ADVERTISEMENT

ಲಂಕಾ ಡೈರಿ: ದ್ವೀಪ ರಾಷ್ಟ್ರ ಕುರಿತ ಬರಹ

ಎಂ.ವೆಂಕಟಸ್ವಾಮಿ
Published 23 ಏಪ್ರಿಲ್ 2022, 19:30 IST
Last Updated 23 ಏಪ್ರಿಲ್ 2022, 19:30 IST
ಶ್ರೀಲಂಕಾದಲ್ಲಿ ಪ್ರತಿಭಟನೆಯ ನೋಟ
ಶ್ರೀಲಂಕಾದಲ್ಲಿ ಪ್ರತಿಭಟನೆಯ ನೋಟ   

ಶ್ರೀ ಲಂಕಾದ ಆರ್ಥಿಕ ಪರಿಸ್ಥಿತಿ ಈಗ ಹದಗೆಟ್ಟು ಅದರ ರೂಪಾಯಿ ಮೌಲ್ಯ ನೆಲಕಚ್ಚಿದೆ. ನಮ್ಮ ಒಂದು ರೂಪಾಯಿ ಅದರ ನಾಲ್ಕು ರೂಪಾಯಿಗೆ ಸಮ. ಸುದ್ದಿ ಚಾನೆಲ್‌ಗಳು ಶ್ರೀಲಂಕಾದಲ್ಲಿ ಒಂದು ಲೀಟರ್‌ ಹಾಲಿಗೆ 700 ರೂಪಾಯಿ, ಒಂದು ಕೆ.ಜಿ. ಅಕ್ಕಿಗೆ 500 ರೂಪಾಯಿ, ಒಂದು ಲೀಟರ್‌ ಪೆಟ್ರೋಲ್‌ಗೆ 350 ರೂಪಾಯಿ ಎಂದೆಲ್ಲಾ ಮಾಹಿತಿ ನೀಡುತ್ತಿದ್ದವು. ಶ್ರೀಲಂಕಾದಲ್ಲಿ ಎಲ್ಲೆಲ್ಲೂ ಪ್ರಕ್ಷುಬ್ಧ ವಾತಾವರಣವಿದ್ದು, ಕೊಲಂಬೊ ವಿಮಾನ ನಿಲ್ದಾಣ 13 ಗಂಟೆಗಳಿಂದ ವಿದ್ಯುತ್ ಇಲ್ಲದೆ ಕತ್ತಲಲ್ಲಿ ಮುಳುಗಿದೆ ಎಂಬ ಮಾಹಿತಿಯನ್ನೂ ಬಿತ್ತರಿಸುತ್ತಿದ್ದವು. ಇಂತಹ ಸುದ್ದಿಗಳ ಅಬ್ಬರದ ಮಧ್ಯೆ ಬೆಂಗಳೂರಿನಿಂದ 12 ಜನರಿದ್ದ ನಮ್ಮ ಗುಂಪು ಬಡಕಲು ಶ್ರೀಲಂಕಾ ಏರ್‌ಲೈನ್ಸ್‌ ವಿಮಾನದಲ್ಲಿ ಬೆಳಗಿನ 4.30ಕ್ಕೆ ಕೊಲಂಬೊ ನಿಲ್ದಾಣದಲ್ಲಿ ಇಳಿಯಿತು. ವಿಮಾನದಲ್ಲಿ ಒಂದು ಬಿಸಿ ಪಫ್‌ ತಿನ್ನಲು ಕೊಟ್ಟು, ಸೇಬು ಜ್ಯೂಸು ಮತ್ತು ನೀರು ಕುಡಿಸಿದ್ದರು.

ವಿಮಾನ ನಿಲ್ದಾಣದಲ್ಲಿ ವಿದ್ಯುತ್ ದೀಪಗಳು ಉರಿಯುತ್ತಿದ್ದುದನ್ನು ನೋಡಿ ಸ್ವಲ್ಪ ಸಮಾಧಾನಗೊಂಡೆವು. ಆಶ್ಚರ್ಯವೆಂದರೆ ನಾವು ಹೋದಾಗ ವಿಮಾನ ನಿಲ್ದಾಣದ ಇಮಿಗ್ರೇಷನ್‌ ವಿಭಾಗದಲ್ಲಿ ನೂರಕ್ಕೆ 90ರಷ್ಟು ಯುರೋಪಿಯನ್ನರೇ ತುಂಬಿಕೊಂಡಿದ್ದರು. ಶ್ರೀಲಂಕಾದ ಪರಿಸ್ಥಿತಿ ಇವರಿಗೆ ಗೊತ್ತಿಲ್ಲವೇ ಎನ್ನುವ ಅನುಮಾನದ ಜೊತೆಗೆ ನಮ್ಮ ಸುದ್ದಿ ಚಾನೆಲ್‍ಗಳು ಶ್ರೀಲಂಕಾದ ಬಗ್ಗೆ ಇಲ್ಲಸಲ್ಲದ ವಿಷಯವನ್ನು ಪ್ರಸಾರ ಮಾಡುತ್ತಿವೆಯೇ ಎನ್ನುವ ಅನುಮಾನವೂ ಹುಟ್ಟಿಕೊಂಡಿತು. ನಾವು ಶ್ರೀಲಂಕಾಕ್ಕೆ ಹೋಗುತ್ತಿದ್ದೇವೆ ಎಂದು ತಿಳಿದ ಕೆಲವು ಗೆಳೆಯರು/ನೆಂಟರು ಹೌಹಾರಿ, ‘ಅಯ್ಯೋ ಅಲ್ಲಿಗ್ಯಾಕೆ ಹೋಗ್ತಾ ಇದ್ದೀರ? ಅಲ್ಲಿ ಅನ್ನ, ನೀರು ಏನೂ ಸಿಗಲ್ವಂತೆ’ ಎಂದಿದ್ದರು. ಪ್ಯಾಕೇಜ್ ಟೂರ್ ಬುಕ್ ಮಾಡಿ ಹಣಕಟ್ಟಿದ ಮೇಲೆ ಅದು ಹಿಂದಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ ನಾನು ನಿರ್ಧಾರವನ್ನು ಬದಲಿಸಲಿಲ್ಲ.

ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದ ಗೈಡ್ ನಟರಾಜನ್ ನಮ್ಮನ್ನು ಟೆಂಪೊದಲ್ಲಿ ಹತ್ತಿಸಿಕೊಂಡು ಕೊಲಂಬೊ ಪಕ್ಕದ ಮೀನುಗಾರರ ಪಟ್ಟಣ ನುಗುಂಬೊ ಕಡೆಗೆ ಕರೆದೊಯ್ಯುವಾಗ ‘ನೀವೇನೂ ಭಯ ಪಡಬೇಡಿ, ನಿಮಗೆ ಯಾವುದೇ ತೊಂದರೆಯಾಗುವುದಿಲ್ಲ. ಶ್ರೀಲಂಕಾ ಜನರು ತುಂಬಾ ಒಳ್ಳೆಯವರು, ಶಾಂತಿಪ್ರಿಯರು, ಸ್ನೇಹಪರರು. ಆದರೆ, ಹೋಟೆಲುಗಳಲ್ಲಿ ಅಥವಾ ಪ್ರವಾಸಿ ತಾಣಗಳಲ್ಲಿ ಯಾರಾದರೂ ನಿಮ್ಮ ಪರಿಚಯ ಮಾಡಿಕೊಳ್ಳಲು ಬರಬಹುದು. ಅದು ಇದೂ ಮಾತನಾಡಿ ಕೊನೆಗೆ ಹಣ ಕೇಳಬಹುದು’ ಎಂದಿದ್ದ. ಶ್ರೀಲಂಕಾದಲ್ಲಿ ಈಗ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲ ಎನ್ನುವುದು ನಿಜ. ಒಂದು ಲೀಟರ್‌ ಪೆಟ್ರೋಲ್‌ಗೆ 350 ರೂಪಾಯಿ, ಅಡುಗೆ ಅನಿಲದ ಸಿಲಿಂಡರ್‌ಗೆ 3,700 ರೂಪಾಯಿ ಇದೆ. ಆದರೆ, ಭಾರತಕ್ಕೆ ಹೋಲಿಸಿದರೆ ಇದು ಕಡಿಮೆ ಎಂದ.

ADVERTISEMENT

ನಾವು ಹೊರಟಾಗ ಸಮಯ ಬೆಳಗಿನ ಆರು ಗಂಟೆ. ಸಣ್ಣಸಣ್ಣ ಟಾರ್ ರಸ್ತೆಗಳು. ಎರಡೂ ಕಡೆ ಮಾವು, ತೆಂಗು, ಹಲಸು, ಅಡಿಕೆ ಮರಗಳಲ್ಲದೆ ವಿವಿಧ ರೀತಿಯ ಸಸ್ಯರಾಶಿ ತುಂಬಿಕೊಂಡಿತ್ತು. ನನಗೆ ಅಸ್ಸಾಂನ ಬ್ರಹ್ಮಪುತ್ರಾ ನದಿ ಕಣಿವೆಯ ಹಳ್ಳಿಗಳು ಮತ್ತು ಹಸಿರು ತೋಟಗಳ ಮಧ್ಯೆ ಹೋಗುತ್ತಿರುವಂತೆ ಭಾಸವಾಯಿತು. ಮನೆ ಬಾಗಿಲುಗಳು ಇನ್ನೂ ಮುಚ್ಚಿಕೊಂಡೇ ಇದ್ದವು. ಅಲ್ಲಿಂದ ಹೋಟೆಲ್ ತಲುಪಿದಾಗ ಎಲ್ಲವೂ ಸಾಮಾನ್ಯವಾಗಿತ್ತು. ಕೋಣೆಯಲ್ಲಿ ಎರಡು ಲೀಟರ್‌ ನೀರು, ಹಾಲಿನ ಪುಡಿ, ಕಾಫಿ, ಟೀ ಪ್ಯಾಕೆಟ್‍ಗಳು ಇದ್ದವು. ನೀರು ಕುಡಿದು, ಒಳ್ಳೆಯ ಶ್ರೀಲಂಕಾ ಟೀ ಮಾಡಿಕೊಂಡು ಕುಡಿದೆವು. ಎ.ಸಿ. ಚಾಲೂ ಆಗಿತ್ತು. ಸ್ನಾನದ ಕೋಣೆಯಲ್ಲಿ ಬಿಸಿನೀರು ಬರುತ್ತಿತ್ತು. ಕಾಂಪ್ಲಿಮೆಂಟ್ ಬ್ರೇಕ್‍ಫಾಸ್ಟ್‌ಗೆ ಹೋದಾಗ ಲೆಕ್ಕವಿಲ್ಲದಷ್ಟು ವೆಜ್, ನಾನ್‍ವೆಜ್ ತಿಂಡಿಗಳು, ಹಣ್ಣು, ಬೇಕರಿ ತಿನಿಸುಗಳು ಇದ್ದವು. ಡೈನಿಂಗ್ ಹಾಲ್ ತುಂಬಾ ಯುರೋಪಿಯನ್ನರೇ ತುಂಬಿಕೊಂಡಿದ್ದರು. ‌

***

ಸುಮಾರು ಏಳು ಕೋಟಿ ವರ್ಷಗಳ ಹಿಂದೆ ಅಂಟಾರ್ಕಟಿಕದಿಂದ ಬೇರ್ಪಟ್ಟ ಭಾರತ ಉಪಖಂಡದ ಭೂಫಲಕದ ಬಾಲವಾಗಿದ್ದ ಶ್ರೀಲಂಕಾ, ಕೇವಲ ಕೆಲವು ಸಾವಿರ ವರ್ಷಗಳ ಹಿಂದೆ ರಾಮೇಶ್ವರ ಮತ್ತು ಜಾಫ್ನಾ ಮಧ್ಯೆ ಹಿಂದೂ ಮಹಾಸಾಗರದಲ್ಲಿ ಜಲಸಂಧಿ ಕಾಣಿಸಿಕೊಂಡು ಪ್ರತ್ಯೇಕಗೊಂಡಿತು. ಇಂದಿಗೂ ಎರಡೂ ದೇಶಗಳು ಭೌಗೋಳಿಕ-ಭೂ ಐತಿಹಾಸಿಕ, ಸಸ್ಯ-ಪ್ರಾಣಿ–ಪಕ್ಷಿ ಸಂಕುಲದ ವಿಷಯದಲ್ಲಿ ಬಹಳಷ್ಟು ಸಾಮ್ಯತೆ ಹೊಂದಿವೆ. ಕಲೆ-ಸಂಸ್ಕೃತಿ ಪುರಾಣಗಳನ್ನೂ ಹಂಚಿಕೊಂಡಿವೆ. ರಾಮಾಯಣದ ಕಥೆಗೆ ಬಂದಾಗಲಂತೂ ಭಾರತ–ಶ್ರೀಲಂಕಾವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ.

ಶ್ರೀಲಂಕಾದಲ್ಲಿ 1.25 ಲಕ್ಷ ವರ್ಷಗಳ ಹಿಂದಿನ ಪ್ರಾಗ್‌ಜೀವಿ ಸೈಟ್‍ಗಳು ದೊರಕಿವೆ. ಇಲ್ಲಿನ ಮೂಲ ಜನ ಆಫ್ರಿಕಾದಿಂದ ಕಡಲ ಮೇಲೆ ತೆಪ್ಪಗಳಲ್ಲಿ ಬಂದವರು ಎನ್ನಲಾಗಿದೆ. ದ್ರಾವಿಡರೂ ಮೂಲವಾಗಿ ಆಫ್ರಿಕಾ ಖಂಡದಿಂದ ಬಂದವರೇ. ಪಾಲಿ ಭಾಷೆಯಲ್ಲಿ ದಾಖಲಾಗಿರುವ ಬುದ್ಧನ ಬಗೆಗಿನ ವಿವರಣೆಗಳನ್ನು ‘ಪೋಲಿಕಾನನ್’ ಎಂದು ಕರೆಯಲಾಗಿದ್ದು, ನಾಲ್ಕನೇ ಬೌದ್ಧ ಕೌನ್ಸಿಲ್ ಕ್ರಿ.ಪೂ. 29ರಲ್ಲಿ ಶ್ರೀಲಂಕಾದಲ್ಲಿ ನಡೆದಿರುವುದಾಗಿ ದಾಖಲೆಗಳು ದೊರಕಿವೆ. ಬೌದ್ಧ ರಾಜ ಆಶೋಕನ ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರಾ ಶ್ರೀಲಂಕಾಕ್ಕೆ ಬಂದು ಬೌದ್ಧ ಧಮ್ಮವನ್ನು ಸ್ಥಾಪಿಸಿದರು ಎನ್ನುವ ದಾಖಲೆಗಳಿವೆ.

ಶ್ರೀಲಂಕಾ ಭೂವಿಸ್ತೀರ್ಣದಲ್ಲಿ ಕರ್ನಾಟಕದ ಸುಮಾರು ಮೂರನೇ ಒಂದು ಭಾಗದಷ್ಟಿದೆ. ಇಲ್ಲಿ ಶೇ 75ರಷ್ಟು ಸಿಂಹಳೀಯರು ಶೇ 11ರಷ್ಟು ಶ್ರೀಲಂಕಾ ತಮಿಳರು, ಶೇ 9.2ರಷ್ಟು ತಮಿಳುನಾಡಿನ ತಮಿಳರು ಮತ್ತು ಶೇ 4ರಷ್ಟು ಉಳಿದವರು ಇದ್ದಾರೆ. ಶ್ರೀಲಂಕಾ ಭೌಗೋಳಿಕವಾಗಿ ಹಿಂದೂ ಮಹಾಸಾಗರದಲ್ಲಿ ವ್ಯೂಹಾತ್ಮಕವಾಗಿ ಮಹತ್ವ ಪಡೆದುಕೊಂಡಿದ್ದು ಮೂರು ದಶಕಗಳ ಹಿಂದೆಯೇ ಚೀನಾದ ವಕ್ರಕಣ್ಣು ಇದರ ಮೇಲೆ ಬಿದ್ದಿದೆ. ಶ್ರೀಲಂಕಾ ಹಿಂದಿನ ಕಾಲದಲ್ಲಿ ರೇಷ್ಮೆ ರಸ್ತೆಯ ದಾರಿಯಲ್ಲಿತ್ತು. ಈಗಲೂ ಅದು ಬಹಳ ಮುಖ್ಯವಾದ ಜಲ ವ್ಯಾಪಾರ ಮಾರ್ಗದಲ್ಲಿದೆ. ಪೂರ್ವ ಏಷ್ಯಾದಿಂದ ಯುರೋಪ್‍ವರೆಗೂ ನಡೆಯುತ್ತಿದ್ದ ವ್ಯಾಪಾರದ ಅವಧಿಯನ್ನು ಅನುರಾಧಾಪುರ (ಬೌದ್ಧಕೇಂದ್ರ) ಕಾಲವೆಂದು ಪರಿಗಣಿಸಲಾಗಿದೆ.

ಚೀನಾ ಈಗ ಅದೇ ಕಾರಣಕ್ಕೆ ಶ್ರೀಲಂಕಾಕ್ಕೆ ಹೇರಳ ಸಾಲ ಕೊಟ್ಟು ಶೂಲಕ್ಕೆ ಏರಿಸಿ ಕುಳಿತುಕೊಂಡಿದೆ. ಚೀನಾದ ಮುಖ್ಯ ಉದ್ದೇಶ ಹಿಂದೂ ಮಹಾಸಾಗರವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಳ್ಳುವುದು. ಈಗಾಗಲೇ ಅದು ಸಮುದ್ರಕ್ಕೆ ಸಾಕಷ್ಟು ಮರಳು-ಮಣ್ಣು ತುಂಬಿ ಮಾತ್ರಾ ಎಂಬ ಪ್ರದೇಶದಲ್ಲಿ ಒಂದು ದೊಡ್ಡ ಪಟ್ಟಣವನ್ನೇ ನಿರ್ಮಿಸಿ ಅದರಲ್ಲಿ ಚೀನೀಯರನ್ನು ತುಂಬಿಸಿ ಇಟ್ಟುಕೊಂಡಿದೆ. ಚೀನಾ, ಕೊಲಂಬೊದಿಂದ ಮಾತ್ರಾವರೆಗೆ 300 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್ ರಸ್ತೆ ನಿರ್ಮಿಸಿದ್ದು, ಅದರಲ್ಲಿ ಬರುವ ವಾಹನಗಳ ತೆರಿಗೆಯ ಶೇ 90ರಷ್ಟು ಹಣ ಚೀನಾ ಸರ್ಕಾರಕ್ಕೆ ಹೋಗುತ್ತಿದೆ. ರಸ್ತೆ ತೆರಿಗೆಯ ಕೇವಲ ಶೇ 10ರಷ್ಟು ಪಾಲು ಶ್ರೀಲಂಕಾ ಸರ್ಕಾರಕ್ಕೆ ದೊರಕುತ್ತಿದೆ. ಇದು 30 ವರ್ಷಗಳ ಒಪ್ಪಂದದ ಪರಿಣಾಮವಂತೆ.

ಆರು ದಿನಗಳವರೆಗೆ ನಾವು ಓಡಾಡಿದ ರಸ್ತೆಗಳು ತುಂಬಾ ಚೆನ್ನಾಗಿದ್ದು ಒಂದೇ ಒಂದು ಹಂಪ್‌ ಕೂಡ ಕಾಣಿಸಲಿಲ್ಲ. ‘ಇದ್ಹೇಗೆ ಸಾಧ್ಯ’ ಎಂದು ನಟರಾಜನ್‍ಗೆ ಕೇಳಿದಾಗ, ಕೆಲವು ಕುತೂಹಲಕರ ವಿಷಯಗಳು ಹೊರಬಿದ್ದವು. ಚೀನಾ ತನ್ನ ದೇಶದ ಜೈಲುಗಳಲ್ಲಿದ್ದ ಸಾವಿರಾರು ಕೈದಿಗಳು ಮತ್ತು ಬಡವರನ್ನು ಶ್ರೀಲಂಕಾಕ್ಕೆ ಕರೆದುತಂದು ಖುದ್ದಾಗಿ ಅದೇ ನಿಂತು ರಸ್ತೆಗಳನ್ನು ನಿರ್ಮಿಸಿದೆಯಂತೆ. ಕೊಲಂಬೊದಲ್ಲಿ ಒಂದೂವರೆ ಸಾವಿರ ಜನರು ಹಿಡಿಯುವ ಸಾಂಸ್ಕೃತಿಕ ಕೇಂದ್ರ ನಿರ್ಮಿಸಿ ದಾನ ಮಾಡಿದೆಯಂತೆ. ಅದೇ ರೀತಿ ಜಪಾನ್, ಹೊಸ ಪಾರ್ಲಿಮೆಂಟ್ ಕಟ್ಟಡ ಕಟ್ಟಿಕೊಟ್ಟಿರುವುದಾಗಿ ತಿಳಿಯಿತು. ಕೊಲಂಬೊದಲ್ಲಿರುವ ಅನೇಕ ಕಟ್ಟಡಗಳನ್ನು ಯಾರ‍್ಯಾರಿಗೋ ಮಾರಿಕೊಂಡಿರುವುದಾಗಿಯೂ ಗೈಡ್ ಹೇಳಿದ.

***

ಈ ದ್ವೀಪ ರಾಷ್ಟ್ರದ ಇತಿಹಾಸವನ್ನು ಸ್ವಲ್ಪ ಕೆದಕಿದರೆ, ಮೊದಲಿಗೆ ಪೋರ್ಚುಗೀಸರು ಬಂದು ದ್ವೀಪವನ್ನು ತಮ್ಮ ವಶಕ್ಕೆ ತೆಗೆದುಕೊಂಡುಬಿಟ್ಟರು. ಸಿಂಹಳಿಯರು ಮತ್ತು ಪೋರ್ಚುಗೀಸರ ನಡುವೆ ಯುದ್ಧ ನಡೆದ ಕಾಲದಲ್ಲಿಯೇ ಡಚ್ಚರು ಕ್ಯಾಂಡಿ ರಾಜಧಾನಿಯನ್ನು ನಿಯಂತ್ರಣಕ್ಕೆ ಪಡೆದುಕೊಂಡರು. ಮುಂದೆ ಡಚ್ಚರನ್ನು ಸೋಲಿಸಿದ ಬ್ರಿಟಿಷರು (1815-1948) ಆಡಳಿತ ನಡೆಸಿದರು. ಸಿಂಹಳಿಯರು ರಾಷ್ಟ್ರೀಯ ಆಂದೋಲನ ನಡೆಸಿ 1948ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದುಕೊಂಡರು.

1970ರ ದಶಕದಲ್ಲಿ ಶ್ರೀಲಂಕಾ ಮೇಲೆ ಅಮೆರಿಕ ಕಣ್ಣು ಹಾಕಿದಾಗ ಇಲ್ಲಿನ ತಮಿಳರು ಮತ್ತು ಸಿಂಹಳೀಯರ ಮಧ್ಯೆ ಘರ್ಷಣೆ ಪ್ರಾರಂಭವಾಗಲು ಭಾರತವೇ ಕಾರಣವಾಗಿ ದ್ವೀಪದಲ್ಲಿ ಎಲ್‍ಟಿಟಿಇ ಸಂಘಟನೆ ಹುಟ್ಟಿಕೊಂಡಿತು. ಆ ಘರ್ಷಣೆ ಸುದೀರ್ಘವಾಗಿ ನಡೆದು ಕೊನೆಗೆ 2009ರಲ್ಲಿ ಟೈಗರ್ ಪ್ರಭಾಕರನ್ ಹತ್ಯೆಯೊಂದಿಗೆ ಅಂತ್ಯಗೊಂಡಿತು. ಘರ್ಷಣೆಯನ್ನು ಹತ್ತಿಕ್ಕಲು ರಾಜೀವ್ ಗಾಂಧಿಯವರು ಶ್ರೀಲಂಕಾ ಸಹಾಯಕ್ಕೆ ಭಾರತದ ಮಿಲಿಟರಿಯನ್ನು ಕಳಿಸಿದ ಕಾರಣ ತಮಿಳುನಾಡಿನ ರಾಮನಾಥಪುರಂನಲ್ಲಿ ರಾಜೀವ್ ಗಾಂಧಿ ಅವರ ಹತ್ಯೆ ನಡೆದುಹೋಯಿತು.

ಶ್ರೀಲಂಕಾ ಅನೇಕ ಅಂತರರಾಷ್ಟ್ರೀಯ ಸಂಸ್ಥೆಗಳ ಸದಸ್ಯತ್ವವನ್ನು ಪಡೆದುಕೊಂಡಿದೆ. ಸಾರ್ಕ್, ಯು.ಎನ್, ಕಾಮನ್‌ವೆಲ್ತ್, ಜಿ-77 ಮತ್ತು ನಾನ್ ಅಲೈನ್‍ಮೆಂಟ್ ಸಂಘಟನೆಗಳು ಅದರಲ್ಲಿ ಮುಖ್ಯವಾದುವು. ದಕ್ಷಿಣಪೂರ್ವ ಏಷ್ಯಾ ದೇಶಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕ ಪಟ್ಟಿಯಲ್ಲಿ ಉನ್ನತ ಸ್ಥಾನ ಹಾಗೂ ತಲಾ ಆದಾಯ ಪಟ್ಟಿಯಲ್ಲೂ ಒಳ್ಳೆಯ ಸ್ಥಾನವನ್ನು ಆ ದೇಶ ಪಡೆದುಕೊಂಡಿತ್ತು. ಆದರೆ, ಈಗಿನ ಆರ್ಥಿಕ ಪರಿಸ್ಥಿತಿ ತೀರಾ ಗಂಭೀರವಾಗಿದೆ. ಅದು ಬಾಂಗ್ಲಾದೇಶ ಮತ್ತು ಪಾಕಿಸ್ತಾನಗಳಿಗಿಂತ ಕೆಳಗಿದೆ. 75 ವರ್ಷ ವಯಸ್ಸಿನ ಪ್ರಧಾನ ಮಂತ್ರಿ ಮಹಿಂದಾ ರಾಜಪಕ್ಸೆ ಮತ್ತು ಆತನ ಮೂವರು ತಮ್ಮಂದಿರು ಐದು ಮುಖ್ಯ ಸಚಿವ ಸ್ಥಾನಗಳನ್ನು ಹೊಂದಿದ್ದು ದೇಶದ ಶೇ 70ರಷ್ಟು ಬಜೆಟ್ ಹಣವನ್ನು ಅವರೇ ನಿರ್ವಹಿಸುತ್ತಿದ್ದಾರಂತೆ.

ಶ್ರೀಲಂಕಾಕ್ಕೆ ಬರುವ ಆರ್ಥಿಕ ಮೂಲಗಳೆಂದರೆ ಶ್ರೀಲಂಕಾ ಕಾರ್ಮಿಕರು ಮಧ್ಯಏಷ್ಯಾ ದೇಶಗಳಲ್ಲಿ ದುಡಿದು ಕಳುಹಿಸುವ ಹಣ ಮತ್ತು ಪ್ರವಾಸೋದ್ಯಮದಿಂದ ಬರುವ ವರಮಾನ. 2019ರ ಈಸ್ಟರ್ ದಿನದಂದು ನಡೆದ ಬಾಂಬ್‌ ಸ್ಫೋಟದಿಂದಾಗಿ 269 ಜನರು ಪ್ರಾಣ ಕಳೆದುಕೊಂಡರು. ಇದು ಶ್ರೀಲಂಕಾ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ನೀಡಿತ್ತು. ಕಳೆದ ಮೂರು ವರ್ಷಗಳಿಂದ ಕೋವಿಡ್ ಕಾರಣದಿಂದ ಪ್ರವಾಸೋದ್ಯಮ ಬಿದ್ದುಹೋಗಿದೆ.

2019ರಲ್ಲಿ ನಡೆದ ಚುನಾವಣಾ ಕಾಲದಲ್ಲಿ ರಾಜಪಕ್ಸೆ ಅವರು ಮುಂದಿನ 10 ವರ್ಷಗಳಲ್ಲಿ ಶ್ರೀಲಂಕಾ ದೇಶವನ್ನು ಸಂಪೂರ್ಣವಾಗಿ ಸಾವಯವ ಕೃಷಿಗೆ ಪರಿವರ್ತನೆ ಮಾಡುವುದಾಗಿ ಆಶ್ವಾಸನೆ ನೀಡಿದ್ದಲ್ಲದೆ ದೇಶದಾದ್ಯಂತ ಸಿಂಥೆಟಿಕ್ ಗೊಬ್ಬರ ಮತ್ತು ಕೀಟನಾಶಕಗಳನ್ನು ನಿಷೇಧಿಸಿಬಿಟ್ಟರು. ಜೊತೆಗೆ ಚೀನಾದಿಂದ ಬರಬೇಕಾಗಿದ್ದ 20 ಸಾವಿರ ಟನ್ ಸಾವಯವ ಗೊಬ್ಬರದಲ್ಲಿ ಅಪಾಯಕಾರಿ ಬ್ಯಾಕ್ಟೀರಿಯಾ ಇದೆಯೆಂದು ಅದನ್ನು ಪಡೆಯಲಿಲ್ಲ. ಇದರಿಂದ ಕುಪಿತಗೊಂಡ ಚೀನಾ, ಶ್ರೀಲಂಕಾದ ಸರ್ಕಾರಿ ಬ್ಯಾಂಕ್ ಆಫ್ ಪೀಪಲ್ಸ್ ಮತ್ತು ಬ್ಯಾಂಕ್ ಆಫ್ ಶ್ರೀಲಂಕಾವನ್ನು ಕಪ್ಪುಪಟ್ಟಿಗೆ ಸೇರಿಸಿಬಿಟ್ಟಿತು. ಶ್ರೀಲಂಕಾ ಜನರ ಆಹಾರಕ್ಕಾಗಿ ಅಕ್ಕಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದು ಭತ್ತದ ಉತ್ಪಾದನೆ ಕುಸಿದುಹೋಗಿ ಹೊರ ದೇಶಗಳಿಂದ 45 ಸಾವಿರ ಕೋಟಿ ಡಾಲರ್ ಮೌಲ್ಯದ ಅಕ್ಕಿಯನ್ನು ಕೊಂಡುಕೊಳ್ಳಬೇಕಾಯಿತು.

ಹಣದುಬ್ಬರ ಹೆಚ್ಚಾಗಿ ಯಾವುದೇ ತರಕಾರಿ ಕೆ.ಜಿ.ಗೆ 400 ರೂಪಾಯಿ, ಅಕ್ಕಿ 250 ರೂಪಾಯಿ, ಹಾಲು ಲೀಟರ್‌ಗೆ 150 ರೂಪಾಯಿ, ನೀರು 70 ರೂಪಾಯಿಯಂತೆ ಮಾರಾಟವಾಗುತ್ತಿರುವುದಾಗಿ ತಿಳಿಯಿತು. ಕೊಲಂಬೊದಿಂದ ಕ್ಯಾಂಡಿ ಮತ್ತು ಕ್ಯಾಂಡಿಯಿಂದ ನುವುಲಾರ ಗಿರಿಧಾಮಗಳಿಗೆ ಹೋಗುವ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳು ಬೆಟ್ಟಗುಡ್ಡ, ಹೇರಳ ಹಸಿರುಕಾಡುಗಳಿಂದ ತುಂಬಿಕೊಂಡಿರುವುದು ಕಂಡುಬಂತು. ಇಲ್ಲೆಲ್ಲ ಭತ್ತ, ಕಬ್ಬು, ಹಣ್ಣು, ತರಕಾರಿ ಬೆಳೆಯಬಹುದಲ್ಲ ಎಂದು ಗೈಡ್‍ಗೆ ಕೇಳಿದಾಗ, ಆತ ‘ಬೆಳೆಯಬಹುದು, ಆದರೆ ಸರ್ಕಾರ ರೈತರಿಗೆ ಪ್ರೋತ್ಸಾಹ ನೀಡುತ್ತಿಲ್ಲ, ಕಷ್ಟಪಟ್ಟು ಬೆಳೆದರೆ ನಷ್ಟವಾಗುತ್ತದೆ. ನೀರಿಗೆ ತೊಂದರೆ ಇಲ್ಲ. ಆದರೆ, ಯಾರೂ ಕಷ್ಟಪಡುವುದಿಲ್ಲ. ದಿನಗೂಲಿ 1ರಿಂದ 2 ಸಾವಿರ ರೂಪಾಯಿ ಇದೆ. ಗಾರೆ ಕೆಲಸದ ಮೇಸ್ತ್ರಿಗೆ ದಿನಕ್ಕೆ 4 ಸಾವಿರ ರೂಪಾಯಿ ಕೂಲಿ ಕೊಡಬೇಕು. ಹಣ ಕೊಟ್ಟರೂ ಕೆಲಸಕ್ಕೆ ಜನರು ದೊರಕುತ್ತಿಲ್ಲ’ ಎಂದ. ಶ್ರೀಲಂಕಾದ ಟೀ ತೋಟಗಳಲ್ಲಿ ದುಡಿಯುತ್ತಿರುವವರು ಈಗಲೂ ತಮಿಳು ಜನರೇ ಆಗಿದ್ದಾರೆ.

ಮತ್ತೆ ಜನ ಹೇಗೆ ಜೀವನ ನಡೆಸುತ್ತಾರೆ ಎಂಬ ಕುತೂಹಲ ತಣಿಸಿಕೊಳ್ಳಲು ಹೋದಾಗ ಪ್ರತೀ ಕುಟುಂಬಕ್ಕೂ ತೆಂಗು, ಮಾವು, ಹಲಸಿನ ಮರಗಳಿದ್ದು, ಜೊತೆಗೆ ಭತ್ತ, ತರಕಾರಿ ಬೆಳೆದುಕೊಳ್ಳುತ್ತಾರೆ. ತೀರಾ ಬಡವರಾದವರಿಗೆ ಸರ್ಕಾರದಿಂದ ಒಂದಷ್ಟು ಹಣ ದೊರಕುತ್ತದೆ ಎಂದು ತಿಳಿಯಿತು.

ಶ್ರೀಲಂಕಾದಲ್ಲಿ ಚೀನಾ ಕೋಟ್ಯಂತರ ರೂಪಾಯಿಯನ್ನು ಯಾವಯಾವ ಲೆಕ್ಕಾಚಾರ ಹಾಕಿಕೊಂಡು ಖರ್ಚು ಮಾಡಿದೆಯೋ ರಾಜಕಾರಣಿಗಳಿಗೆ ಮಾತ್ರ ಗೊತ್ತು. ಜೊತೆಗೆ ಅದು ನೀಡಿದ ಸಾಲದಲ್ಲಿ ಸಾಕಷ್ಟು ಹಣ ರಾಜಕಾರಣಿಗಳ ಜೇಬು ಸೇರಿರುವುದಾಗಿ ಹೇಳಲಾಗುತ್ತಿದೆ. ಈಗ ಭಾರತವೂ ಸಾಕಷ್ಟು ಸಾಲ ಕೊಟ್ಟು, ಐಒಸಿಯಿಂದ ಪೆಟ್ರೋಲ್, ಡೀಸೆಲ್ ಸರಬರಾಜು ಮಾಡುತ್ತಿದೆ. ಶ್ರೀಲಂಕಾದಲ್ಲಿ ಕೇಳಿಬಂದ ಇನ್ನೊಂದು ವಿಷಯವೆಂದರೆ ಭಾರತ, ಉತ್ತರ ಶ್ರೀಲಂಕಾದ ಮೂರು ದ್ವೀಪಗಳನ್ನು ತನ್ನ ವಶಕ್ಕೆ ತೆಗೆದುಕೊಳ್ಳುತ್ತಿದೆಯಂತೆ. ಜೊತೆಗೆ ಅದಾನಿ ಕಂಪನಿ ಈ ದ್ವೀಪದಲ್ಲಿ ಇಂಧನ ಸರಬರಾಜು ಕೇಂದ್ರವನ್ನು ಸ್ಥಾಪಿಸುತ್ತಿದೆಯಂತೆ.

ಭಾರೀ ಇಕ್ಕಟ್ಟಿನಲ್ಲಿ ಸಿಲುಕಿಕೊಂಡಿರುವ ಶ್ರೀಲಂಕಾ ಸಾಲದ ಹೊರೆಯನ್ನು ಕಡಿತಗೊಳಿಸುವಂತೆ ಚೀನಾ ದೇಶವನ್ನು ಕೇಳಿಕೊಳ್ಳುತ್ತಿದೆ. ಜೊತೆಗೆ ಶ್ರೀಲಂಕಾದ ಅಧಿಕಾರಿಗಳು ಮತ್ತು ಸಚಿವರಿರುವ ನಿಯೋಗವೊಂದು ಸಾಲ ಮನ್ನಾ ಮಾಡಲು ಅಂತರರಾಷ್ಟ್ರೀಯ ಹಣಕಾಸು ಒಕ್ಕೂಟವನ್ನು ಕೇಳಿಕೊಳ್ಳಲು ಹೋಗಿದೆ. ವಿಪರ್ಯಾಸವೆಂದರೆ ಸಾಲ ಮಾಡಿದ್ದು ಮತ್ತು ಕಮಿಷನ್ ಹೊಡೆದಿದ್ದು ರಾಜಕಾರಣಿಗಳು. ಆದರೆ, ತೆರಿಗೆ ಕಟ್ಟುತ್ತಿರುವುದು ಮಾತ್ರ ಜನಸಾಮಾನ್ಯರು ಮತ್ತು ಸರ್ಕಾರಿ ಕೆಲಸಗಾರರು. ಭಾರತದ ಸಾಲವೂ ಬೆಳೆಯುತ್ತಿರುವುದು ದಿಗಿಲು ಹುಟ್ಟಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.