ADVERTISEMENT

ಸಂದರ್ಶನ ಮುಗಿಸಿ ಪ್ರವಾಸ!

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2018, 19:30 IST
Last Updated 31 ಆಗಸ್ಟ್ 2018, 19:30 IST
   

1983ರ ಮಾತು. ನಾನಾಗ ಬಿ.ಇಡಿಯನ್ನು ರ್‍ಯಾಂಕ್‌ನೊಂದಿಗೆತೇರ್ಗಡೆಯಾಗಿದ್ದೆ. ಅದೇ ಹುಮ್ಮಸ್ಸಿನಲ್ಲಿ ಇಳಕಲ್ಲಿನ ಖಾಸಗಿ ಶಾಲೆಯೊಂದರ ವಿಜ್ಞಾನ ಶಿಕ್ಷಕರ ಹುದ್ದೆಗೆ ಅರ್ಜಿ ಹಾಕಿದ್ದೆ. ಸಂದರ್ಶನದ ಹಿಂದಿನ ದಿನ ಅದೇ ಶಾಲೆಯಲ್ಲಿ ಈಗಾಗಲೇ ಶಿಕ್ಷಕನಾಗಿದ್ದ ನನ್ನ ಬಿ.ಇಡಿ ಸಹಪಾಠಿಯೊಬ್ಬರ ಹುನಗುಂದದ ರೂಮಿನಲ್ಲಿ ಉಳಿದುಕೊಂಡೆ.

ಅವರು ಮಾತನಾಡುತ್ತಾ ‘ಅಯ್ಯೋ, ಈ ಹುದ್ದೆ ಈಗಾಗಲೇ ಮೂವತ್ತು ಸಾವಿರಕ್ಕೆ ಬುಕ್ ಆಗಿದೆ. ಸಂದರ್ಶನ ನೀಡುವುದರಲ್ಲಿ ಅರ್ಥವಿಲ್ಲ’ ಎಂದು ಹೇಳಿದರು. ಅಲ್ಲೀ ತನಕ ಹೋಗಿ ಮರಳಲು ಮನಸ್ಸು ಬರಲಿಲ್ಲ. ಸಂದರ್ಶನಕ್ಕೆ ಹಾಜರಾದೆ. ಎಂಟನೇ ವರ್ಗದ ಮಕ್ಕಳಿಗೆ ಪಾಠ ಕೊಡಿಸಿದರು. ಸಂದರ್ಶನ ಪ್ರಕ್ರಿಯೆ ಮುಗಿಯಿತು. ಆ ವರ್ಗದ ಮಕ್ಕಳು ಶಾಲೆ ಬಿಟ್ಟೊಡನೆ ಬಂದು ನನ್ನನ್ನು ಸುತ್ತುವರಿದರು. ಬೇಡ ಬೇಡವೆಂದರೂ ಎಂಟ್ಹತ್ತು ಹುಡುಗರು ನನ್ನ ಬ್ಯಾಗನ್ನು ಹಿಡಿದು ಬಸ್ ನಿಲ್ದಾಣದವರೆಗೆ ಬಂದರು. ‘ಸರ್ ನೀವೇ ಆಯ್ಕೆ ಆಗ್ತೀರಿ. ನಿಮಗೆ ರೂಮು ನೋಡಿ ಇಡ್ತೀವಿ. ದಯವಿಟ್ಟು ನಮಗೆ ಓದಲು ಹೇಳಿ ಕೊಡಿ. ನಿಮ್ ಜೊತೆ ಇರ್ತೀವಿ’ ಎಂದು ಬೀಳ್ಕೊಟ್ಟರು. ಮತ್ತೆ ನಾನು ಬರುವುದಿಲ್ಲ ಎಂದು ಹೇಳಲು ಬಾಯಿ ಬರಲಿಲ್ಲ.

ಬೇಜಾರಾಗಿ ಬಸ್ಸಿನಿಂದ ಇಳಿದಿದ್ದು ಬಾದಾಮಿಗೆ. ಹೇಗೂ ಬಂದುದಾಗಿದೆ. ಗುಹೆಗಳನ್ನಾದರೂ ನೋಡಿದರಾಯಿತೆಂದುಕೊಂಡೆ. ಒಬ್ಬನೇ ಗುಹೆಗಳನ್ನು ಅಡ್ಡಾಡಿ ವೀಕ್ಷಿಸಿದೆ. ಉಬ್ಬು ಶಿಲ್ಪಗಳು ಮನಸೆಳೆದವು. ತುದಿಗೆ ಹೋಗಿ ದೂರದಲ್ಲಿ ಕಾಣುವ ನಿಸರ್ಗ ಸಿರಿ ಕಂಡು ಕಣ್ತುಂಬಿಕೊಂಡೆ. ಅಗಸ್ತ್ಯ ತೀರ್ಥದ ಬಳಿ ನಿಂತಾಗ ಕಣ್ಣೀರು ಬಂತು.

ADVERTISEMENT

ಆ ರಾತ್ರಿ ವಸತಿ ಗೃಹದಲ್ಲಿ ಉಳಿದುಕೊಂಡೆ. ಮರುದಿನ ಬನಶಂಕರಿಗೆ ಬಂದು ದೇವಿಯ ದರ್ಶನ ಮಾಡಿದೆ. ಮಧ್ಯಾಹ್ನ ದೇವಾಲಯದ ಎದುರಿಗಿದ್ದ ಅನ್ನಪೂರ್ಣೆಯರಿಂದ ರೊಟ್ಟಿ, ಚಟ್ನಿ, ಮೊಸರು ತಿಂದು ಬೇಜಾರು ಮರೆತು, ಊರ ಹಾದಿ ಹಿಡಿದೆ.
-ಪ್ರಕಾಶ.ಎಸ್.ಮನ್ನಂಗಿ, ಮೋಟೆಬೆನ್ನೂರು, ಹಾವೇರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.