ADVERTISEMENT

ಪ್ರವಾಸ ಹೋಗುವ ಮುನ್ನ..

ರೇಷ್ಮಾ ಶೆಟ್ಟಿ
Published 12 ಏಪ್ರಿಲ್ 2019, 19:45 IST
Last Updated 12 ಏಪ್ರಿಲ್ 2019, 19:45 IST
ಪ್ರವಾಸಕ್ಕೆ ಹೊರಡುವ ಮುನ್ನ
ಪ್ರವಾಸಕ್ಕೆ ಹೊರಡುವ ಮುನ್ನ   

ಪ್ರವಾಸಕ್ಕೆ ಹೊರಡುವ ಮುನ್ನ ರೈಲ್ವೆ, ವಿಮಾನದ ಬುಕಿಂಗ್‌, ಹೊಟೇಲ್‌ನಲ್ಲಿ ಕೊಠಡಿ ಕಾದಿರಿಸುವುದು, ಅಲ್ಲಿ ಸೈಟ್‌ ಸೀಯಿಂಗ್‌ಗೆ ಕಾರು, ಇನ್ನಿತರ ಸ್ಥಳಿಯ ವಾಹನಗಳ ಬಗ್ಗೆ ವಿಚಾರಿಸುವುದು, ಆಹಾರ ಹೇಗಿರುತ್ತದೆ ಎಂಬುದನ್ನು ಪರಿಶೀಲಿಸುವುದು ಒಂದು ಕಡೆಯಾದರೆ ವಿದೇಶಗಳಿಗೆ ತೆರಳುವಾಗ ವೀಸಾ, ಪಾಸ್‌ಪೋರ್ಟ್‌, ವಿಮೆ.. ಮತ್ತಿತರ ಕೆಲಸಗಲ್ಲಿ ತೊಡಗಿಸಿಕೊಳ್ಳುವ ಧಾವಂತವಿರುತ್ತದೆ. ಇವೆಲ್ಲವುಗಳಿಗಿಂತ ಮುಖ್ಯವಾಗಿ ಪ್ಯಾಕಿಂಗ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಕಾಗುತ್ತದೆ.

*ಚಿಕ್ಕ, ಚೊಕ್ಕ ಬ್ಯಾಗ್ ನಿಮ್ಮದಾಗಿರಲಿ: ಪ್ರವಾಸಕ್ಕೆ ಹೊರಡುವ ಮೊದಲು ಬ್ಯಾಗ್‌ನ ಮೇಲೆ ಗಮನ ನೀಡಿ.ಬ್ಯಾಗ್‌ನಲ್ಲಿ ಜಾಗವಿದೆ ಎಂದುಕೊಂಡು ಸಿಕ್ಕಿದ್ದನೆಲ್ಲಾ ತುಂಬಿಸಿಕೊಂಡರೆ ಹೋದ ಕಡೆಗೆಲ್ಲಾ ಬ್ಯಾಗ್‌ ಹೊತ್ತು ತಿರುಗುವುದೇ ದೊಡ್ಡ ತಲೆನೋವಾಗುತ್ತದೆ. ಬ್ಯಾಗ್‌ ನಿಮ್ಮ ಪ್ರವಾಸದ ದಿನಗಳ ಮೇಲೆ ಅವಲಂಬಿತವಾಗಿರಲಿ. ತೀರಾ ಅಗತ್ಯ ಎನ್ನಿಸುವ ವಸ್ತುಗಳನ್ನಷ್ಟೇ ತುಂಬಿಸಿಕೊಳ್ಳಿ. ಇದರಿಂದ ಭಾರ ಹೊರುವ ಕಿರಿಕಿರಿಯೂ ತಪ್ಪುತ್ತದೆ, ಜೊತೆಗೆ ಪ್ರವಾಸದಿಂದ ಬರುವಾಗ ಖರೀದಿಸಿದ ವಸ್ತುಗಳನ್ನು ತುಂಬಿಸಿಕೊಳ್ಳಲು ಜಾಗವಾಗುತ್ತದೆ.

*ಕಾಲಕ್ಕೆ ತಕ್ಕಂತಹ ಬಟ್ಟೆ ಹಾಗೂ ಚಪ್ಪಲಿಗಳಿರಲಿ: ಪ್ರವಾಸಕ್ಕೆ ಹೋಗುವಾಗ ತುಂಬಾ ಮುಖ್ಯ ಎನ್ನಿಸುವುದು ಬಟ್ಟೆ ಹಾಗೂ ಚಪ್ಪಲಿಗಳು. ಆಯಾ ಕಾಲಮಾನಕ್ಕೆ ತಕ್ಕಂತಹ ಬಟ್ಟೆ ಧರಿಸುವುದು ತುಂಬಾ ಮುಖ್ಯ. ಅದರಲ್ಲೂ ಇದು ಬೇಸಿಗೆ ಕಾಲ. ಈ ಸಮಯದಲ್ಲಿ ಹೊರಗಡೆ ಕಾಲಿಡುವುದೇ ಕಷ್ಟ. ಪ್ರವಾಸಿತಾಣಗಳಿಗೆ ಹೋದಾಗ ನಮ್ಮ ದೈಹಿಕ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ನಮ್ಮ ಕೈಯಲ್ಲೇ ಇದೆ. ಬೇಸಿಗೆಯಲ್ಲಿ ಆದಷ್ಟು ತುಂಬು ತೋಳಿನ ಟಾಪ್‌ಗಳನ್ನೇ ಧರಿಸಿ. ಪೂರ್ತಿಯಾಗಿ ಮೈ ಮುಚ್ಚುವ ಬಟ್ಟೆಗಳಿಗೆ ಆದ್ಯತೆ ನೀಡಿ. ಹತ್ತಿ ಬಟ್ಟೆಗಳು ಹಗುರವಾಗಿ ಬೇಸಿಗೆಗೆ ಹಿತ ಎನ್ನಿಸುತ್ತವೆ. ಸನ್‌ ಗ್ಲಾಸ್‌ ಹಾಗೂ ಟೋಪಿಗೆ ನಿಮ್ಮ ಬ್ಯಾಗ್‌ನಲ್ಲಿ ಜಾಗವಿರಲಿ. ಬೇಸಿಗೆ ಕಾಲಕ್ಕೆ ತಕ್ಕಂತಹ ಚಪ್ಪಲಿಗಳನ್ನು ಧರಿಸಿ. ಕಾಲನ್ನು ಸಂಪೂರ್ಣವಾಗಿ ಮುಚ್ಚುವಂತಹ ಶೂಗಳನ್ನು ಧರಿಸಿ.

ADVERTISEMENT

*ಸೌಂದರ್ಯದ ನಿರ್ಲಕ್ಷ್ಯ ಬೇಡ: ಪ್ರವಾಸಕ್ಕೆ ಹೋಗುವ ಸಂಭ್ರಮದಲ್ಲಿ ನಿಮ್ಮ ಸೌಂದರ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಬೇಸಿಗೆ ಕಾಲದಲ್ಲಿ ನಮ್ಮ ದೇಹ ಹಾಗೂ ಚರ್ಮದ ಬಗ್ಗೆ ಎಷ್ಟು ಕಾಳಜಿ ವಹಿಸಿದರೂ ಸಾಲುವುದಿಲ್ಲ. ಎರಡೇ ದಿನಕ್ಕೆ ಹೋಗುವುದು, ಸನ್‌ಸ್ಕ್ರೀನ್ ಲೋಷನ್‌ ಏಕೆ, ಮುಖಕ್ಕೆ ಸುತ್ತಿಕೊಳ್ಳಲು ಸ್ಕಾರ್ಪ್‌ ಏಕೆ ಈ ರೀತಿಯ ಗೊಂದಲಗಳು ಬೇಡ. ವರ್ಷವಿಡೀ ಕಾಪಾಡಿಕೊಂಡು ಬಂದ ಸೌಂದರ್ಯ ಹಾಳಾಗಲು ಎರಡೇ ನಿಮಿಷದ ಬಿಸಿಲು ಸಾಕು. ಆ ಕಾರಣಕ್ಕೆ ಸನ್‌ಸ್ಕ್ರೀನ್‌ ಲೋಷನ್‌, ಪೌಂಡೇಶನ್‌ಗಳಿಗೆ ನಿಮ್ಮ ಬ್ಯಾಗ್‌ನಲ್ಲಿ ಮೊದಲ ಆದ್ಯತೆ ಇರಲಿ.

*ದಿನಬಳಕೆಯ ವಸ್ತುಗಳು ಜೊತೆಗಿರಲಿ: ಸೋಪು, ಟವಲ್‌, ಶ್ಯಾಂಪು, ಫೇಸ್‌ ಕ್ರೀಂ, ಪ್ಯಾಡ್‌, ಫೇಸ್ ವಾಶ್‌, ಬಾಡಿ ವಾಶ್‌ಗಳನ್ನು ಜೊತೆಗಿರಿಸಿಕೊಳ್ಳಿ. ಹೋದ ಕಡೆಯಲೆಲ್ಲಾ ಈ ವಸ್ತುಗಳು ಸಿಗಲೇಬೇಕು ಎಂದೇನೂ ಇಲ್ಲ. ಅಲ್ಲದೇ ನಾವು ಬಳಸುವ ಕಂಪನಿಯ ವಸ್ತುಗಳು ಸಿಗದೇ ಇರಬಹುದು. ಆ ಕಾರಣಕ್ಕಾಗಿಯಾದರೂ ಮೊದಲೇ ಆ ವಸ್ತುಗಳನ್ನು ಖರೀದಿಸಿ ಇಟ್ಟುಕೊಳ್ಳಬೇಕು. ಜೊತೆಗೆ ಆದಷ್ಟು ಶ್ಯಾಷೆಗಳ ಮೊರೆ ಹೋಗಿ. ಇದರಿಂದ ಬ್ಯಾಗ್‌ ತುಂಬುವುದು ತಪ್ಪುತ್ತದೆ.

*ಆಹಾರ ವಸ್ತುಗಳಿಗೂ ಇರಲಿ ಜಾಗ: ಪ್ರವಾಸಕ್ಕೆ ಹೋಗುವ ಮೊದಲು ಒಂದಿಷ್ಟು ಬಿಸ್ಕತ್‌, ಗ್ಲುಕೋಸ್, ಹಣ್ಣುಗಳನ್ನು ಇರಿಸಿಕೊಂಡು ಹೋಗುವುದು ಉತ್ತಮ. ಹೋದ ಕಡೆಯೆಲ್ಲಾ ಆಹಾರ ಸಿಗುತ್ತದೆ ಎಂಬುದಕ್ಕೆ ಗ್ಯಾರಂಟಿ ಇಲ್ಲ. ಒಂದಿಷ್ಟು ಜ್ಯೂಸ್‌ ಬಾಟಲಿಗಳು ಜೊತೆಗಿರಲಿ.‌‌

*ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಿ: ವಾರಗಟ್ಟಲೆ ತಿಂಗಳುಗಟ್ಟಲೆ ಪ್ರವಾಸಕ್ಕೆ ಹೋಗುವುದಾದರೆ ಮೊದಲೇ ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳುವುದನ್ನು ಇದರಿಂದ ತಪ್ಪಿಸಬಹುದು.

*ವಾಟರ್ ಬಾಟಲ್‌ ಇರಿಸಿಕೊಳ್ಳಿ: ನೀವು ಸ್ವಂತ ವಾಹನದಲ್ಲಿ ಹೋಗುವುದಾದರೆ 20 ಲೀಟರ್‌ಗಳ ವಾಟರ್‌ ಕ್ಯಾನ್‌ಗಳನ್ನು ಡಿಕ್ಕಿಯಲ್ಲಿ ಇರಿಸಿಕೊಳ್ಳಿ. ಇದರಿಂದ ಹೋದ ಕಡೆಯೆಲ್ಲಾ ನೀರಿಗಾಗಿ ಪರದಾಡುವುದನ್ನು ತಪ್ಪಿಸಬಹುದು. ಅಲ್ಲದೇ ಇದು ಬೇಸಿಗೆಕಾಲ. ಅನೇಕ ಕಡೆ ಒಳ್ಳೆಯ ನೀರು ಸಿಗುವುದು ಅನುಮಾನ. ಆ ಕಾರಣದಿಂದಲೂ ಇದು ಸಹಾಯವಾಗುತ್ತದೆ.

*ಕ್ಯಾಷ್ ನಿಮ್ಮ ಬಳಿ ಇರಲಿ: ಇದು ಡಿಜಿಟಲ್ ಯುಗ ನಿಜ. ಆದರೆ ಎಲ್ಲಾ ಕಡೆಯಲ್ಲೂ ಡಿಜಿಟಲೈಸ್‌ ಆಗಿರಬೇಕು ಎಂದೇನೂ ಇಲ್ಲ. ಅದಕ್ಕಾಗಿ ಮೊದಲೇ ಒಂದಿಷ್ಟು ಕ್ಯಾಷ್‌ ಬಿಡಿಸಿಕೊಂಡು ಇಟ್ಟುಕೊಂಡಿರುವುದು ಉತ್ತಮ. ಇಲ್ಲದಿದ್ದರೆ ನೀವು ಹೋದ ಕಡೆ ಎಟಿಎಂ ಮಷಿನ್‌ ಇಲ್ಲದೆ ಪರದಾಡುವಂತಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.