ADVERTISEMENT

ಪ್ರವಾಸ | ಅಸೀಮ ಸುಂದರಿ ಮಹರ್ಷಿ ಜಲಧಾರೆ…

ನಾಲಗೆ ಹೊರಳದ ನಾಡಿನಲ್ಲಿ ನಾಲ್ಕು ದಿನ!

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2023, 21:45 IST
Last Updated 8 ಏಪ್ರಿಲ್ 2023, 21:45 IST
ಮಹರ್ಷೀ ಜಲಧಾರೆಯ ನೋಟ
ಮಹರ್ಷೀ ಜಲಧಾರೆಯ ನೋಟ   


ಶಿಲ್ಲಾಂಗನ ಗಿಜಿ ಗುಟ್ಟುವ ಗುಂಪಿನಿಂದ ಏಕಾಂತದ ಸುಂದರ ಸ್ಥಳದ ಹುಡುಕಾಟದಲ್ಲಿದ್ದವರಿಗೆ ಸಿಕ್ಕಿದ್ದು ಈ ಜಲಧಾರೆ!

ಅಲೆಮಾರಿಯ ಅಂತರಂಗ: ಚೆರಿ ಮರದ ಹೂ ಪಕಳೆಗಳು ನಮ್ಮ ಪ್ರವಾಸದ ಹಾದಿಗೆ ಬಣ್ಣ ತುಂಬಿದ್ದವು. ಶಿಲ್ಲಾಂಗ್‌ನ ತುಂಬೆಲ್ಲಾ ಅದರದೇ ಸುದ್ದಿ. ಚೆರಿ ಹಬ್ಬದ ಬಿಸಿ ಬಿಸಿ ಚರ್ಚೆ ನಡೆಯುವ ಸಮಯಕ್ಕೆ ನಾವೈವರು ಮೇಘಾಲಯದ ಶಿಲ್ಲಾಂಗ್‌ನಲ್ಲಿ ಮೊಕ್ಕಾಂ ಹೂಡಿದೆವು. ನಾಲ್ಕು ದಿನ ಪ್ರವಾಸ ಮಾಡಿದ ಅನುಭವದ ನಾಲ್ಕನೆಯ ಮತ್ತು ಕೊನೆಯ ಕಂತು. ಶಿಲ್ಲಾಂಗನ ಗಿಜಿ ಗುಟ್ಟುವ ಗುಂಪಿನಿಂದ ಏಕಾಂತದ ಸುಂದರ ಸ್ಥಳದ ಹುಡುಕಾಟದಲ್ಲಿದ್ದವರಿಗೆ ಸಿಕ್ಕಿದ್ದು ಈ ಜಲಧಾರೆ!

ಜಲಕನ್ನಿಕೆಯನು ಅರಸಿ ಹೊರಟಾಗ: ನೆನಪುಗಳ ಕೆದುಕುತ್ತಾ ಕುಳಿತವನ ಮುಂದೆ ಹೇಗೋ ನುಸುಳಿ ಜಾರಿದ ಈ ಜಲ ಕನ್ನಿಕೆಯ ವಿವರಗಳು ಡಿಸೆಂಬರ್ ತಿಂಗಳ ಚಳಿಯ ನೀರವ ಏಕಾಂತದಲಿ ನಿಧಾನಕ್ಕೆ ತೆರೆದುಕೊಳ್ಳತೊಡಗಿತ್ತು.

ಹೆಸರು ಮಹರ್ಷಿ ಜಲಧಾರೆ. ಜೊತೆಗೆ ವಹರ್ಷಿ ಎಂಬ ಇನ್ನೊಂದು ಹೆಸರೂ ಇದೆ. ಯಾಕೆ ಈ ಹೆಸರು ಬಂತು ಎಂದು ಇಲ್ಲಿ ಯಾರಿಗೂ ಗೊತ್ತಿಲ್ಲ. ಭಾಷೆ ಗೊತ್ತಿಲ್ಲದ ಈ ನಾಡಿನಲ್ಲಿ ಹೆಸರಿನ ಕ್ಲಿಷ್ಟತೆಯನ್ನು ಕೆದಕುವುದಾದರೂ ಹೇಗೆ? ಗೊತ್ತಿಲ್ಲ. ಯಾವುದೋ ಬೆಟ್ಟದ ಕೊರಕಲುಗಳಲ್ಲಿ ಅಜ್ಞಾತವಾಗಿ ಹರಿವ ಇವು ಯಾವುದೋ ಕಿಂಕರನ ಶಾಪಕ್ಕೆ ಸಿಕ್ಕು ಅಡವಿಯೊಳಗವಿದಿವೆಯೋ?

ADVERTISEMENT

ನಾಗರಿಕತೆಯ ನಾಗಾಲೋಟಕ್ಕೆ ಸಿಕ್ಕಿ ಅತ್ತಿತ್ತಲಾಗಿರುವ ಜಲಧಾರೆಗಳ ನಡುವೆ ಈ ಜಲಧಾರೆ ಅನನ್ಯವಾಗಿ ನಿಲ್ಲುತ್ತದೆ. ಹೊರ ಜಗತ್ತಿಗೆ ಕನಸಿನಂತೆ ಭಾಸವಾಗುವ ಇಲ್ಲಿನ ಪರಿಸರ ಮಿಥ್ಯಾ ವಾಸ್ತವದಂತೆ. ತಿಂಗಳುಗಳ ಕಾಲ ಅನವರತ ಸುರಿವ ಮಳೆ ನೀರು ಇಲ್ಲಿನ ಬೋಳುಗುಡ್ಡದಿಂದ ಬಹು ಬೇಗ ಬಸಿದು ಹೋದಾಗ ಇಲ್ಲಿನವರ ಪರದಾಟ ಹೇಳತೀರದು. ಹನಿ ನೀರಿಗೂ ತತ್ವಾರ. ಡಿಸೆಂಬರ್‌ನಲ್ಲಿ ಸುಡುವ ತಣ್ಣನೆಯ ಚಳಿ. ಕೈತುಂಬಾ ಕೆಲಸಕ್ಕಾಗಿ ಅಲೆದಾಡುವ ಪರಿಸ್ಥಿತಿ. ಬೊಂಬು ಮತ್ತು ಸುಣ್ಣದ ಕಲ್ಲು ಇಲ್ಲಿ ನ ಆದಾಯದ ಮೂಲ ಮತ್ತು ಮಾಲಿನ್ಯದ ಮೂಲವೂ ಹೌದು.

ಉತ್ಥಾನ: ಹಿಂದಿನ ದಿನವಷ್ಟೇ ನಾನ್‌ ಬ್ಲಾಂಗ್‌ ಎಂಬ ಹಳ್ಳಿಯನ್ನು ಹತ್ತಿಳಿದ ನಮಗೆ ಕೈ ಕಾಲುಗಳ ನಟ್ಟು ಬೋಲ್ಟುಗಳೆಲ್ಲಾ ಸದ್ದು ಮಾಡುತ್ತಿರುವಾಗ ಮತ್ತೊಂದು ಜಲಧಾರೆಗೆ ಇಳಿಯಬೇಕೆಂಬುದು ನನಗೆ ಅರಗಿಸಿಕೊಳ್ಳಲಾರದ ಬಿಸಿ ತುಪ್ಪ. ಪೂರ್ವಾಪರಗಳ ಸುಳಿವು ಕೊಡದೆ ಸೂರ್ಯ ಬೆಟ್ಟಗಳ ಜೊತೆಗೆ ನಮ್ಮನ್ನೂ ಸುಡಲು ಹತ್ತಿದ. ಗೆಳೆಯರು ಹೇಳುವ, ‘ಇಲ್ಲೇ ಇದೆ, ಬಂತು, ಇನ್ನೊಂದು ಹತ್ತು ನಿಮಿಷ’ ಎಂಬ ಆಮಿಷದ ಪದಗಳಿಗೆ ಕಿವಿ ಬೇಸತ್ತಿತ್ತು.

ಅಂತೂ ಇಂತು ಬಂತು!: ಸುಮಾರು ನಾಲ್ಕು ಕಿಲೋಮೀಟರ್‌ ನಡೆದು ಜಲಧಾರೆಯ ನೀರು ಮುಖಕ್ಕೆ ಚಿಮುಕಿಸಿಕೊಂಡಾಗ ಅಮೃತಾನುಭವ. ಶಿಲ್ಲಾಂಗಿನ ಸಿನ್ಟುಂಗ್‌, (ಮೂಗು ಬಾಯಿ, ತುಟಿ, ಗಂಟಲು ಎಲ್ಲಾ ಸೇರಿಸಿ ಹೇಳಿದರೂ ದೇವರಾಣೆ ನೀವು ಸರಿ ಉಚ್ಚಾರ ಹೇಳಲಾರಿರಿ.) ಹಳ್ಳಿಯ ಪೂರ್ವ ಖಾಸಿ ಬೆಟ್ಟಗಳ ಮಡಿಲಲಿ ಅಡಗಿ ಬಹುದೂರವಿದ್ದರೂ ಪ್ರವಾಸೋದ್ಯಮ ಇಲಾಖೆಯ ಕೆಲಸ ನೀವು ಮೆಚ್ಚಲೇಬೇಕು. ಜಲಪಾತಕ್ಕೆ ಇಳಿಯುವಲ್ಲಿ ನೀರಿನ ವ್ಯವಸ್ಥೆ, ಸುಂದರ ಮೆಟ್ಟಿಲು, ವೀಕ್ಷಣಾ ಗೋಪುರ, ಜಲಪಾತದೆದುರಿಗೇ ನಿಲ್ಲಲು ಮತ್ತೊಂದು ಬಾಗು ಸೇತುವೆ. ಹೀಗೆ ಹತ್ತಾರು ಕಡೆ ವೀಕ್ಷಿಸಿ ಇಲ್ಲಿನ ಜಲಧಾರೆಯನ್ನು ಮನ ತುಂಬಿಸಿಕೊಳ್ಳಲು ಅಪೂರ್ವ ಅವಕಾಶ ಇಲ್ಲಿದೆ.

ಗುಡ್ಡದಿಂದ ಸುರಿವ ಎಳನೀರು! : ಮಳೆಯ ದಿನಗಳಲ್ಲಿ ಇಲ್ಲಿನ ಗುಡ್ಡಗಳು ಕುಡಿದ ಹನಿ ಹನಿ ನೀರನ್ನು ತನ್ನ ಹರಿವಿನುದ್ದಕ್ಕೂ ಹರಿವಂತೆ ಮಾಡುವ ಮೋಡಿ ಒಂದು ಸೋಜಿಗ! ಇಲ್ಲಿ ನನ್ನರಿವಿಗೆ ಬಂದ ಐದು ಪಾತಗಳೂ ಅತ್ಯದ್ಭುತ.

ಮೊದಲ ನಾಲ್ಕು ಹಂತ ನಿಧಾನವಾಗಿ ಬಳುಕುತ್ತಾ ಸಹಸ್ರಧಾರೆಯಾಗಿ ಸುರಿದರೆ, ಎರಡನೆಯದರದು ಅಕ್ಷರಶಃ ಭೋರ್ಗರೆತದ ಪಾತ. ವರ್ಣಿಸಲು ಪದಗಳ ತೊಳಲಾಟ. ಕೆರೆಯಂತಾದ ನೀರು ಅಚ್ಚ ಹಸಿರು ವರ್ಣ. ಮರೆಯಲಸಾಧ್ಯ. ಮೊದಲ ಹಂತದಲಿ ಧುಮುಕಿ ದೊಡ್ಡ ಅಪ್ಸರಕೊಂಡದಂತಹ ಕೆರೆಯ ನಿರ್ಮಿಸಿ ಎರಡನೆಯ ಭೋರ್ಗರೆತಕ್ಕೆ ಸಿದ್ಧವಾಗುತ್ತಾಳೆ. ಐದನೆಯ ಹಂತವನ್ನು ಮೇಲಿನಿಂದ ವೀಕ್ಷಿಸಲು ನಿರ್ಮಿಸಿದ ಸುತ್ತಲಿನ ಕಾಡು ಜಲಪಾತದ ಜೋಗುಳಕ್ಕೊಂದು ಮೆರುಗು.

ಹೊಸತೊಂದು ಅಲೌಕಿಕ ಜಗತ್ತು: ಇಲ್ಲಿ ಅಲೌಕಿಕ ಜಗತ್ತಿನ ಮಾಯಾ ಕನ್ನಡಿಯಂತೆ ತನ್ನ ಸುತ್ತಲಿನ ಮರಗಿಡ ಬಳ್ಳಿಗಳನ್ನು ಪ್ರತಿಫಲಿಸುತ್ತಲೇ ತನಗೆ ತಾನೆ ಅಪರಿಚಿತವಾಗಿ ಉಳಿದಿವೆಯೇನೊ ಎನಿಸುವಂತೆ. ಬಿಂಬಕ್ಕೂ ನೈಜಕ್ಕೂ ಪೈಪೋಟಿ ಏರ್ಪಟ್ಟು ಯಾವುದು ನಿಜ ಯಾವುದು ಸುಳ್ಳು ಎಂಬುದು ತಿಳಿಯದೇ ಮನಸ್ಸು ಮೂಕವಿಸ್ಮಿತವಾಗುತ್ತಿತ್ತು. ತನ್ನ ಸುತ್ತಲಿನದ್ದನ್ನು ಪ್ರತಿಫಲಿಸುತ್ತಾ ಸುಮ್ಮನೆ ಸಾಗಬೇಕು. ಎನ್ನುತ್ತಾ ದೊಡ್ಡ ನದಿಯೊಂದರ ನಿರೀಕ್ಷೆಯಲ್ಲಿ ಭೋರ್ಗರೆಯುತ್ತಾ ಸಾಗುತ್ತಾ ತನ್ನತನವನ್ನು ಕಳೆದುಕೊಳ್ಳುವ ಸಂಕಟದಲ್ಲೇ ಮಂದಗಮನೆಯಾಗಿ ತನ್ನ ಜಗತ್ತನ್ನು ತೊರೆದು ಬರುವ ಪ್ರೇಯಸಿಯಂತೆ ಎಂಬ ಭಾವ ಮೂಡುತ್ತಲೇ ನೋಡುವ ನೋಟ ಬದಲಾಗಿತ್ತು!

ಪಾಂಡೆ ದಾಟಿಸಿದ ವಿಷಾದ: ಇಪ್ಪತ್ತು ವರ್ಷದಿಂದ ಮೇಘಾಲಯದಲ್ಲೇ ನೆಲೆನಿಂತ ನಮ್ಮ ಗೆಳೆಯ ಪಾಂಡೆ ಮೊದಮೊದಲು ಮೇಘಾಲಯದ ಎಲ್ಲಾ ಜಲಧಾರೆಗಳ ನೀರು ಸ್ಪಟಿಕ ಶುಭ್ರವಾಗಿತ್ತು ಎಂದು ಹೇಳಿ ನಮ್ಮಗೊಂದು ಅಚ್ಚರಿಯ ಜೊತೆಗೆ ವಿಷಾದವನ್ನೂ ಉಣಬಡಿಸಿದ. ನಾಗರಿಕತೆಯ ಅನಾಗರಿಕ ವರ್ತನೆ ಬಗ್ಗೆ ಜುಗುಪ್ಸೆ ಹುಟ್ಟಿಸಿತು.

ಕಟ್ಟಿಸಿಕೊಂಡ ಪರೋಟ, ಹಣ್ಣುಗಳಿಗೆ ಹೊಟ್ಟೆಗೆ ಗೇಟ್‌ ಪಾಸ್‌ ನೀಡಲಾಯಿತು! ಜಲಧಾರೆಯಲ್ಲಿ ಮುಖ ತೋಯಿಸಿಕೊಂಡು ಹೊರಟಾಗ ಸೂರ್ಯ ಕತ್ತಲ ಪರದೆ ಎಳೆಯುತ್ತಿದ್ದ. ಮತ್ತೊಮ್ಮೆ ನಿನ್ನ ಸೌಂದರ್ಯ ಮೆಲ್ಲುವ ಅವಕಾಶಕ್ಕಾಗಿ ಕಾದಿರುತ್ತಾ ಜಲಧಾರೆಗೆ ಬೈ ಬೈ ಹೇಳಿದೆವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.