ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನ ಅರವತ್ತ್ಮೂರು ಹರೆಯದ ಪಾಟೀಲರು ದೆಹಲಿಯ ಗೆಳೆಯನೊಂದಿಗೆ ಸೈಕಲ್ ಏರಿ ಶ್ರೀಲಂಕಾ ಪ್ರವಾಸ ಮಾಡಿದ್ದಾರೆ. 24 ದಿನಗಳಲ್ಲಿ 900 ಕ್ಕೂ ಹೆಚ್ಚು ಕಿಲೊಮೀಟರ್‌ಗಳನ್ನು ಸೈಕಲ್‌ನಲ್ಲಿ ಸುತ್ತುತ್ತ ಹೊಸ ಅನುಭವಕ್ಕೆ ತೆರೆದುಕೊಂಡಿದ್ದಾರೆ.
ಶ್ರೀಲಂಕಾದಲ್ಲಿ ಪ್ರವಾಸ ಮಾಡುವುದು ಖುಷಿ, ಅದರಲ್ಲೂ ಸೈಕಲ್ ಪ್ರವಾಸ ಇನ್ನೂ ಖುಷಿ. ಸದಾ ಹಸಿರಾಗಿರುವ ಸುಂದರ ಪರಿಸರ, ಒಳ್ಳೆಯ ರಸ್ತೆ, ಹವಾಮಾನ, ಪ್ರೀತಿ ತೋರುವ ಜನ, ಬುದ್ಧನ ನಾಡು–ಇವೆಲ್ಲವೂ ಸೈಕಲ್ ಪ್ರವಾಸ ಮಾಡಲು ಪ್ರೇರಣೆ ನೀಡಿದವು.
ನನ್ನ ಸೈಕಲ್ ಪ್ರವಾಸದ ಹಿನ್ನೆಲೆಯನ್ನು ಇಲ್ಲಿ ಸ್ವಲ್ಪ ಹೇಳಿಬಿಡುತ್ತೇನೆ. ಸೈಕಲ್ ಪಯಣದ ಆಸೆ ಚಿಗುರಿದ್ದು ಅರುಣಾಚಲ ಪ್ರದೇಶ ಪ್ರವಾಸದ ಸಂದರ್ಭದಲ್ಲಿ. ಸ್ವಿಟ್ಜರ್ಲೆಂಡ್ ದೇಶದ 72 ವರ್ಷದ ದಂಪತಿ ಸೈಕಲ್ ಏರಿ ಅಲ್ಲಿ ಸುತ್ತುತ್ತಿದ್ದರು. ಅವರು ಅದಾಗಲೇ ಸುಮಾರು ಎಪ್ಪತ್ತರಿಂದ ಎಂಬತ್ತು ದೇಶಗಳನ್ನು ಸೈಕಲ್ ತುಳಿಯುತ್ತಲೇ ಅನ್ವೇಷಿಸಿದ್ದರು ಎನ್ನುವುದು ತಿಳಿಯಿತು, ಆಶ್ಚರ್ಯವೂ ಆಯಿತು. ಆಗ ನನ್ನ ಮನಸ್ಸಿನಲ್ಲಿ ‘ನಾನೂ ಯಾಕೆ ಸೈಕಲ್ ಪ್ರವಾಸ ಮಾಡಬಾರದು’ ಎನ್ನುವ ಆಸೆಯ ಬೀಜ ಬಿದ್ದಿತು. ಅದು ದಿನಗಳು ಕಳೆದಂತೆ ಮೊಳಕೆಯೊಡೆದು ಸಸಿಯಾಗತೊಡಗಿತು. ನಾನು ನನ್ನ ನಿತ್ಯ ದಿನಚರಿಯಲ್ಲಿ ಸುಮಾರು ಆರರಿಂದ ಹತ್ತು ಕಿಲೊಮೀಟರ್‌ಗಳನ್ನು ಸೈಕಲ್‌ನಲ್ಲಿ ತಿರುಗಾಡುತ್ತಿದ್ದೆ. ಕಳೆದ ವರ್ಷ ಮಹಾರಾಷ್ಟ್ರ ರಾಜ್ಯದ ಯೂತ್ ಹಾಸ್ಟೆಲ್ ಆಯೋಜಿಸಿದ್ದ ಮುಂಬೈ–ಗೋವಾ ಸೈಕಲ್ ಪ್ರವಾಸದಲ್ಲಿ ಭಾಗವಹಿಸಿ, ಯಶಸ್ವಿಯಾಗಿದ್ದೆ. ಆ ಬಳಿಕ ನಾನು ಸೈಕಲ್ ಪ್ರವಾಸ ಮಾಡಬಹುದು ಎಂಬ ವಿಶ್ವಾಸ ತುಂಬಿತುಳುಕಿತು.
ದೆಹಲಿಯ ಗೆಳೆಯ ಅನುಕೂಲ ಮಂಡಲ್ ವಾಟ್ಸ್‌ಆ್ಯಪ್ ಗ್ರೂಪಿನಲ್ಲಿ ತಾವು ಏಕಾಂಗಿಯಾಗಿ ಸೈಕಲ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳುತ್ತಿರುವುದನ್ನು ತಿಳಿಸಿದ್ದರು. ಅದನ್ನು ನೋಡಿ ಅವರನ್ನು ಸಂಪರ್ಕಿಸಿ, ‘ನಾನು ನಿಮ್ಮೊಂದಿಗೆ ಪ್ರವಾಸಕ್ಕೆ ಬರುತ್ತೇನೆ’ ಎಂದು ಕೋರಿದೆ. ಅವರು ಖುಷಿಯಿಂದಲೇ ಒಪ್ಪಿಗೆ ಸೂಚಿಸಿದರು. ಆನಂತರ ಪ್ರಾರಂಭವಾಯಿತು ಸಮಸ್ಯೆಗಳ ಸರಮಾಲೆ. ಮೊದಲಿಗೆ ನನ್ನ ಬಳಿ ಪ್ರವಾಸಕ್ಕೆ ಬೇಕಾದ ಉತ್ತಮ ಸೈಕಲ್ ಇರಲಿಲ್ಲ. ಸೈಕಲ್‌ಗೆ ಬೇಕಾದ ಕ್ಯಾರಿಯರ್, ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಲು ಬ್ಯಾಗೂ ಇರಲಿಲ್ಲ. ಸೈಕಲ್ ಪ್ಯಾಕ್ ಮಾಡಿ ಬೆಂಗಳೂರಿಗೆ ತೆಗೆದುಕೊಂಡು ಹೋಗುವುದು, ಅಲ್ಲಿಂದ ವಿಮಾನ ನಿಲ್ದಾಣಕ್ಕೆ ಒಯ್ಯುವುದು...
ಶುರುವಾಯ್ತು ಯಾನ...
ಬೆಂಗಳೂರಿನಿಂದ ಕೊಲಂಬೊಗೆ ವಿಮಾನದಲ್ಲಿ ಹಾರಿದೆ. ಮಾರನೇ ದಿನ ಮತ್ತೆ ಸೈಕಲ್ ಮರುಜೋಡಣೆ ಮಾಡುವ ಸಮಸ್ಯೆ ಎದುರಾಯಿತು. ಅದನ್ನೂ ನಾವೇ ಏಕೆ ಮಾಡಬಾರದು ಎಂದು ಪ್ರಯತ್ನಿಸಿ ಯಶಸ್ವಿಯಾದೆವು. ಕೊಲಂಬೊದ ಪ್ರವಾಸಿ ತಾಣಗಳಾದ ಬೀಚ್, ಗಾಲ್ ಫೇಸ್, ಲೋಟಸ್ ಟವರ್, ಇಂಡಿಪೆಂಡೆನ್ಸ್ ವೃತ್ತ ಮತ್ತು ಗಂಗಾರಾಮಯ್ಯ ಬೌದ್ಧ ಮಂದಿರ ನೋಡಿದೆವು.
ಅಲ್ಲಿಂದ ನಮ್ಮ ಸೈಕಲ್ ಪ್ರವಾಸ ಬೆಂಟೂಟ, ಗಾಲ್, ಮಠಾರ ದಕ್ಷಿಣದ ತುದಿಯವರೆಗೆ ಇತ್ತು. ನಂತರ ವೆಲವಾಯುಗೆ ಬಸ್ಸಿನಲ್ಲಿ ಸೈಕಲ್‌ಗಳನ್ನು ಸಾಗಿಸಿದೆವು. ಅಲ್ಲಿ ಎರಡು ದಿನವಿದ್ದು ಎಲ್ಲಾ ರಾಕ್ (ಬೆಟ್ಟ) ರಾವಣ ಗುಹೆ, ಒಂಬತ್ತು ಕಮಾನಿನ ರೈಲು ಸೇತುವೆ (ಬ್ರಿಟಿಷರ ಆಳ್ವಿಕೆಯಲ್ಲಿ ನಿರ್ಮಿಸಿದ್ದು) ನೋಡಿದೆವು. ಅವುಗಳೋ ಒಂದಕ್ಕಿಂತ ಇನ್ನೊಂದು ಅದ್ಭುತ.
ಶ್ರೀಲಂಕಾದ ಅತಿ ಎತ್ತರ ಬೆಟ್ಟ ಪ್ರದೇಶವಾದ ನೋವಾರಾ ಎಲಿಕ್ಕೆಗೆ ರೈಲಿನಲ್ಲಿ ಹೋದೆವು. ಅಲ್ಲಿ ಸೀತಾಮಾತಾ ಮಂದಿರ, ಅಶೋಕ ವನ, ಸೀತಾಮಾತಾ, ಹನುಮಂತನ ಮೂರ್ತಿ ನೋಡಿದೆವು. ಬೆಟ್ಟದ ಇಳಿಜಾರಿನ ರಸ್ತೆಯಲ್ಲಿ ಸುಂದರ ಚಹಾತೋಟಗಳನ್ನು ನೋಡುತ್ತಾ ಕ್ಯಾಂಡಿ ತಲುಪಿದ್ದೇ ಗೊತ್ತಾಗಲಿಲ್ಲ!.
ಕ್ಯಾಂಡಿಯಲ್ಲಿ ಪ್ರಪಂಚದ ಹೆರಿಟೇಟ್ ಬುದ್ಧನ ದೇವಾಲಯವಿದೆ. ಅದನ್ನು ತಪ್ಪದೇ ನೋಡಬೇಕು. ಅಲ್ಲಿ ಸಮೀಪ ಪಿನ್ನವಾಲದಲ್ಲಿ ಆನೆಗಳ ಬಿಡಾರವಿದೆ. ಅದನ್ನು ನೋಡುವುದೇ ಚೆಂದ. ಮುಂದೆ ದಂಬೂಲದಲ್ಲಿ ಬೆಟ್ಟದ ಮೇಲೆ ಗೋಲ್ಡನ್ ಬುದ್ಧನ ಮಂದಿರವಿದೆ. ಮುಂದೆ ಶಿಗಿರಿಯಾದಲ್ಲಿ ಸಿಂಹ ಬೆಟ್ಟದ (Lion Rock) ಮೇಲೆ ಕಶ್ಯಪ ರಾಜನ ಅರಮನೆ ಕೋಟೆಯ ಪಳೆಯುಳಿಕೆ ನೋಡಿದೆವು. ನಂತರ ಹಬರನ ಮಾರ್ಗವಾಗಿ ಟ್ರಿಂಕೋಮಲಿಗೆ ಹೋಗಿ ತಿರು ಕೋಣೇಶ್ವರ ಮಂದಿರಕ್ಕೆ ಭೇಟಿ ಕೊಟ್ಟೆವು. ಅಲ್ಲಿಂದ ಅನುರಾಧಪುರ (ಪುರಾತನ ಬೌದ್ಧ ರಾಜರ ರಾಜಧಾನಿ) ಎಲ್ಲ ಬೌದ್ಧ ಸ್ತೂಪಗಳನ್ನು ನೋಡಿದೆವು. ಮಳೆ ಬಂದ ಕಾರಣ ಒಂದು ದಿನ ವಿಶ್ರಾಂತಿ ಪಡೆಯುವುದು ಅನಿವಾರ್ಯವಾಯಿತು. ಅಲ್ಲಿಂದ ಮನ್ನಾರ್, ತಲೈ ಮನ್ನಾರ್‌ವರೆಗೆ ದಟ್ಟವಾದ ಅರಣ್ಯ ಪ್ರದೇಶ. ಈ ಹಾದಿಯಲ್ಲಿನ ಸೈಕಲ್ ಪಯಣ ಎಂದೆಂದೂ ಮರೆಯದ ಅನುಭವ ನೀಡಿತು. ತಲೈ ಮನ್ನಾರ್‌ನಲ್ಲಿ ಶ್ರೀರಾಮ ಸೇತು/ಆಡಮ್ಸ್ ಸೇತುವೆ ನೋಡಿ ಅಲ್ಲಿಂದ ಜಾಫ್ನ ದಾರಿಯಲ್ಲಿ ತಿರುಕೇಥೇಶ್ವರ ಮಂದಿರ (ತಮಿಳು ರಾಜರ ಕಾಲದ್ದು) ನೋಡಿ ಜಾಫ್ನ ತಲುಪಿದೆವು. ಅಲ್ಲಿ ಎರಡು ದಿವಸ ತಂಗಿದ್ದು, ನಂತರ ಬಸ್ಸಿನ ಮೂಲಕ ಸೈಕಲ್‌ಗಳೊಂದಿಗೆ ಕೊಲಂಬೊಗೆ ಮರಳಿದೆವು.
ಈ ಪ್ರವಾಸಕ್ಕೆ ವಿಮಾನ ಪ್ರಯಾಣದ ಟಿಕೆಟ್ ಹೊರತುಪಡಿಸಿ ಸುಮಾರು ₹30 ಸಾವಿರ ರೂಪಾಯಿ ಖರ್ಚಾಯಿತು. ನಮ್ಮ ಸೈಕಲ್‌ನಲ್ಲಿ ಇಪ್ಪತ್ನಾಲ್ಕು ದಿನದಲ್ಲಿ ಒಟ್ಟು ಒಂಬೈನೂರು ಕಿಲೊಮೀಟರ್ ಪ್ರಯಾಣ ಮಾಡಿದೆವು. ಈ ವೇಳೆ ನಮಗೆ ಬೆಂಟೋಟ ಸಮೀಪ ಎಳನೀರು ಮಾರುವ ವೃದ್ಧೆ, ಬೆಟ್ಟ ಪ್ರದೇಶದ ಹೋಂಸ್ಟೇಯ ಇಸಾಂಕ್, ಅನುರಾಧಪುರದ ಹೋಂಸ್ಟೇ ಒಡತಿ, (ಮಳೆ ಬಂದ ಕಾರಣ ಬೇರೆ ದಾರಿ ಇಲ್ಲದೆ ಅಲ್ಲಿ ಉಳಿಯುವ ಪ್ರಸಂಗ ಬಂದಿತು. ಆಗ ಅವರು ನಾವು ಅಡುಗೆ ಮಾಡಿಕೊಳ್ಳಲು ಅಡುಗೆಮನೆಯನ್ನೇ ಬಿಟ್ಟುಕೊಟ್ಟರು) ಹಾಗೂ ಮಲ್ಲನ್ ಕೋವಿಲ್ ಹೋಂಸ್ಟೇ ಮಾಲಕಿ ಅವರ ಅತಿಥಿ ಸತ್ಕಾರಕ್ಕೆ ಬೆಲೆ ಕಟ್ಟಲಾಗದು.
ನಮ್ಮ ದಾರಿಯಲ್ಲಿ ಪ್ರಪಂಚದ ಹೆರಿಟೇಜ್ ತಾಣಗಳು, ದ್ವೀಪಗಳು, ಸುಂದರ ಬೀಚ್‌ಗಳು, ಕೋಟೆಗಳು, ಮಂದಿರಗಳು, ಬೌದ್ಧ ಸ್ತೂಪಗಳು ಮತ್ತು ಪ್ರೀತಿಪೂರ್ವಕವಾಗಿ ನಮ್ಮನ್ನು ಸತ್ಕರಿಸಿದ ಶ್ರೀಲಂಕಾದ ಜನತೆ (ಕೆಲವು ಕಡೆ ಕೃಷಿ ಇಲಾಖೆ ಸಹಾಯದಿಂದ ಮಹಿಳೆಯರೇ ನಡೆಸುವ ಶ್ರೀಲಂಕಾ ಆಹಾರ ಸಹಕಾರಿ ತಿಂಡಿ ತಿನಿಸುಗಳ ಮಳಿಗೆ) ಇವೆಲ್ಲವುಗಳಿಂದ ನಮಗೆ ಅಲ್ಲಿಯ ಜನತೆ ಮತ್ತು ದೇಶದ ಬಗ್ಗೆ ಪ್ರೀತಿ ಹೆಚ್ಚಾಯಿತು. ಒಲ್ಲದ ಮನಸ್ಸಿನಿಂದ ತಾಯ್ನಾಡಿಗೆ ಬಂದೆವು. ನನ್ನ ಮೊದಲ ಹೊರದೇಶದ ಸೈಕಲ್ ಯಾತ್ರೆ ಬಹಳ ಕಾಲ ನೆನಪಿನಲ್ಲಿ ಉಳಿಯುವಂತಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.