ADVERTISEMENT

ಮನಮೋಹಕ ಮಂದಾಲಪಟ್ಟಿ

ವಿ.ಎಸ್.ಕುಮಾರ್‌
Published 11 ಆಗಸ್ಟ್ 2018, 19:30 IST
Last Updated 11 ಆಗಸ್ಟ್ 2018, 19:30 IST
ಮಂದಾಲಪಟ್ಟಿಗೆ ಹೋಗುವ ಕಾಲುದಾರಿ
ಮಂದಾಲಪಟ್ಟಿಗೆ ಹೋಗುವ ಕಾಲುದಾರಿ   

ತಿಳಿ ನೀಲಾಕಾಶದ ಮುಗಿಲನ್ನು ನಾ ಮುಂದು, ತಾ ಮುಂದು ಎಂದು ಮುತ್ತಿಕ್ಕುವಂತೆ ಸುತ್ತಮುತ್ತಲಿನ ಹಚ್ಚಹಸಿರ ರಾಶಿಯ ನಡುವೆ ತಲೆಯೆತ್ತಿ ನಿಂತಿರುವ ಬೆಟ್ಟಗುಡ್ಡಗಳು. ಕಣಿವೆ ಕಂದಕಗಳನ್ನು ಆವರಿಸಿ, ಅಲಂಕರಿಸಿ ಕಂಗೊಳಿಸುತ್ತಿರುವ ಬೆಳ್ಳಿಮೋಡಗಳ ರಾಶಿ..

ಮಡಿಕೇರಿಯಿಂದ 20 ಕಿ.ಮೀ ದೂರದಲ್ಲಿರುವ ಮಂದಾಲಪಟ್ಟಿಯಲ್ಲಿ ನಿಂತು ನೋಡಿದರೆ ಸುತ್ತಲಿನ ಜಗತ್ತು ಸ್ವರ್ಗದ ಸಿರಿಯಂತೆ ಕಾಣುತ್ತದೆ. ದಟ್ಟವಾಗಿ ಹಬ್ಬಿರುವ ಅಚ್ಚ ಹಸಿರ ಸಿರಿಗೆ ಸಿಂಗರಿಸಿದಂತೆ ಭಾಸವಾಗಿ ಕೈಗೆಟುಕುವಂತೆ ಸಿಗುವ ಮೋಡಗಳ ಸಿಂಚನದ ವಿಹಂಗಮ ನೋಟವನ್ನು ಮನದಣಿಯೆ ನೋಡಬಹುದು. ಬೆಟ್ಟದಂಚನ್ನು ಸೀಳಿಕೊಂಡು ಹರಿಯುತ್ತಿರುವ ಹಾವಿನಂತೆ ಕಾಣುವ ಕಾಲುದಾರಿಯೂ ಈ ಸೌಂದರ್ಯದ ಭಾಗವೇ ಆಗಿದೆ.

ಮುಂಜಾನೆ ಸೂರ್ಯೋದಯದ ಸೊಬಗು, ಸಂಜೆಯ ಸೂರ್ಯಾಸ್ತದ ಮೆರುಗು ಮಂದಾಲಪಟ್ಟಿಯ ಸೌಂದರ್ಯಕ್ಕೆ ಕಳಸವಿಟ್ಟಂತಿದೆ. ಮುಂಜಾನೆ 6 ಗಂಟೆಯ ಸುಮಾರಿಗೆ ಇಲ್ಲಿದ್ದಲ್ಲಿ ಜೀವನದ ಅತ್ಯಂತ ರಸಮಯ ಕ್ಷಣಗಳ ಸವಿಯನ್ನು ಸವಿಯಬಹುದು.

ADVERTISEMENT

ಮಡಿಕೇರಿಯಿಂದ ಅಬ್ಬಿ ಜಲಪಾತಕ್ಕೆ ಹೋಗುವ ಹಾದಿಯಲ್ಲಿ 20 ಕಿ.ಮೀ ದೂರದಲ್ಲಿರುವ ಮಂದಾಲಪಟ್ಟಿಗೆ ಸ್ಥಳೀಯ ಜೀಪುಗಳಲ್ಲೇ ಹೋಗಿ ಬರುವುದು ಒಳಿತು. ಅದು ಅನಿವಾರ್ಯವೂ ಹೌದು. ಸುಮಾರು 15 ಕಿ.ಮೀ.ವರೆಗೂ ಡಾಂಬರು ರಸ್ತೆಯಿದೆ. ಅಲ್ಲಿಯವರೆಗೂ ಸ್ವಂತ ವಾಹನಗಳಲ್ಲೇ ಹೋಗಬಹುದಾದರೂ, ಮುಂದಿನ ಸುಮಾರು 5 ಕಿ.ಮೀ. ಕಚ್ಚಾ ರಸ್ತೆಯ ಹಾದಿ ಬಲು ಕಠಿಣ ಹಾಗೂ ದುರ್ಗಮ. ಜೀಪ್‌ಗೆ ₹ 1500 ರಿಂದ ₹ 1600 ರವರೆಗೂ ಶುಲ್ಕವನ್ನು ನಿಗದಿ ಮಾಡುತ್ತಾರೆ. ಮಂದಾಲಪಟ್ಟಿಯ ಬೆಟ್ಟದಂಚಿನ ವೀಕ್ಷಣಾ ಗೋಪುರಕ್ಕೆ ಹೋಗಿಬರಲು ತಲಾ ₹25 ಶುಲ್ಕವಿದೆ.

ಬೆಟ್ಟದ ತುತ್ತ ತುದಿಯಲ್ಲಿರುವ ವೀಕ್ಷಣಾಗೋಪುರದ ಪರಿಸರವಂತೂ ಸಾಕ್ಷಾತ್ ಸ್ಪರ್ಗಲೋಕ್ಕೆ ಕಾಲಿಟ್ಟಂತಹ ಮಧುರಾನುಭವ ನೀಡುತ್ತದೆ. ಇಲ್ಲಿಯ ಸೂರ್ಯಾಸ್ತವನ್ನು ಸವಿಯುವ ವೇಳೆಯಲ್ಲಿ, ಇರುಳ ಚಂದಿರನ ಬೆಳಕಿನಲ್ಲಿ, ಮಂದಾಲಪಟ್ಟಿಯಿಂದ ದುರ್ಗಮ ಅರಣ್ಯದ ಹಾದಿಯಲ್ಲಿ ಕೇವಲ 20 ಕಿ.ಮೀ ದೂರದಲ್ಲಿ ಕಾಣಸಿಗುವ ಕುಕ್ಕೆ ಸುಬ್ರಹ್ಮಣ್ಯದ ಸುಂದರ ದೃಶ್ಯವನ್ನೂ ನೋಡಬಹುದು. ಹಿಂದೆ ಇಲ್ಲಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಚಾರಣಕ್ಕೆ ಅನುಮತಿಯಿತ್ತಂತೆ. ಈಗ ಚಾರಣವನ್ನು ನಿಲ್ಲಿಸಲಾಗಿದೆ.

ಹಿಂದೆ ಕೊಡಗಿನ ಅರಸರು ನಿಸರ್ಗದ ಸೊಬಗನ್ನು ಸವಿಯಲುಮಂದಾಲಪಟ್ಟಿಗೆ ಆಗಾಗ ಬಂದು ಹೋಗುತ್ತಿದ್ದರಂತೆ.

ಮಳೆಗಾಲ ಮುಗಿದ ನಂತರ ಅಂದರೆ ನವೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೂ ಈ ನಿಸರ್ಗದೇಗುಲಕ್ಕೆ ಭೇಟಿ ನೀಡಲು ಹೆಚ್ಚು ಪ್ರಶಸ್ತ ಸಮಯ. ಮಳೆಗಾಲದಲ್ಲಿ ಇಲ್ಲಿನ ಸೊಬಗು ಮುಗಿಲುಮುಟ್ಟುವುದು. ಆದರೆ ಕಚ್ಚಾರಸ್ತೆಯಲ್ಲಿನ ಪಯಣ ಅತ್ಯಂತ ಕಠಿಣ. ಜಿಗಣೆಗಳ ಉಪಟಳವೂ ಇರುತ್ತದೆ. ಮಂದಾಲಪಟ್ಟಿಯ ಪರಿಸರದಲ್ಲಿ ತಿನ್ನಲು ಕುಡಿಯಲು ಏನೂ ಸಿಗುವುದಿಲ್ಲ. ಹೋಗುವಾಗಲೇ ಕುರಕಲು ತಿನಿಸುಗಳನ್ನು ತೆಗೆದುಕೊಂಡು ಹೋಗುವುದು ಒಳ್ಳೆಯದು.

ಮಂದಾಲ ಪಟ್ಟಿಗೆ ಹೋದಾಗಲೇ ಒಂದಿಷ್ಟು ಬಿಡುವು ಮಾಡಿಕೊಂಡರೆಕಾವೇರಿಯ ಉಗಮಸ್ಥಾನ ತಲಕಾವೇರಿ, ಕಾವೇರಿ, ಭಾಗಮಂಡಲ, ರಾಜಾಸೀಟ್, ಅಬ್ಬಿ ಜಲಪಾತಗಳನ್ನು ನೋಡಿಕೊಂಡು ಬರಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.