ADVERTISEMENT

ಶಿಖರಗಳನ್ನೇರುವುದೇ ಇವಳ ಗುರಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2019, 19:30 IST
Last Updated 10 ಜುಲೈ 2019, 19:30 IST
ಜಾಹ್ನವಿ
ಜಾಹ್ನವಿ   

ಸಾಧನೆಗೆ ವಯಸ್ಸಿನ ಮಿತಿ ಇಲ್ಲ ಎಂಬುದನ್ನು ಹಲವು ಮಕ್ಕಳು ಸಾಬೀತು ಪಡಿಸುತ್ತಿದ್ದಾರೆ. ವಯಸ್ಕರೂ ನಾಚುವಂತೆ ಮಹತ್ತರ ಸಾಧನೆಗಳನ್ನು ಮಾಡಿ ಗಮನ ಸೆಳೆಯುತ್ತಿದ್ದಾರೆ. ಅಂಥವರ ಸಾಲಿಗೆ ಸೇರುತ್ತಾರೆ ಹೈದರಾಬಾದ್‌ನ ಜಾಹ್ನವಿ ಶ್ರೀ ಪೆರಂಬದೂರು.

‘ದಿ ಮಿಸ್ಟೀರಿಯಸ್ ಮೌಂಟೇನ್‌ ಗರ್ಲ್‌’ ಎಂದು ಖ್ಯಾತರಾಗಿರುವ ಜಾಹ್ನವಿ, ವಿಶ್ವದ ಎಲ್ಲ ಖಂಡಗಳಲ್ಲಿನ ಅತ್ಯಂತ ಎತ್ತರವಿರುವ ಪರ್ವತಗಳನ್ನು ಏರಿ ದಾಖಲೆ ನಿರ್ಮಿಸುವ ಕನಸು ಕಟ್ಟಿಕೊಂಡಿದ್ದಾರೆ. ಈ ಕನಸನ್ನು ನನಸು ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಲೇ ಇದ್ದಾರೆ. ಈಗಾಗಲೇ ಹಲವು ಶಿಖರಗಳ ತುದಿಗೆ ತಲುಪಿ ದಾಖಲೆಗಳನ್ನು ನಿರ್ಮಿಸಿದ್ದಾರೆ.

ಇದಕ್ಕಾಗಿ ‘ಮಿಷನ್‌–7’ ಯೋಜನೆ ರೂಪಿಸಿಕೊಂಡಿರುವ ಜಾಹ್ನವಿ ವಿಶ್ವದ ಅತಿ ಎತ್ತರದ ನಾಲ್ಕು ಪರ್ವತಗಳನ್ನು ಏರಿ, ಈ ಸಾಧನೆ ಮಾಡಿದ ಮೊದಲ ಭಾರತದ ಬಾಲಕಿ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ADVERTISEMENT

ಜಾಹ್ನವಿ 12ನೇ ವಯಸ್ಸಿನಲ್ಲಿ ಮಿಷನ್‌–7 ಯೋಜನೆ ಆರಂಭಿಸಿದರು. ಕೂಡಲೇ ಆಫ್ರಿಕಾ ಖಂಡದ ಅತ್ಯಂತ ಎತ್ತರದ ಪರ್ವತವಾದ ಕಿಲಿ ಮಂಜಾರೊ ಪರ್ವತವನ್ನು ಏರಿ ಶುಭಾರಂಭ ಮಾಡಿದರು.

ಆಸಕ್ತಿ ಮೂಡಲು ಕಾರಣ ಏನೆಂದು ಕೇಳಿದಾಗ, ‘ನಮ್ಮ ತಂದೆ ಕೃಷ್ಣರಾವ್ ಕೂಡ ಪರ್ವತಾರೋಹಿ. ಅವರು ಪರ್ವತಗಳನ್ನು ಏರಲು ಹೋದಾಗ ನನ್ನನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದರಂತೆ. ಅಂದರೆ, ನಾನು ಎರಡು ವರ್ಷದ ಮಗುವಾಗಿದ್ದಾಗಿನಿಂದಲೇ ಪರ್ವತಗಳ ತುದಿಗೆ ತಲುಪಿದ್ದೇನೆ’ ಎಂದು ಹೇಳುತ್ತಾರೆ ಅವರು.

‘9 ವರ್ಷದವಳಾಗಿದ್ದಾಗ, ನನ್ನನ್ನು ಕರೆದುಕೊಂಡು ಸುಮಾರು 16 ಸಾವಿರ ಅಡಿ ಎತ್ತರವಿರುವ
ಉತ್ತರಾಖಂಡದ ರೂಪ್‌ಕುಂಡ್ ಪರ್ವತವನ್ನು ಏರಿದ್ದರು. ಇದೇ ಹುರುಪಿನಲ್ಲಿ ಚಳಿಗಾಲವೆಂಬುದನ್ನೂ ಲೆಕ್ಕಿಸಿದೇ ಹಿಮಾಲಯ ಪರ್ವತ ಪ್ರದೇಶಗಳಲ್ಲಿ ಚಾರಣ ಮಾಡಿದ್ದೇನೆ ಎನ್ನುತ್ತಾರೆ. ಮುಂದೆ ಜಾಹ್ನವಿ ಲೇಹ್‌ನಲ್ಲಿರುವ ಸುಮಾರು 20 ಸಾವಿರ ಅಡಿ ಎತ್ತರದ ‘ಸ್ಟೋಕ್‌ ಕಾಂಗ್ರಿ’ ಪರ್ವತವನ್ನು ಏರಿದ್ದಾರೆ. ಪರ್ವತಾರೋಹಣಕ್ಕೆ ಬೇಕಾಗುವ ಖರ್ಚನ್ನೂ ಇವರೇ ಕೂಡಿಡುತ್ತಿದ್ದಾರೆ.

www.jahnavi.com ಹೆಸರಿನ ಜಾಲತಾಣವನ್ನೂ ನಿರ್ವಹಿಸುತ್ತಿದ್ದು, ತಮ್ಮ ಸಾಹಸ ಯಾತ್ರೆಗಳ ಅನುಭವಗಳನ್ನು ಅಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಪರ್ವಾತರೋಹಣವಷ್ಟೇ ಅಲ್ಲ, ಚಿತ್ರ ಬಿಡಿಸುವುದು, ಕಥೆಗಳನ್ನು ಬರೆಯುವ ಹವ್ಯಾಸವೂ ಅವರಿಗೆ ಇದೆ. ಇದರ ಜತೆಗೆ ಭರತನಾಟ್ಯವನ್ನೂ ಕಲಿಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.