ADVERTISEMENT

ಓಹೋ.. ಪ್ರೇಮ ಕಾಶ್ಮೀರ

ಎಸ್.ಮಲ್ಲಿಕಾರ್ಜುನ
Published 29 ಮೇ 2019, 19:30 IST
Last Updated 29 ಮೇ 2019, 19:30 IST
ಗುಲ್ಮಾರ್ಗ್. ಚಿತ್ರ: ಲೇಖಕರದ್ದು
ಗುಲ್ಮಾರ್ಗ್. ಚಿತ್ರ: ಲೇಖಕರದ್ದು   

‘ಭಾರತದ ಸ್ವರ್ಗ ಕಾಶ್ಮೀರ ನೋಡಲೇಬೇಕು’ – ಎಂದು ಮನದಲ್ಲಿ ನಿರ್ಧಾರ ಮಾಡಿಕೊಂಡಿದ್ದೆ. ಆದರೆ, ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ‘ಕಾಶ್ಮೀರ್‌ಗೆ ಹೋಗಲು ಏಪ್ರಿಲ್‌ ತಿಂಗಳು ಸೂಕ್ತ ಸಮಯ’ ಎಂದು ಗೆಳೆಯರು ಹೇಳಿದ್ದರು. ಆ ಸಮಯ ಬಂದೇಬಿಟ್ಟಿತು. ಏಪ್ರಿಲ್‌ ತಿಂಗಳಲ್ಲಿ ಬೆಂಗಳೂರಿನಿಂದ ವಿಮಾನ ಏರಿ ಕಾಶ್ಮೀರದತ್ತ ಹೊರಟೇ ಬಿಟ್ಟೆವು.

ಬೆಂಗಳೂರು – ಶ್ರೀನಗರ ನೇರ ವಿಮಾನ ಸೌಲಭ್ಯ ಇರಲಿಲ್ಲ. ಹೀಗಾಗಿ ಬೆಳಿಗ್ಗೆ 8ಕ್ಕೆ ಬೆಂಗಳೂರು ಬಿಟ್ಟು 11 ಗಂಟೆಗೆ ದೆಹಲಿ ತಲುಪಿದೆವು. ದೆಹಲಿಯಲ್ಲಿ ಇಳಿದು ಮತ್ತೊಂದು ವಿಮಾನ ಏರಿ, ಶ್ರೀನಗರ ಮುಟ್ಟಿದಾಗ ಮಧ್ಯಾಹ್ನ 4.30.

ನಾಲ್ಕು ದಿನ, ಐದು ಸ್ಥಳ

ADVERTISEMENT

ಜಮ್ಮು–ಕಾಶ್ಮೀರ ರಾಜ್ಯದ ಪ್ರವಾಸಕ್ಕೆ ನಾವು ಪ್ಯಾಕೇಜ್‌ ಟೂರ್‌ನಲ್ಲಿ ಹೋಗಿದ್ದೆವು. ಆ ನಾಲ್ಕು ದಿನಗಳ ಪ್ರವಾಸದ ಪ್ಯಾಕೇಜ್‌ನಲ್ಲಿ ದಾಲ್‌ಲೇಕ್‌, ಪಹಲ್‌ಗಾಮ್‌, ಚಂದನವಾಡಿ, ಗುಲ್ಮಾರ್ಗ್‌ ಮತ್ತು ಸೋನಮಾರ್ಗ್‌ ಪ್ರದೇಶಗಳನ್ನು ನೋಡುವುದೆಂದು ನಿಗದಿಯಾಗಿತ್ತು.

ಮೋದಲ ದಿನ ಶ್ರೀನಗರದ ದಾಲ್‌ ಸರೋವರಕ್ಕೆ ಭೇಟಿ. ಚಳಿಗಾಲದಲ್ಲಿ ಹಿಮದ ಹಾಸಿನಂತೆ ರೂಪಾಂತರಗೊಳ್ಳುವ ದಾಲ್‌ಸರೋವರ ಏಪ್ರಿಲ್‌ನಲ್ಲಿ ತಿಳಿಯಾಗಿರುತ್ತದೆ. ಆ ತಿಳಿ ನೀಲಿ ಸರೋವರದ ಮೇಲೆ ದೋಣಿಯಾನ ಮಾಡಿದೆವು. ಕಾಶ್ಮೀರ ಶೈಲಿಯ ಉಡುಪು ತೊಟ್ಟು ಸಂಭ್ರಮಿಸಿದೆವು. ಪಕ್ಕದಲ್ಲೇ ಸರೋವರದ ಮೇಲೆ ತೇಲಾಡುವ ‘ದಾಲ್‌ಲೇಕ್‌ ಮಾರುಕಟ್ಟೆ’ ಇತ್ತು. ರಾತ್ರಿ ಅದೇ ತೇಲುವ ದೋಣಿಯಲ್ಲೇ ತಂಗಿದ್ದೆವು.

ಪಹಲ್‌ಗಾಮ್‌ಗೆ ಪಯಣ

ಎರಡನೇ ದಿನ ಪಹಲಗಾಮ್‌ನತ್ತ ಪಯಣ. ಅನಂತನಾಗ್ ಜಿಲ್ಲೆಯ ಪಹಲ್‌ಗಾಮ್‌ ಒಂದು ಹಿಮಚ್ಚಾದಿತ ಗಿರಿಧಾಮ. ಅಲ್ಲಿನ ಬೆಟ್ಟ, ಬಯಲು ಎಲ್ಲೆಡೆಯೂ ಹಿಮದ ಚಾದರ. ಅಮರನಾಥ ಯಾತ್ರಗೆ ಹೋಗುವವರು ಇದೇ ದಾರಿಯಲ್ಲೇ ಪ್ರಯಾಣಿಸುತ್ತಾರೆ.

ಪಹಲ್‌ಗಾಮ್‌ ಪಕ್ಕದಲ್ಲೇ ಇರುವ ಚಂದನವಾಡಿ ಹಿಮ ಪರ್ವತಗಳಿಂದ ಆವೃತವಾಗಿರುವ ತಾಣ. ಇದು ಟ್ರೆಕ್ಕಿಂಗ್ ಮಾಡಲು ಸೂಕ್ತತಾಣ. ಆದರೆ, ಹಿಮ ಪರ್ವತಗಳನ್ನು ಏರುವಾಗ ಗೈಡ್ ಸಹಾಯ ತೆಗೆದುಕೊಂಡರೆ ಸೂಕ್ತ.

ಗುಲ್ಮಾರ್ಗ್‌

ಮೂರನೆಯ ದಿನ ಜಮ್ಮಕಾಶ್ಮೀರದ ಬಾರಮುಲ್ಲಾ ಜಿಲ್ಲೆಯ ಗುಲ್ಮಾರ್ಗ್‌ನತ್ತ ಹೊರಟೆವು. ಶ್ರೀನಗರದಿಂದ 52 ಕಿ.ಮೀ ದೂರದಲ್ಲಿರುವ ಈ ತಾಣವನ್ನು ನೋಡಿದ ಮೇಲೆ ವಿದೇಶಿಗರು ಯಾಕೆ ಈ ಜಾಗವನ್ನು ಭಾರತದ ಸ್ವಿಡ್ಜರ್ಲೆಂಡ್‌ ಎಂದರು ಎಂದು ಅರ್ಥವಾಯಿತು.

ಈ ಗುಲ್ಮಾರ್ಗ್ ವಿಶೇಷವೆಂದರೆ ಕೇಬಲ್‌ ಕಾರ್‌ನಲ್ಲಿ ಕುಳಿತು ಹಿಮ ಪರ್ವತಗಳನ್ನು ವೀಕ್ಷಿಸುತ್ತಾ ಸಾಗುವುದು. ಹೀಗೆ ಕಾರ್‌ನಲ್ಲಿ ಹೋಗುವಾಗ, ಕೆಳಗಿನ ಬೆಟ್ಟ, ಕಣಿವೆಗಳನ್ನು ನೋಡುತ್ತಿದ್ದರೆ, ಪೌರಾಣಿಕ ಸಿನಿಮಾಗಳಲ್ಲಿ ತೋರಿಸುವ ಇಂದ್ರ ಲೋಕದಂತೆ ಕಾಣುತ್ತಿದ್ದವು. ಇಲ್ಲಿಗೆ ದೇಶ ವಿದೇಶಗಳಿಂದ ಅತಿ ಹೆಚ್ಚು ಪ್ರವಾಸಿಗರು ಬರುತ್ತಾರೆ. ಕೇಬಲ್‌ ಕಾರ್‌ನಲ್ಲಿ ಒಬ್ಬರಿಗೆ ₹700 ರಿಂದ ₹800ರವರೆಗೆ ಟಿಕೆಟ್ ದರವಿರುತ್ತದೆ.

ಸಾಹಸಮಯ ಹಿಮಕ್ರೀಡೆಗಳಿಗೆ ಹೆಸರುವಾಸಿಯಾದ ಈ ಪ್ರದೇಶದಲ್ಲಿ ಸ್ಕೀಯಿಂಗ್, ಸ್ನೋ ಬೈಕ್‌ ರೈಡ್‌ ಅಂತೂ ಅದ್ಭುತವಾಗಿರುತ್ತದೆ. ನಮ್ಮ ತಂಡದಲ್ಲಿದ್ದ ಬಹುತೇಕರೂ ಹಿಮದ ನೆಲದಲ್ಲಿ ಬೈಕ್‌ ಸವಾರಿ ಮಾಡಿದೆವು. ಆದರೆ, ಸಾಹಸ ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕಾದರೆ ಹೆಚ್ಚುವರಿಯಾಗಿ ಎರಡರಿಂದ ಮೂರುಸಾವಿರ ರೂಪಾಯಿವರೆಗೂ ವೆಚ್ಚ ಭರಿಸಬೇಕಾಗುತ್ತದೆ.

ಗುಲ್ಮಾರ್ಗ್‌ನಲ್ಲಿ ಸಾಮಾನ್ಯವಾಗಿ ಉಷ್ಣಾಂಶ ಮೈನಸ್ ಡಿಗ್ರಿ ಇರುತ್ತದೆ. ಆದ್ದರಿಂದ ಇಲ್ಲಿಗೆ ಪ್ರವಾಸಕ್ಕೆ ಹೋಗುವ ಮುನ್ನ, ಸಾಕಷ್ಟು ಮುಂಜಾಗ್ರತಾ ಕ್ರಮ ತೆಗೆದುಕೊಂಡಿರಬೇಕು. ಅಂದರೆ, ಜರ್ಕಿನ್, ಶೂ, ಹ್ಯಾಂಡ್ ಗ್ಲೌಸ್, ಮಂಕಿಕ್ಯಾಪ್ ಸೇರಿದಂತೆ ಬೆಚ್ಚನೆಯ ಉಡುಪುಗಳನ್ನು ತೆಗೆದುಕೊಂಡು ಹೋಗಿರಬೇಕು.

ಸೋನಮಾರ್ಗ್‌

ಸೋನಮಾರ್ಗ ನಮ್ಮ ಪ್ರವಾಸದ ಕೊನೆಯ ತಾಣ. ಇದೂ ಕೂಡ ಹಿಮಚ್ಚಾದಿತ ಪ್ರದೇಶ. ದೃಷ್ಟಿ ಹಾಯಿಸಿದಷ್ಟು ಹಿಮ ಚಾದರದ ಹೊದಿಕೆ. ಅಷ್ಟಿದ್ದರೂ ತೀವ್ರ ಶೀತದ ವಾತಾವರಣವಿರಲಿಲ್ಲ. ಒಂದು ರೀತಿ ಆಹ್ಲಾದಕಾರವಾಗಿತ್ತು. ಅಲ್ಲಿಂದ ವಾಪಸ್ ಬರಲು ಮನಸ್ಸಾಗುತ್ತಿರಲಿಲ್ಲ. ಇಲ್ಲೂ ಹಿಮದ ಮೇಲೆ ಸ್ಕೀಯಿಂಗ್, ಮೋಟಾರ್‌ ಬೈಕ್ ಸೇರಿದಂತೆ ಹಲವು ಅಡ್ವೆಂಚರ್‌ ಕ್ರೀಡೆಗಳನ್ನು ಆಡಬಹುದಿತ್ತು.

ಸೋನಾಮಾರ್ಗ್‌ ನೋಡಿದ ನಂತರ ಏಷ್ಯಾದಲ್ಲೇ ಅತಿ ದೊಡ್ಡದಾದ ಶ್ರೀನಗರದ ಟುಲಿಪ್ ಗಾರ್ಡನ್‌ಗೆ ಭೇಟಿ ನೀಡಿದೆವು. ಬಣ್ಣದ ಟುಲಿಪ್ ಹೂವುಗಳು ಉದ್ಯಾನದಲ್ಲಿ ರಂಗೋಲಿಯ ಚುಕ್ಕಿಗಳಂತೆ ಕಾಣುತ್ತಿದ್ದೆವು. ಇಡೀ ಉದ್ಯಾನದ ಸುತ್ತಾ ಒಂದು ಸುತ್ತು ಹಾಕುವ ಹೊತ್ತಿಗೆ ಸಮಯ ಕಳೆದದ್ದೇ ಗೊತ್ತಾಗಲಿಲ್ಲ.

ಜಮ್ಮು ಕಾಶ್ಮೀರದ ನಾಲ್ಕು ದಿನಗಳ ಈ ಪ್ರವಾಸ ಹಲವು ಸವಿ ನೆನಪುಗಳು ಮನದಲ್ಲಿ ಉಳಿಸಿತು. ನೆನಪಿನ ಬುತ್ತಿಯೊಂದಿಗೆ, ಬಂದ ದಾರಿಯಲ್ಲೇ ಹಾಗೇ ಬೆಂಗಳೂರಿಗೆ ಹಿಂತಿರುಗಿದೆವು.

ಪ್ಯಾಕೇಜ್‌ ಪ್ರವಾಸ ಸೂಕ್ತ

ಸುರಕ್ಷತೆಯ ದೃಷ್ಟಿಯಿಂದ ಜಮ್ಮು–ಕಾಶ್ಮೀರದ ಪ್ರವಾಸಿ ತಾಣಗಳಿಗೆ ಭೇಟಿ ನೀಡಲು ಪ್ಯಾಕೇಜ್‌ ಟೂರ್ ತುಂಬಾ ಸೂಕ್ತವಾಗಿರುತ್ತದೆ. ಪ್ಯಾಕೇಜ್‌ ಪ್ರವಾಸ ಆಯೋಜಿಸಿದವರೇ ವಿಮಾನ ಯಾನ, ತಾರಾ ಹೋಟೆಲ್‌ಗಳಲ್ಲಿ ಊಟ–ವ್ಯವಸ್ಥೆ ಮಾಡಿರುತ್ತಾರೆ. ಊಟ, ಉಪಹಾರ (ವೆಜ್‌, ನಾನ್‌ವೆಜ್‌), ವಾಹನಗಳ ಸಾರಿಗೆವೆಚ್ಚ ಎಲ್ಲವೂ ಈ ಪ್ರವಾಸದ ವೆಚ್ಚದಲ್ಲೇ ಒಳಗೊಂಡಿರುತ್ತದೆ. ನಾವು ಪ್ರವಾಸ ಮಾಡಿದ ಈ ನಾಲ್ಕು ದಿನಗಳ ಪ್ಯಾಕೇಜ್‌ ಪ್ರವಾಸದಲ್ಲಿ ಪ್ರತಿಯೊಬ್ಬರಿಗೂ ₹35 ಸಾವಿರದಿಂದ 40ಸಾವಿರ ಖರ್ಚು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.