ಯವಿಲ್ಲ. ಇದು ಸಾಧ್ಯವಾದರೆ ಆಶ್ಚರ್ಯ. ಆಗ ಟವರ್ ಮ್ಯೂಸಿಯಂಗೆ ಯಾವ ಆಕರ್ಷಣೆ, ಮಹತ್ವ ಇರದು ಎಂಬ ಅಭಿಪ್ರಾಯವೂ ಇದೆ. ಇದನ್ನು ಕಾಲವೇ ನಿರ್ಧರಿಸಲಿದೆ. 

ಕರ್ನಾಟಕದಲ್ಲಿ ಸಿಕ್ಕಿತ್ತೇ ಈ ವಜ್ರ?

12ರಿಂದ 14ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ್ದ ಕಾಕತೀಯ ವಂಶದ ಅರಸರ ಕಾಲದಲ್ಲಿ ಕೊಹಿನೂರ್ ವಜ್ರವನ್ನು ಗಣಿಯಿಂದ ತೆಗೆಯಲಾಯಿತು ಎನ್ನಲಾಗುತ್ತದೆ. ಆದರೆ ಇದು ದೊರೆತ ಖಚಿತ ಜಾಗ ಎಲ್ಲಿ ಎಂಬ ಗೊಂದಲ ಹಾಗೆಯೇ ಇದೆ. ಅವಿಭಜಿತ ಆಂಧ್ರಪ್ರದೇಶ ಹಾಗೂ ಕರ್ನಾಟಕದಲ್ಲಿ ಹರಿಯುವ ಕೃಷ್ಣಾ ನದಿ ವ್ಯಾಪ್ತಿಯ ಗೋಲ್ಕೊಂಡ ಪ್ರದೇಶದ ಗಣಿಯಲ್ಲಿ ಈ ವಜ್ರ ಸಿಕ್ಕಿತ್ತು ಎನ್ನಲಾಗುತ್ತದೆ. ಕೊಳ್ಳುರು ಎಂಬುದು ವಜ್ರ ಸಿಕ್ಕ ಜಾಗ. ಈ ಕೊಳ್ಳುರು ಎಂಬ ಜಾಗ ಈಗಿನ ಯಾದಗಿರಿ ಜಿಲ್ಲೆಯ ಶಹಪುರ ತಾಲ್ಲೂಕಿನಲ್ಲಿದ್ದು , ವಜ್ರ ಸಿಕ್ಕಿದ್ದು ಇದೇ ಜಾಗದಲ್ಲಿ ಎಂಬುದಾಗಿ ಅಲ್ಲಿ ಫಲಕವನ್ನೂ ಹಾಕಲಾಗಿದೆ. ಆದರೆ, ಆಂಧ್ರದಲ್ಲಿರುವ ಕೊಳ್ಳುರು ಎಂಬ ಜಾಗವೇ ಕೊಹಿನೂರ್‌ ವಜ್ರ ಸಿಕ್ಕಿದ್ದ ಸ್ಥಳ ಎಂಬ ವಾದವಿವೆ. ಯಾವ ಕೊಳ್ಳುರಿನಲ್ಲಿ ವಜ್ರ ಸಿಕ್ಕಿದೆ ಎಂಬುದಕ್ಕೆ ಸ್ಪಷ್ಟ ಪುರಾವೆಗಳಿಲ್ಲ.

ಟವರ್‌ ಆಫ್‌ ಲಂಡರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.